http://m.vijaykarnataka.com/edit/columns/net-nota-by-sudhindhra-haldodderi/articleshow/52204909.cms
*ನೆಟ್ ನೋಟ: ಸಮುದ್ರದ ನೀರನ್ನು ಕುಡಿಯುವ ನೀರನ್ನಾಗಿಸಬಹುದೇ?*

May 11, 2016, 04.00 AM IST

Whatsapp <javascript:void(0);>Facebook <javascript:void(0);>Google Plus
<javascript:void(0);>Twitter <javascript:void(0);>Email
<javascript:void(0);>

salt-filter

AAA

* ಸುಧೀಂದ್ರ ಹಾಲ್ದೊಡ್ಡೇರಿ 'ಕೂಡಂಗುಲಂ' ಎಂದೊಡನೆಯೇ ಅದಕ್ಕಂಟಿದ್ದ ವಿವಾದಗಳೇ ನಮಗೆ
ನೆನಪಿಗೆ ಬರುತ್ತದೆ. ತಮಿಳುನಾಡಿನಲ್ಲಿರುವ ಈ ಪರಮಾಣು ವಿದ್ಯುತ್‌ ಸ್ಥಾವರ ಮೊನ್ನೆ ಒಳ್ಳೆಯ
ಸುದ್ದಿಯೊಂದಿಗೆ ಹೆಸರು ಮಾಡಿದೆ. ಆರ್ಭಟದ ಮಾಧ್ಯಮಗಳಂತೂ ಭವಿಷ್ಯತ್ತಿನಲ್ಲಿ ನಮಗೆ ನೀರಿನ
ಬರಗಾಲವೇ ಇರುವುದಿಲ್ಲ ಎಂದು ಘೋಷಿಸಿವೆ. ವಿಷಯವೇನೆಂದರೆ ಪರಮಾಣು ವಿಜ್ಞಾನಕ್ಕೆ ಸಂಬಂಧಿಸಿದ
'ಭಾಭಾ ಅಟಾಮಿಕ್‌ ರೀಸರ್ಚ್‌ ಸೆಂಟರ್‌'ನ ತಂತ್ರಜ್ಞರು ಯುರೇನಿಯಂ ಅಥವಾ ಆರ್ಸೆನಿಕ್‌
ವಿಷಗಳಿಂದ ಕಲುಷಿತವಾದ ಅಂತರ್ಜಲವನ್ನು ಕುಡಿಯಲು ಯೋಗ್ಯವಾಗುವಂತೆ ಶುದ್ಧೀಕರಿಸಬಲ್ಲ
ಫಿಲ್ಟರ್‌ಗಳನ್ನು ಶೋಧಿಸಿದ್ದಾರೆ. ಈ ತಂತ್ರಜ್ಞಾನದ ಮೂಲಕ ಶುದ್ಧ ಕುಡಿಯುವ ನೀರನ್ನು
ತಯಾರಿಸಲು ವಿದ್ಯುಚ್ಛಕ್ತಿ ಬೇಕಾಗಿಲ್ಲ, ಬೈಸಿಕಲ್‌ ಚಕ್ರಗಳಿಗೆ ಹೊಂದಿಸಿದ ಯಂತ್ರವನ್ನು
ಪೆಡಲ್‌ ತುಳಿಯುವ ಮೂಲಕ ನಡೆಸಬಹುದು. ಈಗಾಗಲೇ ಪಶ್ಚಿಮಬಂಗಾಳ, ರಾಜಾಸ್ಥಾನ, ಪಂಜಾಬ್‌ ಮತ್ತು
ಮಹಾರಾಷ್ಟ್ರಗಳಲ್ಲಿರುವ ಪರಮಾಣು ವಿದ್ಯುತ್‌ ಸಂಶೋಧನಾ ಕೇಂದ್ರಗಳಲ್ಲಿ ಈ ಬಗೆಯ
ಯಂತ್ರಗಳನ್ನು ಸ್ಥಾಪಿಸಲಾಗಿದೆ. ರಾಸಾಯನಿಕವಾಗಿ ಮಿಶ್ರಗೊಂಡಿರದ ಯಾವುದೇ ಕಲಬೆರಕೆಯನ್ನು
ದ್ರವಗಳಿಂದ ಸೋಸಿ ತೆಗೆಯಬಹುದು. ಉದಾಹರಣೆಗೆ ಕುಡಿಯುವ ನೀರಿನಲ್ಲಿ ಸೇರಿಕೊಂಡ
ಕಲ್ಲು-ಮಣ್ಣಿನಂಶ, ಎಣ್ಣೆಗೆ ಬಿದ್ದ ಕಸದ ಚೂರುಗಳು, ಕಾಸಿದ ಹಾಲಿನ ಕೆನೆಪದರ, ಕುದಿವ
ನೀರಿನಲ್ಲಿನ ಚಹದ ಎಲೆಯ ಪುಡಿ, ಸುಡುವ ಸಿಗರೇಟಿನ ಟಾರಿನಂಶ ... ಇತ್ಯಾದಿ. ಇಂಥ ಯಾವುದೇ
'ಇತ್ಯಾದಿ'ಗಳನ್ನು ಹೊರ ತೆಗೆಯಲು ವಿವಿಧ ಅಳತೆಯ ರಂಧ್ರಗಳಿರುವ 'ಸೋಸುಕ -
ಫಿಲ್ಟರ್‌'ಗಳನ್ನು ಬಳಸಲಾಗುತ್ತದೆ. ನಮ್ಮ ದಕ್ಷಿಣ ಭಾರತೀಯರಿಗಂತೂ 'ಫಿಲ್ಟರ್‌
ಕಾಫಿ'ಯಿಲ್ಲದೆ ಬೆಳಗಾಗುವುದಿಲ್ಲ. ಇನ್ನು 'ಫಿಲ್ಟರ್‌ ವಾಟರ್‌', 'ಫಿಲ್ಟರ್‌
ಸಿಗರೇಟ್‌'ಗಳಲ್ಲಿ ದೇಹಕ್ಕೆ ತಲುಪುವ ಕೆಟ್ಟ ಅಂಶಗಳಲ್ಲಿ ನಿಜವಾಗಲೂ ಎಷ್ಟು 'ಫಿಲ್ಟರ್‌'
ಆಗಿರುತ್ತದೆಂಬುದನ್ನು ಅವುಗಳ ಸೃಷ್ಟಿಕರ್ತರೇ ಹೇಳಬೇಕು, ಅವರು ಹೇಳಿದ್ದನ್ನು ನಾವು
ನಂಬಬೇಕು. ಸೂಕ್ಷ್ಮಾತಿ ಸೂಕ್ಷ ್ಮ ಫಿಲ್ಟರ್‌ಗಳ ಬಗ್ಗೆ ಪ್ರಸ್ತಾಪ ಮಾಡುವಾಗ ನಮ್ಮ ನೆನಪಿಗೆ
ಬರುವುದು ವಿಮಾನದ ಇಂಧನ ವ್ಯವಸ್ಥೆ, ಹೈಡ್ರಾಲಿಕ್‌ ನಿಯಂತ್ರಣ ವ್ಯವಸ್ಥೆ, ಕೀಲೆಣ್ಣೆ
ಪ್ರಸರಣಾ ವ್ಯವಸ್ಥೆ. ಕಾರ್ಯಾಚರಣೆ ಅತ್ಯಂತ ನಿಖರವಾಗಿರಬೇಕಾದ ಈ ಎಂಜಿನಿಯರಿಂಗ್‌
ವ್ಯವಸ್ಥೆಗಳಲ್ಲಿ ಬಳಸುವ ಸೋಸುಕಗಳ ರಂಧ್ರಗಳು 'ಮೈಕ್ರಾನ್‌' ಅಳತೆಯಲ್ಲಿರುತ್ತವೆ.
'ಮೈಕ್ರಾನ್‌'ಗಳೆಂದರೆ ಗೊತ್ತಲ್ಲ? ಮೀಟರ್‌ ಒಂದನ್ನು ಸಹಸ್ರ ಸಮಭಾಗಗಳನ್ನಾಗಿ ಮಾಡಿದರೆ
ಸಿಗುವ ಅಳತೆ 'ಮಿಲಿ' ಮೀಟರ್‌. ಇಂಥ ಪ್ರತಿಯೊಂದು 'ಮಿಲಿ' ಮೀಟರ್‌ಗಳನ್ನು ತಲಾ ಸಹಸ್ರ ಸಮ
ಹೋಳುಗಳನ್ನಾಗಿಸಿದರೆ ನಿಮಗೆ 'ಮೈಕ್ರೋ' ಮೀಟರ್‌ ಲಭ್ಯ. ವಿಮಾನಗಳಲ್ಲಿ ದ್ರವಗಳು
ಆರಂಭದಿಂದ ಕೊನೆಯ ತನಕ ವಿವಿಧ ಹಂತಗಳಲ್ಲಿ ಹತ್ತರಿಂದ ನೂರು 'ಮೈಕ್ರಾನ್‌' ಅಳತೆಯ ರಂಧ್ರಗಳ
ಮೂಲಕ ತಮ್ಮ ಹರಿದಾಡುತ್ತವೆ. ಮೊದಲು ದೊಡ್ಡ ಗಾತ್ರದಲ್ಲಿ ಶೋಧಗೊಂಡು ಕ್ರಮೇಣ ಪುಟ್ಟ ಅಳತೆಯ
ಸೋಸುಕಗಳಲ್ಲಿ ದ್ರವಗಳು ತಮ್ಮ ಕಲ್ಮಶಗಳನ್ನು ತೊಡೆದು ಹಾಕುತ್ತವೆ. ಆದರೆ ವಿಜ್ಞಾನಿಗಳು
ಮತ್ತು ತಂತ್ರಜ್ಞರುಗಳು 'ಮೈಕ್ರಾನ್‌' ಅಳತೆಯಿಂದ ತೃಪ್ತರಾಗಿಲ್ಲ. ಅದರ ಸಹಸ್ರದ ಒಂದನೇ
ಭಾಗವಾದ 'ನ್ಯಾನೊ ಮೀಟರ್‌' ಮೇಲೆ ಅವರ ಕಣ್ಣು. ಎಲ್ಲ ಎಂಜಿನೀರಿಂಗ್‌ ಕ್ಷೇತ್ರಗಳಲ್ಲಿ
'ನ್ಯಾನೊ' ಅಳತೆಯ ತಂತ್ರಜ್ಞಾನವನ್ನು ಪ್ರಸರಿಸಬೇಕೆಂಬ ಅದಮ್ಯ ಬಯಕೆ ಅವರದು. ಸೂಕ್ಷ್ಮಾತಿ
ಸೂಕ್ಷ ್ಮ ತಂತ್ರಜ್ಞಾನಗಳು ಕರಗತವಾದಂತೆ ಸೋಸುಕಗಳ ರಂಧ್ರಗಳನ್ನೂ ಹತ್ತು ಹದಿನೈದು
'ನ್ಯಾನೊ' ಮೀಟರ್‌ ಅಳತೆಯಷ್ಟು ಕಿರಿದಾಗಿಸುವ ಪ್ರಯತ್ನ ನಡೆಸಿದ್ದಾರೆ. ಇಷ್ಟು ಸಣ್ಣ ಸಣ್ಣ
ರಂಧ್ರಗಳ ಸೋಸುಕಗಳು ಎಲ್ಲಿ ಬಳಕೆಯಾಗುತ್ತವೆ? ಎಂಬ ಪ್ರಶ್ನೆ ನಿಮ್ಮದಾಗಿದ್ದರೆ
'ಮೈಕ್ರೊಫ್ಲೂಯಿಡಿಕ್ಸ್‌' ತಂತ್ರಜ್ಞಾನವನ್ನು ನೆನಪಿಸಿಕೊಳ್ಳಬೇಕು.
'ಮೈಕ್ರೊಫ್ಲೂಯಿಡಿಕ್ಸ್‌' ಅಂದರೆ ಒತ್ತಡದಲ್ಲಿನ ಸೂಕ್ಷ ್ಮ ಅಳತೆಯ ದ್ರವಗಳ ಹರಿದಾಟದ ಮೂಲಕ
ನಿಯಂತ್ರಣ ವ್ಯವಸ್ಥೆಯೊಂದನ್ನು ರೂಪಿಸುವುದು. ವಿಮಾನಗಳಲ್ಲಿನ ಅತ್ಯಂತ ಪುಟ್ಟದಾದ ನಿಯಂತ್ರಣ
ವ್ಯವಸ್ಥೆಗಳ ಕಾರ್ಯನಿರ್ವಹಣೆಗೆ ಇಂಥ ತಂತ್ರಜ್ಞಾನಗಳು ಬಳಕೆಯಾಗುತ್ತವೆ. ಕಂಪ್ಯೂಟರ್‌
ಚಿಪ್‌ಗಳ ತಾಪಮಾನವನ್ನು ಕಡಿಮೆ ಮಾಡಲು 'ಮೈಕ್ರೊಫ್ಲೂಯಿಡಿಕ್ಸ್‌' ತಂತ್ರಜ್ಞಾನವು
ನೆರವಾಗುತ್ತದೆ. ಈ ಬಗೆಯ ಸೂಕ್ಷ್ಮಾತಿ ಸೂಕ್ಷ ್ಮ ಯಂತ್ರ ವ್ಯವಸ್ಥೆ ನಿಖರವಾಗಿ
ಕಾರ್ಯನಿರ್ವಹಿಸಲು, ಅದರೊಳಗೆ ಹರಿದಾಡುವ ಒತ್ತಡದ ದ್ರವ ಪರಿಶುದ್ಧವಾಗಿರಬೇಕು. ಅಂಥ
ಪರಿಶುದ್ಧತೆಯನ್ನು ಕಾಪಾಡಲು ಅತ್ಯಂತ ಸೂಕ್ಷ ್ಮ ರಂಧ್ರಗಳಿರುವ ಸೋಸುಕಗಳು ಬೇಕಾಗುತ್ತವೆ.
ರೋಚೆಸ್ಟರ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಿಲಿಕಾನ್‌ ಸಾಮಗ್ರಿಯಿಂದ ಕೇವಲ ಹದಿನೈದು
ನ್ಯಾನೊ ಮೀಟರ್‌ ಅಳತೆಯ ರಂಧ್ರಗಳಿರುವ ಸೋಸು ಬಟ್ಟೆಯನ್ನು ನೇಯ್ದಿದ್ದಾರೆ. ಸಾಮಾನ್ಯವಾಗಿ
ಸೋಸು ಬಟ್ಟೆಯನ್ನು ದ್ರವ ಹರಿದಾಟದ ವ್ಯಾಪ್ತಿಯಲ್ಲಿ ಅಡ್ಡ ಹಾಕಿದರೆ ಹರಿವಿನ ವೇಗ
ತಗ್ಗುತ್ತದೆ. ರೋಚೆಸ್ಟರ್‌ ವಿಶ್ವವಿದ್ಯಾಲಯದ ಪ್ರಯೋಗಶಾಲೆಯಲ್ಲಿ ರೂಪುಗೊಂಡಿರುವ ಸೋಸುಕ, ಈ
ಹಿಂದೆ ನಿರ್ಮಿಸಲಾದ ಇಂಥ ಅಳತೆಯ ಸೋಸುಕಕ್ಕಿಂತ ಹತ್ತು ಪಟ್ಟು ಉತ್ತಮ ಕಾರ್ಯಕ್ಷ ಮತೆ
ಹೊಂದಿದೆ. ಇಂಥದೊಂದು ಅದ್ಭುತ ಎಂಜಿನಿಯರಿಂಗ್‌ ಸೃಷ್ಟಿ ಸಾಧ್ಯವಾದದ್ದು ಹೇಗೆ? ಎಂಬ
ಪ್ರಶ್ನೆಗೆ ಸಂಶೋಧನೆಯ ನೇತೃತ್ವ ವಹಿಸಿದ್ದ ರೋಚೆಸ್ಟರ್‌ ವಿಶ್ವವಿದ್ಯಾಲಯದ ವಿದ್ಯುತ್‌
ಹಾಗೂ ಗಣಕ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥರಾದ ಫಿಲಿಪ್‌ ಫೌಶೆಟ್‌ ಉತ್ತರಿಸುವುದು
ಹೀಗೆ. ಹಿಂದೆ ಬಳಕೆಯಲ್ಲಿದ್ದ ಸೋಸುಕಗಳ ರಂಧ್ರಗಳು ಅಳತೆಯಲ್ಲಿ ಚಿಕ್ಕವಾಗಿದ್ದರೂ ಸೋಸುಕದ
ಒಟ್ಟಾರೆ ದಪ್ಪ ಹಲವು ಮೈಕ್ರೋಮೀಟರ್‌ಗಳಷ್ಟಿರುತ್ತಿತ್ತು. ಗಾತ್ರ ಕಡಿಮೆಯಾಗುತ್ತಾ ಬರುವ
ರಂಧ್ರಗಳುಳ್ಳ ಪದರಗಳನ್ನು ಒಂದರ ಮೇಲೊಂದು ಕೂಡಿಸಿ ಸೋಸುಕವನ್ನು ನಿರ್ಮಿಸುವ ಪರಿಪಾಠ
ಹಿಂದಿನ ತಂತ್ರಜ್ಞಾನದ್ದಾಗಿತ್ತು. ಇದರಿಂದಾಗುತ್ತಿದ್ದ ತೊಂದರೆಯೆಂದರೆ ದ್ರವದ ಹರಿದಾಟ
ನಿಧಾನವಾಗುತ್ತಿತ್ತು, ಅಂತೆಯೇ ಅದನ್ನು ಬಳಸಿಕೊಳ್ಳುವ ಯಂತ್ರದ ನಿಯಂತ್ರಣ ಕಾರ್ಯಾಚರಣೆಯೂ
ತಡೆದು ತಡೆದು ಸಾಗುತ್ತಿತ್ತು. ಇಡೀ ಯಂತ್ರದ ಒಟ್ಟಾರೆ ಕಾರ್ಯಕ್ಷ ಮತೆ ಕುಗ್ಗುತ್ತಿತ್ತು.
ಸೂಕ್ಷ್ಮಾತಿ ಸೂಕ್ಷ ್ಮ ರಂಧ್ರಗಳನ್ನು ಕೊರೆಯುವ, ಅಂಥ ರಂಧ್ರಗಳುಳ್ಳ ಸೋಸುಕಗಳನ್ನು ನೇಯುವ
ತಂತ್ರಜ್ಞಾನ ಕರಗತವಾದಂತೆ ಕಾರ್ಯಕ್ಷ ಮತೆ ಕುಗ್ಗುವ ತೊಂದರೆಯನ್ನು ನಿವಾರಿಸುವುದು
ಸುಲಭವಾಯಿತು. ಕೇವಲ ಹತ್ತು-ಹದಿನೈದು ನ್ಯಾನೊ ಮೀಟರ್‌ ದಪ್ಪದ ಸೋಸುಕ ಯಶಸ್ವಿಯಾಗಿ
ನಿರ್ಮಾಣವಾಯಿತು. ಅಂದರೆ ಬಳಕೆಯಲ್ಲಿದ್ದ ಸೋಸುಕಗಳಿಗಿಂತ ದಪ್ಪದಲ್ಲಿ ನೂರರಿಂದ ಸಹಸ್ರ
ಪಟ್ಟು ಇಳಿಕೆ! ಔಷಧವನ್ನು ರಾಸಾಯನಿಕಗಳ ಅಣುವಿನ ಹಂತದಲ್ಲಿ ಸಂಸ್ಕರಿಸುವ ಕಾಲವಿದು. ಅಂತೆಯೇ
ಪರಿಶುದ್ಧತೆಗೆ ಇಲ್ಲಿ ಪ್ರಾಧಾನ್ಯ. ಇಲ್ಲಿ ಪರಮಾಣು ಮಟ್ಟದಲ್ಲಿ ಶುದ್ಧತೆಯನ್ನು
ಕಾಪಾಡಿಕೊಳ್ಳಬೇಕಾದರೆ ಬಳಸುವ ಸೋಸುಕಗಳು ನ್ಯಾನೊ ಅಳತೆಯಲ್ಲಿ ನಿರ್ಮಿತವಾಗಿರಬೇಕು.
ಜೀವಿಯೊಂದರ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸುವ 'ಪ್ರೋಟೀನ್‌'ಗಳು ನಿಮಗೆ
ಗೊತ್ತು. ಪ್ರಯೋಗಕ್ಕೆ ಬಳಸಿಕೊಳ್ಳುವ ಜೀವ ದ್ರವದಲ್ಲಿ ಯಾವ ಪ್ರೋಟೀನ್‌ ಎಷ್ಟು
ಪ್ರಮಾಣದಲ್ಲಿವೆ ಎಂದು ನಿರ್ಧರಿಸಲು, ಅವುಗಳನ್ನು ಬೇರ್ಪಡಿಸಬೇಕು. ಅಂದರೆ ಪ್ರೋಟೀನ್‌ಗಳ
ಗಾತ್ರಕ್ಕಿಂತಲೂ ಚಿಕ್ಕದಾದ ರಂಧ್ರಗಳಿರುವ ಸೋಸುಕ ಇಲ್ಲಿ ಬೇಕು. ಇದೇ ರೀತಿ ಜೀವಿಯೊಂದರ
ಗುಣಾವಗುಣಗಳನ್ನು ನಿರ್ಧರಿಸುವ 'ಜೀನ್‌'ಗಳ ಬಗ್ಗೆ ಅಧ್ಯಯನ ನಡೆಸುವಾಗ ಅದರ ಮೂಲ ದ್ರವ್ಯವಾದ
'ಡಿ.ಎನ್‌.ಎ.'ಯನ್ನು ವಿಶ್ಲೇಷಣೆಗೆ (ಡಿಆಕ್ಸಿರೈಬೋ ನ್ಯೂಕ್ಲಿಕ್‌ ಆಮ್ಲ) ಒಳಪಡಿಸಬೇಕು.
ಇಂದು ಪ್ರತಿಸೃಷ್ಟಿಗೆ198 ಇಂಬು ಕೊಡುತ್ತಿರುವ 'ಆಕರ ಕೋಶಗಳ - ಸ್ಟೆಮ್‌ ಸೆಲ್ಸ್‌'
ಬಗ್ಗೆಯೇ ಎಲ್ಲೆಡೆ ಚರ್ಚೆ. ಪರೀಕ್ಷೆಗೆಂದು ಅವುಗಳನ್ನು ಸೋಸಿ ತೆಗೆಯಲು ನ್ಯಾನೊ ಮೀಟರ್‌
ಅಳತೆಯ ರಂಧ್ರಗಳುಳ್ಳ ಸೋಸುಕಗಳು ಅವಶ್ಯವಾಗಿ ಬೇಕು. ಹೀಗೆ
ಜೈವಿಕ-ವೈದ್ಯಕೀಯ-ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಸೂಕ್ಷ ್ಮ ಸೋಸುಕಗಳು ಮಹತ್ವದ
ಪಾತ್ರವನ್ನು ವಹಿಸುವುದನ್ನು ಮನಗಂಡಿದ್ದ ಫಿಲಿಪ್‌ ಫೌಶೆಟ್‌ ತಮ್ಮ ಸಂಶೋಧನೆಗಳಿಗೆ ಆ
ಕ್ಷೇತ್ರದ ಪರಿಣತ ಜೇಮ್ಸ್‌ ಮೆಕ್‌ಗ್ರಾಥ್‌ ಅವರನ್ನು ಸೇರಿಸಿಕೊಂಡಿದ್ದರು. ಇಲ್ಲಿ
ಕಂಪ್ಯೂಟರ್‌ ಚಿಪ್‌ಗಳ ನಿರ್ಮಾಣಕ್ಕೆ ಬಳಕೆಯಾಗುವ ಉತ್ಪಾದನಾ ತಂತ್ರಜ್ಞಾನವೂ ನೆರವಿಗೆ
ಬಂತು. ಜಗತ್ತಿನ ವೈದ್ಯಕೀಯ ಸಂಶೋಧನೆಗಳಲ್ಲಿ ಕ್ಯಾನ್ಸರ್‌ ಅನ್ನು ಬಿಟ್ಟರೆ ಮಿದುಳು ಹಾಗೂ
ನರಮಂಡಲಕ್ಕೆ ಸಂಬಂಧಿಸಿದ ರೋಗಗಳದು ಸಿಂಹಪಾಲು. ನರತಂತುಗಳ (ನ್ಯೂರಾನ್‌) ಹಂತದಲ್ಲಿ ರಿಪೇರಿ
ನಡೆಸುವಷ್ಟು ಪರಿಣತಿಯನ್ನು ವೈದ್ಯ ವಿಜ್ಞಾನಿಗಳು ಸಂಪಾದಿಸಿಕೊಂಡಿದ್ದಾರೆ. ನಶಿಸಿಹೋದ
ನರತಂತುಗಳ ಜಾಗದಲ್ಲಿ ಪ್ರಯೋಗಶಾಲೆಯಲ್ಲಿಯೇ ಹೊಸತಾಗಿ ರೂಪಿಸಿದ ನರತಂತುಗಳನ್ನು ಜೋಡಿಸುವ
ಸವಾಲು ಅವರ ಮುಂದಿದೆ. ರೋಚೆಸ್ಟರ್‌ ವಿಶ್ವವಿದ್ಯಾಲಯದಲ್ಲಿಯೇ ಅಧ್ಯಯನ ನಡೆಸುತ್ತಿರುವ
ಜೇಮ್ಸ್‌ ಮೆಕ್‌ಗ್ರಾಥ್‌ ಅವರ ಆಸಕ್ತಿಯ ಕ್ಷೇತ್ರ ನರತಂತು ಜೀವಕೋಶಗಳು. ಆಕರ ಕೋಶಗಳಿಂದ
ಅಗತ್ಯವಿರುವ ನರತಂತುಗಳನ್ನು ನಿರ್ಮಿಸಿಕೊಳ್ಳಬೇಕೆಂಬ ಹೆಬ್ಬಯಕೆ ಅವರದು. ಆಕರ ಕೋಶಗಳನ್ನು
ಪ್ರಚೋದಿಸಿ ನರತಂತುಗಳನ್ನಾಗಿ ರೂಪಿಸಲು ನಮ್ಮ ದೇಹದಲ್ಲಿನ ಜೀವದ್ರವ್ಯದಲ್ಲೇ ಕೆಲವೊಂದು
'ಸಹಾಯಕ' (ಹೆಲ್ಪರ್‌) ಜೀವಕೋಶಗಳಿರುತ್ತವೆ. ಅಂಥ ಸಹಾಯಕ ಜೀವಕೋಶಗಳನ್ನು ಸೋಸಿ ತೆಗೆಯಲು
ನ್ಯಾನೊ ಅಳತೆಯ ಸೋಸುಕಗಳು ನೆರವಾಗುತ್ತವೆ. ಇನ್ನು ರಕ್ತ ಶುದ್ಧೀಕರಿಸುವ 'ಡಯಾಲಿಸಿಸ್‌'
ವ್ಯವಸ್ಥೆಯಲ್ಲಿಯೂ ಅತ್ಯಂತ ಸೂಕ್ಷ ್ಮ ಸೋಸುಕಗಳ ಅಗತ್ಯವಿದೆ. ಸದ್ಯಕ್ಕೆ ಲಭ್ಯವಿರುವ
ತಂತ್ರಜ್ಞಾನಗಳ ಮೂಲಕ ಸಮುದ್ರದ ನೀರಿನಲ್ಲಿರುವ ಲವಣಾಂಶಗಳನ್ನು ಹೊರತೆಗೆಯುವುದು ಅತ್ಯಂತ
ತುಟ್ಟಿಯ ಬಾಬ್ತು. ಕಲ್ಲು ಮಣ್ಣಿನಂಶಗಳನ್ನು ಸೋಸಿ ತೆಗೆಯುವ ಹಾಗೆ ಲವಣಾಂಶಗಳನ್ನು
ತೆಗೆಯಬಹುದಲ್ಲವೆ? ಎಂಬುದು ಪ್ರಶ್ನೆ. ಸದ್ಯಕ್ಕೆ ಪ್ರೊಟೀನ್‌ ಅಣುಗಳನ್ನು, ಜೀವಕೋಶಗಳನ್ನು
ಸೆರೆಹಿಡಿಯಲು ಸಾಧ್ಯವಿರುವ ಸಿಲಿಕಾನ್‌ ಸೋಸುಕಗಳಲ್ಲಿ ಸಮುದ್ರದ ನೀರಿನಲ್ಲಿ ಕರಗಿರುವ
ಸೋಡಿಯಂ ಹಾಗೂ ಕ್ಲೋರಿನ್‌ ಅಂಥ ಚಿಕ್ಕ ಗಾತ್ರದ ಪರಮಾಣುಗಳನ್ನು ಸೋಸಲಾಗುವುದಿಲ್ಲ.
'ಬರ'ಲಿರುವ ದಿನಗಳಲ್ಲಿ ಜಗತ್ತು ಎದುರಿಸಬೇಕಾದ ಅತಿ ದೊಡ್ಡ ಸಮಸ್ಯೆಯೆಂದರೆ ಕುಡಿಯುವ ನೀರಿನ
ಪೂರೈಕೆಯದು. ಇದಕ್ಕಿರುವ ಪರಿಹಾರವೆಂದರೆ ಸಮುದ್ರದ ನೀರನ್ನು ಕುಡಿಯಲು ಯೋಗ್ಯವಾಗುವಂತೆ
ಮಾರ್ಪಡಿಸುವುದು. ಸಮುದ್ರದ ನೀರನ್ನು ಕುಡಿಯುವ ನೀರಾಗಿ ಮಾರ್ಪಡಿಸಲು ದೇಶದ ಬೈಜಿಕ
ವಿದ್ಯುದಾಗಾರಗಳೂ (ನ್ಯೂಕ್ಲಿಯರ್‌ ಪವರ್‌ಪ್ಲಾಂಟ್‌) ಸೇರಿದಂತೆ ಹಲವಾರು ಸರಕಾರಿ
ಸಂಶೋಧನಾಲಯಗಳು ಯೋಜನೆಗಳನ್ನು ಹಮ್ಮಿಕೊಂಡಿವೆ. ಅವರೆಲ್ಲರ ಪ್ರಯತ್ನಗಳು ಯಶಸ್ವಿಯಾಗಲಿ ಎಂದು
ಹಾರೈಸೋಣ.

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to