http://vijayavani.net/?p=1752677
*ಆಡಳಿತ ಪಾಠ ಕಲಿಸಿದ ಪಿಲಿಕುಳ ನಿಸರ್ಗಧಾಮ* BY ವಿಜಯವಾಣಿ ನ್ಯೂಸ್ <http://vijayavani.net/?author=3> · MAR 25, 2016 *ಪಿಲಿಕುಳ ನಿಸರ್ಗಧಾಮದ ನೀಲಿನಕ್ಷೆ ಅನ್ವಯ ಈ ಪ್ರದೇಶದಲ್ಲಿ ವನ್ಯಜೀವಿ ಉದ್ಯಾನ, ವಾಟರ್ ಪಾರ್ಕನ್ನೊಳಗೊಂಡ ಮನರಂಜನಾ ಕೇಂದ್ರ, ವಿಜ್ಞಾನ ಕೇಂದ್ರ ಹಾಗೂ ಹೆರಿಟೇಜ್ ವಿಲೇಜ್ ತಲೆಯೆತ್ತಬೇಕಾಗಿತ್ತು. ಆ ಜಮೀನಿನಲ್ಲಿದ್ದ ಜನರನ್ನೇನೋ ಸ್ಥಳಾಂತರಿಸಿದೆವು. ಆದರೆ, ಈ ಕಲ್ಪನೆಗೆ ಸಾಕಾರ ರೂಪ ನೀಡುವುದು ಬಹುದೊಡ್ಡ ಸವಾಲಾಗಿತ್ತು.* ಮೂಡಣದಲ್ಲಿ ಹಸಿರು ಹೊದ್ದು ನಿಂತ ಪಶ್ಚಿಮ ಘಟ್ಟ, ಪಡುವಣದಲ್ಲಿ ವಿಶಾಲವಾಗಿ ಹರಡಿರುವ ಅರಬ್ಬಿ ಸಮುದ್ರ. ಹೀಗೆ ನೈಸರ್ಗಿಕವಾಗಿ ಸಂಪದ್ಭರಿತವಾಗಿರುವ ಕಡಲತಡಿಯ ನಗರ ಮಂಗಳೂರು. ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರಸ್ಥಾನವಾಗಿರುವ ಈ ನಗರ ಸಾಂಸ್ಕೃತಿಕ ಶ್ರೀಮಂತಿಕೆಯ ಜತೆಗೆ ಶಿಕ್ಷಿತ, ವಿಚಾರಶೀಲ ನಾಗರಿಕರ ನೆಲೆಬೀಡು ಕೂಡ. ಇಷ್ಟು ಸಂಪದ್ಭರಿತವಾಗಿರುವ ನಗರದಲ್ಲಿ ದೊಡ್ಡ ಕೊರತೆಯೊಂದು ಕಾಡುತ್ತಿತ್ತು. ಪಶ್ಚಿಮ ಘಟ್ಟದ ನೈಸರ್ಗಿಕ ಸಂಪತ್ತನ್ನು ಅನಾವರಣಗೊಳಿಸುವ, ಅಲ್ಲಿನ ಸಸ್ಯ, ಪ್ರಾಣಿ ಪ್ರಭೇದ ಹಾಗೂ ಶ್ರೀಮಂತ ಸಂಸ್ಕೃತಿಯ ಪರಿಚಯ ಮಾಡಿಸುವಂಥ ತಾಣ ಇರಲಿಲ್ಲ. ಈ ಕೊರತೆ ನೀಗಿಸಲು ರೂಪುತಳೆದ ಪರಿಕಲ್ಪನೆಯೇ ‘ಪಿಲಿಕುಳ ನಿಸರ್ಗಧಾಮ’. ಈ ಕಲ್ಪನೆಯನ್ನು ವಾಸ್ತವಕ್ಕಿಳಿಸಿದ ಪ್ರಕ್ರಿಯೆಯಿದೆಯಲ್ಲ, ಅದು ಆಡಳಿತದಲ್ಲಿ ಸಂಶೋಧನೆ, ಸಂಘಟಿತ ಮತ್ತು ಸಂತುಲಿತ ಕಾರ್ಯಯೋಜನೆ ಹಾಗೂ ಸರ್ಕಾರಿ-ಖಾಸಗಿ ಸಹಭಾಗಿತ್ವಕ್ಕೆ ಅತ್ಯುತ್ತಮ ನಿದರ್ಶನವೆಂದು ಧಾರಾಳವಾಗಿ ಹೇಳಬಹುದು. ಪ್ರಮುಖ ನಗರಗಳಲ್ಲಿ ಬಹೂಪಯೋಗಿ ಉದ್ಯಾನ ಸ್ಥಾಪಿಸುವ ಚಿಂತನೆಯೊಂದು ಬಹುಕಾಲದಿಂದ ನನ್ನ ತಲೆಯಲ್ಲಿ ಇತ್ತು. ನಾನು ದ.ಕ. ಜಿಲ್ಲಾಧಿಕಾರಿಯಾಗಿದ್ದಾಗ ಕಾಕತಾಳೀಯವೆಂಬಂತೆ ಸರ್ಕಾರ ಪ್ರಮುಖ ನಗರಗಳಲ್ಲಿ ಲಂಗ್ ಸ್ಪೇಸ್ (ನಗರಗಳಲ್ಲಿ ಆರೋಗ್ಯಕರ ಪರಿಸರಕ್ಕೆ ಅನುಕೂಲವಾಗಲು) ಸ್ಥಾಪಿಸುವಂತೆ ಸುತ್ತೋಲೆ ಹೊರಡಿಸಿತು. ಇದು ಜಿಲ್ಲಾಡಳಿತವನ್ನು ಸೂಕ್ತ ಸ್ಥಳದ ಪತ್ತೆಗೆ ಪ್ರೇರೇಪಿಸಿತು. ಇದೊಂದು ವಿಶಿಷ್ಟ ಯೋಜನೆಯಾಗಿದ್ದು, ಶಿಕ್ಷಣ, ಮನೋರಂಜನೆ, ಪ್ರಕೃತಿ ಪರಿಚಯದ ಜತೆಗೆ ಆ ಪ್ರದೇಶದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅನಾವರಣಗೊಳಿಸುವ ಪರಿಕಲ್ಪನೆ ಹೊಂದಿತ್ತು. ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಬಹೂಪಯೋಗಿ ಉದ್ಯಾನ ಸ್ಥಾಪನೆಗೆ ವಿವಿಧ ಸ್ಥಳಗಳನ್ನು ಸೂಚಿಸಲಾಗಿತ್ತು. ಇದರಲ್ಲಿ ಅನೇಕ ಸ್ಥಳಗಳ ಪರಿಶೀಲನೆ ಬಳಿಕ ಮಂಗಳೂರಿನಿಂದ 11 ಕಿ.ಮೀ. ದೂರದಲ್ಲಿ ಅರಣ್ಯ ಇಲಾಖೆಗೆ ಸೇರಿದ 20 ಎಕರೆ ವಿಸ್ತೀರ್ಣದ ನರ್ಸರಿ ಇದಕ್ಕೆ ಸೂಕ್ತ ಎಂದು ತೀರ್ವನಿಸಲಾಯಿತು. ಆದರೆ ಈ ನರ್ಸರಿಯ ಸುತ್ತ ಪೊದೆಗಳು ಬೆಳೆದಿದ್ದವು. ಒಡೆದ ಕೆರೆ ಹಾಗೂ ನಿರುಪಯುಕ್ತ ಕ್ವಾರಿ ಅಲ್ಲಿತ್ತು. ಅತಿಕ್ರಮಣವೂ ನಡೆದಿತ್ತು. ಹೀಗಾಗಿ ನರ್ಸರಿ ಸುತ್ತಮುತ್ತಲಿನ ಸ್ಥಳದ ಸರ್ವೆ ನಡೆಸುವಂತೆ ನಾನು ಆದೇಶಿಸಿದೆ. ಈ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುವಾಗ ಆ ಪ್ರದೇಶದಲ್ಲಿ 350 ಎಕರೆ ಸರ್ಕಾರಿ ಜಾಗವಿರುವುದು ಬೆಳಕಿಗೆ ಬಂತು. ಸರಿ, ಮಂಗಳೂರಿನಲ್ಲಿ ಇಕೋ ಪಾರ್ಕ್ ನಿರ್ವಣಕ್ಕೆ ಇದಕ್ಕಿಂತ ಸೂಕ್ತವಾದ ಸ್ಥಳ ಬೇರೆ ಇಲ್ಲ ಎಂಬ ತೀರ್ವನಕ್ಕೆ ನಾವಾಗಲೇ ಬಂದುಬಿಟ್ಟೆವು. ಒಕ್ಕಲೆಬ್ಬಿಸುವ ಸವಾಲು: ಈ ವಿಶಾಲ ಜಾಗ ನಮ್ಮ ಕನಸಿನ ಯೋಜನೆಯ ಸಾಕಾರಕ್ಕೆ ಪ್ರಶಸ್ತ ತಾಣವಾಗಿತ್ತೇನೋ ನಿಜ. ಆದರೆ, ಆ ಜಮೀನನ್ನು ಸುರ್ಪದಿಗೆ ತೆಗೆದುಕೊಳ್ಳುವುದು ಸುಲಭದ ಕೆಲಸವಾಗಿರಲಿಲ್ಲ. ಅಲ್ಲಿ ಅನೇಕ ಅಕ್ರಮ ಗುಡಿಸಲುಗಳು ಹರಡಿಕೊಂಡಿದ್ದವು. ಜತೆಗೆ ಜಮೀನಿನ ಮಾಲೀಕತ್ವ ಸರ್ಕಾರದ ಅನೇಕ ಇಲಾಖೆಗಳ ನಡುವೆ ಹಂಚಿಹೋಗಿತ್ತು. ಹೀಗಾಗಿ ನಾನು ಭೂ ಕಂದಾಯ ಕಾಯ್ದೆ ಅಡಿಯಲ್ಲಿ ಆಡಳಿತಾತ್ಮಕ ಅಧಿಕಾರ ಬಳಸಿಕೊಂಡು ಆ ಜಮೀನನ್ನು ಥೀಮ್ ಪಾರ್ಕ್ ನಿರ್ವಣಕ್ಕೆ ಕಾಯ್ದಿರಿಸಿದೆ. ಇದರಿಂದಾಗಿ, ವಿವಿಧ ಇಲಾಖೆಗಳು ವಿವಿಧ ಉದ್ದೇಶಗಳಿಗೆ ರೂಪಿಸಿದ್ದ ಅರೆಬೆಂದ ಪ್ರಸ್ತಾವನೆಗಳಿಗೆ ಬ್ರೇಕ್ ಹಾಕಿದಂತಾಯಿತು. ಆ ಜಮೀನಿನಲ್ಲಿ ಅತಿಕ್ರಮಣ ತಡೆಯಲು ವಿವಿಧ ಯೋಜನೆಗಳ ಬಡ್ಡಿ ಹಣದಲ್ಲಿ ಬೇಲಿ ನಿರ್ವಿುಸಲಾಯಿತು. ಅಲ್ಲಿ ಅಕ್ರಮವಾಗಿ ನೆಲೆ ನಿಂತಿರುವ ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕಿತ್ತು. ಒಟ್ಟು 250 ಕುಟುಂಬಗಳಿದ್ದು, ಎಲ್ಲರೂ ಕೃಷಿ ಕೂಲಿ ಕಾರ್ವಿುಕರಾಗಿದ್ದರು. ಹೀಗಾಗಿ ಹೊಟ್ಟೆಪಾಡಿಗೆ ತೊಂದರೆಯಾಗದಂತೆ ಹಳ್ಳಿಗೆ ಸಮೀಪದಲ್ಲೇ ಮನೆಗಳನ್ನು ಹೊಂದಲು ಬಯಸಿದ್ದರು. ಅವರಿಗೆ ಪುನರ್ವಸತಿ ಕಲ್ಪಿಸಲು ನಗರದ ಸಮೀಪ ಜಮೀನು ಗುರುತಿಸಿ, ನಿವೇಶನಗಳನ್ನು ಹಂಚಲಾಯಿತು. ಸರ್ಕಾರದ ವಸತಿ ಯೋಜನೆಗಳ ನೆರವಿನಿಂದ ಮನೆಗಳನ್ನೂ ನಿರ್ವಿುಸಿಕೊಡಲಾಯಿತು. ಈ ಕ್ರಮ ಸಾರ್ವಜನಿಕರಲ್ಲಿ ಜಿಲ್ಲಾಡಳಿತದ ಬಗ್ಗೆ ನಂಬಿಕೆ ಹುಟ್ಟಿಸುವ ಜತೆಗೆ ಯೋಜನೆಯ ಉದ್ದೇಶವನ್ನೂ ಸರಿಯಾಗಿ ಮನವರಿಕೆ ಮಾಡಿಕೊಟ್ಟಿತು. ನೀಲಿನಕ್ಷೆ ಅನ್ವಯ ಈ ಪ್ರದೇಶದಲ್ಲಿ ವನ್ಯಜೀವಿ ಉದ್ಯಾನ, ವಾಟರ್ ಪಾರ್ಕನ್ನೊಳಗೊಂಡ ಮನರಂಜನಾ ಕೇಂದ್ರ, ವಿಜ್ಞಾನ ಕೇಂದ್ರ ಹಾಗೂ ಹೆರಿಟೇಜ್ ವಿಲೇಜ್ ತಲೆ ಎತ್ತಬೇಕಾಗಿತ್ತು. ಜನರನ್ನೇನೋ ಸ್ಥಳಾಂತರಿಸಿದೆವು. ಆದರೆ, ಈ ಕಲ್ಪನೆಗೆ ಸಾಕಾರ ರೂಪ ನೀಡುವುದು ಸವಾಲಾಗಿತ್ತು. ಅನುಷ್ಠಾನಕ್ಕೆ ಕಾರ್ಯತಂತ್ರ: ಇಂಥ ಬೃಹತ್ ಯೋಜನೆಗಳ ಅನುಷ್ಠಾನಕ್ಕೆ ನಿರಂತರ ನಿರ್ವಹಣೆ ಅಗತ್ಯ. ಹೀಗಾಗಿ ಇದಕ್ಕೆ ಸ್ವಾಯತ್ತ ಸಂಸ್ಥೆಯ ಅಗತ್ಯ ಮನಗಂಡು ಅಧಿಕಾರಿಗಳು ಹಾಗೂ ನಾಗರಿಕರನ್ನೊಳಗೊಂಡ ಸೊಸೈಟಿಯನ್ನು ನೋಂದಾಯಿಸಲಾಯಿತು. ಯೋಜನೆಯ ಪ್ರತಿ ಘಟಕದ ಮೇಲ್ವಿಚಾರಣೆಗೆ ಒಂದು ಉಪಸಮಿತಿ ರಚಿಸಲಾಯಿತು. ಇದರಲ್ಲಿ ಈ ಘಟಕಕ್ಕೆ ಸಂಬಂಧಿಸಿದ ಅಧಿಕಾರಿಗಳು, ತಜ್ಞರು ಹಾಗೂ ನಾಗರಿಕರನ್ನು ತೊಡಗಿಸಿಕೊಳ್ಳಲಾಯಿತು. ಈ ಸಮಿತಿ ನಿಯತವಾಗಿ ಸಭೆ ಸೇರಿ ಯೋಜನೆಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸುತ್ತಿತ್ತು. ಜಿಲ್ಲಾಧಿಕಾರಿಯಾಗಿದ್ದ ನಾನು ತಿಂಗಳಿಗೊಮ್ಮೆ ಎಲ್ಲ ಉಪಸಮಿತಿಗಳನ್ನು ಒಟ್ಟುಸೇರಿಸಿ ಸಭೆ ನಡೆಸಿ, ಪ್ರಗತಿ ಪರಿಶೀಲಿಸುವ ಮೂಲಕ ಯೋಜನೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದೆ. ಈ ಯೋಜನೆಗೆ ಭಾರಿ ಪ್ರಮಾಣದ ಹಣದ ಅಗತ್ಯವಿತ್ತು. ಡಿಸಿಗೆ ಲಭ್ಯವಿರುವ ಅನುದಾನದಲ್ಲಿ ಇದು ಕಷ್ಟಸಾಧ್ಯವಾಗಿತ್ತು. ಹೀಗಾಗಿ ಯೋಜನೆಯನ್ನು ವಿವಿಧ ವಿಭಾಗಗಳನ್ನಾಗಿ ವಿಂಗಡಿಸಿ, ಆರ್ಥಿಕ ನೆರವು ಪಡೆಯಲು ನಿರ್ಧರಿಸಲಾಯಿತು. ಸರ್ಕಾರದ ನೆರವು: ವಿಜ್ಞಾನ ಕೇಂದ್ರ ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಕೇಂದ್ರ ಸರ್ಕಾರ ನೆರವು ನೀಡಿತು. ಮನೋರಂಜನಾ ಚಟುವಟಿಕೆಗಳಿಗೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಅನುದಾನ ನೀಡಿತು. ಪಾರ್ಕ್ನಲ್ಲಿ ಗಿಡ ನೆಡುವುದಕ್ಕೆ ಅರಣ್ಯ ಇಲಾಖೆ ಅನುಮತಿ ನೀಡಿತು. ನಗರದ ಬೇರೆ ಪ್ರದೇಶಗಳಲ್ಲಿದ್ದ ಅರಣ್ಯ ಹಾಗೂ ತೋಟಗಾರಿಕಾ ಇಲಾಖೆಯ ನರ್ಸರಿಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಯಿತು. ಖಾಸಗಿ ಸಹಭಾಗಿತ್ವ: ಈ ಯೋಜನೆಯಲ್ಲಿ ವಾಟರ್ ಪಾರ್ಕ್ ಕೂಡ ಸೇರಿತ್ತು. ಇದು ಉತ್ತಮ ಆದಾಯ ತರುವ ಚಟುವಟಿಕೆಯಾಗಿತ್ತು. ಹೀಗಾಗಿ ಇದರ ನಿರ್ಮಾಣ ಹಾಗೂ ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗೆ ವಹಿಸಲು ನಿರ್ಧರಿಸಲಾಯಿತು. ಗಾಲ್ಪ್ ಕೋರ್ಟ್ಗೂ ಇದೇ ಮಾದರಿ ಅನುಸರಿಸಲಾಯಿತು. ಪ್ರವಾಸಿಗರಿಗೆ ತಾತ್ಕಾಲಿಕವಾಗಿ ತಂಗಲು ಅಲ್ಲಲ್ಲಿ ಗುಡಿಸಲು ನಿರ್ವಿುಸುವ ಹೊಣೆಗಾರಿಕೆಯನ್ನು ಕರ್ನಾಟಕ ಸರ್ಕಾರ ಸ್ವಾಮ್ಯದ ಜಂಗಲ್ ಲಾಡ್ಜಸ್ ಆಂಡ್ ರೆಸಾರ್ಟ್ ಲಿ.ಗೆ ನೀಡಲಾಯಿತು. ಆದಾಯಕ್ಕಾಗಿ, ಉದ್ಯಾನ ಕಾರ್ಯಾರಂಭಿಸುತ್ತಿದ್ದಂತೆ ಗ್ರಾಹಕರಿಗೆ ಶುಲ್ಕ ವಿಧಿಸುವ ವ್ಯವಸ್ಥೆ ಜಾರಿಗೊಳಿಸಲಾಯಿತು. ಕೆರೆಗೆ ಕಾಯಕಲ್ಪ: ಉದ್ಯಾನದ ಮಧ್ಯಭಾಗದಲ್ಲಿರುವ ಕೆರೆ ಎಲ್ಲ ಚಟುವಟಿಕೆಗಳ ಕೇಂದ್ರಬಿಂದುವಾಗಿತ್ತು. ಪಾರ್ಕ್ನ ಸುತ್ತಮುತ್ತಲಿನ ಕೊಳಚೆ ನೀರು ಈ ಕೆರೆ ಸೇರುತ್ತಿತ್ತು. ಅದರಲ್ಲಿ ಹೂಳು ತುಂಬಿಕೊಂಡಿದ್ದು, ಬದಿಯ ಗೋಡೆಗಳು ಕುಸಿದು ಬಿದ್ದಿದ್ದವು. ಅದೃಷ್ಟವಶಾತ್ ಗಣಿ ಕಂಪನಿಯೊಂದಕ್ಕೆ ಸೇರಿದ ನೆಲ ಅಗೆಯುವ ಯಂತ್ರಗಳು ಕೆಲಸವಿಲ್ಲದೆ ಖಾಲಿ ಬಿದ್ದಿದ್ದವು. ಇದೇ ಯಂತ್ರಗಳನ್ನು ಕೆರೆ ಹೂಳೆತ್ತಲು ಬಳಸಿಕೊಳ್ಳಲಾಯಿತು. ಯಂತ್ರದ ಇಂಧನ ವೆಚ್ಚ ಭರಿಸಲು ಇನ್ನೊಂದು ಕಂಪನಿ ಮುಂದೆ ಬಂತು. ಈ ರೀತಿಯಾಗಿ ಖಾಸಗಿ ಸಹಭಾಗಿತ್ವದೊಂದಿಗೆ ಹೂಳು ತೆಗೆಯುವ ಕಾರ್ಯ ಪೂರ್ಣಗೊಳಿಸಲಾಯಿತು. ಮನೋರಂಜನಾ ಉದ್ದೇಶಕ್ಕಾಗಿ ಕೆರೆಯಲ್ಲಿ ಜೆಟ್ ಬೋಟ್, ಪೆಡಲ್, ರೋಯಿಂಗ್ ಹಾಗೂ ಮೋಟಾರ್ ಬೋಟ್ಗಳನ್ನು ಇಡಲಾಯಿತು. ಜೈವಿಕ ಉದ್ಯಾನ: 100 ಎಕರೆ ಪ್ರದೇಶದಲ್ಲಿ ವನ್ಯಜೀವಿ ಉದ್ಯಾನ ಸ್ಥಾಪನೆಗೆ ನಿರ್ಧರಿಸಲಾಯಿತು. ಭಾರತೀಯ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿಗಳ ಅನ್ವಯ ಪ್ರಾಣಿಗಳಿಗೆ ಅನುಕೂಲವಾಗುವಂತೆ ದೊಡ್ಡ ಆವರಣದೊಳಗಡೆ ಅವುಗಳನ್ನು ಬಿಡಲು ನಿರ್ಧರಿಸಲಾಯಿತು. ಮಂಗಳೂರು ಸುತ್ತಮುತ್ತಲಿನ ಪ್ರಮುಖ ಕಂಪನಿಗಳು ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್)ಚಟುವಟಿಕೆಯಂಗವಾಗಿ ಪ್ರಾಣಿಗಳಿಗೆ ಪಂಜರ, ಪ್ರಾಣಿಗಳ ದತ್ತು ಸ್ವೀಕಾರ ಮುಂತಾದ ಚಿಕ್ಕಪುಟ್ಟ ಕಾರ್ಯಗಳ ಹೊಣೆ ವಹಿಸಿಕೊಂಡವು. ರಾಜ್ಯ ಸರ್ಕಾರದಿಂದಲೂ ಅನುದಾನ ಸಿಕ್ಕಿತು. ಇಂದು ಪಿಲಿಕುಳ ಜೈವಿಕ ಉದ್ಯಾನ ಭಾರತದ ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ಪ್ರಮುಖ ಉದ್ಯಾನಗಳಲ್ಲೊಂದು. ಕಾಳಿಂಗಸರ್ಪದ ಸಂತಾನೋತ್ಪತ್ತಿ ಕೇಂದ್ರ ಹೊಂದಿರುವ ಏಕೈಕ ಮೃಗಾಲಯ ಕೂಡ ಹೌದು. ಹೆರಿಟೇಜ್ ವಿಲೇಜ್: ಈ ಭಾಗದ ಕಲೆ, ಸಂಸ್ಕೃತಿಗಳು ನಶಿಸಿ ಹೋಗುತ್ತಿರುವುದನ್ನು ಗಮನಿಸಿದ ಜಿಲ್ಲಾಡಳಿತ ಹೆರಿಟೇಜ್ ವಿಲೇಜ್ ಸ್ಥಾಪನೆಗೆ ಮುಂದಾಯಿತು. ಕುಶಲಕರ್ವಿುಗಳು ಅಲ್ಲೇ ಉಳಿದು ಕಲಾಕೃತಿಗಳನ್ನು ರಚಿಸಿ, ಮಾರಾಟ ಮಾಡಲು ಅನುವಾಗುವಂತೆ ವ್ಯವಸ್ಥೆ ಕಲ್ಪಿಸಿತು. ಮಂಗಳೂರಲ್ಲಿ ಕೂಡ ಅವರಿಗಾಗಿ ಪ್ರತ್ಯೇಕ ಮಾರಾಟ ಮಳಿಗೆ ಸ್ಥಾಪಿಸಲಾಯಿತು. ಕುಶಲಕರ್ವಿುಗಳ 25 ಕುಟುಂಬಗಳು ಈ ಹಳ್ಳಿಗೆ ಸ್ಥಳಾಂತರಗೊಂಡವು. ಪ್ರವಾಸಿಗರಿಗೆ ಹಳ್ಳಿ ಸೊಗಡಿನ ಪರಿಚಯ ಮಾಡಿಸಲು ‘ಗುತ್ತಿನ ಮನೆ’ (ಹಳ್ಳಿಯ ಮುಖ್ಯಸ್ಥನ ಮನೆ) ನಿರ್ವಿುಸಲಾಗಿದೆ. ಕರಾವಳಿಯ ಜನಪದ ಕ್ರೀಡೆ ಕಂಬಳವನ್ನು ಪ್ರವಾಸಿಗರಿಗೆ ಪರಿಚಯಿಸಲು ‘ಕಂಬಳ ಗದ್ದೆ’ ರೂಪುಗೊಂಡಿದ್ದು, ಆಗಾಗ ಕಂಬಳ ಕೂಡ ನಡೆಯುತ್ತದೆ. ವಿಜ್ಞಾನ ಕೇಂದ್ರ: ವಿಜ್ಞಾನ ಪ್ರಯೋಗಗಳ ಮೂಲಕ ಜನರಿಗೆ ಮನರಂಜನೆ ನೀಡುವ ಜತೆಗೆ ವಿಜ್ಞಾನ ಕಲಿಕೆಯತ್ತ ಮಕ್ಕಳ ಆಸಕ್ತಿಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಈ ಕೇಂದ್ರ ಸ್ಥಾಪಿಸಲಾಯಿತು. ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ: ಭಾರತ್ ಸ್ಕೌಟ್ಸ್ ಹಾಗೂ ಗೈಡ್ಸ್ ನೆರವಿನೊಂದಿಗೆ ಸಮಾಜ ನಿರ್ಮಾಣ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲಾಯಿತು. ಇಲ್ಲಿ ಮಕ್ಕಳಿಗೆ ಶಿಬಿರ ನಡೆಸಲು ಅನುಕೂಲ ಕಲ್ಪಿಸಲಾಗಿದೆ. ಮನೋರಂಜನೆ, ಶಿಕ್ಷಣ, ಪರಿಸರ ಸಂರಕ್ಷಣೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯ ರಕ್ಷಣೆಯನ್ನೊಳಗೊಂಡ ಈ ಯೋಜನೆ ಅತ್ಯಂತ ವಿಶಿಷ್ಟವಾದದ್ದು. ಇದರ ಯಶಸ್ಸು ಒಬ್ಬ ವ್ಯಕ್ತಿಗಲ್ಲ, ಬದಲಿಗೆ ಇಡೀ ಯೋಜನಾ ತಂಡಕ್ಕೆ ಸೇರಿದ್ದು. ಒಟ್ಟಾರೆ ಸಂಪನ್ಮೂಲಗಳ ಕೇಂದ್ರೀಕರಣಕ್ಕೆ, ಯೋಜನೆಯ ಆರಂಭದಿಂದ ಅಂತ್ಯದವರೆಗೆ ಜನರ ಸಹಭಾಗಿತ್ವ, ಪಾರದರ್ಶಕತೆ ಹಾಗೂ ಉತ್ತರದಾಯಿತ್ವ- ಈ ಮುಂತಾದ ವಿಶೇಷಗಳ ಸಂಗಮವಾದ ಪಿಲಿಕುಳ ನಿಸರ್ಗಧಾಮ ನನ್ನ ಕಾರ್ಯಾವಧಿಯಲ್ಲಿನ ಸಿಹಿ ಸಿಹಿ ನೆನಪುಗಳಲ್ಲೊಂದು… *ಲೇಖಕರ ಕುರಿತು…* ಭರತ್ ಲಾಲ್ ಮೀನಾ ಮೂಲತಃ ರಾಜಸ್ಥಾನದವರು. ಬಡ ಕೃಷಿ ಕುಟುಂಬದಲ್ಲಿ 1957ರ ಫೆಬ್ರವರಿ 5ರಂದು ಜನನ. 1985ರ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ. ಬೆಳಗಾವಿ ಜಿಪಂ ಸಿಇಒ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲಾಧಿಕಾರಿ, ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತ ಸೇರಿದಂತೆ ವಿವಿಧ ಉನ್ನತ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಪ್ರಸ್ತುತ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಡಳಿತದಲ್ಲಿ ಜನಸಹಭಾಗಿತ್ವದ ಅನೇಕ ಉಪಕ್ರಮಗಳನ್ನು ಕೈಗೊಂಡಿರುವ ಹೆಗ್ಗಳಿಕೆ ಇವರದು. ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿ ಇಂಗ್ಲೆಂಡ್ನಲ್ಲಿ ಅಧ್ಯಯನ ನಡೆಸಿರುವ ಇವರು, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ‘ಅಪ್ನಾ ದೇಶ್’ ಎಂಬ ಎನ್ಜಿಒ ಹುಟ್ಟುಹಾಕುವ ಮೂಲಕ ಮನೆ ಮಾತಾಗಿದ್ದರು. ‘ಲೈಫ್ ಆಂಡ್ ಪೀಸ್’ ಎಂಬ ಕೃತಿಯನ್ನು ಕೂಡ ರಚಿಸಿದ್ದಾರೆ. Hareeshkumar K AM(PCM) GHS HUSKURU MALAVALLI TQ MANDYA DT 571475 mobile no 9880328224 email [email protected] -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
