---------- Forwarded message ---------
From: Girish T P <girisht...@gmail.com>
Date: Mon, 4 Nov 2019, 23:17
Subject: ಕನ್ನಡ ನಾಡಿನ ಶಾಲಾ ಶಿಕ್ಷಣದಲ್ಲಿ ಕನ್ನಡವೇ ಕಲಿಕಾ‌ ಮಾಧ್ಯಮವಾಗಬೇಕು.
To: <629kes2...@googlegroups.com>, <htfkarnat...@googlegroups.com>, girish
t p <tpgiri...@gmail.com>, <girishat...@gmail.com>, <girisht...@gmail.com>,
<ghshadik...@gmail.com>


*ಹಿರಿಯರಲ್ಲಿ ಗೌರವಪೂರ್ವಕ, ಸ್ನೇಹಿತರಲ್ಲಿ ಪ್ರೀತಿಪೂರ್ವಕ‌ ನಮನಗಳು.*

ನನ್ನ ಮನದಾಳದ ಮಾತುಗಳನ್ನು ಸಾವಧಾನದಿಂದ‌‌ ಓದಬೇಕೆಂಬ ಸವಿನಯ,‌ ವಿನಮ್ರ‌ತೆಯಿಂದ
ವಿನಂತಿಸಿಕೊಳ್ಳುತ್ತಾ ಕಾಗುಣಿತ ದೋಷಗಳಿದ್ದಲ್ಲಿ‌ ಸಹಿಸಿಕೊಳ್ಳಿ,‌ ಹೇಳಿದರೆ
ತಿದ್ದಿಕೊಳ್ಳುವೆ.

*ಕನ್ನಡ ನಾಡಿನ ಶಾಲಾ ಶಿಕ್ಷಣದಲ್ಲಿ ಕಲಿಕಾ ಮಾಧ್ಯಮವಾಗಿ ಕನ್ನಡವೇ ಅಗತ್ಯ ನಿತ್ಯ ಸತ್ಯ*

ಸತ್ಯ ಯಾವಾಗಲೂ ಕಹಿಯೇ...
ಆದರೆ ಸತ್ಯವನ್ನು ಒಪ್ಪಿಕೊಂಡು ಸತ್ಯದ ದಾರಿಯಲ್ಲಿ ನಡೆಯುತ್ತಾ  ಖಂಡಿತವಾಗಿ ಕಾಲಕ್ರಮೇಣ
ಸತ್ಯದ ಹಾದಿ ಸಿಹಿಯ ಹಾದಿಯಾಗುವುದರಲ್ಲಿ ಸಂದೇಹವಿಲ್ಲ.

ಈಗ ನಾ ಹೇಳ ಹೊರಟಿರುವುದು ತೀರಾ ಹೊಸ ವಿಚಾರವೊಂತು ಅಲ್ಲ.

ಪ್ರತಿಯೊಂದು ನಾಡಿನಾಲ್ಲಿಯೂ ಆಯಾಯಾ ನಾಡಿನ ಭಾಷೆಯೇ ಅಲ್ಲಿಯ ಶಾಲಾ ಶಿಕ್ಷಣದಲ್ಲಿ ಕಲಿಕೆಯ
ಮಾಧ್ಯಮವಾಗಬೇಕು ಎಂಬುದನ್ನು ಮೊದಲ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಕುವೆಂಪುರವರಿಂದ
ಹಿಡಿದು ನಾಡಿನ ಆನೇಕ ಸಾಹಿತಿಗಳು, ಜನಪರ-ಜೀವಪರ ನೈಜ್ಯ ಕಾಳಜಿಯುಳ್ಳ ರಾಜಕಾರಣಿಗಳು,
ವಿದ್ವಾಂಸರು, ಸಿ ಎನ್ನ್ ಆರ್ ರಾವ್ ರಂತಹ ವಿಜ್ಞಾನಿಗಳು ಸೇರಿದಂತೆ ಇನ್ನೂ ಆನೇಕರು,
ಶಿಕ್ಷಣ ತಜ್ಞರು ಹಾಗೂ ಸ್ವಾತಂತ್ರ್ಯ ಪೂರ್ವದಿಂದಲೂ ಮೈಸೂರು ಸಂಸ್ಥಾನದ ದಿವಾನ್ ಮಿರ್ಜಾ
ಇಸ್ಮಾಯಿಲ್ ರವರು ಸಹ ಶಾಲಾ ಶಿಕ್ಷಣದಲ್ಲಿ ಆಯಾಯ ನಾಡಿನ ಭಾಷೆಯೇ ಕಲಿಕಾ ಮಾಧ್ಯಮವಾಗಬೇಕು
ಎಂಬುದನ್ನು ಮನೋ ವೈಜ್ಞಾನಿಕವಾಗಿ ಸಾಂಸ್ಕೃತಿಕವಾಗಿ ಪ್ರತಿಪಾದಿಸುತ್ತಾ ಬಂದಿದ್ದಾರೆ.

ಕಲಿಕಾ ಮಾಧ್ಯಮವಾಗಿ ಆಯಾಯ ನಾಡಿನ ಭಾಷೆಯೇ ಇರಬೇಕು ಎಂಬುದರ ಬಗ್ಗೆ ಬಲಪಂಥೀಯರು ಮತ್ತು
ಎಡಪಂಥೀಯರು, ಸಮಾಜವಾದಿಗಳು ಸಹ ಸಮಾನವಾದ ಅಭಿಪ್ರಾಯ ಹೊಂದಿದ್ದಾರೆ.

ಬಹುತೇಕ ವಿಚಾರಗಳಿಗೆ ಸಂಬಂದಿಸಿದಂತೆ ತದ್ವಿರುದ್ಧ ನಿಲುವುಳ್ಳ  ನಮ್ಮ‌ ನಾಡಿನ ಕೆಲ
ಸಾಹಿತಿಗಳು ಕನ್ನಡ ಮಾಧ್ಯಮದ ವಿಚಾರ ಬಂದಾಗ ಸಮಾನ ನಿಲುವುಳ್ಳರಾಗಿದ್ದೂ ಈ ವಿಚಾರವಾಗಿ ಸಭೆ
ಸಮಾರಂಭಗಳಲ್ಲಿ ಜೊತೆಯಾಗಿ ಭಾಗವಹಿಸಿದ್ದಾರೆ.

ನಮ್ಮ ನಾಡಿನ ಆನೇಕ ಮಠಗಳ ಸ್ವಾಮೀಜಿಯವರು ಸಹ ನಾಡಿನ ಭಾಷೆಯೇ  ಕಲಿಕಾ ಮಾಧ್ಯಮವಾಗಿರಬೇಕು
ಎಂಬುದನ್ನು ಪ್ರತಿಪಾದಿಸುತ್ತಾರೆ.

ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯ ಶ್ರೀಮಠ ಕಳೆದ ೧೬ ವರ್ಷಗಳಿಂದ ನವಂಬರ್ ಮಾಹೆಯ ಒಂದು
ಅಥವಾ ಎರಡನೇ ತಾರೀಖಿನಿಂದ ಕನ್ನಡ ರಾಜ್ಯೋತ್ಸವದ ಜೊತೆಗೆ ರಾಷ್ಟ್ರೀಯ ನಾಟಕೋತ್ಸವವನ್ನು ಸಹ
ಆಚರಿಸಿಕೊಂಡು ಬರುತ್ತಿದೆ. ಇದರ ರೂವಾರಿಗಳಾದ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ
ಸ್ವಾಮೀಜಿಯವರು ಕನ್ನಡ ನಾಡಿನ ಶಾಲಾ ಶಿಕ್ಷಣದಲ್ಲಿ ಕನ್ನಡವೇ ಕಲಿಕೆಯ ಮಾಧ್ಯಮವಾಗಬೇಕು
ಎಂಬುದನ್ನು ಎಲ್ಲರಿಗೂ ಅರ್ಥವಾಗುವಂತೆ‌ ಸರಳ ಸಾಮಾನ್ಯವಾದ ಭಾಷೆಯಲ್ಲಿಯೇ
 ಕಲಿಕೆಯ ಹೆಜ್ಜೆಗಳು ಎಂಬ ಕೃತಿಯನ್ನು ರಚಿಸಿದ್ದಾರೆ.
೨೦೧೯ನೇ ಸಾಲಿನ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನಾ ಸಂದರ್ಭದಲ್ಲಿಯೂ(೦೨/೧೧/೨೦೧೯)
ಸ್ವಾಮೀಜಿಯವರು ಕನ್ನಡ ಮಾಧ್ಯಮದಲ್ಲಿಯ ಕಲಿಕೆಯ ಅಗತ್ಯತೆಯನ್ನು ಪ್ರತಿಪಾದಿಸುತ್ತಾ ಆಂಗ್ಲ
ಮಾಧ್ಯಮದ ಕಲಿಕೆಯ ಕುರುಡು ವ್ಯಾಮೋಹಿಗಳಾಗಿರುವ ಸರ್ಕಾರವನ್ನು, ಸಾರ್ವಜನಿಕರನ್ನು,
ನ್ಯಾಯಾಲಯವನ್ನು ಎಚ್ಚರಿಸಿದ್ದಾರೆ.

ನಮ್ಮ ಕನ್ನಡ ನಾಡಿನ ಶಾಲಾ ಶಿಕ್ಷಣದಲ್ಲಿ ಕನ್ನಡವೇ ಮಾಧ್ಯಮವಾಗಿರಬೇಕೆಂದು ಪ್ರತಿಪಾದಿಸುವ
ಯಾರೂ ಸಹ ಆಂಗ್ಲ ಭಾಷೆಯ ಕಲಿಕೆಯ ವಿರೋಧಿಗಳಲ್ಲ. ಅಷ್ಟು ಮಾತ್ರವಲ್ಲದೇ ಜಾಗತೀಕ
ಸವಾಲುಗಳನ್ನು, ವಿಷಮ ಪರಿಸ್ಥಿತಿಯನ್ನು ಎದುರಿಸಲು ಇಂಗ್ಲೀಷ್ ಅನ್ನು ಒಂದು ಸಂವಹನ ಸಂಪರ್ಕ
ಭಾಷೆಯನ್ನಾಗಿ ಸಮರ್ಪಕವಾಗಿ ಕಲಿತು ಕಲಿಸುವುದನ್ನು ಪ್ರತಿಪಾದಿಸುತ್ತಾರೆ.

ಸ್ವತಃ ಕನ್ನಡ ಮಾಧ್ಯಮದಲ್ಲಿಯೇ ಕಲಿತು
ವಿಜ್ಞಾನದ ಪದವೀಧರರಾಗಿರುವ ಚಾಮರಾಜನಗರದ ದೀನಬಂಧು ಆಶ್ರಮದ ಸ್ಥಾಪಕರು ಮತ್ತು ಈಗ ಗೌರವ
ಕಾರ್ಯದರ್ಶಿಗಳಾಗಿರುವ ಪ್ರೋ. ಜಿ.ಎಸ್. ಜಯದೇವರು ಚಾಮರಾಜನಗರದ ಜೆ.ಎಸ್.ಎಸ್. ಪದವಿ
ಕಾಲೇಜಿನಲ್ಲಿ ಸುಮಾರು ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಪ್ರಾಣಿಶಾಸ್ತ್ರವನ್ನು
ತರಗತಿಗಳಲ್ಲಿ ಬೋಧಿಸಿದವರು.

ಕನ್ನಡ ಮಾಧ್ಯಮವೇ ಶಾಲಾ ಶಿಕ್ಷಣದ ಕಲಿಕಾ ಮಾಧ್ಯಮವಾಗಬೇಕು ಎನ್ನುವ ಬಗ್ಗೆ
ಜಯದೇವಣ್ಣನವರ ಹಾದಿ ಉಳಿದವರಿಗಿಂತ ಬಲು ಭಿನ್ನ.
೧೯೯೮ರಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಸುವ ದೀನಬಂಧು ಪ್ರಾಥಮಿಕ ಶಾಲೆಯನ್ನು ಜಯದೇವಣ್ಣನವರು
ತೆರೆದರು.
ದೀನಬಂಧು ಪ್ರಾಥಮಿಕ ಶಾಲೆಯೂ ಪ್ರೌಢಶಾಲೆಯಾಗಿ ವಿಸ್ತರಣೆಗೊಂಡು
ಪ್ರಸ್ರುತ ೨೦೧೯-೨೦ನೇ ಶೈಕ್ಷಣಿಕ ವರ್ಷದಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ ಪ್ರೌಢಶಾಲಾ
ಹಂತದವರೆಗೆ ೪೪೭ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ.
ದೀನಬಂಧು ಶಾಲೆಗಿಂತ, ಜಯದೇವಣ್ಣನವರಿಗಿಂತ ಉತ್ತಮ ಉದಾಹರಣೆ ಬೇಕೆ??
ಒಳ್ಳೆಯದು ಮಾಡುವ ನಿಷ್ಕಳಂಕ ಮನಸ್ಸು, ಚಾರಿತ್ಯ, ಕೈಂಕರ್ಯವೊಂದಿದ್ದರೆ ಸಾರ್ಥಕವಾದ ಸಾಧನೆ
ಸಾಧ್ಯ ಎನ್ನವುದಕ್ಕೆ ದೀನಬಂಧು ಶಾಲೆಯ ಯಶೋಗಾಥಯೇ ಕಾರಣ.

ದೀನಬಂಧು ಆಶ್ರಮದಲ್ಲಿ ಬೆಳೆದ, ಕನ್ನಡ ಮಾಧ್ಯಮದಲ್ಲಿಯೇ ಪದವಿ ಕಲಿತು ಮುಂದೆ ಆಂಗ್ಲ
ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಪ್ರಸ್ತುತ Decan Herald ಪತ್ರಿಕೆಯಲ್ಲಿ
ಉಪಸಂಪಾದಕರಾಗಿರುವ ಶ್ರೀ ಚಿರಂಜೀವಿ ರವರ ಜೀವಾನನುಭವೇ ಅಧ್ಯಯನಯೋಗ್ಯ.

ಹಾಗೆಯೇ ಕನ್ನಡ ಮಾಧ್ಯಮದಲ್ಲಿ ಕಲಿತು ನಾಡಿನ ಆನೇಕ ಸ್ತರಗಳಲ್ಲಿ ಸೇವೆಗಳಲ್ಲಿ
ತೊಡಗಿಸಿಕೊಂಡಿರುವ‌ ನಮ್ಮ ಜಯದೇವಣ್ಣ ಸೇರಿದಂತೆ, ವೃತಿಯಲ್ಲಿ ಆಂಗ್ಲ ಪ್ರಾಧ್ಯಾಪಕರು
ಪ್ರವೃತಿಯಿಂದ ನಾಡಿನ ಭಾಷೆಯ ಸಾಹಿತಿಗಳಾಗಿರುವ ಆನೇಕರ ಆಂಗ್ಲ ಭಾಷೆಯ ಮೇಲಿನ ಸದೃಢ ಜ್ಞಾನದ
ಬಗ್ಗೆ ನಾನು ಮಾತಾಡಲು ಬಹಳ ಅಲ್ಪ ನಾನು.

ಅಮೇರಿಕಾದ ಸಂಶೋಧನೆಯೊಂದು "ಯಾವ ಮಗು ತನ್ನ ಮಾತೃಭಾಷೆಯನ್ನು ಸದೃಢವಾಗಿ ಕಲಿತು, ತನ್ನ
ಮಾತೃಭಾಷೆಯ ಸಹಾಯದ ಮೂಲಕ ಇತರ ಭಾಷೆಗಳನ್ನು ಕಲಿಯಲು ಹೊರಡುತ್ತದೆಯೋ ಆಗ ಇತರ ಭಾಷೆಗಳನ್ನು
ಅತ್ಯಂತ ಸುಲಲಿತವಾಗಿ ಕಲಿಯುತ್ತದೆ" ಎಂದು ಹೇಳುತ್ತದೆ.
ಈ ಮಾತನ್ನು ಸುಮಾರು ೩೦ಕ್ಕೂ ಹೆಚ್ಚು ಮುದ್ರಣಗಳನ್ನು ಕಂಡಿರುವ, ಕನ್ನಡದ ಮೂಲಕ ಇಂಗ್ಲೀಷ್
ಅನ್ನು ಕಲಿಯಲು, ಕಲಿಸಲು ಸಹಾಯಕವಾಗಿರುವ Applied English Courseನ ಪುಸ್ತಕ ಹಿಂಬದಿ
ರಕ್ಷಾ ಪುಟದಲ್ಲಿ ಪ್ರಕಟಿಸಲಾಗಿದೆ.
ಈ ಮಹತ್ವದ ಕೃತಿಯ ಕರ್ತೃ ಹಾಸನ ಆಕಾಶವಾಣಿಯಲ್ಲಿ ಉದ್ಯೋಗಿಯಾಗಿರುವ ಬೇದ್ರೆ ಎನ್ ಮಂಜುನಾಥ್
ರವರು.

ಶಾಲಾ ಶಿಕ್ಷಣ ಹೇಗಿರಬೇಕು ಎಂಬುದರ ಕುರಿತು ನಾ ಹೇಳುವುದಕ್ಕಿಂತ ದೀನಬಂಧು ಸಂಸ್ಥೆಯು
ಹೊರತರುವ  ಅನುಭವ ಎಂಬ ಹೆಸರಿನ ಮಾಸಪತ್ರಿಕೆಯಲ್ಲಿ ಜಯದೇವಣ್ಣನವರ ಸಂಪಾದಕೀಯವೊಂದನ್ನು‌ ಈ
ಲೇಖನದೊಟ್ಟಿಗೆ ಹಂಚಿಕೊಳ್ಳುವೆ.

ಹೆಸರಿಗೆ ಮಾತ್ರ ಸೇವಾ ಕ್ಷೇತ್ರಗಳೆಂದು ಕರೆಯಲ್ಪಡುವ ಆರೋಗ್ಯ ಮತ್ತು ಶಿಕ್ಷಣ
ಕ್ಷೇತ್ರಗಳಿಂತ ಆರ್ಥಿಕವಾಗಿ ಅತ್ಯಂತ ಲಾಭದಾಯಕವಾದ ಬೇರೆ ಕ್ಷೇತ್ರಗಳಿಲ್ಲ.

ನಾಡಿನ ನಡೆದಾಡುವ ದೇವರು ಎಂದು ಕರೆಯಲ್ಪಡುತ್ತಿದ್ದ ತುಮಕೂರಿನ ಡಾ. ಸಿದ್ಧಗಂಗಾ ಶ್ರೀಗಳು
ಲಿಂಗೈಕ್ಯರಾದಾಗ ಕೇಳು ಬರುತ್ತಿದ್ದ ಮಾತೊಂದನ್ನು ಗಮನಿಸಬೇಕು. ಶ್ರೀಗಳು ಮನಸ್ಸು
ಮಾಡಿದ್ದರೆ ಎಂದೋ ಒಂದು ಮೆಡಿಕಲ್ ಕಾಲೇಜನ್ನು ತೆರೆಯಬಹುದಿತ್ತು. ಆದರೆ ಶ್ರೀಗಳು ಪ್ರಾಥಮಿಕ
ಮತ್ತು ಪ್ರೌಢಶಿಕ್ಷಣ ಪಸರಿಸುವ ಕಡೆಗೆ ತಮ್ಮ ತನು ಮನ ವನ್ನು ಸಮರ್ಪಿಸಿಕೊಂಡವರು.
ಅವರ ಸೇವಾ ತತ್ಪರತೆ ಬಗ್ಗೆ ನುಡಿಯಲು ನಮ್ಮ ನೈತಿಕತೆ ನೀತಿಯುತವಾಗಿರಬೇಕು.

ಆದರೆ ಇವತ್ತಿನ ಶಾಲಾ ಶಿಕ್ಷಣದ ಮತ್ತು ಪೋಷಕರ ಉದ್ದೇಶವಾದರೂ ಏನೂ..??

ಮಗು, ದುಬಾರಿ ಸರಕುಗಳನ್ನು ಕೊಳ್ಳುವ ಶಕ್ತಿ ಪಡೆಯುವ ಮತ್ತೊಂದು ಸರಕಷ್ಟೇ.

ಆಂಗ್ಲಮಾಧ್ಯಮದ ಶಾಲೆಯಲ್ಲಿ ಚೆನ್ನಾಗಿ ಕಲಿತು ಒಳ್ಳೆಯ ಅಂಕಗಳಿಸಿ, ಉತ್ತಮವಾದ ವೃತ್ತಿಪರ‌
ಪದವಿಯೊಂದನ್ನು ಗಳಿಸಿ ಕೈತುಂಬಾ ಸಂಬಳ ಬರುವ ಕೆಲಸಕ್ಕೆ ಸೇರುವುದು, ವಿದೇಶಗಳಲ್ಲಿ ದುಡಿದು
ದುಬಾರಿ ಹಣ ಸಂಪಾದಿಸುವುದು.
ಸುಖಲೋಲುಪ್ತರಾಗುವುದು.
ಪರಧನ ಪರಸ್ತ್ರೀ ಪರಪುರುಷ ವ್ಯಾಮೋಹಿಗಳು, ಭೋಗಿಗಳು ಆಗುವುದು.

ಜನ್ಮ ನೀಡಿದ ತಾಯಿ, ಸ್ವಂತಿಕೆ ಬೆಳೆಸಿಕೊಳ್ಳಲು ಅಡಿಯಾದ ತಾಯಿನುಡಿ ಮತ್ತು ತಾಯಿನಾಡನ್ನು
ಮರೆಯುವುದು.

ಸಂಪತ್ತನ್ನು ಕೂಡಿಡುತ್ತಾ ಒಟ್ಟಿಗೆ ಆಡಿ ಬೆಳೆದ ಸಹೋದರ ಸಹೋದರಿಯರ ಕಷ್ಟ-ಸುಖಗಳಲ್ಲಿ
ಭಾಗಿಯಾಗದೇ ಒಂಟಿಯಾಗಿ ಉಳಿಯುವುದು.

ಸ್ನೇಹಿತರ ಬಂಧು ಬಳಗದವರಿಂದ ಅಂತರ ಕಾಯ್ದುಕೊಳ್ಳುವುದು.

ಜನ್ಮ‌ನೀಡಿದ ತಾಯಿ-ತಂದೆ
ಸಾಕು ಬೆಳೆಸಿದ ಸ್ವಂತ ಊರು, ಸಮುದಾಯ,
ಕಲಿತ ಶಾಲೆ, ಕಲಿಸಿದ ಗುರುಗಳನ್ನು
ಒಟ್ಟಿಗೆ ಕೂಡಿ ಆಡಿ ಬೆಳೆದ, ನೋವು ನಲಿವು ಹಂಚಿಕೊಂಡ ಸ್ನೇಹಿತರನ್ನು ಮರೆತು
ಹೊರಗೆ ಸಾಧಕನೆಂಬ ತೋರಿಕೆಯ ಹುಸಿನಗುವಿನ, ಆದರೆ ಒಳಗೊಳಗೆ ಬೇಗುದಿಯಲ್ಲಿರುವ ಅತೃಪ್ತ
ಆತ್ಮದಂತಿರುವ ಬಾಳುವೆ ನಡೆಸುವುದು.

ಅದಕ್ಕಲ್ಲವೇ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು.

ನೆಲೆಮೂಲ ಸಂಸ್ಕೃತಿ ಮತ್ತು ಜೀವನ ಶೈಲಿಯಿಂದ ದೂರವುಳಿದು ಸ್ವಂತಿಕೆಯಿಲ್ಲದ ಒಂದು ಭೋಗ
ಸಾಧನವಾಗುವುದು.

ಇವತ್ತಿನ ಸಂಪತ್ತಿನ ಅಸಮಾನ ಹಂಚಿಕೆಗೆ ಇಂದಿನ ಶಿಕ್ಷಣ ಪದ್ಧತಿಯೇ ಕಾರಣ.
ಸಿರಿವಂತ ಮತ್ತಷ್ಟೂ ಸಿರಿವಂತ,
ಬಡವ ಮತ್ತಷ್ಟೂ ಬಡವನಾಗಲಿಕ್ಕೆ ಇವತ್ತಿನ ಅನ್ಯರನ್ನು ಅನುಕರಿಸಲು ಉದ್ದೀಪನಗೊಳಿಸುವ
ಕೃತ್ರಿಮ ಶಿಕ್ಷಣ ಪದ್ಧತಿಯೇ ಕಾರಣ.
ಅಸಲೀಗೆ ಇದನ್ನು ಶಿಕ್ಷಣ ಪದ್ಧತಿಯೆಂದು ಪರಿಗಣಿಸಲಾಗದು.
ಜಾಗತೀಕ ಮಾರುಕಟ್ಟೆಯಲ್ಲಿ ಒಂದು ಸಾಧನವಾಗಿ ಚಲಾವಣೆಯಾಗಲು ಬೇಕಾದ ಆತ್ಮಬಲ, ಹೃದಯವಿಲ್ಲದ
ಒಂದು ಯಂತ್ರದಂತೆ.

ಇವತ್ತಿನ ಶಿಕ್ಷಣ ತನ್ನ ಮನ ತನ್ನನ್ನು  ಮೆಚ್ಚುವುದಕ್ಕಿಂತಲೂ ಅನ್ಯರನ್ನು,
ಹೊರಗಿನವರನ್ನು‌,‌ಜಗತ್ತನ್ನು ಮೆಚ್ಚಿಸುವ ಸಲುವಾಗಿ‌ ಹೋರಾಡುವ ಸಲುವಾಗಿ ಆಂತರಿಕ
ಪ್ರೇರಣೆಯಿಲ್ಲದ ಬಾಹ್ಯ ಸೆಳೆತೆಗಳೆ  ಸೆಲೆಯಾಗಿರುವ ನಾಟಕೀಯ ರಂಗ.

ಅಂದಾಗೇ ಎಲ್ಲರೂ ತ್ಯಾಗಮಯಿಗಳಾಗಬೇಕಿಲ್ಲ.
ತ್ಯಾಗಿಯಾಗುವುದು ಅಸಂಬದ್ಧ.

ತ್ಯಾಗ ಮತ್ತು ಭೋಗಗಳೆರಡೂ ಅತಿರೇಕದವು, ಅವನತಿಯ ಅವಾಸಾನಕ್ಕೆ ದೂಡುವಂತಹವು‌.

ನನ್ನನ್ನು ನಾನು ಅರಿಯಲು ಸಹಾಯಕವಾಗದ ಶಿಕ್ಷಣ ಅದೆಂತಹ ಶಿಕ್ಷಣ??
ನನ್ನನ್ನು ನಾನೇ ಅರಿಯಲು ಸಾಧ್ಯವಾದರೆ ಮಾತ್ರ ಅನ್ಯರನ್ನು ಜಗತ್ತನ್ನು ಅರಿಯಲು ಸಾಧ್ಯ.
ನಾನ್ಯಾರು ಎಂಬುದನ್ನು ನನ್ನೊಳಗೆ ಪ್ರಶ್ನಿಸಿಕೊಳ್ಳುವ ಉತ್ತರ ಕಂಡುಕೊಳ್ಳುವ
ಸತ್ಯಾನ್ವೇಷಣೆಯ ಪ್ರಕ್ರಿಯೆಗೆ ಇಂಬು ಕೊಡುವಂತೆ ಇರಬೇಕು ನಮ್ಮ ಶಿಕ್ಷಣ ಪದ್ಧತಿ.

ಲೌಕಿಕ ಅಲೌಕಿಕಗಳೆರೆಡರ ಸಮಾಗಮವಾಗಬೇಕು ಶಿಕ್ಷಣ‌ ನೀಡಿಕೆಯ ಕ್ರಮ.

ಒಂದಷ್ಟೂ ಸಮಯ ಎಲ್ಲರೂ ಮೌನವಹಿಸಬೇಕಾದ ಕಾಲಘಟ್ಟವಿದು.

**************************

ಈಗ ಒಂದಿಷ್ಟೂ ಪ್ರಾಯೋಗಿಕ ಹಂತಕ್ಕೆ ಬರೋಣಾ.
ಒಂದು ತುಲನಾತ್ಮಕ ಅಧ್ಯಯನಕ್ಕೆ ಸಿದ್ಧವಾಗೋಣಾ.
ಇದನ್ನು ನೀವುಗಳೇ ನಿಮ್ಮ ಹಂತದಲ್ಲಿ ಮಾಡಿಕೊಳ್ಳಬಹುದು.

ಇತ್ತೀಚೆಗೆ ನಾನು, ನನ್ನ ಕೆಲ ಸ್ನೇಹಿತರು, ಬಂಧುಗಳು ಪರಿಚಯಸ್ಥರು ಅವರವರ ಜೀವನ ಶೈಲಿಯಲ್ಲಿ
ವೈಯಕ್ತಿಕ ಬದುಕಿನಲ್ಲಿ ಮತ್ತು ವೃತ್ತಿಪರ ಬದುಕಿನಲ್ಲಿ ತನ್ನ ಸುತ್ತಮುತ್ತಲಿನವರೊಂದಿಗೆ
ಹೇಗೆ ವ್ಯವಹರಿಸುತ್ತಾರೆ, ಸಾಮರಸ್ಯದಿಂದ ಎಲ್ಲರೊಂದಿಗೆ ಬೆರೆಯುತ್ತಾ ತಾವಂದುಕೊಂಡ
ಉದ್ದೇಶಗಳನ್ನು ಈಡೇರಿಸಿಕೊಳ್ಳುತ್ತಾ, ಸಮಚಿತ್ತದಿಂದ ವರ್ತಿಸುತ್ತಾ ಜೀವನದಲ್ಲಿ ಯಶಸ್ವಿ
ಎನಿಸಿಕೊಂಡಿದ್ದಾರೆ ಎಂಬುದನ್ನು ಕೂಲಕುಂಷವಾಗಿ ವೀಕ್ಷಿಸುತ್ತಾ ವಿಶ್ಲೇಷಿಸುತ್ತಾ ಹೋದರೆ
ಅಚ್ಚರಿಯೂ ಸಂತಸವೂ ಆಗುತ್ತದೆ.

ಯಾವ ಮಗುವಿನ/ವ್ಯಕ್ತಿಯ ಬಾಲ್ಯ ಸಮೃದ್ಧವಾಗಿರುತ್ತದೆಯೋ ಆ ಮಗು/ವ್ಯಕ್ತಿಯ ಮುಂದಿನ ಜೀವನವೂ
ಅಷ್ಟೇ ಸಮೃದ್ಧವಾಗಿರುತ್ತದೆ.

ನಮ್ಮ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳು ಶಾಲಾ ಶಿಕ್ಷಣ ಮುಗಿಸಿದ ನಂತರ
ಉದ್ಯೋಗ ಪಡೆಯುವಲ್ಲಿ ಮತ್ತು ಉದ್ಯೋಗ ಆರಂಭಿಸಿದ ಪ್ರಾರಂಭದ ದಿನಗಳಲ್ಲಿ ಸಮಾಜದಲ್ಲಿ
ಹೊಂದಿಕೊಳ್ಳಲು ವ್ಯವಹರಿಸಲು ಸ್ವಲ್ಪಮಟ್ಟಿಗೆ ಸಮಸ್ಯೆ ಎದುರಿಸುತ್ತಾರೆ.
ಆದರೆ ದಿನಕಳೆದಂತೆ ನಿಜಜೀವನದಲ್ಲಿ ಇವರೇ ಚಾಂಪಿಯನ್ ಗಳು.
ಎಲ್ಲರೊಂದಿಗೆ ಸುಲಭವಾಗಿ ಬೆರೆಯುವ ಇವರ ಸಮಾಜಿಕ ಸಂಬಂಧಗಳು ಅತ್ಯುತ್ತಮವಾಗಿ ಜನರ ನಡುವೆ
ಸ್ನೇಹಪರವಾಗಿ ವರ್ತಿಸುತ್ತಾ ಎಂತಹ ವಿಷಮ ಕ್ಲಿಷ್ಟಕರ ಸನ್ನಿವೇಶಗಳನ್ನು ನಿಭಾಯಿಸುವ ಜೀವನ
ಕೌಶಲ್ಯ ಬೆಳೆಸಿಕೊಳ್ಳುತ್ತಾ ಹೋಗುತ್ತಾರೆ.
ಸಂಪತ್ತಿನ ಗಳಿಕೆ ಕಡಿಮೆಯೇ ಇರಬಹುದು.
ಆದರೆ ಸಂತೃಪ್ತ ಜೀವನ ನಡೆಸುವ ಕಲೆ ಶೈಲಿ ಕರಗತ ಮಾಡಿಕೊಂಡವರು.

ಬೇರೆಯವರ ಕಷ್ಟಸುಖಗಳಿಗೆ ಧ್ವನಿಯಾಗುವ,
ಸಾಮಾಜಿಕ ಸಮಸ್ಯೆಗಳಿಗೆ, ನಾಡಿನ ಕುಂದುಕೊರತೆಗಳನ್ನು ಪರಿಹರಿಸುವ,
ಆಶಕ್ತರಿಗೆ, ಧ್ವನಿ‌ಇಲ್ಲದವರಿಗೆ ಧ್ವನಿಯಾಗುವ ಸಾಮಾಜಿಕ ಸಂತ್ಕಪನವನ್ನು ಮೈಗೂಡಿಸಿಕೊಂಡ
ಮಾತೃಹೃದಯಿ ಮತ್ತು ನಿಜಾರ್ಥದ ಮನುಷ್ಯತ್ವದ ಮನಸ್ಸುಳ್ಳವರಾಗಿರುತ್ತಾರೆ.

ಒರ್ವ ಹೃದಯ ಸಿರಿವಂತಿಕೆ ಇರುವ ನಾ ಅತ್ಯಂದ ಹತ್ತಿರದಿಂದ ಬಲ್ಲ, ಅಸಾಮಾನ್ಯ ಶಕ್ತಿಯುಳ್ಳ
ಸಾಮಾನ್ಯ ವ್ಯಕ್ತಿಯೊಬ್ಬರನ್ನು ಸ್ಮರಿಸುತ್ತೇನೆ.
ಪ್ರಸ್ತುತ ‌ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಮಧ್ಯಾಹ್ನ ಉಪಾಹಾರ
ಯೋಜನೆಯಲ್ಲಿ ಅಕ್ಷರ ದಾಸೋಹ ಕಛೇರಿಯಲ್ಲಿ ಸಹಾಯಕ‌ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ
ಶ್ರೀ ಗಣೇಶ್ ಟಿ.‌ಎಸ್.
ಇವರು ಸರ್ಕಾರಿ ಕನ್ನಡ ಮಾಧ್ಯಮದಲ್ಲಿ ಕಲಿತವರು. ತಮ್ಮ ಶಿಕ್ಷಣ ಪೂರ್ಣಗೊಳಿಸಿದ ನಂತರ
ಸುಮಾರು ದಶಕದ ಕಾಲ ಪೋಲಿಸ್ ಇಲಾಖೆಯಲ್ಲಿ ಪೇದೆಯಾಗಿದ್ದವರು. ನಂತರ ಸರ್ಕಾರಿ ಪ್ರೌಢಶಾಲಾ
ಮುಖ್ಯಶಿಕ್ಷಕರಾಗಿ ನೇಮಕಗೊಂಡು ಕೊಪ್ಪ ತಾಲ್ಲೂಕಿನ ಲೋಕನಾಥಪುರದಲ್ಲಿ ಮೂರು ವರ್ಷಗಳ ಕಾಲ
ಮತ್ತು ಕಡೂರು ತಾಲ್ಲೂಕಿನ ಸೋಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಐದು ವರ್ಷಗಳ ಕಾಲ
ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು.
ಇವರೆನೂ ನಾಡಿನಾದ್ಯಂತ ಪರಿಚಿತರಾದವರಲ್ಲ. ಆದರೆ‌ ನಮ್ಮ ಇಲಾಖೆಯಲ್ಲಿ, ನಮ್ಮ‌ ಚಿಕ್ಕಮಗಳೂರು
ಜಿಲ್ಲೆಯಲ್ಲಿ ಪರಿಚಿತರಾದವರು.
ಅಪ್ಪಟ ಮಾನವೀಯ ಅಂತಃಕರಣವುಳ್ಳ ಸರ್ಕಾರಿ ಸೇವಕ.
ತಾವು ಕೆಲಸ ಮಾಡಿದ ಸ್ಥಳಗಳೆಲ್ಲಾ ತಮ್ಮ ಛಾಪು ಮೂಡಿಸಿದವರು.
ಎಲ್ಲರ ಮೆಚ್ಚುಗೆಗೆ, ಪ್ರಶಂಸೆಗೆ, ಪ್ರೀತಿಗೆ ಪಾತ್ರರಾದವರು.
ಮಾತು-ಕೃತಿ ನಡೆ-ನುಡಿಯ ಸಾಮ್ಯತೆ ಸಾಧಿಸಿದವರು.
ಎಲ್ಲರೊಂದಿಗೂ ಬೆರೆಯುತ್ತಿದ್ದರೂ ಸತ್ಯದ ಹಾದಿ ಬಿಟ್ಟವರಲ್ಲ.
ಇವರೊಂದು ಉದಾಹರಣೆ.

ಇದಕ್ಕೆ ತದ್ವಿರುದ್ಧವಾಗಿ ನಮ್ಮ ನೆಲೆಮೂಲ, ಜನಪದ ಸಂಸ್ಕೃತಿಯಿಂದ ಹೊರತಾದ ಶಿಕ್ಷಣ
ಸಂಸ್ಥೆಗಳಲ್ಲಿ, ಆಂಗ್ಲ ಮಾಧ್ಯಮದಲ್ಲಿ ಕಲಿತ ಮಕ್ಕಳ ಮುಂದಿನ ಬದುಕೇ ವಿಭಿನ್ನ.
ಬಹುಮುಖ್ಯವಾಗಿ ಇವರ ಶಾಲಾ ಶಿಕ್ಷಣ ಮುಗಿದ ನಂತರ ಅತ್ಯುತ್ತಮ ಉದ್ಯೋಗಗಳನ್ನು
ದೊರಕಿಸಿಕೊಳ್ಳುತ್ತಾರೆ.
ತುಂಬಾ ಒಳ್ಳೆಯ ಎನ್ನಬಹುದಾದ ಆದಾಯವನ್ನು ಕೂಡ ಸಂಪಾದಿಸುತ್ತಾರೆ.
ಆದರೆ ದಿನಕಳೆದಂತೆ ಇವರುಗಳಿಗೆ ಜನರ ನಡುವಿನ ಹೊಂದಾಣಿಕೆಯ ಬದುಕು ಸಾಧ್ಯವಾಗದೇ
ಜನರಿಂದ(ಬಂಧು ಬಳಗ) ದೂರವುಳಿಯುತ್ತಾರೆ.

ಕಾರ್ಪೋರೆಟ್ ಜಗತ್ತಿನಲ್ಲಿ ಹಲವಾರು‌ ಸಹಸ್ರಾರು  ಸಿರಿವಂತರಿದ್ದಾರೆ.

ಆದರೆ ಸುಧಾಮೂರ್ತಿ,‌ ಅಜೀಂ‌ಪ್ರೇಮ್ ಜೀ ಮತ್ತು ರತನ್ ಟಾಟಾ ತರಹದವರು ಎಷ್ಟು ಮಂದಿ ಇದ್ದಾರೆ.

ಒಂದು ಸಂದರ್ಶನದಲ್ಲಿ ರತನ್ ಟಾಟಾ ರವರಿಗೆ‌ ಮುಖೇಶ್ ಅಂಬಾನಿಗೂ ತಮಗೂ ಯಾವ ರೀತಿಯ ಸಂಬಂಧ
ಎಂದು ಕೇಳಿದಾಗ, ಅಂಬಾನಿಯವರು Businessesman ಮತ್ತು ನಾನು Industrialist ಎಂದು
ಗುರುತಿಸುತ್ತಾರೆ.

ಒರ್ವ ಬ್ಯುಸಿನೆಸ್‌ ಮೆನ್ ಗೂ, ಇಂಡಸ್ಟ್ರೀಯಲಿಸ್ಟ್ ಗೂ ಇರುವ ವತ್ಯಾಸವನ್ನು ಅವರಿಬ್ಬರ
ಜೀವನ ಶೈಲಿ‌ ಮತ್ತು  ಜೀವನ ದೃಷ್ಟಿಕೋನದಿಂದಲೇ ಮನಗಾಣಬಹುದು.

ಬಂಧುಗಳೇ..
ತಮ್ಮ ಮನದಾಳದಿಂದ ಅಲೋಚಿಸಿ.
ಕೆಲವರು ಉತ್ತಮ‌ ಕನ್ನಡ ಮಾಧ್ಯಮದ ಶಾಲೆಗಳಿಲ್ಲದ ಕಾರಣ ಅನಿವಾರ್ಯವಾಗಿ ಆಂಗ್ಲ ಮಾಧ್ಯಮದ
ಶಾಲೆಗಳಿಗೆ ಜೋತು ಬೀಳುತ್ತಿದ್ದೇವೆಂಬ ಸತ್ಯವಲ್ಲದ ಅಸಹಾಯಕ ನಿರಾಶಾದಾಯಕ
ನುಡಿಗಳನ್ನಾಡುತ್ತಾರೆ.

ನಾವು ಒಳಹೊಕ್ಕದೇ ಯಾವುದು ಸುಧಾರಿಸುವುದಿಲ್ಲ.
ಒಟ್ಟಾಗಿ ಹೋಗುವ ಮನಸ್ಸಿಲ್ಲದಿರುವುದೇ ನಮ್ಮ ನೆಲಮೂಲ‌ ಜನಪದ ಜೀವಪರ‌ ನಿಲುವುಳ್ಳ ಸರ್ಕಾರಿ
ಶಾಲೆಗಳು ಅನಾಕರ್ಷವಾಗಿ ಕಾಣುತ್ತಿರಬಹುದು.

ಆದರೆ ಇದು ಖಂಡಿತವಾಗಿ ಸಂಪೂರ್ಣ ಸತ್ಯವಲ್ಲ.
ನಮ್ಮ ನಾಡಿನಲ್ಲಿ ಹಲವಾರು ಉತ್ತಮ ಗುಣಮಟ್ಟದ ಸರ್ಕಾರಿ ಶಾಲೆಗಳಿವೆ.
ಅವುಗಳನ್ನು ಗುರುತಿಸಿ, ಅವುಗಳ ಶಾಲಾ ಪ್ರಕ್ತಿಯೆಯಲ್ಲಿ ಇಡೀ ಸಮುದಾಯವೆಲ್ಲವೂ ಒಟ್ಟಾಗಿ
ಒಗ್ಗಟ್ಟಾಗಿ ಭಾಗವಹಿಸಿದರೆ ನಮ್ಮ ತನ ಉಳಿಯುತ್ತದೆ.
ನಿಜದ ಬಾಳುವೆ, ಅರ್ಥಪೂರ್ಣ ಬದುಕು ನಮ್ಮದಾಗುತ್ತದೆ.

ನಾಡು-ನುಡಿ, ನಾಡಿನ‌ ಸಂಸ್ಕ್ರತೀಯ ಬಗ್ಗೆ ಹೃದಯದಿಂದ ಚಿಂತಿಸೋಣಾ, ಅಲೋಚಿಸೋಣಾ,
ಸಂವಾದಿಸೋಣಾ, ವರ್ತಿಸೋಣಾ.

ಸಿರಿಗನ್ನಡಂ ಗೆಲ್ಗೆ-ಸಿರಿಗನ್ನಡಂ‌ ಬಾಳ್ಗೆ.

ಪ್ರೀತಿಪೂರ್ವಕ ನಮನಗಳೊಂದಿಗೆ ವಂದನೆಗಳು.

-ಗಿರೀಶ್ ಟಿ ಪಿ.
ಶಿಕ್ಷಕರು, ಸ.ಪ್ರೌ.ಶಾಲೆ. ಹಾದಿಕೆರೆ, ತರೀಕೆರೆ ತಾ.
___________________________________________________
ನನಗೆ ಇದು ಬರೆಯಲು ಕಾರಣ ಅಥವಾ ಒಳಸೆಳೆತ ಯಾವುದಂದ್ರೆ..

ಇವತ್ತು ಕನ್ನಡ ಮಾಧ್ಯದಲ್ಲಿ ಕಲಿಯುತ್ತಿರುವ ಮಕ್ಕಳನ್ನು ಸ್ವತಃ ಅವರ ಪೋಷಕರೇ ಕೀಳರಿಮೆಯಿಂದ
ನೋಡುವಂತಾಗಿದೆ.
ಇನ್ನೂ ಸ್ನೇಹಿತರು, ಬಂಧುಗಳು, ಸಮುದಾಯ, ಸಮಾಜ..‌ಇಡೀ ವ್ಯವಸ್ಥೆ....???

ನಮ್ಮ ಪ್ರೌಢಶಾಲೆಯಲ್ಲಿ ಅವಳಿ-ಜವಳಿಯಾದ ಅಣ್ಣ ತಂಗಿ ಒಂದೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.

ಆದರೆ ಹುಡುಗಿ ಆಂಗ್ಲ ಮಾಧ್ಯಮದಲ್ಲಿ
ಹುಡುಗ ಕನ್ನಡ ಮಾಧ್ಯಮದಲ್ಲಿ.

ಹುಡುಗಿ ಚೆನ್ನಾಗಿ ಓದುತ್ತಾಳೆ ಅದಕ್ಕೆ ಆಂಗ್ಲ ಮಾಧ್ಯಮ.
ಹುಡುಗ........ ಅದಕ್ಕೆ ಕನ್ನಡ ಮಾಧ್ಯಮ..

ಅದೃಷ್ಟವಾಶತ್ ನಮ್ಮ ಶಾಲೆಯಲ್ಲಿ ಯಾರೂ ಸಹ ಆತನನ್ನು ಕೀಳಾಗಿ ಯಾರೂ ನೋಡುತ್ತಿಲ್ಲ.
ಮಿಗಿಲಾಗಿ ನಮ್ಮ ಶಿಕ್ಷಕರು ಅವನಲ್ಲಿರುವ ನಾಯಕತ್ವ ಗುಣಕ್ಕೆ ಕಲಾ ಗುಣಕ್ಕೆ‌ ನೀರೆರದು
ಆತ್ಮವಿಶ್ವಾಸವುಳ್ಳ ವಿದ್ಯಾರ್ಥಿಯಾಗಿ ಜೀವಂತವಿರಿಸಿದ್ದಾರೆ...

ಆದರೆ‌ ನಾಡಿನ ಉಳಿದ ಕನ್ನಡಮ್ಮನ ಮಕ್ಕಳ ಕತೆ....??

ಈ‌ ತೊಳಲಾಟದಿಂದ ಹೊರಬರಲು ಬರೆಯಬೇಕಾಯಿತು...

ನನ್ನ ಅಣ್ಣ LKG ಯಿಂದ ೧೦ನೇ ವರೆಗೂ ಆಂಗ್ಲ ಮಾಧ್ಯಮದಲ್ಲಿ ಕಲಿತದ್ದೂ..

ಆದರೆ  ನಮ್ಮ ಇಡೀ ಬಂಧು ಬಳಗದ ಮಕ್ಕಳೆಲ್ಲರಿಗಿಂತಲೂ  ಕ್ರೀಡೆಯಲ್ಲಿ ಚುರುಕಾಗಿದ್ದ, ಬಹುಮಾನ
ಗಳಿಸುತ್ತಿದ್ದ ನನ್ನಣ್ಣ ಈ ಅನೈತಿಕ ಪರೀಕ್ಷಾ ನಿಯಮಗಳಿಗೆ ಬಲಿಯಾಗಿ SSLC ನಲ್ಲಿ ಎಲ್ಲಾ
ವಿಷಯಗಳಲ್ಲಿಯೂ ಉತ್ತೀರ್ಣನಾಗಿರಲಿಲ್ಲ.
ಪರೀಕ್ಷಾ ಸಮಯಕ್ಕೆ ಪ್ರೀತಿಯ ತಾತ ಸಹ ತೀರಿಕೊಂಡಿದ್ರು.
ಆದರೆ ನನ್ನಣ್ಣ ಜೀವನದಲ್ಲಿ ಫೇಲ್ ಆಗಿಲ್ಲ.

ಆದರೆ ಎಳವೆಯಲ್ಲಿ ಅವನ ಮನದ ಮೇಲಾದ ಗಾಯಗಳು....?????

ಎಳವೆಯಲ್ಲಿ ತೀರಾ ಮಂದವೆಂದು(ಈಗಲೂ ಮಂದ-ಎಮ್ಮೆ ನ್ನನ್ನಿಷ್ಟದ ಪ್ರಾಣಿ) ಗುರುತಿಸಿಕೊಂಡಿದ್ದ
ನಾನು, ಮನೆಯಲ್ಲಿದ್ದ ಮಕ್ಕಳೆಲ್ಲರೂ ಕಾನ್ವೆಂಟ್ ನ ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವಾಗ
ನಾನು ಕನ್ನಡ‌ ಮಾಧ್ಯದಮದ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದೆ‌

ಈಗ ಎಲ್ಲವೂ ಸುಂದರ ಎನಿಸುತ್ತಿದೆ.

ಆದರೆ ಕನ್ನಡ ನಾಡಿನ‌ಲ್ಲಿ ಕನ್ನಡದ ಮಕ್ಕಳು ಕೀಳರಿಮೆಯಿಂದ ಕೊರಗಬಾರದು.

ಸರ್ಕಾರ ಕನ್ನಡ ಮಾಧ್ಯಮದ ಶಾಲೆಗಳನ್ನೇ ಅತ್ಯುತ್ತಮ ಗುಣಮಟ್ಟದ ಶಾಲೆಗಳನ್ನಾಗಿ ಪರವರ್ತಿಸುವ
ಪ್ರಮಾಣಿಕ ಪ್ರಯತ್ನ ಮಾಡಲಿ.
ಒಂದು ಭಾಷೆಯನ್ನಾಗಿ ಆಂಗ್ಲ ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಸಲಿ.

ನಮ್ಮ ಶಿಕ್ಷಕರು ಸೇರಿದಂತೆ ಎಲ್ಲಾ ಅಧಿಕಾರಿಗಳು, ಸರ್ಕಾರಿ ನೌಕರರು ಮಿಗಿಲಾಗಿ
ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಕಲಿಸಲಿ.

ಜೈ ಕರ್ನಾಟಕ...

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"EnglishSTF" group.
To unsubscribe from this group and stop receiving emails from it, send an email 
to englishstf+unsubscr...@googlegroups.com.
To view this discussion on the web, visit 
https://groups.google.com/d/msgid/englishstf/CAAcTnOXRzE1YZLF6A521o1%3D6pXnKYsgJq5vRRjA2tby7aWB8iA%40mail.gmail.com.

Reply via email to