*ರಾಮಧಾನ್ಯ ಚರಿತೆ ಪದ್ಯಭಾಗದ ಪದಶಃ ಅರ್ಥ ಮತ್ತು ಭಾವಾರ್ಥ*

*ಕೆಲರು ಗೋದಿಯ ಸಾಮೆಯನು ಕೆಲ*

*ಕೆಲರು ನವಣೆಯ ಕಂಬು ಜೋಳವ*

*ಕೆಲವು ಹಾರಕವೆಂದು ಕೆಲವರು ನೆಲ್ಲನತಿಶಯವ*

*ಕೆಲರು ನರೆದಲೆಗನನು ಪತಿಕರಿ*

*ಸಲದ ನೋಡಿದ ನೃಪತಿಯದರೊಳು*

*ಹಲವು ಮತವೇಕೊಂದನೇ ಪೇಳೆನಲು ಗೌತಮನು.    **|| **೧ **||*

*ಪದವಿಭಾಗ ಮತ್ತು ಪದಶಃ ಅರ್ಥ:- *ಕೆಲರು(ಕೆಲವರು) ಗೋದಿಯ(ಗೋಧಿಯನ್ನು) ಸಾಮೆಯನು ಕೆಲ
ಕೆಲರು ನವಣೆಯ ಕಂಬು ಜೋಳವ ಕೆಲವು ಹಾರಕ (ಶ್ರೇಷ್ಠ) + ಎಂದು ಕೆಲವರು ನೆಲ್ಲನು + ಅತಿಶಯವ
(ಶ್ರೇಷ್ಠ/ಉತ್ಕೃಷ್ಠ) ಕೆಲವರು ನರೆದಲಗನನು(ರಾಗಿಯನ್ನು) ಪತಿಕರಿಸಲು
(ಅಂಗೀಕರಿಸಲು/ಒಪ್ಪಲು) + ಅದ ನೋಡಿದ ನೃಪತಿಯು(ರಾಜನು) + ಅದರೊಳು (ಅದರಲ್ಲಿ) ಹಲವು ಮತವು
+ ಏಕೆ + ಒಂದನೇ ಪೇಳು(ಹೇಳು) + ಎನಲು(ಎನ್ನಲು) ಗೌತಮನು.

*ಭಾವಾರ್ಥ:-* ಕೆಲವರು ಗೋದಿಯನ್ನು, ಕೆಲವರು ಸಾಮೆಯನ್ನು, ಕೆಲವರು ನವಣೆಯನ್ನು, ಕೆಲವರು
ಕಂಬು,ಜೋಳವನ್ನು ಉತ್ತಮವೆಂದು ಹೇಳಿದರೆ ಕೆಲವರು ಭತ್ತವನ್ನು ಶ್ರೇಷ್ಠವೆಂದರೆ ಕೆಲವರು
ರಾಗಿಯನ್ನು ಶ್ರೇಷ್ಠವೆಂದು ಹೇಳುವುದನ್ನು ನೋಡಿದ ಮಹಾರಾಜನು(ರಾಮನು) “ಅವುಗಳ ಶ್ರೇಷ್ಠತೆಯ
ಬಗ್ಗೆ ಹಲವು ಅಭಿಪ್ರಾಯಗಳೇಕೆ?ಯಾವುದಾದರು ಒಂದನ್ನು ಹೇಳಿ” ಎಂದಾಗ ಗೌತಮನು ಹೀಗೆ
ಹೇಳುತ್ತಾನೆ.....

*ದಾಶರಥಿ ಚಿತ್ತೈಸು ನಮ್ಮಯ*

*ದೇಶಕತಿಶಯ ನರೆದಲೆಗನೇ*

*ವಾಸಿಯುಳ್ಳವನೀತ ಮಿಕ್ಕಿನ ಧಾನ್ಯವೇಕೆನಲು*

*ಲೇಸನಾಡಿದೆ ಮುನಿಪ ಗೌತಮ*

*ದೋಷರಹಿತನು ಪಕ್ಷಪಾತವ*

*ನೀಸು ಪರಿಯಲಿ ಮಾಡುವರೆ ಶಿವಯೆಂದನಾವ್ರಿಹಿಗ     **|| **೨ **||*

*ಪದವಿಭಾಗ ಮತ್ತು ಪದಶಃ ಅರ್ಥ:-  *ದಾಶರಥಿ ಚಿತ್ತೈಸು(ಮನಸ್ಸುಮಾಡು) ನಮ್ಮಯ ದೇಶಕೆ +
ಅತಿಶಯ(ಶ್ರೇಷ್ಠ) ನರೆದಲಗನೇ(ರಾಗಿಯೇ) ವಾಸಿ (ಶಕ್ತಿ/ಸತ್ವ) + ಉಳ್ಳವನು + ಈತ ಮಿಕ್ಕಿನ
(ಉಳಿದ) ಧಾನ್ಯವು + ಏಕೆ + ಎನಲು ಲೇಸನು(ಒಳ್ಳೆಯದನ್ನು) + ಆಡಿದೆ ಮುನಿಪ ಗೌತಮ ದೋಷರಹಿತನು
ಪಕ್ಷಪಾತವನು + ಈಸು(ಇಷ್ಟ) ಪರಿಯಲಿ(ರೀತಿಯಲ್ಲಿ) ಮಾಡುವರೆ ಶಿವ + ಎಂದನು ಆ
ವ್ರೀಹಿಗ(ಭತ್ತ).

*ಭಾವಾರ್ಥ:- *“ದಶರಥ ಪುತ್ರನಾದ ಶ್ರೀರಾಮನೇ ಕೇಳು. ನಮ್ಮ ದೇಶದಲ್ಲಿ ಶ್ರೇಷ್ಠವೆಂದರೆ
ರಾಗಿಯೇ ಸರಿ. ಇವನು ಶಕ್ತಿ(ಸತ್ವ) ಹೊಂದಿರುವವನು. ಉಳಿದ ಧಾನ್ಯಗಳೇಕೆ?” ಎಂಬ ಮಾತನ್ನು
ಕೇಳಿದ ವ್ರಿಹಿಗ(ಭತ್ತ) “ಇದೇನು ಗೌತಮ ಮುನಿಯೇ ನೀನು ಒಳ್ಳೆಯ ಮಾತನಾಡಿದೆಯಲ್ಲ !
ದೋಷರಹಿತನಾದ ನೀನು ಈ ರೀತಿಯಲ್ಲಿ ಪಕ್ಷಪಾತ ಮಾಡಬಹುದೇ? ಶಿವ ಶಿವಾ! ಎಂದನು.”

*ಎಲ್ಲ ಧರ್ಮದ ಸಾರವನು ನೀವ್*

*ಬಲ್ಲಿರರಿಯಿರೆ ಎಲ್ಲರನು ನೀ*

*ವಿಲ್ಲಿ ನುಡಿವ ಉಪೇಕ್ಷೆಯುಂಟೇ ಸಾಕದಂತಿರಲಿ*

*ನೆಲ್ಲು ನಾನಿರೆ ಗೋದಿ ಮೊದಲಾ*

*ದೆಲ್ಲ ಧಾನ್ಯಗಳಿರಲು ಇದರಲಿ*

*ಬಲ್ಲಿದನು ನರೆದಲೆಗನೆಂಬುದಿದಾವ ಮತವೆಂದ          **|| **೩ **||*

*ಪದವಿಭಾಗ ಮತ್ತು ಪದಶಃ ಅರ್ಥ:- *ಎಲ್ಲ ಧರ್ಮದ ಸಾರವನು ನೀವ್ ಬಲ್ಲಿರಿ
ಅರಿಯಿರೆ(ತಿಳಿದಿರುವಿರೆ) ಎಲ್ಲರನು ನೀವು + ಇಲ್ಲಿ ನುಡಿವ ಉಪೇಕ್ಷೆ(ಕಡೆಗಣನೆ) + ಉಂಟೇ
ಸಾಕು + ಅದಂತಿರಲಿ (ಅದು ಹಾಗಿರಲಿ) ನೆಲ್ಲು (ಭತ್ತ) ನಾನು + ಇರೆ ಗೋದಿ ಮೊದಲಾದ + ಎಲ್ಲ
ಧಾನ್ಯಗಳು + ಇರಲು ಇದರಲಿ ಬಲ್ಲಿದನು (ಶ್ರೀಮಂತ) ನರೆದಲಗನು (ರಾಗಿಯು) + ಎಂಬುದು + ಇದು +
ಆವ ಮತ (ನ್ಯಾಯ) + ಎಂದ.

*ಭಾವಾರ್ಥ:- *ಮುಂದುವರೆದು ಮಾತನಾಡುತ್ತಾ ಭತ್ತ ಗೌತಮ ಮುನಿಗೆ ಹೀಗೆ ಹೇಳುತ್ತದೆ: “ಎಲ್ಲಾ
ಧರ್ಮಗಳ ಸಾರ ನಿಮಗೆ ತಿಳಿದಿದೆ. ನಿಮಗೆ ಎಲ್ಲರ ಬಗ್ಗೆ ತಿಳಿದಿಲ್ಲವೇ?ಹೀಗಿದ್ದೂ ಇಲ್ಲಿ ಈ
ರೀತಿ ಕಡೆಗಣಿಸಿ ಮಾತನಾಡುವುದು ಸರಿಯೇ? ಸಾಕು. ಅದು ಹಾಗಿರಲಿ, ಭತ್ತ ನಾನಿರುವಾಗ;ಗೋದಿ
ಮೊದಲಾದ ಧಾನ್ಯಗಳೆಲ್ಲಾ ಇಲ್ಲಿರುವಾಗ ಇವರಲ್ಲಿ ರಾಗಿಯೇ ಶ್ರೀಮಂತ(ಶ್ರೇಷ್ಠ/ಬಲ್ಲಿದ) ಎಂದು
ಹೇಳುವುದು ಇದು ಯಾವ ನ್ಯಾಯ? ಎಂದಿತು.

*ಏನೆಲವೊ ನರೆದಲಗ ನೀನು ಸ*

*ಮಾನನೇ ಎನಗಿಲ್ಲಿ ನಮ್ಮನು*

*ದಾನವಾಂತಕ ಬಲ್ಲನಿಬ್ಬರ ಹೆಚ್ಚು ಕುಂದುಗಳ*

*ಜಾನಕೀ ಪತಿ ಸನಿಹದಲಿ ಕುಲ*

*ಹೀನ ನೀನು ಪ್ರತಿಷ್ಠ ಸುಡು ಮತಿ*

*ಹೀನ ನೀನೆಂದೆನುತ ಖತಿಯಲಿ ಬೈದು ಭಂಗಿಸಿದ       **|| **೪ **||*

*ಪದವಿಭಾಗ ಮತ್ತು ಪದಶಃ ಅರ್ಥ:- *ಏನು + ಎಲವೊ ನರೆದಲಗ(ರಾಗಿ) ನೀನು ಸಮಾನನೇ ಎನಗೆ +
ಇಲ್ಲಿ ನಮ್ಮನು ದಾನವಾಂತಕ (ವಿಷ್ಣು) ಬಲ್ಲನು + ಇಬ್ಬರ ಹೆಚ್ಚು
ಕುಂದುಗಳ(ಕಡಿಮೆ/ಕೊರತೆಗಳು) ಜಾನಕೀ ಪತಿ ಸನಿಹದಲಿ(ಹತ್ತಿರದಲ್ಲಿ) ಕುಲಹೀನ ನೀನು ಪ್ರತಿಷ್ಠ
(ಅಹಂಕಾರಿ) ಸುಡು ಮತಿಹೀನ (ಬುದ್ಧಿಗೇಡಿ) ನೀನು + ಎಂದು + ಎನುತ ಖತಿಯಲಿ (ಕೋಪದಿಂದ) ಬೈದು
ಭಂಗಿಸಿದ (ಜರೆದನು).

*ಭಾವಾರ್ಥ:-* ನಂತರ ರಾಗಿಯನ್ನು ಕುರಿತು ವ್ರೀಹಿಗನು(ಭತ್ತ) ಈ ರೀತಿ ಹೇಳುತ್ತಾನೆ: “ಎಲವೋ
ನರೆದಲಗ, ಇಲ್ಲಿ ನೀನು ನನಗೆ ಸಮಾನನೇ?ದಾನವಾಂತಕನಾದ ಭಗವಂತನೇ ನಮ್ಮಿಬ್ಬರಲ್ಲಿ ಯಾರು
ಹೆಚ್ಚು, ಯಾರು ಕಡಿಮೆ ಎಂಬುದನ್ನು. ಜಾನಕಿಯ ಪತಿಯಾದ ಶ್ರೀ ರಾಮನ ಸನಿಹದಲ್ಲಿ ನೀನು
ಕುಲಹೀನ,ಅಹಂಕಾರಿ, ಬುದ್ಧಿಗೇಡಿಯಾದ ಹೀನ.” ಎಂದು ಕೋಪದಿಂದ ಬೈದು ಜರೆದನು.

*ಕ್ಷಿತಿಯಮರರುಪನಯನದಲಿ ಸು*

*ವ್ರತ ಸುಭೋಜನ ಪರಮ ಮಂತ್ರಾ*

*ಕ್ಷತೆಗಳಲಿ ಶುಭಶೋಭನದಲಾರತಿಗೆ ಹಿರಿಯರಲಿ*

*ಕ್ರತುಗಳೆಡೆಯೊಳಗರಮನೆಯಲಿ*

*ಪ್ರತಿದಿನವು ರಂಜಿಸುತ ದೇವರಿ*

*ಗತಿಶಯದ ನೈವೇದ್ಯ ತಾನಿಹೆನೆಂದನಾ ವ್ರಿಹಿಗ          **||**೫ **||*

*ಪದವಿಭಾಗ ಮತ್ತು ಪದಶಃ ಅರ್ಥ:- *ಕ್ಷಿತಿಯ (ಭೂಮಿಯ) + ಅಮರರ (ದೇವತೆಗಳ) [ಕ್ಷಿತಿಯಮರರ=
ಬ್ರಾಹ್ಮಣರ] + ಉಪನಯನದಲಿ ಸುವ್ರತ (ಒಳ್ಳೆಯ ವ್ರತ) ಸುಭೋಜನ (ಒಳ್ಳೆಯ ಊಟ) ಪರಮ (ಶ್ರೇಷ್ಠ)
ಮಂತ್ರಾಕ್ಷತೆಗಳಲಿ ಶುಭ ಶೋಭನದಲಿ (ಸಮಾರಂಭಗಳಲ್ಲಿ) + ಆರತಿಗೆ ಹಿರಿಯರಲಿ ಕ್ರತುಗಳ + ಎಡೆಯ
+ ಒಳಗೆ + ಅರಮನೆಯಲಿ ಪ್ರತಿ ದಿನವು ರಂಜಿಸುತ ದೇವರಿಗೆ + ಅತಿಶಯದ (ಮಿಗಿಲು/ಶ್ರೇಷ್ಠ)
ನೈವೇದ್ಯ ತಾನು + ಇಹೆನು + ಎಂದನು + ಆ ವ್ರಿಹಿಗ.

*ಭಾವಾರ್ಥ:-* “ಬ್ರಾಹ್ಮಣರ(ಕ್ಷಿತಿಯ=ಭೂಮಿಯ;ಅಮರರು=ದೇವತೆಗಳು)
ಉಪನಯನದಲ್ಲಿ,ವ್ರತಾಚರಣೆಯಲ್ಲಿ, ಒಳ್ಳೆಯ ಭೋಜನದಲ್ಲಿ, ಶ್ರೇಷ್ಠವಾದ
ಮಂತ್ರಾಕ್ಷತೆಯಲ್ಲಿ, ಶುಭ ಸಮಾರಂಭಗಳಲ್ಲಿ, ಆರತಿಗೆ
ಹಿರಿಯರಲ್ಲಿ, ಯಜ್ಞಯಾಗಾದಿಗಳಲ್ಲಿ(ಕ್ರತು), ಅರಮನೆಯಲ್ಲಿ – ಹೀಗೆ ಪ್ರತಿದಿನವು
ಎಲ್ಲೆಂದರಲ್ಲಿ ರಂಜಿಸುತ್ತ ದೇವರಿಗೆ ಅತಿಶಯವಾದ ನೈವೇದ್ಯದಲ್ಲಿ ತಾನಿರುವೆನು” ಎಂದು
ವ್ರಿಹಿಗನು(ಭತ್ತ) ತನ್ನ ಶ್ರೇಷ್ಠತೆಯನ್ನು ಹೇಳಿಕೊಂಡನು.

*ಸತ್ಯಹೀನನು ಬಡವರನು ಕ*

*ಣ್ಣೆತ್ತಿನೋಡೆ ಧನಾಢ್ಯರನು ಬೆಂ*

*ಬತ್ತಿ ನಡೆವ ಅಪೇಕ್ಷೆ ನಿನ್ನದು ಹೇಳಲೇನದನು*

*ಹೆತ್ತ ಬಾಣಂತಿಯರು ರೋಗಿಗೆ*

*ಪತ್ಯ ನೀನಹೆ ಹೆಣದ ಬಾಯಿಗೆ*

*ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕರವೆಂದ   **|| **೬ **||*

*ಪದವಿಭಾಗ ಮತ್ತು ಪದಶಃ ಅರ್ಥ:-*ಸತ್ಯಹೀನನು ಬಡವರನು ಕಣ್ಣೆತ್ತಿ ನೋಡೆ
ಧನಾಡ್ಯರನು(ಧನವಂತರನ್ನು) ಬೆಂಬತ್ತಿ (ಹಿಂಬಾಲಿಸಿ) ನಡೆವ ಅಪೇಕ್ಷೆ ನಿನ್ನದು ಹೇಳಲು + ಏನು
+ ಅದನು ಹೆತ್ತ ಬಾಣಂತಿಯರು ರೋಗಿಗೆ ಪತ್ಯ ನೀನು + ಇಹೆ (ಇರುವೆ) ಹೆಣದ ಬಾಯಿಗೆ ತುತ್ತು
ನೀನು + ಇಹೆ (ಇರುವೆ) ನಿನ್ನ ಜನ್ಮ ನಿರರ್ಥಕರವು + ಎಂದ.

*ಭಾವಾರ್ಥ:-* ವ್ರಿಹಿಗನ(ಭತ್ತದ) ಮಾತನ್ನು ಕೇಳಿದ ರಾಗಿ ಸುಮ್ಮನಿರದೆ ಅದಕ್ಕೆ ಹೀಗೆ
ಪ್ರತ್ಯುತ್ತರ ನೀಡುತ್ತದೆ: “ನೀನು ಸತ್ಯಹೀನನಾಗಿರುವೆ, ಬಡವರನ್ನು ಕಣ್ಣೆತ್ತಿ
ನೋಡುವುದಿಲ್ಲ, ಶ್ರೀಮಂತರನ್ನು ಮಾತ್ರ ಹಿಂಬಾಲಿಸಿ ಹೋಗುವ ಅಪೇಕ್ಷೆ ನಿನ್ನದು. ಹೆತ್ತ
ಬಾನಂತಿಯರು ಹಾಗೂ ರೋಗಿಗಳಿಗೆ ನೀನು ಪತ್ಯವಾಗಿರುವೆ ಅಲ್ಲದೆ ಹೆಣದ ಬಾಯಿಗೆ ತುತ್ತಾಗುವೆ.
ನಿನ್ನ ಜನ್ಮ ವ್ಯರ್ಥವಾದುದು.” ಎಂದು ರಾಗಿ ಭತ್ತವನ್ನು ಜರೆಯಿತು.



*ಮಳೆದೆಗೆದು ಬೆಳೆಯಡಗಿ ಕ್ಷಾಮದ*

*ವಿಲಯಕಾಲದೊಳನ್ನವಿಲ್ಲದೆ*

*ಅಳಿವ ಪ್ರಾಣಿಗಳಾದರಿಸಿ ಸಲಹುವೆನು ಜಗವರಿಯೆ*

*ಎಲವೊ ನೀನೆಲ್ಲಿಹೆಯೊ ನಿನ್ನಯ*

*ಬಳಗವದು ತಾನೆಲ್ಲಿಹುದು ಈ*

*ಹಲವು ಹುಲು ಧಾನ್ಯಗಳೆನಗೆ ಸರಿದೊರೆಯೆ ಕೇಳೆಂದ  **|| **೭ **||*

*ಪದವಿಭಾಗ ಮತ್ತು ಪದಶಃ ಅರ್ಥ:- *ಮಳೆ + ತೆಗೆದು(ಹೋಗಿ/ಇಲ್ಲದಾಗಿ) ಬೆಳೆಯು + ಅಡಗಿ
ಕ್ಷಾಮದ ವಿಲಯ ಕಾಲದೊಳ್(ವಿನಾಶ ಕಾಲದಲ್ಲಿ) + ಅನ್ನ + ಇಲ್ಲದೆ ಅಳಿವ ಪ್ರಾಣಿಗಳ + ಆದರಿಸಿ
ಸಲಹುವೆನು ಜಗವು + ಅರಿಯೆ (ತಿಳಿಯಲು) ಎಲವೊ ನೀನು + ಎಲ್ಲಿ + ಇಹೆಯೊ (ಇರುವೆಯೊ) ನಿನ್ನಯ
ಬಳಗವದು ತಾನು + ಎಲ್ಲಿ + ಇಹುದು (ಇರುವುದು) ಈ ಹಲವು ಹುಲು(ಹೀನ/ಅಲ್ಪ) ಧಾನ್ಯಗಳು + ಎನಗೆ
ಸರಿದೊರೆಯೆ (ಸರಿಸಮಾನವೇ) ಕೇಳು + ಎಂದ.

*ಸಾರಾಂಶ:-* ರಾಗಿಯು ಮುಂದುವರೆದು ವ್ರಿಹಿಗನನ್ನು ಕುರಿತು “ಈ ಜಗತ್ತಿಗೆಲ್ಲ
ತಿಳಿದಿರುವಂತೆ; ಮಳೆ ಹೋಗಿ, ಬೆಳೆ ಇಲ್ಲದಂತಾಗಿ, ಘೋರ ಬರಗಾಲದಲ್ಲಿ ಅನ್ನವಿಲ್ಲದೆ
ನಾಶವಾಗುವ ಪ್ರಾಣಿಗಳನ್ನು ನಾನು ಆದರಿಸಿ ಕಾಪಾಡುತ್ತೇನೆ. ಎಲವೋ ಆಗ ನೀನೆಲ್ಲಿರುವೆಯೋ
ನಿನ್ನ ಬಳಗ ಎಲ್ಲಿರುವುದೋ. ಈ ಹಲವು ಹುಲು ಧಾನ್ಯಗಳು ನನಗೆ ಸರಿಸಮಾನವೇ? ಕೇಳು.” ಎಂದು
ಹೇಳುತ್ತದೆ.

*ಮಸೆದುದಿತ್ತಂಡಕ್ಕೆ ಮತ್ಸರ*

*ಪಿಸುಣ ಬಲರತಿ ನಿಷ್ಠುರರು ವಾ*

*ದಿಸಲು ಕಂಡನು ನೃಪತಿ ಮನದಲಿ ನೋಡಿ ನಸುನಗುತ*

*ಹಿಸುಣರಿವದಿರ ಮತ್ಸರವ ಮಾ*

*ಣಿಸುವ ಹದನೇನೆನುತ ಯೋಚಿಸಿ*

*ದ ಸುರ ಮುನಿಪರ ನೋಡೆ ಗೌತಮ ಮುನಿಪನಿಂತೆಂದ **|| **೮**||*

*ಪದವಿಭಾಗ ಮತ್ತು ಪದಶಃ ಅರ್ಥ:-* ೧. ಮಸೆದುದು (ತಿಕ್ಕಾಟವಾಯಿತು) + ಇತ್ತಂಡಕ್ಕೆ(ಎರಡು
ತಂಡಕ್ಕೆ/ಗುಂಪಿಗೆ) ಮತ್ಸರ ಪಿಸುಣ(ಚಾಡಿಕೋರ) ಬಲರು + ಅತಿ ನಿಷ್ಠುರರು ವಾದಿಸಲು ಕಂಡನು
ನೃಪತಿ ಮನದಲಿ ನೋಡಿ ನಸು ನಗುತ ಹಿಸುಣರ್ + ಇವದಿರ (ಇವರ) ಮತ್ಸರವ ಮಾಣಿಸುವ
(ಕೊನೆಯಾಗಿಸುವ/ನಾಶಮಾಡುವ) ಹದನ(ರೀತಿ) + ಏನು + ಎನುತ ಯೋಚಿಸಿದ ಸುರ ಮುನಿಪರ(ದೇವತೆಗಳ
ಮುನಿ/ಗೌತಮ) ನೋಡೆ ಗೌತಮ ಮುನಿಪನು + ಇಂತು + ಎಂದ.

*ಸಾರಾಂಶ:- *ಚಾಡಿಕೋರರು, ಬಹಳ ನಿಷ್ಠುರ ಮನೋಭಾವದವರಾಗಿದ್ದ ಎರಡೂ ಗುಂಪುಗಳ ನಡುವೆ ಮಾತಿಗೆ
ಮಾತು ಬೆಳೆದು ತಿಕ್ಕಾಟವಾಯಿತು. ಅದನನ್ನು ನೋಡಿದ ರಾಜನು ನಸುನಗುತ್ತಾ “ಇವರೆಲ್ಲಾ
ಪಿಸುಣರು(ಚಾಡಿಕೋರರು). ಇವರೆಲ್ಲರ ಮತ್ಸರವನ್ನು ಕೊನೆಯಾಗಿಸುವುದು ಹೇಗೆ?” ಎಂದು
ಯೋಚಿಸುತ್ತಾ ಗೌತಮ ಮುನಿಗಳ ಕಡೆ ನೋಡುತ್ತಾನೆ. ರಾಮನ ಪ್ರಶ್ನಾರ್ಥಕ ನೋಟವನ್ನು ನೋಡಿದ ಗೌತಮ
ಮುನಿಯು ಈ ಮುಂದಿನಂತೆ ಹೇಳುತ್ತಾನೆ.

*ಅರಸುಗಳು ನಾವೆಲ್ಲ ಭೂಮೀ*

*ಸುರರುನೆರೆದಿಹ ದಾನವರು ವಾ*

*ನರರು ನಮಗೀ ನ್ಯಾಯವನು ಪರಿಹರಿಸಲಳವಲ್ಲ*

*ಕರಸುವೆವು ಹರಿಹರವಿರಂಚಾ*

*ದ್ಯರನಯೋಧ್ಯೆಗೆ ಅವರ ಗುಣವಾ*

*ಧರಿಸಿ ಪೇಳ್ವರು ನಯದೊಳೆಂದನುರಾಮ ನಸುನಗುತ            **|| **೯ **||*

*          ಪದವಿಭಾಗ ಮತ್ತು ಪದಶಃ ಅರ್ಥ :- *ಅರಸುಗಳು ನಾವೆಲ್ಲ
ಭೂಮೀಸುರರು(ಬ್ರಾಹ್ಮಣರು) ನೆರೆದಿಹ ದಾನವರು (ರಾಕ್ಷಸರು) ವಾನರರು ನಮಗೆ + ಈ ನ್ಯಾಯವನು
ಪರಿಹರಿಸಲು(ಬಗೆಹರಿಸಲು) + ಅಳವಲ್ಲ(ಸಾಧ್ಯವಿಲ್ಲ) ಕರಸುವೆವು ಹರಿ(ವಿಷ್ಣು) ಹರ (ಈಶ್ವರ)
ವಿರಂಚಿ (ಬ್ರಹ್ಮ) + ಆದ್ಯರನು (ಮೊದಲಾದವರನ್ನು) + ಅಯೋಧ್ಯೆಗೆ ಅವರ ಗುಣವ + ಆಧರಿಸಿ
ಪೇಳ್ವರು (ಹೇಳುವರು) ನಯದೊಳ್ (ವಿವೇಕದಿಂದ/ನ್ಯಾಯವಾಗಿ) + ಎಂದನು ರಾಮ ನಸು ನಗುತ.

*          ಭಾವಾರ್ಥ: “*ನಿಮ್ಮ ನ್ಯಾಯ ತೀರ್ಮಾನ ಮಾಡಲು,ಅರಸರಾದ ನಾವಾಗಲೀ ಭೂಸುರರು
ಎನಿಸಿದ ಬ್ರಾಹ್ಮಣರಿಂದಾಗಲೀ ರಾಕ್ಷಸರಿಗಾಗಲೀ ವಾನರರಿಗಾಗಲೀ ಸಾಧ್ಯವಿಲ್ಲ. ಆದ್ದರಿಂದ
ಬ್ರಹ್ಮ-ವಿಷ್ಣು-ಮಹೇಶ್ವರರೇ ಮೊದಲಾದವರನ್ನು ಕರೆಸುತ್ತೇವೆ. ಅವರಾದರೆ ಗುಣವನ್ನು ಆಧರಿಸಿ
ವಿವೇಕದಿಂದ ನಿಮ್ಮ ನ್ಯಾಯ ತೀರ್ಮಾನ ಮಾಡುತ್ತಾರೆ” ಎಂದು ರಾಮನು ನಸುನಗುತ್ತ
ಹೇಳಿದನು.(ವ್ಯಂಗವಾಗಿ)

*ಪರಮ ಧಾನ್ಯದೊಳಿಬ್ಬರೇ ಇವ*

*ರಿರಲಿ ಸೆರೆಯೊಳಗಾರು ತಿಂಗಳು*

*ಹಿರಿದು ಕಿರಿದೆಂಬಿವರ ಪೌರುಷವರಿಯಬಹುದಿನ್ನು*

*ಪುರಕೆ ಗಮನಿಸಿ ನಾವು ನಿಮ್ಮನು*

*ಕರೆಸುವೆವು ಕೇಳೆನುತಯೋಧ್ಯಾ*

*ಪುರಿಗೆ ಪಯಣವ ಮಾಡಹೇಳಿದನಾವಿಭೀಷಣಗೆ          **|| **೧೦ **||*

*ಪದವಿಭಾಗ ಮತ್ತು ಪದಶಃ ಅರ್ಥ :-*ಪರಮ(ಶ್ರೇಷ್ಠ) ಧಾನ್ಯದೊಳ್ (ಧಾನ್ಯದಲ್ಲಿ) + ಇಬ್ಬರೇ
ಇವರು + ಇರಲಿ ಸೆರೆಯೊಳಗೆ + ಆರು ತಿಂಗಳು ಹಿರಿದು ಕಿರಿದು + ಎಂಬ + ಇವರ ಪೌರುಷವ +
ಅರಿಯಬಹುದು + ಇನ್ನು ಪುರಕೆ ಗಮನಿಸಿ ನಾವು ನಿಮ್ಮನು ಕರೆಸುವೆವು ಕೇಳು + ಎನುತ + ಅಯೋಧ್ಯಾ
ಪುರಿಗೆ (ಪಟ್ಟಣಕ್ಕೆ) ಪಯಣವ (ಪ್ರಯಾಣವ) ಮಾಡ (ಮಾಡಲು) ಹೇಳಿದನು + ಆ + ವಿಭೀಷಣಗೆ.

*ಭಾವಾರ್ಥ:* ಶ್ರೀರಾಮನು ಅಲ್ಲಿ ನೆರೆದಿದ್ದ ಧಾನ್ಯಗಳ ವಾದವಿವಾದಗಳನ್ನು ಗಮನಿಸಿದ ಮೇಲೆ
ಹೀಗೆ ತೀರ್ಪು ನೀಡಿದನು. “ಕೇಳಿ, ಶ್ರೇಷ್ಠವಾದ ಧಾನ್ಯಗಳಲ್ಲಿ ಇವರಿಬ್ಬರೇ ಇರಲಿ. ಆರು
ತಿಂಗಳು ಸೆರೆಯಲ್ಲಿ ಹಾಕಿದರೆ; ಹಿರಿದು ಕಿರಿದೆಂದು ವಾದಿಸುವ ಇವರ ಪೌರುಷವನ್ನು
ತಿಳಿಯಬಹುದು. ಇನ್ನು ನಾವು ಅಯೋಧ್ಯಾ ಪಟ್ಟಣಕ್ಕೆ ಹೋಗುತ್ತೇವೆ. ಆ ನಂತರ ನಿಮ್ಮ
ಸ್ಥಿತಿಯನ್ನು ಗಮನಿಸಿ ಕರೆಸಿಕೊಳ್ಳುತ್ತೇವೆ.” ಎಂದು ಹೇಳಿ ಅಯೋಧ್ಯಾ ಪಟ್ಟಣಕ್ಕೆ
ಪ್ರಯಾಣಮಾಡಲು ವಿಭೀಷಣನಿಗೆ ಹೇಳಿದನು.
On Jan 15, 2018 12:47 PM, "Sameera samee" <mehak.sa...@gmail.com> wrote:

> ಪ್ರಕೃತ "ರಾಮಧಾನ್ಯ ಚರಿತ್ರೆ"ಯು ಕನಕದಾಸರಿಂದ ರಚಿತವಾದ ಒಂದು ಪುಟ್ಟ ವಿಡಂಬನ ಕಾವ್ಯ.
> ಇದೊಂದು ಕಲ್ಪಿತ ಕಥೆ. ರಾಗಿ(ನರೆದಲೆಗ) ಹಾಗೂ ಭತ್ತ(ವ್ರಿಹಿಗ)- ಇವರಿಬ್ಬರ ನಡುವೆ ಯಾರು
> ಹೆಚ್ಚು ಯಾರು ಕಡಿಮೆ ಎಂಬ ಜಗಳವು ಉದ್ಭವಿಸಲಾಗಿ, ರಾಮನು ಇವರಿಬ್ಬರ ವ್ಯಾಜ್ಯವನ್ನು
> ಪರಿಹರಿಸಿ ನರೆದಲೆಗವೇ ಉತ್ತಮವೆಂದು ಸಾರಿ ತೀರ್ಪನ್ನು ನೀಡುವುದು ಇಲ್ಲಿನ ಕಥಾಹಂದರ.
>
> ಆ ಕಾಲಕ್ಕೆ ಇದ್ದಿರಬಹುದಾದ ವರ್ಗ-ವರ್ಣ ತಾರತಮ್ಯಗಳ ಪ್ರತೀಕವಾಗಿ - ಉಚ್ಛ ವರ್ಗಗಳ
> ಪ್ರತಿನಿಧಿಯಾಗಿ ನೆಲ್ಲೂ, ಕೆಳವರ್ಗಗಳ ಪ್ರತಿನಿಧಿಯಾಗಿ ರಾಗಿಯೂ ಈ ಕಾವ್ಯದಲ್ಲಿ
> ಕಂಡುಬರುತ್ತವೆ. ಹೀಗಾಗಿ ’ರಾಮಧಾನ್ಯ ಚರಿತ್ರೆ’ಯನ್ನು ರೂಪಕ ಕಾವ್ಯವೆಂದೂ ಹೇಳಬಹುದು.
>
>
> ರಾವಣನನ್ನು ಸಂಹರಿಸಿದ ನಂತರ ರಾಮನು ಸೀತೆ, ಲಕ್ಷ್ಮಣ, ವಿಭೀಷಣ, ಹನುಮಂತ ಮುಂತಾದವರೊಂದಿಗೆ
> ಅಯೋಧ್ಯೆಗೆ ಮರಳುತ್ತಿರುವಾಗ, ಮಾರ್ಗಮಧ್ಯದಲ್ಲಿ ಮುನಿಗಳೆಲ್ಲರೂ ಇವರಿಗೆ ವಿವಿಧ
> ಧಾನ್ಯಗಳಿಂದ ಸಿದ್ಧಪಡಿಸಿದ ಭಕ್ಷ್ಯ-ಭೋಜನಗಳ ಔತಣವೊಂದನ್ನು ಏರ್ಪಡಿಸಿರುತ್ತಾರೆ. ಆಗ
> ಅವರಲ್ಲಿ ಸಹಜವಾಗಿ ಧಾನ್ಯಗಳಲ್ಲಿ ಯಾವುದು ಶ್ರೇಷ್ಠ ಎಂಬ ಪ್ರಶ್ನೆಯು ಉದ್ಭವಿಸುತ್ತದೆ. ಈ
> ಪ್ರಶ್ನೆಯೇ ’ರಾಮಧಾನ್ಯ ಚರಿತ್ರೆ’ಯ ಕಥಾಮೂಲ. ಇಲ್ಲಿಂದಲೇ ಭತ್ತ ಹಾಗೂ ರಾಗಿಯ ನಡುವೆ
> ಜಗಳವೇರ್ಪಡುವುದು.
>
>
> ಅವರಿಬ್ಬರ ನಡುವಿನ ಜಗಳವನ್ನು ನಿವಾರಿಸಿ ನ್ಯಾಯವನ್ನು ಹೇಳಲೆಂದು ರಾಮನು ಅವರಿಬ್ಬರನ್ನೂ
> ಆರು ತಿಂಗಳುಗಳ ಕಾಲ ಬಂಧನದಲ್ಲಿರಿಸುವಂತೆ ಹೇಳುತ್ತಾನೆ. ಆರು ತಿಂಗಳ ನಂತರ ಇವರಿಬ್ಬರನ್ನೂ
> ಸಭೆಗೆ ಕರೆಸಲಾಗಿ, ಆ ವೇಳೆಗೆ ಭತ್ತವು ಸೊರಗಿ ಟೊಂಕ ಮುರಿದು ಬಿದ್ದರೆ, ರಾಗಿಯು ಯಾವ
> ಕ್ಲೇಶಕ್ಕೂ ಒಳಗಾಗದೆ ಗಟ್ಟಿಯಾಗಿ ನಿಲ್ಲುತ್ತದೆ. ಕೊನೆಗೆ, ಆರು ತಿಂಗಳುಗಳ ನಂತರವೂ
> ಸ್ವಲ್ಪವೂ ಕಾಂತಿಗುಂದದ ರಾಗಿಗೇ ರಾಮನ ಸಭೆಯಲ್ಲಿ ಶ್ರೇಷ್ಠತೆಯ ಪಟ್ಟ ದೊರೆಯುತ್ತದೆ. ಇಡೀ
> ಸಭೆಯು ರಾಗಿಯನ್ನು ಮೆಚ್ಚಿ ಹಾರೈಸುತ್ತದೆ.
>
> ------------------------------------------------------------
> ------------------------------------------------
>
>
> ರಾಮಧಾನ್ಯ ಚರಿತ್ರೆ
>
>
>
> ರಾಮಧಾನ್ಯದ ಕೃತಿಯನೀ ಜನ
>
> ದಾಮವೆಲ್ಲಾದರಿಸುವಂದದಿ
>
> ಭೂಮಿಗಚ್ಚರಿಯಾಗಿ ಪೇಳುವೆನೀ ಮಹಾಕಥೆಯ
>
> ಪ್ರೇಮದಿಂದಾದರಿಸಿ ಕೇಳ್ದ ಸ
>
> ನಾಮರಿಗೆ ಸತ್ಕರುಣದಲಿ
>
> ರಾಮ ಪಾಲಿಸಿಕೊಡುವ ಮನದಲಿ ಇಷ್ಟಸಂಪದವ               (೩)
>
>
> ಧರೆಯನೆಲ್ಲವ ಸೋತು ಜೂಜಲಿ
>
> ಕುರುಪತಿಗೆ, ಕೈದಳಿಸಿ ತಮ್ಮಂ
>
> ದಿರು ಸಹಿತ ಧರ್ಮಜನು ಕಾಮ್ಯಕ ವನದೊಳಿರುತಿರಲು
>
> ಪರಮ ಋಷಿ ಶಾಂಡಿಲ್ಯ ಸ
>
> ತ್ಕರುಣದಲಿ ನಡೆತಂದನಲ್ಲಿಗೆ
>
> ವರ ತಪೋಧನರೊಡನೆ ಕಾಣಿಸಿಕೊಂಡನುಚಿತದಲಿ             (೪)
>
>
> ಧರಣಿಪತಿ ಧರ್ಮಜನು ತಮ್ಮಂದಿರೊಡಗೂಡಿ ಶಾಂಡಿಲ್ಯ ಮುನಿಗೆ ವಂದಿಸಿ ಸತ್ಕರಿಸಿದನು. ಆಗ
> ಶಾಂಡಿಲ್ಯ ಮುನಿಯು "ನೃಪಸಿರಿ - ದರಿದ್ರತೆ ನಿಲದು, ಪರಿಹಾರವಹುದು" ಎಂದು ನುಡಿಯುತ್ತಾನೆ.
> ಆಗ ಧರ್ಮಜನು :
>
>
> "ದೇವಋಷಿಗಳು ನಿಮ್ಮ ಕರುಣಾ
>
> ಭಾವವೆಮ್ಮಲ್ಲಿರಲು ನಮಗಿ
>
> ನ್ನಾವ ಕಷ್ಟದ ಬಳಕೆದೋರದು. ನಿಮ್ಮ ದರುಶನದಿ
>
> ಪಾವನರು ನಾವಾದೆವೆಮಗಿ
>
> ನ್ನಾವ ಬುದ್ಧಿಯನರುಹುವಿರಿಯದ
>
> ನೀವು ಪೇಳೆನೆ", ನಸುನಗುತ ಮುನಿನಾಥನಿಂತೆಂದ            (೬)
>
>
> "ದೇವಋಷಿಗಳು ನಿಮ್ಮ ಕರುಣೆ ನಮ್ಮ ಮೇಲಿರುವಾಗ ನಮಗೆ ಯಾವ ಕಷ್ಟವೂ ಬರದು. ನಿಮ್ಮ
> ದರ್ಶನದಿಂದ ನಾವು ಪಾವನರಾದೆವು ಸ್ವಾಮಿ, ನಮಗೆ ನೀವು ಯಾವ ವಿಷಯವನ್ನು ಅರುಹುವಿರಿ ಈಗ"
> ಎಂದು ಕೇಳಲು, ಶಾಂಡಿಲ್ಯ ಮುನಿಯು "ಯುಧಿಷ್ಟಿರ, ಭೂಮಿಯಲ್ಲಿ ಅಧಿಕವಾದ ಖ್ಯಾತಿಯನ್ನು
> ಹೊಂದಿರುವ ನಾಲ್ಕು ಅರಸುಗಳೆಂದರೆ - ನಳ, ರಾಮ, ಯುಧಿಷ್ಟಿರ ಹಾಗೂ ಹರಿಶ್ಚಂದ್ರ ಎಂದು
> ಜಗವೆಲ್ಲ ಸಾರುತ್ತಿದೆ. ಅವರಲ್ಲಿ ರಾಮನು ಅತ್ಯಂತ ಗುಣಶೀಲನಾಗಿದ್ದಾನೆ. ಒಮ್ಮೆ
> ನೆಲ್ಲು(ವ್ರಿಹಿಗ) ಹಾಗೂ ರಾಗಿ(ನರೆದಲೆಗ)ಗಳ ನಡುವೆ ಮೂಡಿದ್ದ ಜಗಳವನ್ನು ನಿವಾರಿಸಿ,
> ಸರಿಯಾದ ನ್ಯಾಯವನ್ನು ಹೇಳಿ ಶ್ರೀರಾಮನು ಧರ್ಮವನ್ನು ಪಾಲಿಸಿದ" ಎಂದು ತಿಳಿಸುತ್ತಾನೆ.
>
>
> ಆಗ ಧರ್ಮರಾಯನು ರಾಮಚರಿತೆಯನ್ನು ತಮಗೆ ಹೇಳಬೇಕೆಂದು ಶಾಂಡಿಲ್ಯ ಮುನಿಯನ್ನು ಬಿನ್ನವಿಸಲು,
> ಆ ಮುನಿಪನು ಅಲ್ಲಿದ್ದವರಿಗೆಲ್ಲ ರಾಮನ ಕಥೆಯನ್ನು ವಿಸ್ತರಿಸಿ ಹೆಳುತ್ತಾನೆ. :
>
>
> ಕೇಳು ಕುಂತೀ ತನಯ, ಗಂಗಾ ನದಿಯ ದಡದ ಉತ್ತರ ಭಾಗದಲ್ಲಿ ವಿಶಾಲವಾಗಿಯೂ, ವೈಭವಯುತವಾಗಿಯೂ
> ಇರುವ ಅಯೋಧ್ಯಾಪುರ. ಆ ಪುರದ ಅರಸ ದಶರಥ. ಅವನಿಗೆ ಕೌಸಲ್ಯೆ, ಕೈಕೆ ಹಾಗೂ ಸುಮಿತ್ರೆ - ಈ
> ಮೂವರು ಅರಸಿಯರು.
>
> ಆ ದಶರಥ ಹಾಗೂ ಕೌಸಲ್ಯೆಯರಿಗೆ ಜನಿಸಿದ ಗುಣನಿಧಿ ಆ ರಾಮ. ಅವನು ತಾಟಕಿಯೆಂಬ ರಾಕ್ಷಸಿಯನ್ನು
> ಸಂಹರಿಸಿ, ಮಾರೀಚ-ಸುಬಾಹುಗಳನ್ನು ಕೊಂದು, ವಿಶ್ವಾಮಿತ್ರ ಮುನಿಯು ನಡೆಸುತ್ತಿದ್ದ
> ಮಖ(ಯಾಗ)ವನ್ನು ಯಾವುದೇ ವಿಘ್ನ ಬಾರದಂತೆ ರಕ್ಷಿಸಿದನು. ಆ ನಂತರದಲ್ಲಿ ರಾಮನು ಗೌತಮನ ಸತಿ
> ಅಹಲ್ಯೆಯ ಶಾಪವನ್ನು ನಿವಾರಿಸಿ, ತನ್ನ ತಮ್ಮ ಲಕ್ಷ್ಮಣ ಹಾಗೂ ಮುನಿ ವಿಶ್ವಾಮಿತ್ರನೊಡಗೂಡಿ
> ಮಿಥಿಲಾನಗರಕ್ಕೆ ಬಂದನು.
>
> ಮುಂದೆ, ಅಲ್ಲಿನ ಅರಸನಾದ ಜನಕನ ಮಗಳು ಸೀತೆಯ ಸ್ವಯಂವರದಲ್ಲಿ ಶಿವಧನುಸ್ಸನ್ನು ಹೆದೆಯೇರಿಸಿ
> ಮುರಿದು, ಶುಭಮುಹೂರ್ತದಲ್ಲಿ ರಾಮನು ಸೀತೆಯನ್ನು ವರಿಸಿದನು. ಆ ನಂತರದಲ್ಲಿ ರಾಮನು
> ತನ್ನವರೊಡಗೂಡಿ ಅಯೋಧ್ಯೆಗೆ ಹೊರಟುಬಂದನು.
>
>
> ಕೇಳು ಧರ್ಮಜ, ರಾಮನಿಗೆ ಕೂಡ ನಿಮ್ಮಂತೆಯೇ ವನವಾಸ ಮಾಡಬೇಕಾಗಿ ಬಂತು. ಪಿತೃವಚನ
> ಪಾಲನೆಗೆಂದು ರಾಮನು ತನ್ನ ಮಡದಿ ಸೀತೆ ಹಾಗೂ ಲಕ್ಷ್ಮಣರೊಂದಿಗೆ ಘೋರವಾದ ಕಾನನದಲ್ಲಿ
> ಇರಬೇಕಾಯಿತು.
>
> "ಭರತನನು ಸಂತೈಸಿ, ಕಾಕಾಸುರನ ಪ್ರಾಣವ ಕಾಯ್ದು, ದಾನವ ತರುಣಿ ನಾಸಿಕವರಿದು, ಮಾಯಾಮೃಗವ
> ಸಂಹರಿಸಿ, ಸರಸಿಜಾಕ್ಷಿಯನಗಲಿ, ಮಾರ್ಗಾಂತರದಿ ಕಂಡ ಜಟಾಯುವನು - ಮನ ಮರುಗಿ ವೃತ್ತಾಂತವನು
> ತಿಳಿದವನಲ್ಲಿ ಗತಗೊಳಿಸಿ..(೧೩)"
>
>
> ಸೀತೆಯನ್ನು ಹುಡುಕಿ ಹೊರಟ ರಾಮಲಕ್ಷ್ಮಣರಿಗೆ ಸಾವಿನ ಅಂಚಿನಲ್ಲಿದ್ದ ಜಟಾಯುವು
> ಕಾಣಿಸುತ್ತಾನೆ. ಅವನಿಂದ ರಾಮನು ನಡೆದ ವೃತ್ತಾಂತವನ್ನು(ಸೀತಾ ಅಪಹರಣ, ಹಾಗೂ ರಾವಣನನ್ನು
> ಎದುರಿಸಿದ ಜಟಾಯುವನ್ನು ರಾವಣನು ಗಾಯಗೊಳಿಸಿದ್ದು) ಕೇಳಿ ತಿಳಿದುಕೊಳ್ಳುತ್ತಾನೆ. ಇಷ್ಟನ್ನೂ
> ತಿಳಿಸುವ ವೇಳೆಗೆ ಜಟಾಯುವು ಮೃತನಾಗುತ್ತಾನೆ. ಅವನ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ
> ನಂತರ ರಾಮಲಕ್ಷ್ಮಣರು ಸೀತೆಯನ್ನು ಹುಡುಕುತ್ತ ಹೊರಡುತ್ತಾರೆ.
>
> ಮಾರ್ಗ ಮಧ್ಯದಲ್ಲಿ ಹನುಮನನ್ನು ಕಂಡು, ಕಿಷ್ಕಿಂದೆಯನ್ನು ತಲುಪಿ, ಅಲ್ಲಿ ವಾಲಿಯನ್ನು
> ಹರಿಸಿ, ಸುಗ್ರೀವನು ಕಳುಹಿಸಿದ ವಾನರ ಸೈನ್ಯವನ್ನು ಒಡಗೊಂಡು ರಾಮನು ದಕ್ಷಿಣಕ್ಕೆ ಹೊರಟನು.
> ಸಮುದ್ರವನ್ನು ದಾಟಲು ಸೇತುಬಂಧವನ್ನು ನಿರ್ಮಿಸಿ, ಲಂಕೆಯನ್ನು ತಲುಪಿ, ರಾವಣ ಕುಂಭಕರ್ಣಾದಿ
> ದಾನವ ವೀರರನ್ನು ಕೊಂದು, ರಾಮನು ನಂತರದಲ್ಲಿ ವಿಭೀಷಣನಿಗೆ ಪಟ್ಟವನ್ನು ಕಟ್ಟಿದನು.
>
>
> ಆ ನಂತರ ರಾಮನು ಸೀತೆಯನ್ನು ಕೈಕೊಂಡು, ತಮ್ಮೊಡನೆ ಅಯೋಧ್ಯೆಗೆ ಬರಲು ವಿಭೀಷಣನನ್ನೂ
> ಅಹ್ವಾನಿಸುತ್ತಾನೆ. ಅಗ ಅಗಣಿತ ದಾನವ ಸೇನೆಯು ಅವರೊಡನೆ ಅಯೋಧ್ಯೆಗೆ ಹೊರಡಲು ಸಿದ್ಧವಾಯ್ತು.
>
> ವಿಭೀಷಣನು ತನಗೆಂದು ಅರ್ಪಿಸಿದ ಕುಬೇರನ ರಥದಲ್ಲಿ ರಾಮನು ಸೀತೆ ಹಾಗೂ ಲಕ್ಷ್ಮಣರೊಡನೆ
> ಕುಳಿತಿರಲು, ಅವರೊಡನೆ ಹನುಮ, ಜಾಂಬವಂತ, ವಿಭೀಷಣಾದಿಯಾಗಿ, ದಾನವ ಹಾಗೂ ವಾನರ ಸೈನ್ಯವೂ
> ಅಯೋಧ್ಯೆಯೆಡೆಗೆ ಹೊರಡುತ್ತಾರೆ.
>
>
> ಮಾರ್ಗ ಮಧ್ಯದಲ್ಲಿ ಇವರೆಲ್ಲ ವಾಲ್ಮೀಕಿ, ಮುಚುಕುಂದ ಮುಂತಾದ ಮುನಿಗಳ ಆಶ್ರಮಗಳನ್ನು
> ಸಂದರ್ಶಿಸಿದರು. ನಂತರ ಮುಂದುವರೆದು ಇವರೆಲ್ಲ ಮಾಹವನವೊಂದರಲ್ಲಿ ಬೀಡುಬಿಟ್ಟಿರಲು ಹಲವಾರು
> ಮುನಿವರರು ಬಂದು ರಾಮನನ್ನು ಕಂಡರು.
>
>
> ಕೌಶಿಕನು, ಜಮದಗ್ನಿ, ಜನ್ಹು, ಪರಾಶರನು, ಜಾಬಾಲಿ, ಭೃಗು, ದೂರ್ವಾಸ, ಗೌತಮನಾದಿಯಾದ ಸಮಸ್ತ
> ಮುನಿವರರು ಭಾಸುರದ ತೇಜದಲಿ ತಮ್ಮ ನಿವಾಸವನು ಹೊರವಂಟು ಬಂದರು, ದಾಶರಥಿಯನು ಕಂಡು
> ಹರಸಿದರಕ್ಷತೆಯ ತಳಿದು (೨೩)
>
>
> ಅವರೆಲ್ಲ ರಾಮನನ್ನು ಮನಸಾರೆ ಪ್ರಾರ್ಥಿಸಿ, ಹೊಗಳಿ, ವಿವಿಧ ಬಗೆಯಲ್ಲಿ ಸತ್ಕರಿಸಿದರು.
>
>
> ಅಲ್ಲಿ ನೆರೆದ ಮಹಾಮುನೀಶ್ವರ
>
> ರೆಲ್ಲ ತರಿಸಿದರಖಿಳ ವಸ್ತುವ -
>
> ಬೆಲ್ಲ, ಸಕ್ಕರೆ, ಜೇನುತುಪ್ಪ, ರಸಾಯನಂಗಳಲಿ
>
> ಭುಲ್ಲವಿಸಿ ರಚಿಸಿದ ಸುಭಕ್ಷಗ
>
> ಳೆಲ್ಲವನು ತುಂಬಿದರು ಹೆಡಗೆಗ
>
> ಳಲ್ಲಿ. ಜೋಡಿಸಿ, ಹೊರಿಸಿ ತಂದರು ರಾಮನೋಲಗಕೆ           (೨೮)
>
>
> ರಾಮನೊಡನೆ ಬಂದವರೆಲ್ಲ ಆ ರುಚಿರುಚಿಯಾದ ಭೋಜ್ಯಗಳೆಲ್ಲವನ್ನು ಮನಸಾರೆ ಸವಿದರು. ಅವರೆಲ್ಲ
> ಮುನಿವರರನ್ನು ಆನಂದದಿಂದ ಕೊಂಡಾಡಿದರು. ಆಗ ರಾಮನು ಹನುಮನನ್ನು ಕರೆದು ಆ ಭಕ್ಷ್ಯಗಳ
> ರುಚಿಯನ್ನು ಕುರಿತು ಪ್ರಶ್ನಿಸಿದನು -
>
>
> ಅನಿಲಸುತ ಬಾರೆಂದು ರಘುನಂ
>
> ದನನು "ಕರುಣದೊಳಿವರ ರುಚಿಯೆಂ
>
> ತೆನಲು", ಕರಗಳ ಮುಗಿದು ಬಿನ್ನೈಸಿದನು ರಘುಪತಿಗೆ
>
> ’ಇನಕುಲಾನ್ವಯತಿಲಕ ಚಿತ್ತೈ
>
> ಸೆನಗೆ ಸವಿಯಹುದಿನ್ನು ಧಾನ್ಯದ
>
> ತನುವನೀಕ್ಷಿಸಬೇಕು, ದೇವರು ತರಿಸಿ ನೀವೆಂದ’                 (೨೯)
>
>
> ಆಗ ಹನುಮನು ’ಭಕ್ಷ್ಯಗಳೇನೋ ಬಹಳ ರುಚಿಯಾಗಿವೆ. ಆದರೆ ಈ ಭಕ್ಷ್ಯಗಳನ್ನು ಯಾವ ಯಾವ
> ಧಾನ್ಯಗಳಿಂದ ತಯಾರಿಸಿದ್ದಾರೋ ಆ ಧಾನ್ಯಗಳನ್ನೆಲ್ಲ ಒಮ್ಮೆ ತಾನು ನೋಡಬೇಕು. ದಯವಿಟ್ಟು ತಾವು
> ಆ ಧಾನ್ಯಗಳನ್ನು ತರಿಸಿ’ ಎಂದು ರಾಮನನ್ನು ಕೇಳುತ್ತಾನೆ.
>
> ಹಾಗೇ ಆಗಲಿ ಎಂದು ರಾಮನು ಗೌತಮ ಮುನಿಯನ್ನು ’ಧಾನ್ಯಗಳನ್ನು ತರಿಸಬೇಕು’ ಎಂದು ವಿನಯದಿಂದ
> ಕೇಳಿಕೊಳ್ಳುತ್ತಾನೆ. ಆಗ ಗೌತಮ ಮುನಿಯ ಶಿಷ್ಯರು ಎಲ್ಲ ತರದ ಧಾನ್ಯಗಳನ್ನೂ ಹೊತ್ತು ತಂದು
> ಅಲ್ಲಿದ್ದವರೆಲ್ಲರ ಮುಂದಿಡುತ್ತಾರೆ.
>
>
> "ನರೆದಲೆಗನಿದು, ನೆಲ್ಲು, ಹಾರಕ, ಬರಗು, ಜೋಳವು, ಕಂಬು, ಸಾಮೆಯು, ಉರುತರದ ನವಣೆಯಿದು
> ನವಧಾನ್ಯ"ವೆಂದೆನಲು, ಮೆರೆವ ರಾಶಿಯ ಕಂಡು - ’ಇದರೊಳು ಪರಮಸಾರದ ಹೃದಯನಾರೆಂದರಸಿ’
> ಕೇಳಿದನಲ್ಲಿರುತಿಹ ಮಹಾಮುನೀಶ್ವರರ                   (೩೨)
>
> (೧. ನರೆದಲೆಗ: ರಾಗಿ, ೨. ನೆಲ್ಲು: ಭತ್ತ. ೩. ಹಾರಕ, ಬರಗು, ಕಂಬು, ಸಾಮೆ, ನವಣೆ -
> ಬಗೆಬಗೆಯ ಇತರ ಧಾನ್ಯಗಳು).
>
> ಎಲ್ಲ ಧಾನ್ಯಗಳ ಹೆಸರುಗಳನ್ನೂ ಒಂದೊಂದಾಗಿ ಹೇಳುತ್ತಿರಲು, ರಾಮನು - "ಈ ಧಾನ್ಯಗಳಲ್ಲಿ
> ಉತ್ತಮವಾದದ್ದು ಯಾವುದು?" ಎಂದು ಅಲ್ಲಿದ್ದ ಮುನಿಗಳನ್ನು ಕೇಳುತ್ತಾನೆ. ಆಗ
>
>
> ಕೆಲರು ಗೋದಿಯ, ಸಾಮೆಯನು ಕೆಲ
>
> ಕೆಲರು ನವಣೆಯ, ಕಂಬು, ಜೋಳವ
>
> ಕೆಲರು ಹಾರಕವೆಂದು, ಕೆಲವರು ನೆಲ್ಲನತಿಶಯವ,
>
> ಕೆಲರು ನರೆದಲಗನನು ಪತಿಕರಿ
>
> ಸಲದ ನೋಡಿದ ನೃಪತಿ"ಯದರೊಳು
>
> ಹಲವು ಮತವೇಕೊಂದನೇ ಪೇಳೆನಲು", ಗೌತಮನು:              (೩೩)
>
>
> (ಅಲ್ಲಿದ್ದ ಕೆಲವರು ಗೋಧಿಯನ್ನೂ, ಕೆಲವರು ಸಾಮೆಯನ್ನೂ, ಕೆಲವರು ಇತರ ಧಾನ್ಯಗಳನ್ನೂ,
> ಕೆಲವರು ಭತ್ತವನ್ನೂ, ಹಾಗೇ ಇನ್ನೂ ಕೆಲವರು ರಾಗಿಯನ್ನೂ ಪತಿಕರಿಸಿ(ಪತಿಕರಿಸು:
> ಅಂಗೀಕರಿಸು/ಹೊಗಳು) ನುಡಿದರು. ಆಗ ರಾಮನು "ಹೀಗೆಹಲವು ಅಭಿಪ್ರಾಯಗಳೇಕೆ, ಯಾವುದಾದರೂ
> ಒಂದನ್ನು ಒಪ್ಪಿ ಹೇಳಿ" ಎನ್ನಲು, ಗೌತಮನು..)
>
>
> ದಾಶರಥಿ ಚಿತ್ತೈಸು ನಮ್ಮಯ
>
> ದೇಶಕತಿಶಯ ನರೆದಲೆಗನೇ
>
> ವಾಸಿಯುಳ್ಳವನೀತ ಮಿಕ್ಕಿನ ಧಾನ್ಯವೇಕೆನಲು
>
> "ಲೇಸನಾಡಿದೆ ಮುನಿಪ ಗೌತಮ
>
> ದೋಷರಹಿತನು ಪಕ್ಷಪಾತವ
>
> ನೀಸು ಪರಿಯಲಿ ಮಾಡುವರೆ ಶಿವ"ಯೆಂದನಾ ವ್ರಿಹಿಗ           (೩೪)
>
>
> "ಎಲ್ಲ ಧರ್ಮದ ಸಾರವನು ನೀವ್
>
> ಬಲ್ಲಿರರಿಯಿರೆ ಎಲ್ಲರನು ನೀ
>
> ವಿಲ್ಲಿ ನುಡಿವ ಉಪೇಕ್ಷೆಯುಂಟೇ! ಸಾಕದಂತಿರಲಿ,
>
> ನೆಲ್ಲು ನಾನಿರೆ, ಗೋದಿ ಮೊದಲಾ
>
> ದೆಲ್ಲ ಧಾನ್ಯಗಳಿರಲು ಇದರಲಿ
>
> ಬಲ್ಲಿದನು ನರೆದಲೆಗನೆಂಬುದಿದಾವ ಮತ?"ವೆಂದ               (೩೫)
>
>
> ಗೌತಮನು "ಕೇಳು ದಾಶರಥಿ, ನಮ್ಮ ದೇಶಕ್ಕೆ ಅತಿಶಯವಾದ ಈ ನರೆದಲೆಗನೇ(ರಾಗಿ)
> ಮಿಕ್ಕೆಲ್ಲವುಗಳಿಗಿಂತ ಉತ್ತಮವಾದ ಧಾನ್ಯ. ಏಕೆಂದರೆ.." ಎಂದು ನುಡಿಯುತ್ತಿರುವಷ್ಟರಲ್ಲೇ
> ಅಲ್ಲಿದ್ದ ನೆಲ್ಲಿಗೆ(ವ್ರಿಹಿಗ: ನೆಲ್ಲು) ರೋಷವುಕ್ಕುತ್ತದೆ.
>
> ಕೂಡಲೆ ನೆಲ್ಲು ಸಿಡಿದೆದ್ದು ಗೌತಮನನ್ನು ಕುರಿತು "ಆಹಾ! ಲೇಸನಾಡಿದಿರಿ ಗೌತಮರೇ,
> ದೋಷರಹಿತರಾದ ನೀವೂ ಹೀಗೆ ಪಕ್ಷಪಾತದಿಂದ ನುಡಿಯಬಹುದೇ. ಶಿವಶಿವಾ!
>
> ಎಲ್ಲ ಧರ್ಮಗಳ ಸಾರವನ್ನೂ ಅರಿತ ನೀವು ಹೀಗೆ ಉಪೇಕ್ಷಿಸಿ ನುಡಿಯುವುದು ಸರಿಯೇ? ಅಲ್ಲ,
> ನೆಲ್ಲು ನಾನಿರುವಾಗ, ಗೋಧಿ ಮುಂತಾದ ಎಲ್ಲ ಧಾನ್ಯಗಳೂ ಇಲ್ಲಿರುವಾಗ ಇವರೆಲ್ಲರಲ್ಲಿ ಈ
> ರಾಗಿಯೇ ಶ್ರೇಷ್ಠ ಎಂದು ಹೇಳುವುದು ಎಷ್ಟು ಸರಿ. ಇದಾವ ನ್ಯಾಯ?" ಎಂದು ಗೌತಮನನ್ನು
> ಪ್ರಶ್ನಿಸುತ್ತದೆ ನೆಲ್ಲು.
>
> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to