ಸರ್ ಇದು ನಿಜವಾದ ಚಿಂತನೆ
On 11-Jun-2016 11:40 am, "Siddaramappa s m Sri" <[email protected]>
wrote:

> ಮೂರ್ತಿಪೂಜೆಯ ಕುರಿತ ಆಧುನಿಕರ ಗೊಂದಲಗಳು
>
> Posted by CSLC Ka
> ಪ್ರೊ.ರಾಜಾರಾಮ ಹೆಗಡೆ, ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ವಿಭಾಗ, ಕುವೆಂಪು
> ವಿಶ್ವವಿದ್ಯಾನಿಲಯ
>
> (ನಿಲುಮೆಯಲ್ಲಿ ಪ್ರಕಟಿತ)
>
> “ನಾನು ದೇವರ ನಿರಾಕಾರ ರೂಪವನ್ನು ಒಪ್ಪುತ್ತೇನೆ, ಆದರೆ ಅವುಗಳಿಗೆ ಆಕಾರ ಕೊಡುವುದನ್ನು
> ವಿರೋಧಿಸುತ್ತೇನೆ.” “ಒಂದು ಶಕ್ತಿ ಈ ಪ್ರಪಂಚವನ್ನು ಆಳುತ್ತಿದೆ ಎಂದು ನಂಬುತ್ತೇನೆ ಆದರೆ ಈ
> ದೇವತೆಗಳು, ಪುರಾಣಗಳು ಎಲ್ಲ ಸುಳ್ಳು, ಅವನ್ನು ನಂಬಬಾರದು” ಎಂಬ ಧೋರಣೆ ಬಹಳಷ್ಟು ಆಧುನಿಕ
> ಚಿಂತಕರಲ್ಲಿ ಇದೆ. ಈ ಹೇಳಿಕೆಯನ್ನು ಮಾಡುವವರು ತಾವು ಭಾರತೀಯ ಅಧ್ಯಾತ್ಮ ಸಂಪ್ರದಾಯದ
> ಸತ್ಯವನ್ನೇ ಹೇಳುತ್ತಿದ್ದೇವೆ ಎಂದುಕೊಂಡಿದ್ದಾರೆ. ಏಕೆಂದರೆ ನಮ್ಮ ಅಧ್ಯಾತ್ಮ ಸಂಪ್ರದಾಯಗಳು
> ಪರಮಾತ್ಮನ ನಿಜಸ್ವರೂಪವು ನಿರಾಕಾರವೇ ಆಗಿದೆ ಎಂದು ಹೇಳುತ್ತವೆ. ಹಾಗೂ ಅವುಗಳಲ್ಲಿ ಕೆಲವಂತೂ
> ಮೂರ್ತಿಪೂಜೆಯ ನಿರರ್ಥಕತೆಯ ಕುರಿತು ಸಾಧಕರನ್ನು ಎಚ್ಚರಿಸುತ್ತವೆ. ಅಷ್ಟಾದರೂ ಕೂಡ ಅವನ
> ಸಾಕಾರೋಪಾಸನೆಯನ್ನು ಅವು ವಿರೋಧಿಸುವುದಿಲ್ಲ, ಸಾಕಾರೋಪಾಸನೆ ಅಧ್ಯಾತ್ಮ ಸಾಧನೆಯಲ್ಲಿ
> ದಾರಿತಪ್ಪಿಸುವ ಮೋಸ, ಅದನ್ನು ಮಾಡಲೇಬೇಡಿ ಎಂದು ಎಲ್ಲಿಯೂ ಹೇಳುವುದಿಲ್ಲ. ಸಾಕಾರೋಪಾಸನೆಯು
> ನಿರಾಕಾರ ತತ್ವವನ್ನು ತಿಳಿಯಲಿಕ್ಕೆ ದಾರಿಯಾಗಿದೆ. ಈ ಕಾರಣದಿಂದಲೇ ಸಾಕಾರೋಪಾಸನೆಯಲ್ಲೇ
> ತೃಪ್ತಿಪಟ್ಟುಕೊಂಡ ಸಾಧಕರನ್ನು ಟೀಕಿಸಿ ಎಚ್ಚರಿಸುವ ಸಂದರ್ಭದಲ್ಲಿ ಮೂರ್ತಿರೂಪಗಳ
> ಮಿತಿಯನ್ನು ತಿಳಿಸಿಕೊಡುವ ಕೆಲಸವನ್ನು ಅವು ಮಾಡುತ್ತವೆ. ಅಜ್ಞಾನದಲ್ಲಿ ಬಂಧಿತನಾದ ಮನುಷ್ಯನ
> ಬುದ್ಧಿಗೆ ಏಕಾಏಕಿಯಾಗಿ ನಿರಾಕಾರ ತತ್ವವನ್ನು ಅರಿಯಲು ಅಸಾಧ್ಯ. ಅಂಥವನಿಗೆ ಮೂರ್ತಿಪೂಜೆ
> ಒಂದು ಸಾಧನ. ಜನಸಾಮಾನ್ಯರ ಮನೋಸ್ಥಿತಿಯ ಹೀಗೇ ಇರುವುದರಿಂದ ನಮ್ಮಲ್ಲಿ ಎಲ್ಲಾ ಸಂಪ್ರದಾಯಗಳೂ
> ಮೂರ್ತಿಪೂಜೆಯ ಉಪಾಯವನ್ನು ಕಲ್ಪಿಸಿವೆ ಎನ್ನುತ್ತವೆ. ಹಾಗಾಗಿ ಈ ಮೇಲಿನ ಹೇಳಿಕೆಗಳನ್ನು
> ನೀಡುವವರು ಭಾರತೀಯ ಅಧ್ಯಾತ್ಮ ಸಂಪ್ರದಾಯದ ವಕ್ತಾರರಂತೂ ಅಲ್ಲ.
>
> “ದೇವರೆಂಬವನೇ ಇಲ್ಲ, ಹಾಗಾಗಿ ಈ ಮೂರ್ತಿಪೂಜೆ ಒಂದು ಪುರೋಹಿತರ ಕಣ್ಕಟ್ಟು” ಎಂಬ ಮತ್ತೊಂದು
> ಥರದ ಹೇಳಿಕೆಗಳೂ ಇವೆ. ಈ ಹೇಳಿಕೆಯನ್ನು ಮಾಡುವವರು ತಾವು ನಾಸ್ತಿಕರು ಎಂದು ಕರೆದುಕೊಳ್ಳಲು
> ಹೆಮ್ಮೆ ಪಡುತ್ತಾರೆ ಹಾಗೂ ಮೂರ್ತಿಪೂಜೆಯನ್ನು ತೊಡೆಯುವುದೇ ನಮ್ಮ ಸಮಾಜದ ಉದ್ಧಾರಕ್ಕೆ
> ಮಾರ್ಗ ಎನ್ನುತ್ತಾರೆ. ಅಷ್ಟೇ ಅಲ್ಲ ಅವರನ್ನು ವಿರೋಧಿಸುವವರೂ ಕೂಡ ಅವರನ್ನು ನಾಸ್ತಿಕರೆಂದು
> ಪದೇ ಪದೇ ಜರಿಯುವುದು ಕೂಡ ಕಂಡುಬರುತ್ತದೆ. ಆದರೆ ಹಾಗೆ ಅವರನ್ನು ಕರೆಯುವು ತಪ್ಪು.
> ನಮ್ಮಲ್ಲಿ ನಾಸ್ತಿಕರಾದ ಬೌದ್ಧರು ಹಾಗೂ ಜೈನರು ಕೂಡಾ ಮೂರ್ತಿಪೂಜೆಯನ್ನು
> ಅಳವಡಿಸಿಕೊಂಡಿದ್ದಾರೆ. ಜೈನ ಬೌದ್ಧರು ಪರಮಾತ್ಮ ತತ್ವವನ್ನು ಒಪ್ಪುವುದಿಲ್ಲ. ಹಾಗಾಗೇ
> ಅವರನ್ನು ನಾಸ್ತಿಕರೆಂದು ಹೇಳಲಾಗುತ್ತದೆ. (ಅಸ್ತಿ=ಇದೆ; ನಾಸ್ತಿ=ಇಲ್ಲ. ಆಸ್ತಿಕ ನೆಂದರೆ ಆ
> ತತ್ವ ಇದೆ ಎಂದು ಒಪ್ಪುವವನು, ನಾಸ್ತಿಕನು ಅದು ಇಲ್ಲ ಎನ್ನುವವನು. ಈ ಪರಿಭಾಷೆಗಳಿಗೆ
> ಅಧ್ಯಾತ್ಮದ ಸಂದರ್ಭದ ಹಿನ್ನೆಲೆಯಿದೆ). ಆದರೆ ನಾಸ್ತಿಕರಾದವರು ಮೂರ್ತಿಪೂಜೆಯನ್ನು
> ನಿರಾಕರಿಸಬೇಕೆಂದಿಲ್ಲ. ನಾಸ್ತಿಕರ ಪರಮ ಜ್ಞಾನವನ್ನು ಹೊಂದಲು ಕೂಡ ಮೂರ್ತಿ ಪೂಜೆ
> ಸಹಕರಿಸಿದೆ. ಅದಿಲ್ಲದಿದ್ದರೆ ಅವೇಕೆ ಸಾವಿರಾರು ವರ್ಷ ಮೂರ್ತಿಪೂಜೆಯನ್ನು ಆಚರಿಸಿಕೊಂಡು
> ಬರುತ್ತಿದ್ದವು? ಆಸ್ತಿಕ ಹಾಗೂ ನಾಸ್ತಿಕ ಸಂಪ್ರದಾಯಗಳೆರಡೂ ಕೂಡ ತಂತಮ್ಮ ಗುರಿ ಸಾಧನೆಗೆ
> ಮೂರ್ತಿಪೂಜೆ ಸಾಧನವಾಗಿದೆ ಎಂದು ಒಪ್ಪಿಕೊಂಡಿದ್ದವು. ಹಾಗಾಗಿ ದೇವರಿಲ್ಲವೆಂದು ನಂಬಿದಾಕ್ಷಣ
> ಮೂರ್ತಿಪೂಜೆ ನಿಲ್ಲಬೇಕೆಂಬ ವಾದವು ನಾಸ್ತಿಕ ದೃಷ್ಟಿಯೂ ಅಲ್ಲ.
>
> ಭಾರತದಲ್ಲಿ ಒಂದೆಡೆ ಈ ಪರಿಸ್ಥಿತಿಯಿದ್ದರೆ, ಮತ್ತೊಂದೆಡೆ ಮೂರ್ತಿಪೂಜೆಯೇ ಆತ್ಯಂತಿಕ ಎಂದು
> ನಾಸ್ತಿಕರು ಹೋಗಲಿ, ಆಸ್ತಿಕ ಸಂಪ್ರದಾಯಗಳು ಕೂಡ ಒಪ್ಪಿರಲಿಲ್ಲ ಎಂಬುದು ಗಮನಾರ್ಹ. ವೇದಾಂತ
> ಸಂಪ್ರದಾಯವು ನಿರಾಕಾರ ಬ್ರಹ್ಮವೇ ತಿಳಿಯಬೇಕಾದ ವಸ್ತು, ಮೂರ್ತಿಪೂಜೆಯು ಅದಕ್ಕೆ ಸಾಧನ
> ಎನ್ನುತ್ತದೆ. ದೇವತೆಗಳಿಗೆ ಈ ಸಂಪ್ರದಾಯಗಳಲ್ಲಿ ಆತ್ಯಂತಿಕ ಸ್ಥಾನವಿಲ್ಲ. ಅಧ್ಯಾತ್ಮವನ್ನು
> ಲಕ್ಷ್ಯದಲ್ಲಿಟ್ಟುಕೊಳ್ಳದಿದ್ದರೆ ಮೂರ್ತಿಪೂಜೆಯು ಮನುಷ್ಯನನ್ನು ಪುನರ್ಜನ್ಮಕ್ಕೆ ಕಟ್ಟುವ
> ಸಾಧನವಾಗುತ್ತದೆ ಎನ್ನುತ್ತಾರೆ ಅವರು. ಅದೇ ರೀತಿ, ಒಮ್ಮೆ ಪರಮಾತ್ಮ ಜ್ಞಾನವಾದವನಿಗೆ
> ಮೂರ್ತಿಪೂಜೆಯ ಅಗತ್ಯವೇ ಇಲ್ಲ. ಮೂರ್ತಿಪೂಜೆಯನ್ನೇ ಮಾಡದೇ ಧ್ಯಾನದಿಂದ, ತಪಸ್ಸಿನಿಂದ,
> ಇಲ್ಲವೇ ಪೂರ್ವಜನ್ಮ ಸಂಸ್ಕಾರದಿಂದ ಪರಮಾತ್ಮನ ಜ್ಞಾನ ಸಾಧ್ಯ ಎಂದೂ ಅವು ಅನ್ನುತ್ತವೆ. ಶಿವ,
> ವಿಷ್ಣು ಪಾರಮ್ಯವನ್ನು ಎತ್ತಿಹಿಡಿಯುವ ಭಕ್ತಿ ಸಂಪ್ರದಾಯಗಳೂ ಕೂಡ ಅವರ ಪರಾ ರೂಪವನ್ನು
> ನಿರಾಕಾರ ತತ್ವಗಳನ್ನಾಗಿ ಕಲ್ಪಿಸಿ ಮೂರ್ತಿಯೂ ಅವನ ಒಂದು ರೂಪವೆನ್ನುತ್ತವೆ. ಅಂದರೆ
> ಮೂರ್ತಿಯು ಈ ಪರಾತತ್ವದ ದೇಹವೆನ್ನುತ್ತವೆ. ಈ ದೇಹವನ್ನು ದಾಟಿ ಪರಾತತ್ವವನ್ನು ಕಾಣದಿದ್ದರೆ
> ಪಜೆಯ ಉದ್ದೇಶ ಈಡೇರುವುದಿಲ್ಲ. ಮೂರ್ತಿಗಳನ್ನು ಹೇಗೆ ರಚಿಸಬೇಕೆಂದು ನಿರ್ದೇಶಿಸುವ ಆಗಮ
> ಶಾಸ್ತ್ರಗಳೇ ‘ಪ್ರತಿಮೆಗಳು ಅಲ್ಪಬುದ್ಧಿಯವರಿಗಾಗಿ ಯೋಜಿತವಾಗಿವೆ,’ ‘ಕಾಷ್ಟ, ಲೋಷ್ಟ,
> ಲೋಹಗಳ ಮೂರ್ತಿಗಳನ್ನು ಪೂಜೆ ಮಾಡುವುದರಿಂದ ಜನನ ಮರಣದ ಬಂಧನಕ್ಕೆ ಸಿಲುಕುತ್ತಾರೆ,’
> ಇತ್ಯಾದಿ ವಾಕ್ಯಗಳನ್ನೂ ನಮಗೆ ನೀಡುತ್ತವೆ. ಅಂದರೆ, ಅದನ್ನು ಸಾಧನವನ್ನಾಗಿಸಿಕೊಂಡು ಭಗವಂತನ
> ಸಾಕ್ಷಾತ್ಕಾರ ಮಾಡಿಕೊಳ್ಳುವುದು ಸರಿಯಾದ ಗುರಿ ಎನ್ನುತ್ತವೆ. ಆದರೆ ಇವರ್ಯಾರೂ ಮೂರ್ತಿಪೂಜೆ
> ನಿಲ್ಲಬೇಕು ಎನ್ನುವುದಿಲ್ಲ. ಅದನ್ನು ಅರಿತು ಆಚರಿಸುವುದು ಮಾರ್ಗವಾಗಬಲ್ಲದು ಎಂದೇ
> ಅನ್ನುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಮೂರ್ತಿಪೂಜೆಯ ಟೀಕೆ ಏನಾದರೂ ಬಂದರೆ ಅದಕ್ಕೆ ಈ
> ಆಧ್ಯಾತ್ಮಿಕ ಸಂದರ್ಭವಿದೆ. ಮೂರ್ತಿಪೂಜೆಯನ್ನು ಪಾಪ ಎಂಬಂತೇ ನೋಡುವುದು ಭಾರತೀಯ
> ಆಧ್ಯಾತ್ಮಿಕ ದೃಷ್ಟಿ ಅಲ್ಲ. ಅಂದರೆ, ಮೂರ್ತಿಪೂಜೆಯನ್ನು ನಿರಾಕರಿಸುವವರು ಆಸ್ತಿಕರೂ ಅಲ್ಲ,
> ನಾಸ್ತಿಕರೂ ಅಲ್ಲ.
>
> ಮೂರ್ತಿಪೂಜೆಯ ಈ ಭಾರತೀಯ ಸಂದರ್ಭವು ಆಧುನಿಕ ವಿದ್ಯಾವಂತರನೇಕರಲ್ಲಿ ಕಳಚಿಹೋಗಿದೆ ಎಂಬುದು
> ಅವರ ನಿರಾಕರಣೆಯ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಅಂದರೆ ಆಧುನಿಕ ವಿದ್ಯಾಭಾಸ ಮಾಡಿದವರಿಗೆ
> ಹಾಗೂ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಸರಿಯಾಗಿ ಅರಿತುಕೊಳ್ಳುವ ಕುತೂಹಲ ಇಲ್ಲದವರಿಗೆ ನಮ್ಮ
> ಸಂಸ್ಕೃತಿಯಲ್ಲಿ ಮೂರ್ತಿಪೂಜೆಯನ್ನು ಯಾವ ನಿರ್ದಿಷ್ಟ ಕಾರಣಕ್ಕಾಗಿ ಟೀಕಿಸುತ್ತಾರೆ ಎಂಬ
> ತಿಳುವಳಿಕೆ ಹೊರಟುಹೋಗಿದೆ. ಅವರಿಗಿರುವುದು ಒಂದೇ ತಿಳುವಳಿಕೆ. ಆಧುನಿಕ ವಿದ್ಯಾಭಾಸವು
> ಕಟ್ಟಿಕೊಡುವ ತಿಳುವಳಿಕೆಯಾಗಿದೆ. ಅಂದರೆ ಮೂರ್ತಿಪೂಜೆ ಎಂದರೆ ಐಡೋಲೇಟ್ರಿ ಹಾಗೂ ಅನೈತಿಕ,
> ಅದು ನಾಶಮಾಡಬೇಕಾದ ಆಚರಣೆ. ಈ ನಿರ್ದಿಷ್ಟ ಧೋರಣೆಯು ಸೆಮೆಟಿಕ್ ರಿಲಿಜನ್ನುಗಳ, ಅದರಲ್ಲೂ
> ಪ್ರೊಟೆಸ್ಟಾಂಟ್ ಥಿಯಾಲಜಿಯ ಧೋರಣೆಯಾಗಿದೆ. ಹಾಗೂ ದೇವರೇ ಇಲ್ಲ ಎಂಬ ಧೋರಣೆಯ ಭಾಗವಾಗಿ
> ಮೂರ್ತಿಪೂಜೆಯನ್ನು ವಿರೋಧಿಸುವವರು ನಿರ್ದಿಷ್ಟವಾಗಿ ಪಾಶ್ಚಾತ್ಯ ಅಥೇಯಿಸ್ಟ್ ಪರಂಪರೆಗೆ
> ಸೇರುತ್ತಾರೆ. ಏಕೆಂದರೆ ಅಲ್ಲಿ ಗಾಡ್ ಇಲ್ಲ ಎಂಬುದೊಂದು ಸೆಕ್ಯುಲರ್ ಚಳವಳಿಯೇ ನಡೆದಿದೆ.
> ಅದನ್ನು ನಾವು ವಿದ್ಯಾವಂತರು ಬಳುವಳಿಯಾಗಿ ಪಡೆದುಕೊಂಡಿದ್ದೇವೆ. ಹಾಗಾಗಿ ಈ ಎರಡೂ ಪ್ರಕಾರದ
> ಮೂರ್ತಿಪೂಜೆಯ ವಿರೋಧಿಗಳಿಗೂ ಭಾರತೀಯ ಆಸ್ತಿಕ-ನಾಸ್ತಿಕ ಸಂಪ್ರದಾಯಗಳಿಗೂ ಯಾವುದೇ
> ಸಂಬಂಧವಿಲ್ಲ.
>
> ಪ್ರೊಟೆಸ್ಟಾಂಟರೇಕೆ ಮೂರ್ತಿಪೂಜೆಯನ್ನು ತೊಡೆಯಬೇಕೆಂದು ಪಣತೊಟ್ಟರು? ಏಕೆಂದರೆ, ಅದು
> ಸುಳ್ಳು ರಿಲಿಜನ್ನಿನ ಪ್ರತೀಕವಾಗಿದೆ. ಸೈತಾನ ಅಥವಾ ಡೆವಿಲ್ಲನ ಪ್ರತಿರೂಪವಾಗಿದೆ. ಅದನ್ನು
> ಪೂಜಿಸಿದ ತಕ್ಷಣ ನೀವು ಗಾಡ್ ನಿಂದ ದೂರವಾಗಿ ಶೈತಾನನ ವಶವಾಗುತ್ತೀರಿ. ಶೈತಾನನ ಪ್ರಭಾವದಿಂದ
> ನಿಮ್ಮ ತಲೆ ಕೆಟ್ಟುಹೋಗುತ್ತದೆ. ಅನೈತಿಕತೆ, ಅನಾಚಾರಗಳ ಪೃವೃತ್ತಿ ನಿಮ್ಮೊಳಗೆ
> ನುಸುಳುತ್ತದೆ. ಸುಳ್ಳು ಹೇಳುವುದು, ಮೋಸಮಾಡುವುದು, ಭ್ರಷ್ಟತೆ, ಲೈಂಗಿಕ ವಿಕಾರಗಳು, ಕೆಟ್ಟ
> ಹವ್ಯಾಸಗಳು ಎಲ್ಲವೂ ನಿಮ್ಮನ್ನು ಅಂಟಿಕೊಳ್ಳುತ್ತವೆ. ನೀವು ಗಾಡ್ನ ಆಜ್ಞೆಯನ್ನು ಧಿಕ್ಕರಿಸಿ
> ನಡೆಯುತ್ತೀರಿ. ಗಾಡ್ನ ಆಜ್ಞೆಯೇ ನೀತಿ ನಿಯಮವಾಗಿರುವುದರಿಂದ ನೀವು ಅನೀತಿವಂತರಾಗುತ್ತೀರಿ.
> ಹಾಗಾಗಿ ಡೆವಿಲ್ ಅಥವಾ ಶೈತಾನ ಎಂಬ ಕಲ್ಪನೆಗೂ ಮೂರ್ತಿಪೂಜೆಗೂ ಸಂಬಂಧವಿರುವುದರಿಂದ ಅದು
> ಪಾಪವೆಂಬುದಾಗಿ ಸೆಮೆಟಿಕ್ ರಿಲಿಜನ್ನುಗಳು ಧಿಕ್ಕರಿಸುತ್ತವೆ. ಎಲ್ಲೆಲ್ಲಿ ಮೂರ್ತಿಪೂಜೆ
> ಕಾಣುತ್ತದೆಯೋ ಅಲ್ಲಿ ಶೈತಾನನ ಉಪಸ್ಥಿತಿಯಿದೆ ಎಂಬುದಾಗಿ ನಂಬುವ ಈ ಮತಗಳು ಅಂಥ
> ಮೂರ್ತಿಗಳನ್ನು ಭಂಜಿಸಿ, ಅಥವಾ ಅಪವಿತ್ರಗೊಳಿಸಿ ಅದನ್ನು ನಂಬಿದವರನ್ನು ನಿಜವಾದ ಗಾಡ್ನ
> ದಾರಿಗೆ ಹಚ್ಚಲು ಪ್ರಯತ್ನಿಸಿದ ನಿದರ್ಶನಗಳೂ ಇತಿಹಾಸದಲ್ಲಿ ಇವೆ.
>
> ಮೂರ್ತಿಗಳಲ್ಲಿ ಶಕ್ತಿ ಇಲ್ಲ ಎಂದು ನಿದರ್ಶನ ಮಾಡುವ ಪ್ರಯತ್ನಗಳೆಲ್ಲವೂ ಈ ರೀತಿಯಾಗಿ
> ಪ್ರೊಟೆಸ್ಟಾಂಟ್ ಅಥವಾ ಸೆಕ್ಯುಲರ್ ಆಚರಣೆಗಳು. ನಮ್ಮ ಭಾರತೀಯರು ಹೇಗೆ ಈ ಪರಕೀಯ
> ಆಚರಣೆಯನ್ನೇ ನೈತಿಕ ಆಚರಣೆ ಎಂದು ನಂಬಲು ಸಾಧ್ಯ? ಇದೊಂದು ವಿಚಿತ್ರವಾದರೂ ನಿಜ. ಅದಕ್ಕೆ
> ಹತ್ತೊಂಭತ್ತನೆಯ ಶತಮಾನದಿಂದಲೂ ಇಲ್ಲಿ ನಡೆದ ಸುಧಾರಣಾ ಚಳವಳಿಗಳ ಹಿನ್ನೆಲೆಯಿದೆ. ಭಾರತೀಯ
> ಧಾರ್ಮಿಕ ಸುಧಾರಣಾವಾದಿಗಳು ಪ್ರೊಟೆಸ್ಟಾಂಟ್ ಥಿಯಾಲಜಿಯನ್ನೇ ಸತ್ಯವೆಂದು ನಂಬಿ ಭಾರತೀಯ
> ಆಧ್ಯಾತ್ಮಿಕ ಸಂಪ್ರದಾಯಗಳನ್ನು ಅದರ ಮೂಲಕ ಒರೆಗೆ ಹಚ್ಚಿದರು. ಆಗ ನಿರಾಕಾರೋಪಾಸನೆಯೇ
> ಸತ್ಯವಾದುದು, ಸಾಕಾರೋಪಾಸನೆ ಒಂದು ತಪ್ಪು ಬೆಳವಣಿಗೆ, ಹಿಂದೂಯಿಸಂ ಎಂಬುದು ಬ್ರಾಹ್ಮಣ
> ಪ್ರೀಸ್ಟ್ಗಳಿಂದ ಭ್ರಷ್ಟಗೊಂಡು ಇಂಥ ಆಚರಣೆಗಳು ಪ್ರಚಲಿತದಲ್ಲಿ ಬಂದಿವೆ ಎಂಬುದಾಗಿ ಅವರು
> ನಿರೂಪಿಸಿದರು. ಅಂದರೆ ಕ್ಯಾಥೋಲಿಕರ ಕುರಿತ ಪ್ರೊಟೆಸ್ಟಾಂಟ್ ಕಥೆಯನ್ನು ಅವರು ಬಳಸಿಕೊಂಡರು.
> ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಎಷ್ಟೆಷ್ಟು ಪ್ರೊಟೆಸ್ಟಾಂಟ್ಗೊಳಿಸುತ್ತೀರೋ
> ಅಷ್ಟಷ್ಟು ಅದು ಶುದ್ಧವಾಗುತ್ತದೆ ಎಂದು ತಿಳಿದರು. ಈ ಪ್ರಯತ್ನದಲ್ಲಿ ಆಧ್ಯಾತ್ಮ
> ಸಂಪ್ರದಾಯಗಳು ನಿಜವಾಗಿಯೂ ಮೂರ್ತಿಪೂಜೆಯ ಬಗೆಗೆ ಏನು ಧೋರಣೆ ಇಟ್ಟುಕೊಂಡಿವೆ ಎಂಬುದರ
> ಕುರಿತು ಒಂದು ಮರೆವು ವಿದ್ಯಾವಂತರನ್ನು ಆವರಿಸತೊಡಗಿತು. ಬದಲಾಗಿ ಪ್ರೊಟೆಸ್ಟಾಂಟ್ ಧೋರಣೆಯೇ
> ಅವುಗಳ ಧೋರಣೆ ಎಂಬ ತಪ್ಪು ಅಭಿಪ್ರಾಯವು ಅವರನ್ನು ಆವರಿಸಿಕೊಂಡಿತು.
>
> ಹತ್ತೊಂಭತ್ತನೆಯ ಶತಮಾನದ ನಂತರ ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳನ್ನು
> ಅಧ್ಯಯನಕ್ಕೊಳಪಡಿಸಿದ ವಿದ್ವಾಂಸರು ನಿರಾಕಾರೋಪಾಸನೆಯೇ ಅದರ ಹೆಚ್ಚುಗಾರಿಕೆ ಎಂಬಂತೇ
> ಬಿಂಬಿಸುವುದರಲ್ಲಿ ಆಸಕ್ತಿ ತೋರಿಸಿದರು. ಆ ಸಂದರ್ಭದಲ್ಲಿ ನಿರಾಕಾರ ಬ್ರಹ್ಮವೊಂದೇ
> ಸತ್ಯವೆಂದೆನ್ನುವ ಅದ್ವೈತ ವೇದಾಂತವು ಮಹತ್ವ ಪಡೆಯಿತು. ಹಾಗೂ ಅದು ಭಾರತದ ಸತ್ಯವಾದ
> ರಿಲಿಜನ್ನಿನ ವಕ್ತಾರನಾಯಿತು. ಜೊತೆಗೆ ಮಧ್ಯಕಾಲೀನ ನಿರ್ಗುಣ ಭಕ್ತಿ ಸಂಪ್ರದಾಯಗಳು ಕೂಡ
> ಮಹತ್ವ ಪಡೆದವು. ಅವನ್ನು ಸುಧಾರಣಾ ಚಳವಳಿಗಳು ಎಂಬುದಾಗಿ ಕರೆಯಲಾಯಿತು. ಇದೇ ದೇವತೆಗಳಿಗೆ
> ಸಂಬಂಧಿಸಿದ ಆಗಮ ಸಂಪ್ರದಾಯಗಳು ಖಂಡನೆಗೆ ಒಳಗಾದವು. ದೇವಾಲಯ ಹಾಗೂ ಮೂರ್ತಿಪೂಜೆಗಳು
> ಹಿಂದೂಯಿಸಂನ ಅವನತಿಯ ಸಂಕೇತಗಳು ಎಂಬುದಾಗಿ ವಿದ್ವಾಂಸರು ಭಾವಿಸಿದರು. ಮೂರ್ತಿಪೂಜೆಗೂ
> ಬ್ರಾಹ್ಮಣ ಪುರೋಹಿತಶಾಹಿಗೂ, ಜಾತಿ ವ್ಯವಸ್ಥೆಗೂ, ಹಿಂದೂಯಿಸಂನ ಅವನತಿಗೂ ಕೊಂಡಿ ಬೆಳೆಯಿತು.
> ಈ ಕೊಂಡಿ ಏಕೆ ಬೆಳೆಯಿತೆಂದರೆ, ಪ್ರೊಟೆಸ್ಟಾಂಟರು ಕ್ಯಾಥೋಲಿಕರಲ್ಲಿ ಈ ಕೊಂಡಿಯನ್ನು
> ಗುರುತಿಸಿ ಖಂಡಿಸಿದ್ದರು. ಕ್ಯಾಥೋಲಿಕ್ ಪ್ರೀಸ್ಟ್ಗಳ ಐಡೋಲೇಟ್ರಿಯಿಂದಾಗಿ ಅವರಲ್ಲಿ
> ಅನೈತಿಕತೆ ಬೆಳೆದು ಕ್ರೈಸ್ತರಲ್ಲಿ ತರತಮದ ಶ್ರೇಣೀಕರಣವನ್ನು ಬೆಳೆಸಿದರು, ಅದು
> ಕ್ರಿಶ್ಚಿಯಾನಿಟಿಯ ಅವನತಿಗೆ ಕಾರಣವಾಯಿತು ಎಂಬ ಕಥೆಯೇ ಈ ಕೊಂಡಿಯನ್ನು ರಚಿಸುತ್ತದೆ.
>
> ಭಾರತದಲ್ಲಿ ಈ ಕೊಂಡಿ ನಿಜವಾಗಿಯೂ ಇದೆಯೆ ಎಂಬುದನ್ನು ಯಾರೂ ಪರೀಕ್ಷಿಸಲಿಲ್ಲ. ಆದರೆ ಅದೇ
> ದೇವತೆಯನ್ನು ಪೂಜಿಸುವವರಲ್ಲೇ ಒಂದು ವರ್ಗವನ್ನು ಪುರೋಹಿತಶಾಹಿ ಎಂದು ಪರಿಗಣಿಸಿ
> ಮತ್ತೊಂದನ್ನು ಸುಧಾರಣಾವಾದಿಗಳು ಎಂಬುದಾಗಿ ಭಾವಿಸುವ ಅಧ್ಯಯನಗಳು ನಡೆದವು. ಈ ಭರಾಟೆಯಲ್ಲಿ
> ಸಾಕಾರ ಹಾಗೂ ನಿರಾಕಾರೋಪಾಸನೆಯವರು ನಿಜವಾಗಿಯೂ ಮೂರ್ತಿಪೂಜೆಯ ಕುರಿತು ಯಾವ ಧೋರಣೆ
> ಇಟ್ಟುಕೊಂಡಿದ್ದರು ಎಂಬುದು ಮರೆವಿಗೆ ಸರಿಯಿತು. ಇವೆರಡೂ ರಿಲಿಜನ್ನುಗಳಂತೇ ಪರಸ್ಪರ
> ವಿರುದ್ಧವಾದ ವೈರಿ ಪಂಥಗಳೋ ಎಂಬಂತೇ ಬಿಂಬಿಸಲಾಯಿತು. ಉದಾಹರಣೆಗೆ ಆಗಮಿಕ ಶೈವರು ಹಾಗೂ
> ಕನ್ನಡ ಶಿವಶರಣ ದೃಷ್ಟಿಕೋನ.
>
> ಮೂರ್ತಿಗಳು ಹಾಗೂ ಪೌರಾಣಿಕ ದೇವತೆಗಳ ಆಕೃತಿ ಹಾಗೂ ಕಥೆಗಳನ್ನು ಸುಳ್ಳು ಎಂದು ಮನದಟ್ಟು
> ಮಾಡುವುದು ಸುಲಭ. ಮನುಷ್ಯ ದೇಹಕ್ಕೆ ನಾಲ್ಕು ಕೈಗಳು, ನಾಲ್ಕು ತಲೆ ಇತ್ಯಾದಿಗಳು, ದೇವತೆಗಳ
> ಪವಾಡಗಳು, ಮಾಯೆ, ಇವುಗಳ ಕುರಿತು ಸತ್ಯ ಸುಳ್ಳಿನ ಪರಿಭಾಷೆಯಲ್ಲಿ ಮಾತನಾಡಿದಾಗ ಯಾರಿಗಾದರೂ
> ತರ್ಕಬದ್ಧವಾಗಿ ತೋರುತ್ತದೆ. ಹಾಗಾಗಿ ಈ ತರ್ಕವನ್ನೇ ಇಟ್ಟುಕೊಂಡು ಅವು ಸುಳ್ಳು ಎಂದು ಅದರ
> ವಿರೋಧಿಗಳು ತಾವೇನೋ ಅದ್ಭುತವಾದದ್ದನ್ನು ತಿಳಿಸುತ್ತಿದ್ದೇವೆಂಬುದಾಗಿ ತಿಳಿದಿದ್ದಾರೆ. ಇದು
> ಹಿಂದೊಮ್ಮೆ ಕ್ರೈಸ್ತ ಮಿಶನರಿಗಳು ಮಾಡಿದ ಕೆಲಸ. ಏಕೆಂದರೆ ಅವರಿಗೆ ನಮ್ಮ ದೇವತೆಗಳು ಸುಳ್ಳು
> ದೇವತೆಗಳಾಗಿ ಕಂಡಿದ್ದರು. ಅದನ್ನು ನಮಗೆ ಮನದಟ್ಟು ಮಾಡಿಬಿಟ್ಟರೆ ನಾವೆಲ್ಲರೂ ಸತ್ಯದೇವನ
> ರಿಲಿಜನ್ನಿಗೆ ಪರಿವರ್ತನೆ ಆಗಿಬಿಡುತ್ತೇವೆ ಎಂಬುದಾಗಿ ಅವರು ತಿಳಿದಿದ್ದರು. ಆದರೆ ಅವರ
> ನಿರೀಕ್ಷೆ ಹುಸಿಯಾಯಿತು. ಏಕೆಂದರೆ ಭಾರತೀಯರು ಕೂಡ ಅವನ್ನು ನಿಜ ವ್ಯಕ್ತಿ ಹಾಗೂ
> ಘಟನೆಗಳೆಂದುಕೊಂಡಿರಲಿಲ್ಲ. ಆದರೂ ಅವು ತಮ್ಮ ಜೀವನಕ್ಕೆ ಅತ್ಯಗತ್ಯ ಎಂದುಕೊಂಡಿದ್ದರು.
> ಅಧ್ಯಾತ್ಮ ಸಂಪ್ರದಾಯಗಳು ಈ ಆಕೃತಿ ಹಾಗೂ ಕಥೆಗಳಿಗೆಲ್ಲ ಬೇರೆ ಯಾವುದೋ ಪಾತಳಿಯಲ್ಲಿ ಅರ್ಥ
> ಕಲ್ಪಿಸಿ ತಮ್ಮ ಸಾಧನೆಗೆ ಅವುಗಳನ್ನು ವಸ್ತುಗಳನ್ನಾಗಿ ಒಗ್ಗಿಸಿಕೊಂಡಿದ್ದವು. ಉದಾಹರಣೆಗೆ
> ಬೃಹದಾರಣ್ಯಕೋಪನಿಷತ್ತಿನ ಭಾಷ್ಯದಲ್ಲಿ ಶಂಕರರು ‘ಈ ದೇವ ಅಸುರ ಇವೆಲ್ಲ ವಾಸ್ತವಿಕ
> ವ್ಯಕ್ತಿಗಳಲ್ಲ ಹಾಗೂ ಘಟನೆಗಳಲ್ಲ. ಅವು ಅವಿದ್ಯೆಯನ್ನು ಕಳೆದುಕೊಂಡು ಆತ್ಮಜ್ಞಾನವನ್ನು
> ಸಾಧಿಸಲು ಮಾರ್ಗಗಳು’ ಎಂಬ ನಿರೂಪಣೆಯನ್ನು ಮಾಡುತ್ತಾರೆ. ದೇವರಿಲ್ಲ ಎಂಬ ಹೇಳಿಕೆಗೆ
> ಪ್ರತಿಕ್ರಿಯೆಯಾಗಿ ಕನ್ನಡದ ಸಾಹಿತಿಗಳಾದ ಪುತಿನ ಅವರ ಸುಪ್ರಸಿದ್ಧ ಹೇಳಿಕೆ ಇದೆ: ‘ದೇವರು
> ಇಲ್ಲ, ಅದಕ್ಕಾಗೇ ಒಬ್ಬನನ್ನು ಕಲ್ಪಿಸಿಕೊಳ್ಳಬೇಕಪ್ಪಾ’. ಮೂರ್ತಿಪೂಜೆ ಹಾಗೂ ಪವಾಡಗಳು
> ಸುಳ್ಳು ಎಂದು ಸಾಧಿಸುವವರು ಈ ಸಂಪ್ರದಾಯಗಳ ಎದುರು ಅವಿವೇಕಿಗಳಾಗಿ, ಮೂರ್ಖರಾಗಿ ಕಾಣಿಸದೇ
> ಮತ್ತೇನು? ಈ ಸಂಪ್ರದಾಯಗಳಿಗೆ ನಿಜವಾಗಿಯೂ ಅವರು ತೋರಿಸಬೇಕಾದದ್ದು ಮೂರ್ತಿಗಳು ಸುಳ್ಳು
> ಎಂಬುದನ್ನಲ್ಲ, ಮೂರ್ತಿಪೂಜೆಯನ್ನು ಮಾಡಿದಾಕ್ಷಣ ಪರಮಾತ್ಮನ ಜ್ಞಾನದ ಸಾಧ್ಯತೆಯೇ
> ಮುಚ್ಚಿಹೋಗುತ್ತದೆ ಎಂಬುದನ್ನು. ಆದರೆ ಅದನ್ನು ತೋರಿಸಲು ಸಾಧ್ಯವೇ ಇಲ್ಲ. ಏನೇ ಆಗಲಿ,
> ಸೆಮೆಟಿಕ್ ವಾದವಂತೂ ಇಲ್ಲಿ ನಿರರ್ಥಕವೇ ಸರಿ.
>
> [email protected]
> ಸಿದ್ದರಾಮಪ್ಪ. ಎಸ್.ಎಂ
> ಸಶಿ ಕಲಾ
> ಸರ್ಕಾರಿ ಪ್ರೌಢ ಶಾಲೆ
> ಗಂಜಿಗೆರೆ. ಕೆ ಆರ್ ಪೇಟೆ ತಾ||
> ಮಂಡ್ಯ ಜಿಲ್ಲೆ
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAJCvfyUMp950EE3MAsmuTWKXJQL5Dc6zihOoirzsAOuANZYtYA%40mail.gmail.com
> <https://groups.google.com/d/msgid/socialsciencestf/CAJCvfyUMp950EE3MAsmuTWKXJQL5Dc6zihOoirzsAOuANZYtYA%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CACwGsz67JSdyu_Ktfw6uychUqkScQ00nRiWUMVWxkPYUOLnd%3DQ%40mail.gmail.com.
For more options, visit https://groups.google.com/d/optout.

Reply via email to