http://www.ejnana.com/2016/09/blog-post_14.html?m=1

*ಕನ್ನಡ ಪುಸ್ತಕಗಳ ಇ-ಅವತಾರ*

*ಟಿ. ಜಿ. ಶ್ರೀನಿಧಿ*

<https://1.bp.blogspot.com/-RTrNq7Bxe_U/V828Zv942AI/AAAAAAAAfc8/oJNpxQi4LvMQxMNAYlc6I9jVTBfIlKxjwCLcB/s1600/reading-1249273_960_720.jpg>

ತಂತ್ರಜ್ಞಾನ ಹಾಗೂ ಪುಸ್ತಕ ಸಂಸ್ಕೃತಿಯ ಮಾತು ಒಟ್ಟಿಗೆ ಕೇಳಿಬಂದಾಗಲೆಲ್ಲ ನಮಗೆ ಪರಸ್ಪರ
ವಿರುದ್ಧವಾದ ಎರಡು ವಾದಗಳು ಕೇಳಸಿಗುತ್ತವೆ. "ಟೆಕ್ನಾಲಜಿಯಿಂದಾಗಿ ಪುಸ್ತಕ ಓದುವ ಹವ್ಯಾಸವೇ
ಕಡಿಮೆಯಾಗುತ್ತಿದೆ" ಎಂದು ಕೆಲವರು ಹೇಳಿದರೆ "ಪುಸ್ತಕ ಸಂಸ್ಕೃತಿ ಉಳಿಯಬೇಕಾದರೆ
ತಂತ್ರಜ್ಞಾನದ ಸಹಾಯ ಬೇಕೇಬೇಕು" ಎಂದು ಇನ್ನು ಕೆಲವರು ಹೇಳುತ್ತಾರೆ. ಸಂತೋಷದ ವಿಷಯವೆಂದರೆ
ಇಷ್ಟೆಲ್ಲ ಮಾತನಾಡುವವರ ನಡುವೆ ಸದ್ದಿಲ್ಲದೆ ಕೆಲಸಮಾಡುವವರೂ ಅನೇಕರಿದ್ದಾರೆ, ಹಾಗೂ ಅವರ
ಪ್ರಯತ್ನಗಳ ಫಲವಾಗಿ ಇಂದು ಕನ್ನಡ ಪುಸ್ತಕಗಳೂ ಇ-ಅವತಾರದಲ್ಲಿ ಕಾಣಿಸಿಕೊಳ್ಳುತ್ತಿವೆ.
ಓದುಗ, ಪ್ರಕಾಶಕ, ತಂತ್ರಜ್ಞ ಹಾಗೂ ಸರಕಾರ - ಹೀಗೆ ನಾಲ್ಕೂ ನಿಟ್ಟಿನಿಂದ ನಡೆದ
ಪ್ರಯತ್ನಗಳಿಂದಾಗಿ ಕನ್ನಡ ಪುಸ್ತಕಗಳು ಡಿಜಿಟಲ್ ಲೋಕದಲ್ಲಿ ತಮ್ಮ ಸ್ಥಾನ
ಕಂಡುಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ಸದ್ಯದ ಪರಿಸ್ಥಿತಿಯ ಒಂದು ಅವಲೋಕನ ಇಲ್ಲಿದೆ.

*ಆ ಪುಸ್ತಕ ಇ ಪುಸ್ತಕ* *ಪ್ರಕಟವಾದ ಒಳ್ಳೆಯ ಪುಸ್ತಕಗಳೆಲ್ಲ ನಮಗೆ ಸಿಗುವುದಿಲ್ಲ, ಸಿಕ್ಕರೂ
ಎಲ್ಲವನ್ನೂ ಕೊಂಡಿಟ್ಟುಕೊಳ್ಳಲು ಮನೆಯಲ್ಲಿ ಜಾಗ ಇರುವುದಿಲ್ಲ. ಈ ಸಮಸ್ಯೆ ತಪ್ಪಿಸಲು
ಹುಟ್ಟಿಕೊಂಡದ್ದೇ ವಿದ್ಯುನ್ಮಾನ ಪುಸ್ತಕ, ಅಂದರೆ ಇ-ಬುಕ್‌ಗಳ ಪರಿಕಲ್ಪನೆ. ಪುಸ್ತಕದ
ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡು ಅದರ ಭೌತಿಕ ರೂಪವನ್ನು ಡಿಜಿಟಲ್ ರೂಪಕ್ಕೆ
ಪರಿವರ್ತಿಸುವುದು ಇ-ಪುಸ್ತಕಗಳ ವೈಶಿಷ್ಟ್ಯ. ಇವನ್ನು ಓದಲೆಂದೇ ಇ-ಬುಕ್ ರೀಡರ್‌ಗಳೆಂಬ
ಪ್ರತ್ಯೇಕ ಸಾಧನಗಳು ರೂಪುಗೊಂಡಿವೆ. ಅಂತಹುದೊಂದು ಸಾಧನವಿದ್ದರೆ ಸಾಕು, ಆ ಪುಸ್ತಕಗಳಂತೆ
ಇ-ಪುಸ್ತಕದಲ್ಲೂ ಪುಟ ತಿರುಗಿಸಬಹುದು, ಬುಕ್‌ಮಾರ್ಕ್ ಇಡಬಹುದು! ಪ್ರತ್ಯೇಕವಾಗಿ ಇ-ಬುಕ್
ರೀಡರನ್ನೇಕೆ ಕೊಳ್ಳಬೇಕು ಎನ್ನುವವರೂ ಚಿಂತಿಸಬೇಕಿಲ್ಲ. ಅಪಾರ ಸಂಖ್ಯೆಯ ವಿದ್ಯುನ್ಮಾನ
ಪುಸ್ತಕಗಳನ್ನು ನಮ್ಮ ಮೊಬೈಲ್ ಹಾಗೂ ಟ್ಯಾಬ್ಲೆಟ್ಟುಗಳಲ್ಲೇ ಒದಗಿಸುವ ಅನೇಕ ಆಪ್‌ಗಳೂ ಇವೆ.
ಇಂತಹ ಯಾವುದೇ ಸೌಲಭ್ಯ ಬಳಸಿ ನಾವೂ ಇ-ಪುಸ್ತಕಗಳಿಗೆ ತೆರೆದುಕೊಳ್ಳಬಹುದು.*


*ಓದುಗ ಮೆಚ್ಚಿದ ಡಿಜಿಟಲ್ ರೂಪ*
ಹೊಸ ಅವಕಾಶಗಳನ್ನು ಅರಸಿ ದೂರದ ನಾಡುಗಳಿಗೆ ಹೋದರೂ ಕನ್ನಡ ಪುಸ್ತಕಗಳಿಂದ ದೂರವಾಗದ ಅನೇಕ
ಮಂದಿ ಇದ್ದಾರೆ. ಇವರಿಗೆಲ್ಲ ಹೊಸ ಪುಸ್ತಕಗಳನ್ನು ಪಡೆಯುವ ಸುಲಭ ಅವಕಾಶವಿದ್ದದ್ದು
ರಜೆಯಲ್ಲಿ ಊರಿಗೆ ಹೋದಾಗ ಅಥವಾ ಊರಿನಿಂದ ಯಾರಾದರೂ ಬಂದಾಗ ಮಾತ್ರ. ಇಂಗ್ಲಿಷಿನ
ಇ-ಪುಸ್ತಕಗಳನ್ನು ನೋಡಿದಾಗಲೆಲ್ಲ ನಮ್ಮ ಭಾಷೆಯಲ್ಲೂ ಈ ಸೌಲಭ್ಯವೇಕಿಲ್ಲ ಎನ್ನುವ ಪ್ರಶ್ನೆ
ಇವರನ್ನು ಕಾಡುತ್ತಿತ್ತು. ಎಲ್ಲರೂ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುತ್ತಿದ್ದಂತೆ ಈ
ಪ್ರಶ್ನೆ ನಮ್ಮ ಊರುಗಳಲ್ಲೂ ಕೇಳಿಸಲು ಶುರುವಾಯಿತು. ಮೊಬೈಲಿನಲ್ಲೋ ಟ್ಯಾಬ್ಲೆಟ್ಟಿನಲ್ಲೋ
ನೂರಾರು ಇಂಗ್ಲಿಷ್ ಪುಸ್ತಕಗಳನ್ನು ಇಟ್ಟುಕೊಂಡು ಸುಲಭವಾಗಿ ಓದಬಹುದಾದರೆ ಅದು ಅದು ಕನ್ನಡ
ಪುಸ್ತಕಗಳಿಗೂ ಯಾಕೆ ಅನ್ವಯವಾಗಬಾರದು?

ಈ ಪ್ರಶ್ನೆಗೆ ಮೊದಲ ಉತ್ತರ ದೊರೆತದ್ದು, ಬಹುಶಃ, ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ
(ಡಿಎಲ್‌ಐ) ಹಾಗೂ ಒಸ್ಮಾನಿಯ ಯೂನಿವರ್ಸಿಟಿ ಡಿಜಿಟಲ್ ಲೈಬ್ರರಿ (ಓಯುಡಿಎಲ್) ಜಾಲತಾಣಗಳಿಂದ.
ಈ ತಾಣಗಳ ಮೂಲಕ ಉಚಿತವಾಗಿ ಲಭ್ಯವಾದ ಹಲವಾರು ಕನ್ನಡ ಪುಸ್ತಕಗಳು ಅದೆಷ್ಟೋ ಜನರ ಓದಿನ
ಹಸಿವಿಗೆ ಮೇವುಣಿಸಿದವು. ಇಲ್ಲಿ ಪುಸ್ತಕಗಳನ್ನು ಹುಡುಕುವುದು, ಡೌನ್‌ಲೋಡ್
ಮಾಡಿಕೊಳ್ಳುವುದು ಕಷ್ಟವೆನಿಸಿದರೂ ಅದು ಓದುಗರ ಉತ್ಸಾಹಕ್ಕೇನೂ ಭಂಗತರಲಿಲ್ಲ. ಕೆಲವು
ಆಸಕ್ತರ ಉತ್ಸಾಹದಿಂದ ಪುಸ್ತಕಗಳನ್ನು ಸುಲಭವಾಗಿ ಹುಡುಕುವ - ಡೌನ್‌ಲೋಡ್ ಮಾಡುವ
ವ್ಯವಸ್ಥೆಗಳೂ ರೂಪುಗೊಂಡವು.

ಇವೆರಡೂ ಡಿಜಿಟಲ್ ಲೈಬ್ರರಿಗಳಲ್ಲಿ ಲಭ್ಯವಿದ್ದವು ಬಹುತೇಕ ಹಳೆಯ ಪುಸ್ತಕಗಳು ಮಾತ್ರ
(ಕಾಪಿರೈಟ್ ಇನ್ನೂ ಚಾಲ್ತಿಯಲ್ಲಿರುವ ಕೆಲ ಪುಸ್ತಕಗಳೂ ಅಲ್ಲಿದ್ದದ್ದು ಬೇರೆ ವಿಷಯ).
ಅವನ್ನೆಲ್ಲ ಓದಿ ಮುಗಿಯುವಷ್ಟರಲ್ಲಿ ಹೊಸ ಪುಸ್ತಕಗಳ ಇ-ಆವೃತ್ತಿ ಏಕಿಲ್ಲ ಎನ್ನುವ ಪ್ರಶ್ನೆ
ಬಂತು. ಪ್ರಕಾಶಕರ ಅನುಮತಿಯಿಲ್ಲದೆ ಹೊಸ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಹಂಚಿಕೊಂಡ
ಘಟನೆಗಳೂ ನಡೆಯುವಮಟ್ಟಿಗೆ ಓದುಗರ ಆಸಕ್ತಿ ಕಾಣಿಸಿತು.

ಕನ್ನಡ ಪುಸ್ತಕಗಳು ಪಿಡಿಎಫ್ ರೂಪದಲ್ಲಿ ಸಿಕ್ಕಿದ್ದೇನೋ ಸರಿ, ಆದರೆ ಪಿಡಿಎಫ್ ಕಡತಗಳನ್ನು
ಎಲ್ಲ ಸಾಧನಗಳಲ್ಲೂ ಸರಾಗವಾಗಿ ಓದಲು ಸಾಧ್ಯವಾಗುತ್ತಿರಲಿಲ್ಲ. ಮೊಬೈಲಿನ ಪುಟ್ಟ ಪರದೆಯಲ್ಲಿ
ದೊಡ್ಡಗಾತ್ರದ ಪುಸ್ತಕದ ಪುಟಗಳನ್ನು ಓದುವುದು ಹಾಗಿರಲಿ, ಸರಿಯಾಗಿ ನೋಡುವುದೇ
ಕಷ್ಟವೆನಿಸುತ್ತಿತ್ತು. ಪರದೆಯ ಗಾತ್ರಕ್ಕೆ ತಕ್ಕಷ್ಟು ಸಾಲುಗಳನ್ನು ಮಾತ್ರವೇ ಪ್ರದರ್ಶಿಸುವ
ಇ-ಪುಸ್ತಕಗಳು ಕನ್ನಡಕ್ಕೂ ಬಂದಿದ್ದು ಈ ಪರಿಸ್ಥಿತಿಯಲ್ಲಿ. ಕನ್ನಡದ ಎಷ್ಟೋ ಓದುಗರಿಗೆ
ಇ-ಪುಸ್ತಕದ ಪರಿಚಯವಾಗುವ ವೇಳೆಗಾಗಲೇ ಇ-ಪುಸ್ತಕ ಒದಗಿಸುವ ಹಲವು ಸಂಸ್ಥೆಗಳು ತಮ್ಮ ಕೆಲಸ
ಶುರುಮಾಡಿದ್ದವು.

ಇ-ಪುಸ್ತಕದ ಸಾಧ್ಯತೆಗಳ ಅರಿವು ಹೆಚ್ಚಿದಂತೆ ಓದುಗರಲ್ಲಿ ಅವುಗಳನ್ನು ಕುರಿತ ಆಸಕ್ತಿ
ಇನ್ನಷ್ಟು ಹೆಚ್ಚಿತು. ಗೂಗಲ್‌ನಲ್ಲಿ ಕನ್ನಡ ಇ-ಪುಸ್ತಕಗಳನ್ನು ಹುಡುಕುವವರ ಸಂಖ್ಯೆ
ಇದಕ್ಕೊಂದು ನಿದರ್ಶನ ಎಂದು ಸಕ್ರಿಯ ಓದುಗ-ಬರಹಗಾರ ವಿಕಾಸ ಹೆಗಡೆ ಹೇಳುತ್ತಾರೆ. ಕನ್ನಡದ
ಇ-ಪುಸ್ತಕಗಳ ಬಗ್ಗೆ ಅವರ ಬ್ಲಾಗಿನಲ್ಲಿ ಬರೆದ ಲೇಖನವನ್ನು ಇಪ್ಪತ್ತೈದು ಸಾವಿರಕ್ಕೂ ಹೆಚ್ಚು
ಬಾರಿ ಓದಲಾಗಿದೆಯಂತೆ!

*ಕೊರತೆ ತಂತ್ರಜ್ಞಾನದ್ದಲ್ಲ, ಆಸಕ್ತಿ-ಪ್ರೋತ್ಸಾಹಗಳದ್ದು!*
ಕೆಲವರ್ಷಗಳ ಹಿಂದಿನ ಕತೆ. ಮೊದಲಿಗೆ ಕಂಪ್ಯೂಟರಿನಲ್ಲಿ, ಆನಂತರ ಮೊಬೈಲ್ ಫೋನುಗಳಲ್ಲಿ ಕನ್ನಡ
ಅಕ್ಷರಗಳನ್ನು ಮೂಡಿಸುವುದೇ ಆಗಿನ ಮಟ್ಟಿಗೆ ದೊಡ್ಡ ಸವಾಲಾಗಿತ್ತು. ಯುನಿಕೋಡ್ ಬೆಂಬಲವಿಲ್ಲದ
ಸಾಧನಗಳಿಂದಾಗಿ ಸ್ಥಳೀಯ ಭಾಷೆಗಳ ಸಾಧ್ಯತೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು
ಕಷ್ಟಸಾಧ್ಯವಾಗಿದ್ದ ಸನ್ನಿವೇಶ ಅದು.

ಆದರೆ ಈಗ ಪರಿಸ್ಥಿತಿ ಗಮನಾರ್ಹವಾಗಿ ಬದಲಾಗಿದೆ. ಡಿಜಿಟಲ್ ಲೋಕದಲ್ಲಿ ಕನ್ನಡ ಬಳಸಲು ಇದ್ದ
ಬಹುತೇಕ ಎಲ್ಲ ತಾಂತ್ರಿಕ ತೊಡಕುಗಳೂ ನಿವಾರಣೆಯಾಗಿವೆ. ಇದರ ಪರಿಣಾಮವಾಗಿ
ಕಂಪ್ಯೂಟರಿನಲ್ಲಿ-ಮೊಬೈಲುಗಳಲ್ಲಿ ದೊರಕುತ್ತಿರುವ ಕನ್ನಡಕ್ಕೆ ಸಂಬಂಧಪಟ್ಟ ಸೌಲಭ್ಯಗಳೂ
ಹೆಚ್ಚುತ್ತಿವೆ.

ಇಂತಹ ಸೌಲಭ್ಯಗಳ ಪೈಕಿ ಕನ್ನಡದ ಇ-ಪುಸ್ತಕಗಳಿಗೂ ಮಹತ್ವದ ಸ್ಥಾನವಿದೆ. ತಮ್ಮ ಜಾಲತಾಣ ಅಥವಾ
ಮೊಬೈಲ್ ಆಪ್‌ಗಳ ಮೂಲಕ ಇ-ಪುಸ್ತಕಗಳನ್ನು ಓದುಗರಿಗೆ ತಲುಪಿಸುತ್ತಿರುವ ಹಲವು ಸಣ್ಣ-ದೊಡ್ಡ
ಸಂಸ್ಥೆಗಳು ಇದೀಗ ಸಕ್ರಿಯವಾಗಿವೆ. ಇಂತಹ ಸಂಸ್ಥೆಗಳ ಮೂಲಕ ಲಭ್ಯವಿರುವ ಕನ್ನಡ
ಇ-ಪುಸ್ತಕಗಳಲ್ಲಿ ನಾವು ಮೂರು ವಿಧಗಳನ್ನು ಗುರುತಿಸಬಹುದು: ಉಚಿತವಾಗಿ ದೊರಕುವ ಪುಸ್ತಕಗಳು,
ಬಾಡಿಗೆಗೆ ದೊರಕುವವು ಹಾಗೂ ಖರೀದಿಗೆ ದೊರಕುವವು.

ಈ ಪೈಕಿ ಬಾಡಿಗೆಗೆ ಪಡೆದ ಪುಸ್ತಕಗಳನ್ನು ನಿರ್ದಿಷ್ಟ ಅವಧಿಯವರೆಗೆ ಮಾತ್ರ ನಾವು ನೋಡಬಹುದು;
ಉಳಿದೆರಡು ವಿಧದ ಪುಸ್ತಕಗಳನ್ನು ಯಾವಾಗ ಬೇಕಾದರೂ ಓದಿಕೊಳ್ಳಬಹುದು. ನಮಗೆ ಪುಸ್ತಕ
ಕೊಟ್ಟಿರುವ ಸಂಸ್ಥೆಯ ಜಾಲತಾಣ ಅಥವಾ ಆಪ್ ಮೂಲಕವಷ್ಟೇ ಓದಬಹುದು, ಡೌನ್‌ಲೋಡ್
ಮಾಡಿಕೊಳ್ಳುವುದು - ಇತರರೊಡನೆ ಹಂಚಿಕೊಳ್ಳುವುದು - ಮುದ್ರಿಸುವುದು ಸಾಧ್ಯವಿಲ್ಲ
ಎನ್ನುವುದಷ್ಟು ನಿರ್ಬಂಧಗಳು.

ಉಚಿತ ಪುಸ್ತಕಗಳನ್ನು ಜನ ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿದ್ದರೂ ಹಣ ಕೊಟ್ಟು ಅವನ್ನು
ಬಾಡಿಗೆಗೆ ಪಡೆಯುವ - ಖರೀದಿಸುವ ಅಭ್ಯಾಸ ಹೆಚ್ಚು ವ್ಯಾಪಕವಾಗಿಲ್ಲ ಎನ್ನುವುದು ಈ
ಕ್ಷೇತ್ರದಲ್ಲಿ ಕೇಳಸಿಗುತ್ತಿರುವ ಸಾಮಾನ್ಯ ಅಭಿಪ್ರಾಯ. ಈ ನಡವಳಿಕೆಯ ಡಿಜಿಟಲ್ ರೂಪದಲ್ಲಿ
ಸಿಗುವುದೆಲ್ಲ ಉಚಿತವಾಗಿರಬೇಕು ಎನ್ನುವ ಮನೋಭಾವವೂ ಇರಬಹುದೇನೋ.

ಭಾರತೀಯ ಭಾಷೆಗಳಲ್ಲಿ ಇ-ಪುಸ್ತಕಗಳನ್ನು ಒದಗಿಸುವ 'ಕೈ ಬುಕ್ಸ್' ಸಂಸ್ಥೆ ನಡೆಸುತ್ತಿರುವ
ದರ್ಶನ್‌ ಅವರಿಗೆ ಕರೆಮಾಡಿದ ಗ್ರಾಹಕರೊಬ್ಬರು "ಇ-ಪುಸ್ತಕಕ್ಕೆ ದುಡ್ಡು ಯಾಕೆ ಕೊಡಬೇಕು?"
ಎಂದು ಕೇಳಿದ್ದರಂತೆ! ಸದ್ಯದ ಸನ್ನಿವೇಶದಲ್ಲಿ ಕನ್ನಡದ ಇ-ಪುಸ್ತಕ ಮಾರಿ ಲಾಭದಾಯಕ ಉದ್ಯಮ
ನಡೆಸುವಂತಹ ಪರಿಸ್ಥಿತಿ ಇಲ್ಲ ಎಂದು ದರ್ಶನ್ ಹೇಳುತ್ತಾರೆ. ಈ ಕ್ಷೇತ್ರದಲ್ಲಿ
ತೊಡಗಿಸಿಕೊಂಡಿರುವವರ ಪೈಕಿ ಅನೇಕರು ತಮ್ಮ 'ಪ್ಯಾಶನ್'ನಿಂದಾಗಿಯೇ ಕೆಲಸಮಾಡುತ್ತಿದ್ದಾರೆ
ಎನ್ನುವುದು ಅವರ ಅಭಿಪ್ರಾಯ.

ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಇ-ಪುಸ್ತಕ, ಸುದ್ದಿ ಹಾಗೂ ಲೇಖನಗಳನ್ನು
ಒದಗಿಸುತ್ತಿರುವ ಇನ್ನೊಂದು ಸಂಸ್ಥೆ ಡೇಲಿಹಂಟ್. ನೂರಕ್ಕೂ ಹೆಚ್ಚು ಪ್ರಕಾಶಕರ ಹತ್ತು
ಸಾವಿರಕ್ಕೂ ಹೆಚ್ಚು ಇ-ಪುಸ್ತಕಗಳು ಡೇಲಿಹಂಟ್ ಮೂಲಕ ಲಭ್ಯವಿವೆ. ಪ್ರಕಾಶನ ಕ್ಷೇತ್ರದ ದೊಡ್ಡ
ಹೆಸರುಗಳನ್ನು ಇ-ಪುಸ್ತಕ ಲೋಕದತ್ತ ಕರೆತಂದ ಡೇಲಿಹಂಟ್‌ನ ಮೊಬೈಲ್ ಆಪ್ ಸಾಕಷ್ಟು ಜನಪ್ರಿಯತೆ
ಗಳಿಸಿದೆ. ಅದರ ಮೂಲಕ ಓದುಗರು ಸುಮಾರು ಹದಿನಾಲ್ಕು ಲಕ್ಷಕ್ಕಿಂತ ಹೆಚ್ಚು ಪುಸ್ತಕಗಳನ್ನು
ಈವರೆಗೆ ಪಡೆದುಕೊಂಡಿದ್ದಾರಂತೆ (ಈ ಪೈಕಿ ಸುಮಾರು ಶೇ. ೭೫ರಷ್ಟು ಉಚಿತ ಪುಸ್ತಕಗಳು).
ಪುಸ್ತಕಗಳನ್ನು ಇ-ಮಾಧ್ಯಮದಲ್ಲೂ ಓದಬಹುದು ಎಂದು ಹೆಚ್ಚುಹೆಚ್ಚು ಜನರ ಅನುಭವಕ್ಕೆ ಬಂದಂತೆ ಈ
ಮಾರುಕಟ್ಟೆ ಇನ್ನಷ್ಟು ಬೆಳೆಯುತ್ತದೆ ಎನ್ನುವ ವಿಶ್ವಾಸ ಈ ಸಂಸ್ಥೆಯ ಪ್ರತಿನಿಧಿ ವೆಂಕಟೇಶ್
ಅವರದು.

*ಡೇಲಿಹಂಟ್‌ನಲ್ಲಿ ಇಜ್ಞಾನದ ಪ್ರಕಟಣೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ*
<http://ebooks.newshunt.com/Ebooks/kannada/wapstoreejnanapubkannadaoffdeck/l-kannada-col-wapstoreejnanapubkannadaoffdeck-rd-f?referrerId=kannadaejnanapub12042016_2333>

ಕಿಂಡಲ್ ಹಾಗೂ ಕೋಬೋದಂತಹ ಸೇವೆಗಳ ಹಿಂದಿರುವ ಬಹುರಾಷ್ಟ್ರೀಯ ಸಂಸ್ಥೆಗಳು ಕನ್ನಡದ
ಪುಸ್ತಕಗಳನ್ನೂ ಒದಗಿಸಲು ಪ್ರಾರಂಭಿಸಿದರೆ ಅದು ಇ-ಪುಸ್ತಕದ ಬಗ್ಗೆ ಓದುಗರಲ್ಲಿ ಇನ್ನಷ್ಟು
ಅರಿವು ಮೂಡಲು ಸಹಕಾರಿಯಾಗಬಹುದು, ನಿಜ. ಆದರೆ ಸದ್ಯ ಸಕ್ರಿಯರಾಗಿರುವ ಸಣ್ಣ ಸಂಸ್ಥೆಗಳು
ಅವುಗಳ ಸ್ಪರ್ಧೆ ಎದುರಿಸುವುದು ಕಷ್ಟವಾದರೆ ಮಾರುಕಟ್ಟೆಯ ವೈವಿಧ್ಯ ಕಡಿಮೆಯಾಗಲಿದೆ
ಎನ್ನುವುದು ಕೂಡ ಸತ್ಯವೇ. ಅದೇನೇ ಆದರೂ ಕನ್ನಡದ ಓದುಗರು ಪುಸ್ತಕಗಳನ್ನು ಖರೀದಿಸಿ ಓದುವ
ಅಭ್ಯಾಸವನ್ನು ಬೆಳೆಸಿಕೊಳ್ಳಬೇಕಿರುವುದಂತೂ ಈ ಉದ್ಯಮದ ಒಟ್ಟಾರೆ ಬೆಳವಣಿಗೆಗೆ
ಅತ್ಯಗತ್ಯವಾಗಿ ಬೇಕಿರುವ ಸಂಗತಿ!

*ಪ್ರಕಾಶಕರಿಗೆ ಹೊಸ ಅವಕಾಶ*
ಮುದ್ರಿತ ಪುಸ್ತಕಗಳ ಮಾರುಕಟ್ಟೆಗೆ ಹೋಲಿಸಿದರೆ ಕನ್ನಡದ ಇ-ಪುಸ್ತಕಗಳ ಮಾರುಕಟ್ಟೆ,
ಸದ್ಯಕ್ಕಂತೂ, ಬಹಳ ಸಣ್ಣದು. ಆದರೆ ಇದು ಪ್ರಕಾಶಕರ ಮಟ್ಟಿಗೆ ನಿಜಕ್ಕೂ ಒಂದು ಒಳ್ಳೆಯ
ಅವಕಾಶ, ಮುದ್ರಣ-ಸಾಗಾಣಿಕೆಗಳ ದುಬಾರಿ ವೆಚ್ಚವಿಲ್ಲದೆ ಹೆಚ್ಚಿನ ಸಂಖ್ಯೆಯ ಓದುಗರನ್ನು
ತಲುಪುವ ಹೊಸ ದಾರಿ.

ಇ-ಪುಸ್ತಕಗಳು ಮುದ್ರಿತ ಪುಸ್ತಕಗಳಿಗೆ ಪರ್ಯಾಯವಾಗಿ ಬೆಳೆಯಲು ಸಾಕಷ್ಟು ಸಮಯ ಬೇಕಾಗಬಹುದು,
ಅಥವಾ ಅದು ಎಂದಿಗೂ ಸಾಧ್ಯವಾಗದೆಯೂ ಇರಬಹುದು. ಹಾಗಾಗಿ ಪ್ರಕಾಶಕರು ಇದನ್ನು ತಮ್ಮ ಮುಖ್ಯ
ವಹಿವಾಟಿನ ಪ್ರತಿಸ್ಪರ್ಧಿಯೆಂದು ಭಾವಿಸದೆ ಅದಕ್ಕೆ ಪೂರಕವೆಂದು ಭಾವಿಸಿ ಮುಂದುವರೆಯುವುದು
ಒಳ್ಳೆಯದು. ಸರಿಸುಮಾರು ಎಲ್ಲರ ಕೈಯಲ್ಲೂ ಇರುವ ಮೊಬೈಲಿನಲ್ಲೇ ಪುಸ್ತಕಗಳು ದೊರಕುವಂತಾದರೆ
ಹೊಸ ಓದುಗರು ಸೃಷ್ಟಿಯಾಗುತ್ತಿಲ್ಲ ಎಂಬ ಆರೋಪವನ್ನೂ ಕಡಿಮೆಮಾಡಲು ಪ್ರಯತ್ನಿಸಬಹುದೋ ಏನೋ.
ಯಾರಿಗೆ ಗೊತ್ತು, ಇ-ಪುಸ್ತಕಗಳ ಮೂಲಕ ಪುಸ್ತಕದ ರುಚಿಹತ್ತಿಸಿಕೊಂಡ ಹೊಸ ಓದುಗರು ನಾಳೆ
ಮುದ್ರಿತ ಪುಸ್ತಕಗಳತ್ತಲೂ ಹೊರಳಬಹುದಲ್ಲ!

ದೊಡ್ಡ ಪ್ರಕಾಶಕರಿಗಷ್ಟೇ ಅಲ್ಲ, ತಮ್ಮ ಪುಸ್ತಕಗಳನ್ನು ಪ್ರಕಟಿಸಬೇಕೆಂದು ಆಸೆಪಡುವ ಹೊಸ
ಲೇಖಕರಿಗೂ ಇ-ಪುಸ್ತಕಗಳು ಹೊಸ ದಾರಿ ತೋರಿಸಬಲ್ಲವು. ಸಾವಿರ ಪ್ರತಿ ಮುದ್ರಿಸಿ ಅದನ್ನೇನು
ಮಾಡುವುದು ಎಂದು ಚಿಂತಿಸುವ ಬದಲು ಡಿಜಿಟಲ್ ರೂಪದಲ್ಲಿ ತಮ್ಮ ಪುಸ್ತಕಗಳನ್ನು
ಬಿಡುಗಡೆಮಾಡುವ, ಅವನ್ನು ಮಾರಿ ಕೊಂಚ ಹಣವನ್ನೂ ಸಂಪಾದಿಸುವ ಅವಕಾಶವನ್ನು ಇ-ಪುಸ್ತಕಗಳು
ಅವರಿಗೆ ನೀಡುತ್ತವೆ.

ಸದ್ಯದ ಪರಿಸ್ಥಿತಿಯಲ್ಲಿ ತಮ್ಮ ಕನ್ನಡ ಪುಸ್ತಕಗಳನ್ನು ಇ-ಬುಕ್ ರೂಪದಲ್ಲೂ
ಪ್ರಕಟಿಸುತ್ತಿರುವವರು ಸೀಮಿತ ಸಂಖ್ಯೆಯ ಪ್ರಕಾಶಕರಷ್ಟೇ. "ಕನ್ನಡ ಇ-ಪುಸ್ತಕಗಳ ಮಾರುಕಟ್ಟೆ
ಸದ್ಯ ಸಣ್ಣದೇ. ಆದರೆ ಮುಂದಿನ ದಿನಗಳಲ್ಲಿ ಇದು ದೊಡ್ಡದಾಗಿ ಬೆಳೆಯುವ ಎಲ್ಲ ಸಾಧ್ಯತೆಗಳೂ
ಇದೆ. ಹಾಗಾಗಿ ನಾವು ನಮ್ಮ ಹಲವು ಕೃತಿಗಳನ್ನು ಇ-ರೂಪದಲ್ಲೂ ಪ್ರಕಟಿಸುತ್ತಿದ್ದೇವೆ, ಇನ್ನು
ಮುಂದೆಯೂ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತೇವೆ" ಎಂದು ನವಕರ್ನಾಟಕ ಪ್ರಕಾಶನದ
ವ್ಯವಸ್ಥಾಪಕರಾದ ಎ. ಆರ್. ಉಡುಪ ಹೇಳುತ್ತಾರೆ.

ಕನ್ನಡದಲ್ಲೂ ಇ-ಪುಸ್ತಕಗಳನ್ನು ರೂಪಿಸಬಹುದೆಂಬ ಪರಿಕಲ್ಪನೆಯನ್ನು ಪ್ರಾರಂಭದ ದಿನಗಳಿಂದಲೂ
ಬೆಂಬಲಿಸುತ್ತಿರುವವರು ಲೇಖಕ-ಪ್ರಕಾಶಕ ವಸುಧೇಂದ್ರ. ಕಿಂಡಲ್‌ನಲ್ಲೂ ಬಿಡುಗಡೆಯಾದ ಅವರ ಹೊಸ
ಪುಸ್ತಕ '೫ ಪೈಸೆ ವರದಕ್ಷಿಣೆ'ಯನ್ನು ಅಮೆಜಾನ್ ಸಂಸ್ಥೆ ಕನ್ನಡ ಭಾಷೆಗೆ ಬೆಂಬಲವಿಲ್ಲವೆಂದು
ಹೇಳಿ ಅಳಿಸಿಹಾಕಿದ್ದು, ಆ ಘಟನೆ ಕನ್ನಡದ ಇ-ಪುಸ್ತಕಗಳ ಬಗ್ಗೆ ಹೊಸದೊಂದು ಚರ್ಚೆಗೆ
ನಾಂದಿಯಾಗಿದ್ದು ಈ ಕ್ಷೇತ್ರದಲ್ಲಿ ವಸುಧೇಂದ್ರರ ಇತ್ತೀಚಿನ ಅನುಭವ.

*"ನಾವು ಇಷ್ಟ ಪಡಲಿ ಅಥವಾ ಬಿಡಲಿ, ಡಿಜಿಟಲ್‌ ಲೋಕ ಬೆಳೆಯುತ್ತಿದೆ. ಎಲ್ಲಾ ರಂಗದಲ್ಲೂ ಅದು
ತನ್ನ ಛಾಪು ಮೂಡಿಸಿದಂತೆ, ನಿಧಾನವಾಗಿಯಾದರೂ ಕನ್ನಡದ ಪುಸ್ತಕೋದ್ಯಮದತ್ತಲೂ ಬರುತ್ತಿದೆ.
ತಂತ್ರಜ್ಞಾನವು ಮಾನವನ ಒಳಿತಿಗಾಗಿಯೇ ನಿರ್ಮಾಣಗೊಂಡರೂ, ಅವನ ಸ್ವಾರ್ಥದಿಂದಾಗಿ ಕೆಲವೊಮ್ಮೆ
ದುರ್ಬಳಕೆಯಾಗುತ್ತದೆ ಎಂದು ನಂಬಿದವನು ನಾನು. ಆದ್ದರಿಂದ ಬೆಂಕಿಯಂತಹ ತಂತ್ರಜ್ಞಾನವನ್ನು
ಕೈಸುಡದಂತೆ ಬಳಸಿಕೊಂಡು ನಮ್ಮ ಆಹಾರ ಬೇಯಿಸಿಕೊಳ್ಳುವುದನ್ನು ನಾವು ಕರಗತ ಮಾಡಿಕೊಳ್ಳಬೇಕು."
- ವಸುಧೇಂದ್ರ, ಖ್ಯಾತ ಲೇಖಕರು - ಪ್ರಕಾಶಕರು*


"ಡಿಜಿಟಲ್‌ ಜಗತ್ತು ಪುಸ್ತಕೋದ್ಯಮಕ್ಕೆ ನೆರವಾಗುತ್ತದೆಯೇ ಹೊರತು, ಸ್ಪರ್ಧೆಯಾಗುವದಿಲ್ಲ.
 ವಾಸನೆ ಮತ್ತು ಸ್ಪರ್ಶವನ್ನು ಹೊಂದಿದ ನಮ್ಮ ಕಾಗದದ ಪುಸ್ತಕಗಳೇ ಓದುಗನಿಗೆ ಯಾವಾಗಲೂ
ಅಚ್ಚುಮೆಚ್ಚು. ಆದರೆ ಪುಸ್ತಕ ಶೇಖರಣೆ, ಸಾಗಣೆ, ಮಾರಾಟ, ಖರ್ಚು - ಇತ್ಯಾದಿಗಳನ್ನು
ಗಮನಿಸಿದರೆ ಡಿಜಿಟಲ್‌ ಲೋಕ ಉತ್ತಮವೆನ್ನಿಸುತ್ತದೆ. ಯಾವತ್ತಿನಂತೆ ನಮ್ಮ ಕಾಗದದ ಪುಸ್ತಕದ
ಜೊತೆಗೆ, ಡಿಜಿಟಲ್‌ ಪುಸ್ತಕವೂ ಓದುಗರಿಗೆ ಲಭ್ಯವಾಗುವ ಪರಿಪಾಠವನ್ನು ಬೆಳೆಸೋಣ" ಎನ್ನುವುದು
ವಸುಧೇಂದ್ರರ ಅಭಿಪ್ರಾಯ. ತಮ್ಮ ಪ್ರಕಾಶನದ ಎಲ್ಲಾ ಪುಸ್ತಕಗಳನ್ನೂ ಕಿಂಡಲ್‌ ಮತ್ತಿತರ
ಡಿಜಿಟಲ್‌ ಸಾಧನಗಳಲ್ಲಿ ಲಭ್ಯವಾಗುವಂತೆ ಮಾಡುವ ಆಲೋಚನೆ ಅವರದು. ಪ್ರಾರಂಭದ ದಿನಗಳಲ್ಲಿ ಬಲು
ದುಬಾರಿಯೆಂದು ಕರೆಸಿಕೊಂಡ ಮೊಬೈಲ್ ದೂರವಾಣಿ ಇಂದು ಸರ್ವೇಸಾಮಾನ್ಯವಾಗಿರುವಂತೆ ಮುಂದೆ
ಇ-ಪುಸ್ತಕಗಳೂ ಹೆಚ್ಚಿನ ಜನಪ್ರಿಯತೆ ಗಳಿಸಿಕೊಳ್ಳಲಿವೆ ಎಂಬ ಆಶಾಭಾವನೆಯನ್ನು ಅವರು
ವ್ಯಕ್ತಪಡಿಸುತ್ತಾರೆ.

ಇನ್ನಷ್ಟು ಪ್ರಕಾಶಕರು ತಮ್ಮ ಪ್ರಕಟಣೆಗಳನ್ನು ಇ-ರೂಪದಲ್ಲಿ ಪ್ರಕಟಿಸುವುದು ನಿಜಕ್ಕೂ ಕನ್ನಡ
ಪುಸ್ತಕೋದ್ಯಮದ ಬೆಳವಣಿಗೆಗೆ ನೆರವಾಗಬಲ್ಲದು. ಈ ಆಶಯ ಹೊಸ ತಲೆಮಾರಿನ ಕನ್ನಡ ಓದುಗರದೂ ಹೌದು
ಎನ್ನುವುದನ್ನು ಈಚೆಗೆ ಸಮಾಜಜಾಲಗಳಲ್ಲಿ ನಡೆಯುತ್ತಿರುವ ಚರ್ಚೆಗಳು ತೋರಿಸಿಕೊಟ್ಟಿವೆ.

*ಸರಕಾರ ಮತ್ತು ಇ-ಪುಸ್ತಕ*
ಇ-ರೂಪದಲ್ಲಿ ಲಭ್ಯವಿರುವ ಕನ್ನಡ ಪುಸ್ತಕಗಳ ಸಂಖ್ಯೆ ಕಡಿಮೆ ಎನ್ನುವುದು ಓದುಗರ ದೂರು, ಇರುವ
ಪುಸ್ತಕಗಳೇ ಮಾರಾಟವಾಗುತ್ತಿಲ್ಲದ ಪರಿಸ್ಥಿತಿಯಲ್ಲಿ ಹೊಸ ಪುಸ್ತಕಗಳನ್ನು ತರುವುದೆಲ್ಲಿಂದ
ಎನ್ನುವುದು ತಂತ್ರಜ್ಞರ ಕೊರಗು, ಉತ್ತಮ ಆದಾಯ ಕಾಣದಿದ್ದರೆ ಹೊಸ ಪುಸ್ತಕಗಳನ್ನು ಇ-ರೂಪಕ್ಕೆ
ಕೊಡುವುದು ಹೇಗೆ ಎನ್ನುವುದು ಪ್ರಕಾಶಕರ ಪ್ರಶ್ನೆ.

ಇದೊಂದು ವಿಚಿತ್ರ ಪರಿಸ್ಥಿತಿ: ಹೆಚ್ಚಿನ ಓದುಗರು ಸೃಷ್ಟಿಯಾಗದೆ ಹೊಸ ಪುಸ್ತಕಗಳು
ಬರುವುದಿಲ್ಲ, ಪುಸ್ತಕಗಳು ಹೆಚ್ಚಾಗದೆ ಹೊಸ ಓದುಗರು ಸಿಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು
ಸುಧಾರಿಸಲು ಲಾಭಾಪೇಕ್ಷೆಯಿಲ್ಲದ ಸಂಸ್ಥೆಗಳಿಂದ ಮಾತ್ರ ಸಾಧ್ಯ. ಕನ್ನಡದಲ್ಲಿ ಅಂತಹುದೊಂದು
ಕೆಲಸ ನಡೆದಿದೆ ಎನ್ನುವುದು ಹೆಮ್ಮೆಯ ಸಂಗತಿಯೇ ಎನ್ನಬೇಕು.

ಕನ್ನಡದ ಮಟ್ಟಿಗೆ ವಿಶಿಷ್ಟವೆನ್ನಬಹುದಾದ ಈ ಪ್ರಯತ್ನದ ಮುಂಚೂಣಿಯಲ್ಲಿರುವುದು ಕರ್ನಾಟಕ
ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಹೆಸರಾಂತ ಲೇಖಕರ ೪೫೦ಕ್ಕೂ ಹೆಚ್ಚಿನ ಕೃತಿಗಳನ್ನು
ಇಲಾಖೆ 'ಡೇಲಿಹಂಟ್' ಆಪ್ ಮೂಲಕ ಸಾರ್ವಜನಿಕರ ಉಚಿತ ಬಳಕೆಗಾಗಿ ನೀಡಿದೆ. ಡೇಲಿಹಂಟ್
ಬಳಕೆದಾರರು ಈ ಪುಸ್ತಕಗಳನ್ನು ಜನವರಿ ೨೦೧೫ರಿಂದ ಮಾರ್ಚ್ ೨೦೧೬ರ ನಡುವಿನ ಅವಧಿಯಲ್ಲಿ ಮೂರು
ಲಕ್ಷಕ್ಕೂ ಹೆಚ್ಚು ಬಾರಿ ಪಡೆದುಕೊಂಡಿದ್ದಾರೆ.

*"ಆಧುನಿಕ ಬೆಳವಣಿಗೆಗಳು ಜೀವನವನ್ನು ಯಾಂತ್ರಿಕಗೊಳಿಸಿವೆ. ಅವು ನಮ್ಮ ರುಚಿ, ಅಭಿರುಚಿ,
ಹವ್ಯಾಸ ಎಲ್ಲವನ್ನೂ ಬದಲಿಸುತ್ತಲೇ ಇರುತ್ತವೆ. ಯಾಂತ್ರೀಕರಣ ನಮ್ಮ ಸಾಂಸ್ಕೃತಿಕ ಬದುಕನ್ನು
ಸಹ ಬಿಟ್ಟಿಲ್ಲ. ಅದನ್ನು ನಿಯಂತ್ರಿಸುವುದಾಗಲೀ ಹೀಗಳೆಯುವುದಾಗಲೀ ಮೂರ್ಖತನವಾಗುತ್ತದೆ.
ಆಧುನಿಕ ಸಾಧ್ಯತೆಗಳನ್ನು ಬಳಸಿಕೊಳ್ಳುವ ಉದ್ದೇಶದಿಂದಲೇ ಕನ್ನಡ ಭಾಷೆಯ ಮೌಲಿಕ ಕೃತಿಗಳನ್ನು
ಖಾಸಗಿ ಸಹಕಾರದಿಂದ ಸಾರ್ವಜನಿಕರ ಉಚಿತ ಬಳಕೆಗೆ ಒದಗಿಸಿದ್ದೇವೆ." - ಕೆ. ಎ. ದಯಾನಂದ,
ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ  *


"ನಮ್ಮ ಭಾಷೆ ಬೆಳೆಯಬೇಕೆಂದರೆ ಅದು ಸಮಕಾಲೀನ ತಂತ್ರಜ್ಞಾನದೊಂದಿಗೆ ಸ್ಪಂದಿಸಬೇಕು, ಅದನ್ನು
ಮೈಗೂಡಿಸಿಕೊಳ್ಳುತ್ತಲೇ ಹೋಗಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ತಂತ್ರಜ್ಞಾನದ
ಬೆಳವಣಿಗೆಯ ಬಗ್ಗೆ ಆದ್ಯತೆ ನೀಡುತ್ತಿರುವುದು ಇದೇ ಕಾರಣದಿಂದ. ವಿಶ್ವದೆಲ್ಲೆಡೆಯ
ಓದುಗರನ್ನು ತಲುಪುವ ಹಾಗೂ ತಂತ್ರಜ್ಞಾನದ ಹೊಸ ಸಾಧನಗಳ ಮೂಲಕವೂ ಕನ್ನಡ ಪುಸ್ತಕಗಳನ್ನು
ಒದಗಿಸುವ ಉದ್ದೇಶ ನಮ್ಮದು" ಎಂದು ಇಲಾಖೆಯ ನಿರ್ದೇಶಕರಾದ ಕೆ. ಎ. ದಯಾನಂದ ಹೇಳುತ್ತಾರೆ.
ಇದು ಕನ್ನಡ ಭಾಷೆಯ ಬೆಳವಣಿಗೆಗೆ ಆಧುನಿಕ ಸಾಧ್ಯತೆಗಳನ್ನು ಬಳಸುವ ದೃಷ್ಟಿಯಿಂದ ಗಮನಾರ್ಹ
ಎನ್ನುವುದು ಅವರ ಅನಿಸಿಕೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಈ ಪ್ರಯೋಗದ ಯಶಸ್ಸಿನಿಂದಾಗಿ ಸರಕಾರದ ಇನ್ನೂ ಕೆಲ
ಸಂಸ್ಥೆಗಳು ತಮ್ಮ ಪ್ರಕಟಣೆಗಳನ್ನು ಇ-ಪುಸ್ತಕ ರೂಪಕ್ಕೆ ತರಲು ಮುಂದಾಗಿವೆ. ಅಷ್ಟೇ ಅಲ್ಲ,
ಕನ್ನಡ ಪ್ರಕಟಣೆಗಳ ಇ-ಗ್ರಂಥಾಲಯವನ್ನು ರೂಪಿಸುವ ಯೋಜನೆಗೂ ಈ ವರ್ಷ ಬಜೆಟ್‌ನಲ್ಲಿ ಅನುಮತಿ
ದೊರೆತಿದೆ.

ಕನ್ನಡ ಪುಸ್ತಕಗಳು ಇ-ಅವತಾರವೆತ್ತಿ ಈಗಷ್ಟೆ ಕೆಲ ಸಮಯವಾಗಿದೆ. ನಾಲ್ಕೂ ನಿಟ್ಟಿನಿಂದ
ನಡೆಯುತ್ತಿರುವ ಇಷ್ಟೆಲ್ಲ ಪ್ರಯತ್ನಗಳು ಕನ್ನಡದ ಇ-ಪುಸ್ತಕ ಜಗತ್ತನ್ನು ಇನ್ನಷ್ಟು
ಸಮೃದ್ಧಗೊಳಿಸುವ ಸೂಚನೆ ಕಾಣುತ್ತಿದೆ. ಹಾಗೆಯೇ ಆಗಲಿ!

****

*ಇ-ಪುಸ್ತಕಗಳಿಗೆ ಇತ್ತಬನ್ನಿ!*
ಇ-ಪುಸ್ತಕಗಳನ್ನು ಒದಗಿಸುತ್ತಿರುವ ಕೆಲ ತಾಣಗಳ ಪಟ್ಟಿ ಇಲ್ಲಿದೆ. ಈ ತಾಣಗಳ, ಅಥವಾ ಅಲ್ಲಿ
ಲಭ್ಯವಿರುವ ಮೊಬೈಲ್ ಆಪ್‌ಗಳ ಮೂಲಕ ನಾವು ಕನ್ನಡದ ಇ-ಪುಸ್ತಕಗಳನ್ನು ಪಡೆದುಕೊಳ್ಳಬಹುದು.
ಗಮನಿಸಿ, ಈ ಪಟ್ಟಿ ಪ್ರಾತಿನಿಧಿಕ ಮಾತ್ರ.

ಡೇಲಿಹಂಟ್ <http://dailyhunt.in/> ಕೈ ಬುಕ್ಸ್ <http://kaibooks.in/> ಪುಸ್ತಕ
<http://pustaka.co.in/>ವಿವಿಧ್‌ಲಿಪಿ <http://vividlipi.com/>ಮೇರಾಲೈಬ್ರರಿ
<http://meralibrary.com/>ಗೂಗಲ್ ಬುಕ್ಸ್ <http://tinyurl.com/gbkan>ಡಿಜಿಟಲ್
ಲೈಬ್ರರಿ ಆಫ್ ಇಂಡಿಯಾ <http://dli.ernet.in/>ನ್ಯಾಶನಲ್ ಡಿಜಿಟಲ್ ಲೈಬ್ರರಿ
<https://ndl.iitkgp.ac.in/index.php>
*ಇನ್ನು ಕೆಲ ಪ್ರಯತ್ನಗಳು*

ಖ್ಯಾತ ಲೇಖಕ ನಿರಂಜನರ ೫೫ ಕೃತಿಗಳು ಈಗ ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಡಿಯಲ್ಲಿ
ಬಿಡುಗಡೆಯಾಗಿವೆ. ಈ ಪುಸ್ತಕಗಳು ವಿಕಿಪೀಡಿಯ ಬಳಗದ 'ವಿಕಿಸೋರ್ಸ್' ತಾಣದ ಮೂಲಕ ಮುಕ್ತ
ಬಳಕೆಗಾಗಿ ಲಭ್ಯವಾಗಲಿವೆ.ವಿಶ್ವವ್ಯಾಪಿ ಜಾಲದಲ್ಲಿ ಇ-ಪುಸ್ತಕಗಳನ್ನು ಪ್ರಕಟಿಸಲು
ಅನುವುಮಾಡಿಕೊಡುವ ಹಲವು ತಾಣಗಳಿವೆ. ಅಂತಹ ತಾಣಗಳಲ್ಲೊಂದು 'ಇಸ್ಸೂ <http://issuu.com/>'.
ಈ ತಾಣದಲ್ಲಿ ಕನ್ನಡದ ಹಲವು ಇ-ಪುಸ್ತಕಗಳು ಪ್ರಕಟವಾಗಿರುವುದು ಗಮನಾರ್ಹ. 'ಉಚಿತ ಪುಸ್ತಕ
ಸಂಸ್ಕೃತಿ'ಯ ಅಂಗವಾಗಿ ಪ್ರಕಟವಾದ 'ಕಂಪ್ಯೂಟರ್ ಮತ್ತು ಕನ್ನಡ
<http://learning.ejnana.com/2014/10/computer-kannada.html>' ಕೃತಿ ಹಾಗೂ
ಇಜ್ಞಾನ ಡಾಟ್ ಕಾಮ್ ಪ್ರಕಟಿಸಿದ ಹಲವು ಸಂಚಿಕೆಗಳನ್ನು [ಪರಿಸರ ಸಂಚಿಕೆ
<http://www.ejnana.com/p/blog-page_04.html>] ಇಲ್ಲಿ ಉದಾಹರಿಸಬಹುದು.
*೧೪ ಆಗಸ್ಟ್ ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ*

Hareeshkumar K
GHS HUSKURU
MALAVALLI TQ
MANDYA DT
MOB 9880328224

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to