http://m.prajavani.net/article/2016_11_13/451674
ನಾಗೇಶ್ ಅಜ್ಜನ ಪತ್ರ ಓದಿ *ಕನ್ನಡ ಓದಬಲ್ಲ ಕನ್ನಡಕದ ಕತೆ* 13 Nov, 2016 ನಾಗೇಶ ಹೆಗಡೆ <https://www.facebook.com/sharer/sharer.php?u=https%3A%2F%2Fgoo.gl%2Fh4Z0WM> <https://twitter.com/intent/tweet?text=%E0%B2%95%E0%B2%A8%E0%B3%8D%E0%B2%A8%E0%B2%A1+%E0%B2%93%E0%B2%A6%E0%B2%AC%E0%B2%B2%E0%B3%8D%E0%B2%B2+%E0%B2%95%E0%B2%A8%E0%B3%8D%E0%B2%A8%E0%B2%A1%E0%B2%95%E0%B2%A6+%E0%B2%95%E0%B2%A4%E0%B3%86+https%3A%2F%2Fgoo.gl%2Fh4Z0WM> <whatsapp://send?text=%E0%B2%95%E0%B2%A8%E0%B3%8D%E0%B2%A8%E0%B2%A1+%E0%B2%93%E0%B2%A6%E0%B2%AC%E0%B2%B2%E0%B3%8D%E0%B2%B2+%E0%B2%95%E0%B2%A8%E0%B3%8D%E0%B2%A8%E0%B2%A1%E0%B2%95%E0%B2%A6+%E0%B2%95%E0%B2%A4%E0%B3%86+-+%E0%B2%AA%E0%B3%8D%E0%B2%B0%E0%B2%9C%E0%B2%BE%E0%B2%B5%E0%B2%BE%E0%B2%A3%E0%B2%BF.++++https%3A%2F%2Fgoo.gl%2Fh4Z0WM> <https://plus.google.com/share?url=https%3A%2F%2Fgoo.gl%2Fh4Z0WM> <http://www.pinterest.com/pin/find/?url=https%3A%2F%2Fgoo.gl%2Fh4Z0WM> <http://www.linkedin.com/shareArticle?mini=true&title=%E0%B2%95%E0%B2%A8%E0%B3%8D%E0%B2%A8%E0%B2%A1+%E0%B2%93%E0%B2%A6%E0%B2%AC%E0%B2%B2%E0%B3%8D%E0%B2%B2+%E0%B2%95%E0%B2%A8%E0%B3%8D%E0%B2%A8%E0%B2%A1%E0%B2%95%E0%B2%A6+%E0%B2%95%E0%B2%A4%E0%B3%86+&url=https%3A%2F%2Fgoo.gl%2Fh4Z0WM> *ಪ್ರಿಯ ಮಗೂ,* ನನಗೆ ಗೊತ್ತು, ನೀನು ಈ ಪತ್ರವನ್ನು ಓದಲಾರೆ. ಎಂಥ ಕತೆ ನೋಡು! ‘ಕನ್ನಡ ಕನ್ನಡ’ ಎಂದು ಈ ನವೆಂಬರಿನಲ್ಲಿ ಎಲ್ಲರೂ ಭಜನೆ ಮಾಡುತ್ತಿರುತ್ತಾರೆ. ಕನ್ನಡವನ್ನು ಓದಲಾರದ ನಿನಗೆ ಈ ಪತ್ರವನ್ನು ನಿನ್ನ ಮಾತೃಭಾಷೆಯಲ್ಲೇ ಬರೆಯಬೇಕಾಗಿ ಬಂದಿದೆ. ನಿನ್ನ ಅಮ್ಮ ಅಥವಾ ಅಪ್ಪನಿಂದ ಇದನ್ನು ಓದಿಸು. ಅಥವಾ ಅವರಿಬ್ಬರಿಗೂ ಬಿಡುವಿಲ್ಲದಿದ್ದರೆ ಅಜ್ಜ ಅಥವಾ ಅಜ್ಜಿಯಿಂದ ಇದನ್ನು ಓದಿಸುತ್ತೀಯೆಂದು ಆಶಿಸುತ್ತೇನೆ. ಓಡಬೇಡ, ನಿಲ್ಲು ಮಗೂ. ಇದರಲ್ಲಿ ಒಂದು ರೋಚಕ ಕತೆಯಿದೆ. ಕೊನೆಯಲ್ಲಿ ನಿನ್ನದೇ ಒಂದು ಕತೆ ಇದೆ. ನನ್ನ ತಲೆಮಾರಿನ ಜನರು ಹೇಗೆ ನಿನಗೆ ಏನೆಲ್ಲವನ್ನೂ ಕೊಟ್ಟಿದ್ದಾರೆ ನೋಡು. ನಿನ್ನ ಕೈಯಲ್ಲಿ ಅಮ್ಮನ ಮೊಬೈಲ್ ಇದೆ. ಅದರಲ್ಲಿ ಎಷ್ಟೊಂದು ಬಗೆಯ ಗೇಮ್ಸ್ ಆಡ್ತೀಯ. ಅದರಲ್ಲೇ ಕ್ಯಾಲೆಂಡರು, ಗಡಿಯಾರ, ಅಲಾರ್ಮ್, ಲೆಕ್ಕ ಮಾಡುವ ಕ್ಯಾಲ್ಕುಲೇಟರ್, ಫೋನ್ ಬುಕ್, ಕ್ಯಾಮೆರಾ ಎಲ್ಲ ಇವೆ. ಎದುರಿಗೆ ಟೀವಿ ಇದೆ. ನೂರಾರು ಚಾನೆಲ್‌ಗಳಲ್ಲಿ ಮಾಯಾಪ್ರಪಂಚವಿದೆ. ಅಪ್ಪನ ಲ್ಯಾಪ್‌ಟಾಪ್‌ನಲ್ಲಿ ಕಾರ್ಟೂನು, ಲೈವ್‌ಬ್ಯಾಂಡ್ ಸ್ಟ್ರೀಮಿಂಗ್, ಸಂಗೀತ ಎಲ್ಲ ಇದೆ. ಬೇಕೆಂದಾಗ ಬೇಕಾದ ಸಿನೆಮಾ ನೋಡಬಹುದು. ಅಡುಗೆಮನೆಯ ಫ್ರಿಜ್‌ನಲ್ಲಿ ಅಂಟಾರ್ಕ್ಟಿಕದ ಹಿಮದ ಹಲ್ಲೆಗಳೂ ಕೂತಿವೆ. ಅಮ್ಮ ಚಿಟಿಕೆ ಹೊಡೆಯುವಷ್ಟರಲ್ಲಿ ಒಲೆಯ ಮೇಲೆ ಪುಟ್ಟ ನೀಲಿ ಜ್ವಾಲಾಮುಖಿಯನ್ನೂ ಸೃಷ್ಟಿಸುತ್ತಾಳೆ. ಟೂ ಮಿನಿಟ್ಸ್ – ನೂಡ್ಲ್ ರೆಡಿ! ನಾವು ಚಿಕ್ಕವರಿದ್ದಾಗ ಕನಸಿನಲ್ಲಿ ದೇವರು ಬಂದರೆ ಇವನ್ನೆಲ್ಲ ವರವಾಗಿ ಕೇಳಬಹುದೆಂಬ ಕಲ್ಪನೆ ನಮಗೆ ಇರಲಿಲ್ಲ. ಇಂಥಾದ್ದನ್ನೆಲ್ಲ ವರವಾಗಿ ಕೊಡಬಹುದೆಂಬ ಕಲ್ಪನೆ ಅವನಿಗೂ ಇರಲಿಲ್ಲ! ಭಕ್ತರಿಗೆ ಆತ ಬೇರೆ ಏನೇನೋ ಬೇಕುಬೇಕಾದ ವರ ಕೊಡುತ್ತಿದ್ದ. ಚಿರಂಜೀವಿಯಾಗು, ವಜ್ರಕಾಯನಾಗು, ಚಕ್ರವರ್ತಿಯಾಗು... ಹೀಗೆ. ಆದರೆ ಚಕ್ರವರ್ತಿ ಆದವನು ಕೂಡ ದೂರ ಎಲ್ಲಾದರೂ ಹೋಗಬೇಕೆಂದರೆ ಟಾರ್ ರಸ್ತೆ ಇರಲಿಲ್ಲ; ಏಸಿ ಕಾರು ಇರಲಿಲ್ಲ. ಕುದುರೆಯ ಮೇಲೋ ರಥದ ಮೇಲೊ ಮೈಕೈ ನಜ್ಜುಗುಜ್ಜು ಮಾಡಿಕೊಂಡು ಇಡೀ ದಿನ ಪ್ರಯಾಣ ಮಾಡಬೇಕಿತ್ತು. ಉರಿಸೆಕೆಯಲ್ಲಿ ಅಥವಾ ಮಳೆಗಾಲದಲ್ಲಿ ಹೊರಕ್ಕೆ ಹೋಗುವಂತೆ ಕೂಡ ಇರಲಿಲ್ಲ. ಕತ್ತಲಾದರೆ ದೊಂದಿ ಹಚ್ಚಿ ಸೊಳ್ಳೆ ಹೊಡೆಯುತ್ತ ಕೂರಬೇಕು. ಅರಮನೆಯೆಲ್ಲ ಕಮಟು ವಾಸನೆ, ಕರೀ ಮಸಿ. ಆಚಿನ ಊರಿಗೆ ವೈರಿ ದಂಡೆತ್ತಿ ಬಂದರೆ ಗೊತ್ತೂ ಆಗ್ತಾ ಇರಲಿಲ್ಲ. ಗಡಿರಕ್ಷಕರ ಜೊತೆ ಮಾತಾಡಲು ಫೋನ್ ಕೂಡ ಇರಲಿಲ್ಲ. ಸೈನ್ಯಕ್ಕೆ ಕಮಾಂಡ್ ಕೊಡಲು ಧ್ವನಿವರ್ಧಕ ಇರಲಿಲ್ಲ. ಯುದ್ಧದಲ್ಲಿ ಮಂಡಿಚಿಪ್ಪು ಕಿತ್ತು ಹೋದರೆ ಜೀವನವಿಡೀ ಕುಂಟಬೇಕಿತ್ತು. ವೈರಿ ದಾಳಿಗೆ ಜಗ್ಗದವನು ವೈರಾಣು ದಾಳಿಗೆ ಸಿಕ್ಕು ಪ್ಲೇಗು, ಸಿಡುಬಿನಿಂದ ಮಟಾಷ್ ಆಗುತ್ತಿದ್ದ. ಇನ್ನು ನನ್ನ ಹಾಗೆ ವಯಸ್ಸಾಗಿದ್ದರಂತೂ ಕೃತಕ ಹಲ್ಲು ಇರಲಿಲ್ಲ. ಉಂಡೆ ತಿನ್ನುವಂತಿಲ್ಲ! ಕಣ್ಣಿಗೆ ಕನ್ನಡಕ ಇರಲಿಲ್ಲ. ಧೂಮಕೇತು ಬಂತೆಂದು ಜ್ಯೋತಿಷಿ ಹೇಳಿದರೆ ಬೆದರಿ, ಯಾರದೋ ಮಕ್ಕಳನ್ನು ಬಲಿಕೊಟ್ಟು ಪಾಪನಾಶನ ಹೋಮಹವನ ಮಾಡಿಸಬಹುದಿತ್ತೆ ವಿನಾ ದೂರದರ್ಶಕದಲ್ಲಿ ಆ ಅಚ್ಚರಿಯನ್ನು ನೋಡಿ ಆನಂದಿಸುವ ಅದೃಷ್ಟ ಅವನಿಗಿರಲಿಲ್ಲ. ಆತನಿಗೆ ಸುರಿನಾಮ್ ಚೆರಿ, ಜಪಾನೀ ಸ್ಟ್ರಾಬೆರಿ ರುಚಿ ನೋಡುವ ಅದೃಷ್ಟ ಇರಲಿಲ್ಲ. ಅವು ಅಲ್ಲಿಂದ ಬಂದರೂ ಕೊಳೆತುಹೋಗಿರುತ್ತಿತ್ತು. ನೀನಾದರೋ ದೂರದ ಆಕ್ಲೆಂಡ್‌ನಿಂದ ಬಂದ ಕಿವೀ ಹಣ್ಣನ್ನು ಕೂಡ ತಿಂದಿದ್ದೀಯ. ಆಗಿನ ಅರಸು ಮಕ್ಕಳಿಗೆ ಆಡಲು ಪುಟಿಯುವ ಚೆಂಡೂ ಇರಲಿಲ್ಲ. ನಿನ್ನ ಕೈಯಲ್ಲೋ ಅಮೆರಿಕದ ಬಾರ್ಬಿ ಡಾಲ್ ಇದ್ದಾಳೆ; ಜಪಾನಿನ ತಾಮಾಗುಚಿ, ಚೀನಾದ ಟಾಯ್‌ಗನ್ ಇದೆ. ನಿನ್ನ ಅಪ್ಪ ಬಸ್ ಡ್ರೈವರ್ ಆಗಿದ್ದರೂ ಹಿಂದಿನ ಕಾಲದ ರಾಜರಿಗೆ ಇದ್ದುದಕ್ಕಿಂತ ಹೆಚ್ಚಿನ ಸೌಕರ್ಯ ನಿಮಗಿದೆ. ನಿನ್ನದು ಹೊಸ ರಾಜವಂಶ ಮಗೂ! ಸುಖದ ವಿಚಾರವನ್ನು ಹೇಳಿದೆ. ಇನ್ನು ಇದರ ಇನ್ನೊಂದು ಮಗ್ಗುಲನ್ನು ಹೇಳುತ್ತೇನೆ. ಇಷ್ಟೊಂದು ಸುಖಕ್ಕಾಗಿ ಹಾಗೂ ಇನ್ನೂ ಬೇಕೆಂಬ ಮಹದಾಸೆಗಾಗಿ ನಿನ್ನಿಂದ ಏನೇನನ್ನು ಕಸಿದಿದ್ದೇವೆ ಗೊತ್ತಾ? ಚೀಂವ್ ಚೀಂವ್ ಎಂದು ಮನೆಯೊಳಗೇ ಕುಪ್ಪಳಿಸಿ ಮುದ ನೀಡುತ್ತಿದ್ದ ಗುಬ್ಬಿಯನ್ನು ನಿನಗೆ ನಾನು ತೋರಿಸಲಾರೆ. ಜುಳುಜುಳು ತೊರೆಯಲ್ಲಿ ಕಾಲಿಗೆ ಕಚಗುಳಿ ಇಡುವ ಮೀನುಗಳನ್ನು ತೋರಿಸೋಣವೆಂದರೆ ನೀರಿನ ಬದಲು ಕೊಳಕು ಮಡು ಅಲ್ಲಿದೆ. ವಿಮಾನದಂತೆ ಆಕಾಶದಿಂದ ಇಳಿದು ಬರುತ್ತಿದ್ದ ರಣಹದ್ದುಗಳನ್ನು ತೋರಿಸಲಾರೆ. ನಗರದಲ್ಲಿರುವ ನಿನಗೆ ಕರಿಬಾನಲ್ಲಿ ಮಿನುಗುವ ನಕ್ಷತ್ರಗಳನ್ನೂ ತೋರಿಸಲಾರೆ. ಕ್ಷಮಿಸು ಮಗೂ. ಬಾವಿಯಲ್ಲಿ ಚಂದ್ರನ ಪ್ರತಿಬಿಂಬವನ್ನು ಸಿಂಹಕ್ಕೆ ತೋರಿಸುವ ಮೊಲದ ಕತೆಯ ಹೇಳೋಣವೆಂದರೆ ನೀರಿದ್ದ ಬಾವಿಗಳೇ ಉಳಿದಿಲ್ಲ. ಬಾವಿಗಳನ್ನಷ್ಟೇ ಅಲ್ಲ, ಚಂದದ ನೀತಿಕತೆಗಳ ಬಾಯಿಗಳನ್ನೂ ನಾವು ಮುಚ್ಚಿಬಿಟ್ಟಿದ್ದೇವೆ. ಒಂದು ಖರೇ ಕತೆ ಹೇಳಲೆ? ತಪ್ಪು ಮಾಡಿದವರನ್ನು ಹೊತ್ತು ಮೆರೆಯುವ ಹೊತ್ತು ಇದು. ಊರ ಸುತ್ತಲಿನ ಸಂಪತ್ತನ್ನೆಲ್ಲ ಲೂಟಿ ಮಾಡಿ, ಸಾವಿರಾರು ಜನರ ಊಟವನ್ನು ಕಸಿದು ತಾನು ಚಿನ್ನದ ಬಟ್ಟಲಲ್ಲಿ ಊಟ ಮಾಡುವವರು ಹೀರೋ ಆಗುತ್ತಾರೆ. ಜೈಲಿಗೆ ಹೋದ ಆತನಿಗೆ ಜನ ಜೈಕಾರ ಹಾಕುತ್ತಾರೆ. ಅಲ್ಲಿಂದ ತಾತ್ಕಾಲಿಕ ರಜೆ ಪಡೆದು ಹೊರಕ್ಕೆ ಬಂದರೆ ನಗರವೆಲ್ಲ ಸಿಂಗಾರಗೊಳ್ಳುತ್ತದೆ. ಪೊಲೀಸರು ಅವನ ರಥಕ್ಕೆ ದಾರಿ ಮಾಡಿಕೊಡಲು ರಸ್ತೆಗಳನ್ನು ಖಾಲಿ ಮಾಡಿಸುತ್ತಾರೆ. ಅವನನ್ನು ಹೊಗಳಿ ಕವಿಗಳು ಸ್ವಾಗತಗೀತೆ ಬರೆಯುತ್ತಾರೆ. ಮಂತ್ರಿ ಮಹೋದಯರು, ಮಠಾಧೀಶರು ಮತ್ತು ವಿದ್ವಜ್ಜನರು ಆ ಅಪರಾಧಿಯ ಮನೆಯ ಊಟಕ್ಕೆ ಹಾತೊರೆಯುತ್ತಾರೆ. ಇದು ಹೊಸ ಕಾಲ ಮಗೂ! ಇಲ್ಲಿ ಕವಿಗಳು, ಸಾಹಿತಿಗಳು ತಮ್ಮ ನೀತಿಕತೆಗಳನ್ನು ರದ್ದಿಗೆ ಮಾರುತ್ತಾರೆ. ಪೊಲೀಸರ ಸಮವಸ್ತ್ರ ಉಲ್ಟಾ ಆಗಿದೆ. ಒಳ್ಳೆಯವರಿಗೆ ಒದೆ, ಉಳ್ಳವರಿಗೆ ಮಣೆ. ಇನ್ನು ದೊಡ್ಡ ದೊಡ್ಡ ರಣಹದ್ದುಗಳೇ ಇಲ್ಲವೆಂದೆನಲ್ಲ? ಇವೆ, ರೆಕ್ಕೆಗಳಿಲ್ಲದ ಹೊಸ ರೂಪದವು ಬಂದಿವೆ. ಹಸಿದವರನ್ನು ಪಕ್ಕಕ್ಕೆ ತಳ್ಳಿ ಕೇಕೆ ಹಾಕಿ ಕುಣಿದು ಸ್ವಂತದ ವಿಮಾನ ಏರಿ ವಿಜೃಂಭಿಸುತ್ತವೆ. ಜನ ಅವಕ್ಕೂ ಜೈಕಾರ ಹಾಕುತ್ತಾರೆ. ನಿನಗೆ ಗೊತ್ತಿಲ್ಲ ಮಗೂ! ನಿನ್ನನ್ನು ಕೃತಕ ಜಗತ್ತಿಗೆ ಸೇರಿಸಲು ಸಿದ್ಧತೆ ನಡೆದಿದೆ. ನಿನ್ನ ಪುಟ್ಟ ಕಾಲುಗಳಿಗೆ ಹಸಿಮಣ್ಣಿನ ಸ್ಪರ್ಶ ಆಗಬಾರದು. ನಿನ್ನ ಕಿವಿಗೆ ಮರಿದುಂಬಿಯ ಝೇಂಕಾರ ಕೇಳಬಾರದು. ನಿನ್ನ ಕಣ್ಣಿಗೆ ಮಿಂಚುಹುಳಗಳ ಮಿಣಿಬೆಳಕು ಬೀಳಬಾರದು. ನಿನ್ನ ನಾಲಗೆಗೆ ದೋರೆಗಾಯಿಯ ರುಚಿ ಗೊತ್ತಾಗಬಾರದು. ಆ ಎಲ್ಲ ಸುಖಗಳೂ ನೀನಿದ್ದಲ್ಲೇ ಬಂದರೆ ಸಾಕಲ್ಲ? ದಿಲ್ಲಿಯಲ್ಲಿ ಈಗಲೇ ಆ ವ್ಯವಸ್ಥೆ ಬಂದಿದೆ. ಯಾವ ಮಗುವೂ ಮನೆಯ ಹೊರಕ್ಕೆ ಹೋಗುವಂತಿಲ್ಲ. ಇನ್ನೇನು, ನಿನ್ನ ಸೇವೆಗೆ ರೋಬಾಟ್‌ಗಳನ್ನು ನೇಮಿಸಿ, ನಿನ್ನ ಓದು, ಬರಹ, ಟ್ಯೂಶನ್, ಎಂಜಿನಿಯರಿಂಗ್, ಮೆಡಿಕಲ್, ಮ್ಯಾನೇಜ್‌ಮೆಂಟ್ ಶಿಕ್ಷಣವೆಲ್ಲ ಮನೆಯೊಳಗೇ ಸಿಗುವಂತೆ ಮಾಡಿ, ನಿನ್ನನ್ನೇ ಒಂದು ಡುಮ್ಮ ರೋಬಾಟ್ ಮಾಡಿ ಕೂರಿಸಿ ಅಪ್ಪ ಒಂದು ಕಡೆ, ಅಮ್ಮ ಒಂದು ಕಡೆ ಮುಖವಾಡ ಕಟ್ಟಿಕೊಂಡು ದುಡಿಯಲು ಹೋಗುತ್ತಾರೆ. ಹೊರಕ್ಕೆ ಬರಲು ಯತ್ನಿಸು ಮಗೂ. ನಿನ್ನ ಹೊಸ ಜಗತ್ತನ್ನು ನೀನೇ ಸೃಷ್ಟಿ ಮಾಡಿಕೋ. ಆರಂಭದಲ್ಲಿ ತುಸು ಕಷ್ಟ ಆದೀತು. ನಿನ್ನನ್ನು ಪ್ರಕೃತಿಯಿಂದ ದೂರ ಮಾಡಿದ್ದಷ್ಟೇ ಅಲ್ಲ, ಕನ್ನಡದ ಸುಂದರ ಲೋಕವೇ ಕಾಣದ ಹಾಗೆ ನಿನ್ನ ಕಣ್ಣಿಗೆ ಇಂಗ್ಲಿಷ್ ಮೀಡಿಯಮ್ ಪೊರೆಯನ್ನು ಬೆಳೆಸಿದ್ದಾರೆ. ನಿನಗೆ ಬಣ್ಣದ ತಗಡಿನ ತುತ್ತೂರಿ ಗೊತ್ತಿಲ್ಲ. ಬೇತಾಳ ವಿಕ್ರಮಾದಿತ್ಯ ಕತೆಗಳನ್ನೂ ಓದಲಾರೆ. ಕುಂಭಕರ್ಣನನ್ನು ಎಬ್ಬಿಸಲು ಹೋದವರ ತಮಾಷೆ ಕತೆ ಗೊತ್ತಿಲ್ಲ. ಬೇಂದ್ರೆಯವರ ‘ಪಾತರಗಿತ್ತಿ ಪಕ್ಕಾ’ ಗೊತ್ತಿಲ್ಲ. ತೇಜಸ್ವಿಯವರ ‘ಯಂಕ್ಟನ ಪುಂಗಿ’ ಗೊತ್ತಿಲ್ಲ. ಎಚ್ಚೆಸ್ವಿಯವರ ‘ಬಿಡಿ ದಾರಿ, ಬಿಡಿ ದಾರಿ – ಗಮ್ಮಂತ ಬರ್ತಾ ಇದೆ ಕಾರ್ಪೊರೇಶನ್ ಲಾರಿ’ ಕವನವನ್ನು ನೀನು ಓದಲಾರೆ. ಈ ಪೊರೆಯನ್ನು ಮೊದಲು ಕಳಚಲು ಯತ್ನಿಸು. ಕಳಚಿದರೆ ನಿನ್ನ ಗುಳ್ಳೆಲೋಕದಿಂದ ಹೊರಬರಲು ಪ್ರೇರಣೆ ಸಿಕ್ಕೀತು. ಒಂದು ಕೆಲಸ ಮಾಡ್ತೀಯ ಮಗೂ? ಥ್ರೀಡೀ ಪ್ರಿಂಟಿಂಗ್ ಮೂಲಕ ಗೂಗಲ್ ಗ್ಲಾಸಿನಂಥ ಒಂದು ಕನ್ನಡಕ ತಯಾರಿಸು. ಅದನ್ನು ಧರಿಸಿದ ತಕ್ಷಣ, ಕನ್ನಡದ ಅಕ್ಷರಗಳೆಲ್ಲ ಸಾಲಾಗಿ ನಿನ್ನ ಕಿವಿಯೊಳಗೆ ಧ್ವನಿಸಬೇಕು. ಟ್ಯೂಶನ್ನು, ಹೋಮ್ ವರ್ಕು, ಕಾರ್ಟೂನ್ ನೆಟ್‌ವರ್ಕು ಎಲ್ಲದರಿಂದ ಬಿಡುವು ಸಿಕ್ಕಾಗ, ಆ ಕನ್ನಡಕ ಧರಿಸಿ ನೀನು ಕನ್ನಡ ಪುಸ್ತಕ ಹಿಡಿದು ಕೂರಬೇಕು. ಪುಸ್ತಕಗಳಲ್ಲಿರುವ ಚಂದ ಚಂದದ ಕತೆ–ಕವನಗಳೆಲ್ಲ ಸಾಲಾಗಿ ತಮ್ಮನ್ನು ತಾವೇ ಓದಿ ಹೇಳುತ್ತವೆ. ಏನು ಮಜಾ ಅಂತೀ! ಇಷ್ಟಕ್ಕೂ, ನಾಳೆ ನಿನ್ನ ಮಗುವಿಗೂ ಹೇಳಲು ಒಂದಿಷ್ಟು ಕನ್ನಡ ಕತೆಗಳು ಬೇಡವೆ ನಿನಗೆ? *ಇಂತಿ, ನಿನ್ನ ನೆರೆಮನೆಯ* *– ನಾಗೇಶಜ್ಜ* Hareeshkumar K GHS Huskuru Malavalli TQ Mandya Dt 9880328224 -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
