*_ಉತ್ತಮ ಗುಣಮಟ್ಟವೇ ಹೊಸ ಶಿಕ್ಷಣ ನೀತಿಯ ಉದ್ದೇಶ_*

```02 Sep 2016```

ಭಾರತದಲ್ಲಿ ಶಿಕ್ಷಣ ಗುಣಮಟ್ಟ ಹೆಚ್ಚಳಕ್ಕೆ ಭಾರತೀಯ ಶಿಕ್ಷಣ ಮಂಡಲ
ಕಾರ್ಯನಿರ್ವಹಿಸುತ್ತಿದೆ. ಇದೀಗ ಕೇಂದ್ರ ಸರ್ಕಾರ ರೂಪಿಸಲು ಮುಂದಾಗಿರುವ ಹೊಸ ಶಿಕ್ಷಣ
ನೀತಿಯ ನಿರೂಪಣೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿರುವ ಮಂಡಲದ ರಾಷ್ಟ್ರೀಯ ಜಂಟಿ ಸಂಘಟನಾ
ಕಾರ್ಯದರ್ಶಿ ಮುಕುಲ್ ಕಾನಿಟ್ಕರ್ ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ
‘ವಿಜಯವಾಣಿ’ ಜತೆ ಮಾತನಾಡಿದ್ದಾರೆ.

_ಯೋಗ, ಸಂಸ್ಕೃತ ಕಡ್ಡಾಯವೆಂದು ಹೇಳಿಲ್ಲಸೆಮಿಸ್ಟರ್ ಪದ್ಧತಿ ಬೇಡಜೀವನಕೌಶಲ ಕಲಿಸಬೇಕು._

_ಭಾರತೀಯ ಶಿಕ್ಷಣ ಮಂಡಲದ ಸ್ಥಾಪನೆಯ ಉದ್ದೇಶವೇನು?_

ಶಿಕ್ಷಣ ವ್ಯವಸ್ಥೆ ಭಾರತ ಕೇಂದ್ರಿತವಾಗಿರಬೇಕು. ಭಾರತದ ಹಿತವನ್ನು ಕಾಪಾಡುವಂತೆ ಶಿಕ್ಷಣ
ರೂಪುಗೊಳ್ಳಬೇಕು. ಬ್ರಿಟಿಷರ ಕಾಲದಿಂದ ಬಂದ ಕ್ಷಣ ವ್ಯವಸ್ಥೆ ಬದಲಾವಣೆಯಾಗಬೇಕು ಎಂಬುದೇ
ಮಂಡಲದ ಪ್ರಮುಖ ಉದ್ದೇಶ.

ಅಲ್ಪಸ೦ಖ್ಯಾತ ಸ೦ಸ್ಥೆಗಳ ವ್ಯಾಖ್ಯಾನ ಬದಲಾಗಬೇಕು

*ಭಾರತ ಕೇಂದ್ರಿತ ಶಿಕ್ಷಣ ವ್ಯವಸ್ಥೆ ಎಂದ ಕೂಡಲೆ ಕೇಸರೀಕರಣದ ಕೂಗು ಕೇಳಿಬರುತ್ತದಲ್ಲ?*

ಕೇಸರೀಕರಣ ಆರೋಪವು ಶಿಕ್ಷಣದಲ್ಲಿ ಪಠ್ಯಕ್ರಮ ಕುರಿತಾಗಿ ನಡೆಯುತ್ತದೆ. ನಮ್ಮ ಉದ್ದೇಶ ಕೇವಲ
ಪಠ್ಯಕ್ರಮ ಬದಲಾವಣೆಯಲ್ಲ. ಶಿಕ್ಷಣ ವ್ಯವಸ್ಥೆ ಬದಲಾವಣೆಯ 4 ಅಂಶಗಳಲ್ಲಿ ಪಠ್ಯಕ್ರಮ
ಬದಲಾವಣೆಯೂ ಒಂದು ಅಷ್ಟೆ.

1.  _ಶಿಕ್ಷಣದ ಉದ್ದೇಶ ಸ್ಪಷ್ಟವಾಗಬೇಕು_
ಮುಕ್ತಿಯೇ ಶಿಕ್ಷಣದ ಉದ್ದೇಶವಾಗಬೇಕೇ ಹೊರತು ಹಣಗಳಿಕೆಯಲ್ಲ.

2.   ಶಿಕ್ಷಣ ಸಮಾಜಕೇಂದ್ರಿತವಾಗಬೇಕೇ ವಿನಾ ವ್ಯಕ್ತಿಕೇಂದ್ರಿತವಲ್ಲ ದೇಶದ ಅಗತ್ಯಕ್ಕೆ
ತಕ್ಕಂತೆ ಶಿಕ್ಷಣ ರೂಪುಗೊಳ್ಳಬೇಕು.

3. _ಪಠ್ಯಕ್ರಮ_  ಸ್ಥಳೀಯ ವಿಚಾರಗಳನ್ನು ಕಲಿಸಿದ ನಂತರ ವಿಶ್ವದ ಪಠ್ಯವನ್ನು ಅಳವಡಿಸಬೇಕು.
ಮಾಹಿತಿ ಕಣಜಕ್ಕಿಂತಲೂ ಜೀವನಕೌಶಲವನ್ನು ಕಲಿಸಬೇಕು.

4. _ಸ್ವಾಯತ್ತತೆ_  ಸರ್ಕಾರ ಯಾವುದನ್ನೂ ಕಡ್ಡಾಯ ಮಾಡಬಾರದು. ಮಕ್ಕಳಿಗೆ ಏನು ಬೇಕೆಂದು
ಶಿಕ್ಷಕರು ನಿರ್ಧರಿಸಬೇಕು.

*ಸರ್ಕಾರ ರೂಪಿಸುತ್ತಿರುವ ಹೊಸ ಶಿಕ್ಷಣ ನೀತಿಯ ಮುಖ್ಯ ಉದ್ದೇಶವೇನು?*

ಗುಣಮಟ್ಟ ಹೆಚ್ಚಳವೇ ಹೊಸ ಶಿಕ್ಷಣ ನೀತಿಯ ಪ್ರಮುಖ ವಿಚಾರ.

*ಗುಣಮಟ್ಟ ಹೆಚ್ಚಳಕ್ಕೆ ಗಮನ ನೀಡಿದಾಗ ಓದಿನಲ್ಲಿ ಹಿಂದಿರುವ ಮಕ್ಕಳು ಶಾಲೆ ತ್ಯಜಿಸುವ
ಆತಂಕವಿಲ್ಲವೆ?*

ದೇಶದ ಎಲ್ಲರಿಗೂ ಶಿಕ್ಷಣವನ್ನು ತಲುಪಿಸಬೇಕೆಂಬುದು ಸ್ವಾತಂತ್ರ್ಯ ಲಭಿಸಿದ ಸಂದರ್ಭದಲ್ಲಿ
ನಮ್ಮ ಗುರಿಯಾಗಿತ್ತು. ಸರ್ಕಾರದ ಅಂಕಿಅಂಶಗಳ ಪ್ರಕಾರ ದೇಶದ ಎಲ್ಲ ಪ್ರದೇಶಗಳಿಗೂ ಶಾಲಾ
ಸವಲತ್ತು ಕಲ್ಪಿಸಲಾಗಿದೆ. ಒಟ್ಟಾರೆ ದೇಶದಲ್ಲಿ ಜನಿಸುವ ಶೇ.95ರಷ್ಟು ಮಕ್ಕಳು ಶಾಲೆಗೆ
ದಾಖಲಾಗುತ್ತಿದ್ದಾರೆ (ಗ್ರಾಸ್ ಎನ್‌ರೋಲ್‌ಮೆಂಟ್ ರೇಶಿಯೊ). ಈಗ ಗುಣಮಟ್ಟದತ್ತ ಗಮನ
ನೀಡಬೇಕು. ಗುಣಮಟ್ಟದ ಶಿಕ್ಷಣ ಅದು ಸರ್ಕಾರಿ ಶಾಲೆಯಲ್ಲಿರಬಹುದು ಅಥವಾ ಖಾಸಗಿಯಲ್ಲಿರಬಹುದು,
ಸಾಮಾನ್ಯರಿಗೆ ದೊರಕುವಂತೆ ಮಾಡುವುದು ಈ ನೀತಿಯ ಉದ್ದೇಶ.

*ಹೊಸ ಶಿಕ್ಷಣ ನೀತಿ ಜಾರಿಯಾದರೆ ಯುಜಿಸಿ, ಎನ್‌ಸಿಇಆರ್‌ಟಿ ವಿಸರ್ಜನೆಯಾಗಲಿವೆಯೇ?*

ವಿಸರ್ಜನೆ ಮಾಡಬೇಕೆಂದು ಹೇಳಿಲ್ಲ. ಚುನಾವಣಾ ಆಯೋಗದ ರೀತಿಯಲ್ಲಿ ಎಜುಕೇಷನ್ ಗವರ್ನೆನ್ಸ್
ಕಮಿಷನ್(ಇಜಿಸಿ) ಸ್ಥಾಪಿಸಬೇಕೆಂಬ ಪ್ರಸ್ತಾವನೆಯಿದೆ. ಸರ್ಕಾರದ ಹಸ್ತಕ್ಷೇಪದಿಂದ ಸಂಪೂರ್ಣ
ಮುಕ್ತವಾದ ಏಕೈಕ ಸಂಸ್ಥೆ ಇಡೀ ದೇಶದ ಶಿಕ್ಷಣವನ್ನು ರೂಪಿಸಬೇಕು.

ಭಾರತೀಯ ಶಿಕ್ಷಣ ಮಂಡಲದ ಈ ಬೇಡಿಕೆಯನ್ನು ಕೇಂದ್ರ ಸರ್ಕಾರ ಪರಿಗಣಿಸಿದೆಯಾದರೂ, ಇಜಿಸಿ
ಮುಖ್ಯಸ್ಥರಾಗಿ ಮಾನವ ಸಂಪನ್ಮೂಲ ಸಚಿವರು ಇರಲಿದ್ದಾರೆ ಎಂದು ಶಿಕ್ಷಣ ನೀತಿಯ ಕರಡಿನಲ್ಲಿ
ಹೇಳಿದೆ. ಇದಕ್ಕೆ ನಮ್ಮ ವಿರೋಧವಿದೆ. ಮಂತ್ರಿಯೂ ಬೇಡ, ಅಧಿಕಾರಿಯೂ ಬೇಡ. ಶಿಕ್ಷಣ ತಜ್ಞರು
ಇದರ ನೇತೃತ್ವ ವಹಿಸಬೇಕು ಎಂದು ತಿಳಿಸಿದ್ದೇವೆ.

ಮಾನವ ಸಂಪನ್ಮೂಲ ಇಲಾಖೆಯಲ್ಲದೆ, ಶಿಕ್ಷಣ ಸಂಸ್ಥೆಗಳನ್ನು ನೋಡಿಕೊಳ್ಳುವ 7 ಸಚಿವಾಲಯಗಳಿವೆ.
ಆರೋಗ್ಯ, ಕೃಷಿ, ಕಾರ್ಮಿಕ, ವನವಾಸಿ ಸೇರಿದಂತೆ ಅನೇಕ ಇಲಾಖೆಗಳು ಶಿಕ್ಷಣ ಸಂಸ್ಥೆಗಳನ್ನು
ನಡೆಸುತ್ತಿವೆ. ಎಲ್ಲ ಶಿಕ್ಷಣ ಸಂಸ್ಥೆಗಳನ್ನೂ ಇಜಿಸಿ ಅಡಿಯಲ್ಲಿ ತಂದು ಸಮಗ್ರ ಅಭಿವೃದ್ಧಿಗೆ
ಮುಂದಾಗಬೇಕೆಂದು ಸಲಹೆ ನೀಡಿದ್ದೇವೆ.

*ಹೊಸ ಶಿಕ್ಷಣ ನೀತಿಯಲ್ಲಿ ಯೋಗ, ಸಂಸ್ಕೃತ ಕಡ್ಡಾಯಗೊಳಿಸುವ ಮೂಲಕ ಭಾರತವನ್ನು ವರ್ಣಾಶ್ರಮ
ಯುಗಕ್ಕೆ ಕೊಂಡೊಯ್ಯಲಾಗುತ್ತಿದೆ ಎಂದು ಅಲ್ಪಸಂಖ್ಯಾತ ಸಂಸ್ಥೆಗಳು ವಿರೋಧಿಸಿವೆಯಲ್ಲ?*

ವಿನಾಕಾರಣ ವಿವಾದ ಮಾಡಲಾಗುತ್ತಿದೆ. ಸಂಸ್ಕೃತ ಉತ್ತೇಜನಕ್ಕೆ ಉದಾರ ನೀತಿ ರೂಪಿಸಬೇಕು
ಎಂಬುದನ್ನು ಹೊರತುಪಡಿಸಿದರೆ ಅಸಲಿಗೆ ಇಡೀ ಕಾಯ್ದೆಯಲ್ಲಿ ಸಂಸ್ಕೃತದ ಉಲ್ಲೇಖವೇ ಇಲ್ಲ.
ಇನ್ನು, ಕಡ್ಡಾಯ ಮಾಡಬೇಕೆಂದು ಎಲ್ಲಿಯೂ ಹೇಳಿಲ್ಲ. ಇದು ಸುಳ್ಳು ಪ್ರಚಾರ.

*ಅಲ್ಪಸಂಖ್ಯಾತ ಸಂಸ್ಥೆಗಳು ದೇಶದಲ್ಲಿ ಹಲವೆಡೆ ಕಾಯ್ದೆಗೆ ವಿರೋಧ
ವ್ಯಕ್ತಪಡಿಸುತ್ತಿರುವುದೇತಕ್ಕೆ?*

ಅಸಲಿಗೆ ಈ ಸಂಸ್ಥೆಗಳನ್ನು ಅಲ್ಪಸಂಖ್ಯಾತ ಸಂಸ್ಥೆಗಳು ಎಂದು ಕರೆಯಬೇಕೆ ಎಂಬುದೇ ದೊಡ್ಡ
ಪ್ರಶ್ನೆ. ಸಂವಿಧಾನದ ಪರಿಚ್ಛೇದ 29 ಹಾಗೂ 30ರಲ್ಲಿ, ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ
ಸಂಸ್ಥೆಗಳನ್ನು ಸ್ಥಾಪಿಸಬೇಕು ಎಂದಿದೆ. ಆದರೆ ಅಲ್ಪಸಂಖ್ಯಾತ ಸಂಸ್ಥೆಯ ವ್ಯಾಖ್ಯಾನಗಳು
ಆಗಿಂದಾಗ್ಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಆಧಾರದಲ್ಲಿವೆ. ಇತ್ತೀಚೆಗಿನ
ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಆಡಳಿತ ಮಂಡಳಿಯಲ್ಲಿ ಶೇ.50ಕ್ಕಿಂತ ಹೆಚ್ಚು
ಅಲ್ಪಸಂಖ್ಯಾತ ಸದಸ್ಯರಿದ್ದರೆ ಅಲ್ಪಸಂಖ್ಯಾತ ಸಂಸ್ಥೆ ಎಂದು ತಿಳಿಸಲಾಗಿದೆ.

ಕೇವಲ ಆಡಳಿತ ಮಂಡಳಿಯಲ್ಲಿ ಅಲ್ಪಸಂಖ್ಯಾತರಿದ್ದ ಮಾತ್ರಕ್ಕೆ ಸಂವಿಧಾನದ ಆಶಯ ಈಡೇರುವುದಿಲ್ಲ.
ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಚಿಂತನೆ ನಡೆಸುತ್ತಿದ್ದೇವೆ. ಶಿಕ್ಷಣ
ಪಡೆಯುತ್ತಿರುವ ಫಲಾನುಭವಿಗಳಲ್ಲಿ ಶೇ.50ಕ್ಕಿಂತ ಹೆಚ್ಚಿನವರು ಅಲ್ಪಸಂಖ್ಯಾತ
ಸಮುದಾಯದವರಿದ್ದರೆ ಮಾತ್ರ ಈ ಮಾನ್ಯತೆ ನೀಡಬೇಕು ಎಂಬುದು ನಮ್ಮ ವಾದ.

ಅಲ್ಪಸಂಖ್ಯಾತ ಎಂಬ ಹಣೆಪಟ್ಟಿಯುಳ್ಳ ಬಹುತೇಕ ಸಂಸ್ಥೆಗಳಲ್ಲಿ ಶೇ.99ರಷ್ಟು ಬಹುಸಂಖ್ಯಾತ
ವಿದ್ಯಾರ್ಥಿಗಳಿರುತ್ತಾರೆ. ಇಂತಹ ಸಮಯದಲ್ಲಿ ಯೋಗ ಕಲಿಸಬೇಡಿ, ಸಂಸ್ಕೃತ ಕಲಿಸಬೇಡಿ ಎಂದು
ಹೇಳಲು ಆಡಳಿತ ಮಂಡಳಿಗೆ ಯಾವುದೇ ಅಧಿಕಾರವಿಲ್ಲ.

*ಕಡ್ಡಾಯ ಗ್ರಾಮೀಣ ಸೇವೆಯಿಂದ ತಪ್ಪಿಸಿಕೊಳ್ಳಲು ಕರ್ನಾಟಕದಲ್ಲಿ ಹಲವರು ನೀಟ್ ದಾರಿ
ಹಿಡಿದಿದ್ದಾರಲ್ಲ? ಏನು ಪರಿಹಾರ?*

ನೀತಿ ಬದಲಾವಣೆಯಿಂದ ಪ್ರಯೋಜನವಿಲ್ಲ. ಹಳ್ಳಿಯಲ್ಲಷ್ಟೆ ಅಲ್ಲ, ನಗರ ಪ್ರದೇಶದ ಸರ್ಕಾರಿ
ಆಸ್ಪತ್ರೆಗಳಲ್ಲೂ ಹಿರಿಯ ವೈದ್ಯರಿಲ್ಲದೆ ತರಬೇತಿನಿರತರಿಂದ ಹಾಗೂ ಸ್ನಾತಕೋತ್ತರರಿಂದ
ನಡೆಯುತ್ತಿವೆ. ಮಹಾರಾಷ್ಟ್ರದಲ್ಲಿ ‘ಸೇವಾಂಕುರ್’ ಹೆಸರಿನ ಒಂದು ಯೋಜನೆ ರೂಪಿಸಿದ್ದೇವೆ.
ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಒಂದು ವಾರ ಕಾಲ ಬಾಬಾ ಆಮ್ಟೆಯವರ ಸೇವಾಕ್ಷೇತ್ರಕ್ಕೆ
ಕರೆದೊಯ್ದು ಸೇವೆಯ ಮಹತ್ವವನ್ನು ತಿಳಿಸುತ್ತೇವೆ. ಈ ರೀತಿಯ ಭಾವ ಉದ್ದೀಪನದ ಕೆಲಸದಿಂದ
ಮಾತ್ರವೇ ಹೊರತು ಗ್ರಾಮೀಣ ಕಡ್ಡಾಯ ಸೇವೆಯಿಂದಲ್ಲ.

*ಕರ್ನಾಟಕದ ಶಾಲೆಗಳಲ್ಲಿ ಮತ್ತೆ ಸೆಮಿಸ್ಟರ್ ತರುವ ಚರ್ಚೆಗಳು ಕೇಳಿಬರುತ್ತಿವೆ..*.

ಸೆಮಿಸ್ಟರ್‌ಗೆ ನಮ್ಮ ಸಂಪೂರ್ಣ ವಿರೋಧವಿದೆ. ರಾಜ್ಯಗಳ ಶಿಕ್ಷಣ ಮಂತ್ರಿಗಳಿಗೆ ಫಲಿತಾಂಶ
ಬೇಕು, ಪೋಷಕರಿಗೆ ಮಗು ತೇರ್ಗಡೆ ಹೊಂದಬೇಕು, ಶಾಲೆಗಳಿಗೆ ಉತ್ತಮ ಫಲಿತಾಂಶದ ಬೋರ್ಡ್ ಬೇಕು
ಎಂಬ ಕಾರಣಕ್ಕೆ ನಡೆಯುತ್ತಿರುವ ಕಾರ್ಯಕ್ರಮ ಇದು. ಮಕ್ಕಳ ಜ್ಞಾನ ವಿಕಾಸಕ್ಕೆ ಇದರಿಂದ
ಪ್ರಯೋಜನವಿಲ್ಲ.

*ನೋ ಡಿಟೆನ್ಷನ್ ನೀತಿಯನ್ನು 5ನೇ ತರಗತಿಗೆ ಇಳಿಸುವ ಕುರಿತು ಹೊಸ ನೀತಿ ಹೇಳಿದೆ. ಇದರಿಂದ
ಹೆಚ್ಚಿನ ಮಕ್ಕಳು ಶಾಲೆಯಿಂದ ಹೊರಗುಳಿಯುವುದಿಲ್ಲವೇ?*

ಇಲ್ಲ. ಈ ಹಿಂದೆ 9ನೇ ತರಗತಿಯಲ್ಲಿ ಫೇಲ್ ಆಗುತ್ತಿದ್ದವರು ಈಗ 5ರಲ್ಲಿ ಆಗುತ್ತಾರೆ ಅಷ್ಟೆ.
ಪರೀಕ್ಷಾ ಕೇಂದ್ರಿತ ವ್ಯವಸ್ಥೆಯಿರುವವರೆಗೂ ಈ ಸಮಸ್ಯೆ ಇರುತ್ತದೆ. ಶಿಕ್ಷಣದ ಗುಣಮಟ್ಟ
ಹೆಚ್ಚಳವಾದರೆ ಈ ನೀತಿಯ ಅವಶ್ಯಕತೆಯೇ ಇರುವುದಿಲ್ಲ.

*ಶಿಕ್ಷಣ ರೂಪಿಸುವಲ್ಲಿ ಉದ್ಯಮ ಸಹಭಾಗಿತ್ವ ಎಷ್ಟು ಪೂರಕ?*

ಈಗಿನ ಶಿಕ್ಷಣದಲ್ಲಿ, ಪ್ರಮಾಣಪತ್ರ ಒಬ್ಬನ ಕೈಲಿದ್ದರೆ, ಕೌಶಲ ಮತ್ತೊಬ್ಬನ ಬಳಿಯಿದೆ.
ಎರಡನ್ನೂ ಒಟ್ಟಾಗಿಸುವ ಕಾರ್ಯ ನಡೆಯಬೇಕು. ಉದ್ಯಮ ಕೇಳಿದಂತೆ ಕೋರ್ಸ್ ರೂಪಿಸುವುದರಲ್ಲಿ
ತಪ್ಪಿಲ್ಲ. ಅಂತಿಮವಾಗಿ ಕೆಲಸಕ್ಕೆ ಸಿಬ್ಬಂದಿ ಬೇಕಿರುವುದು ಅವರಿಗೆ ತಾನೆ?

*ಕರ್ನಾಟಕದ ಶಿಕ್ಷಣ ವ್ಯವಸ್ಥೆ ಹೇಗಿದೆ?*

ಶಾಲಾಶಿಕ್ಷಣ ಉತ್ತಮವಾಗಿದೆ. ಆದರೆ ವೃತ್ತಿಪರ ಶಿಕ್ಷಣವನ್ನು ಮಾರಾಟಕ್ಕೆ ಅವಕಾಶ ಮಾಡಿಕೊಟ್ಟ
ಮೊದಲ ರಾಜ್ಯ ಕರ್ನಾಟಕ. ಈಗಲೂ ಶಿಕ್ಷಣ ಮಾರಾಟದಲ್ಲಿ ಕರ್ನಾಟಕವೇ ಮುಂದಿದೆ.

*ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಕಡ್ಡಾಯಗೊಳಿಸುವ ಕುರಿತು ಮಂಡಲದ ಅಭಿಪ್ರಾಯವೇನು?*

ಮಾತೃಭಾಷೆ ಶಿಕ್ಷಣ ಮಾತ್ರವಲ್ಲ, ಶಿಕ್ಷಣದ ವಿಚಾರದಲ್ಲಿ ಯಾವುದನ್ನೂ ಸರ್ಕಾರ
ಕಡ್ಡಾಯಗೊಳಿಸುವುದಕ್ಕೆ ನಮ್ಮ ವಿರೋಧವಿದೆ. ಕರ್ನಾಟಕ ಸಿಎಂ ಸಿದ್ದರಾಮಯ್ಯ ಸಹ ಕನ್ನಡ
ಮಾಧ್ಯಮ ಕಡ್ಡಾಯಗೊಳಿಸುವ ಪರವಾಗಿದ್ದಾರೆ. ಅದರ ಬದಲಿಗೆ, ಕನ್ನಡ ಮಾಧ್ಯಮದಲ್ಲಿ
ಕಲಿತವರಿಗೆಸರ್ಕಾರಿ ನೌಕರಿಯಲ್ಲಿ ಪ್ರಾತಿನಿಧ್ಯ ನೀಡಲಾಗುವುದು ಎಂದು ಆದೇಶ ಹೊರಡಿಸಲಿ.
ನಾನು ಹೇಳುತ್ತಿರುವುದು ಕನ್ನಡ ಮಾಧ್ಯಮಕ್ಕೆ ಮೀಸಲಾತಿಯಲ್ಲ, ‘ಪ್ರಾತಿನಿಧ್ಯ’. ಅಂದರೆ
ಇಂಗ್ಲಿಷ್ ಮಾಧ್ಯಮದಲ್ಲಿ ಎಷ್ಟೇ ಅಂಕ ಗಳಿಸಿದ್ದರೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳನ್ನೇ
ಆಯ್ಕೆ ಮಾಡಬೇಕು. ಐಎಎಸ್ ಪ್ರವೇಶ ಪರೀಕ್ಷೆಗಳಲ್ಲಿ ಹಿಂದಿಗೆ ಅವಕಾಶ ನೀಡಿದಾಗಿನಿಂದಲೂ
ಹಿಂದಿ ಭಾಷಿಕರೇ ಉತ್ತಮ ಪ್ರದರ್ಶನ ನೀಡುವಲ್ಲಿ ಮುಂದಿದ್ದಾರೆ. ಪಿಯುಸಿ ನಂತರ ಬಿಎಸ್‌ಸಿ,
ವಾಣಿಜ್ಯ, ಕಾನೂನು ಪದವಿಯಲ್ಲೂ ಕನ್ನಡ ಮಾಧ್ಯಮ ಆಯ್ಕೆ ನೀಡಿದರೆ ಸಾಕು.

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to