ಅಭಿವೃದ್ಧಿ ಮತ್ತು ವೈಚಾರಿಕತೆ

13 Jun, 2016ಅರವಿಂದ ಚೊಕ್ಕಾಡಿ
ಭಾರತಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆಯ ಅವಕಾಶವು 2004ರಲ್ಲಿ ಶೇ 26ರಿಂದ ಶೇ 49ಕ್ಕೆ
ಏರಿತು. ವಿದೇಶಿ ಬಂಡವಾಳವನ್ನು ಪಡೆಯುವುದರಲ್ಲಿ 2013ರಲ್ಲಿ 15ನೇ ಸ್ಥಾನದಲ್ಲಿದ್ದ ಭಾರತವು
2014ರಲ್ಲಿ 9ನೇ  ಸ್ಥಾನಕ್ಕೆ ಬಂದಿತು. 2015ರ ಆರಂಭದ 6 ತಿಂಗಳಲ್ಲಿ ₹ 2.1 ಲಕ್ಷ ಕೋಟಿ
ದೇಶಕ್ಕೆ ಹರಿದು ಬಂದಿದೆ.

ಭಾರತದ ಜಿಡಿಪಿಯ ಶೇ 10ರಷ್ಟು ಪಾಲು ನಿರ್ಮಾಣ ಕ್ಷೇತ್ರದಿಂದ  ಬರುತ್ತಿದ್ದು, 2012ರಿಂದ
2017ರ ನಡುವಿನ ಅವಧಿಯಲ್ಲಿ  ಮೂಲ ಸೌಕರ್ಯಗಳ ನಿರ್ಮಾಣಕ್ಕೆ ₹ 68 ಲಕ್ಷ ಕೋಟಿ ಹೂಡಿಕೆ
ಆಗಬೇಕೆಂಬುದು ಸರ್ಕಾರದ ನಿರೀಕ್ಷೆ.

ಆದರೆ ದೇಶದ ಹಳ್ಳಿಗಳಲ್ಲಿ ನೀರಿಲ್ಲ, ವೈದ್ಯರಿಲ್ಲ ಎಂಬ ಪರಿಸ್ಥಿತಿಯಲ್ಲಿ ಬದಲಾವಣೆಯಾದ
ಅನುಭವ ಸಿಗುತ್ತಿಲ್ಲ. ಅಭಿವೃದ್ಧಿಯು ಅಂಕಿ–ಅಂಶಗಳ ದಾಖಲೆಯಲ್ಲ. ಅದೊಂದು ಜೀವಂತ ಅನುಭವವಾಗಿ
ದಕ್ಕಬೇಕು. ಆದರೆ ಅಭಿವೃದ್ಧಿಯು ಹೆಚ್ಚು ದೌರ್ಜನ್ಯ ಮತ್ತು ಮೂಲ ಅಗತ್ಯಗಳ ಕೊರತೆಯ
ಅನುಭವವನ್ನು ಕೊಡುತ್ತಿದೆ. ಏಕೆ ಹೀಗೆ? ಇದಕ್ಕಿರುವ ಕಾರಣಗಳು ಎರಡು: ಹೂಡಿಕೆಯು ಉಂಟು
ಮಾಡಬೇಕಾದ ಪರಿಣಾಮಗಳನ್ನು ಉಂಟು ಮಾಡದೆ ಸೋರಿಕೆಯಾಗಿ ಹೋಗುತ್ತಿದೆ ಅಥವಾ ಅಭಿವೃದ್ಧಿಯ
ನೀಲನಕಾಶೆ ಸಮರ್ಪಕವಾಗಿಲ್ಲ.

ಭಾರತದ ಮಟ್ಟಿಗೆ ಇವೆರಡೂ ಸತ್ಯಗಳೆ. ಸರ್ಕಾರಗಳ ಮಿತಿಮೀರಿದ ಸಾಲಗಳು ಸರಿಯಾಗಿ ಹೂಡಿಕೆಯಾದರೆ
ಆದಾಯ  ಸೃಷ್ಟಿಯಾಗುತ್ತದೆ. ಸಮಸ್ಯೆ ಇಲ್ಲ. ಆದರೆ ಅದರಲ್ಲಿ ಬಹುಪಾಲು ಭ್ರಷ್ಟಾಚಾರಕ್ಕೆ
ಹೋಗಿ, ಉಳಿದದ್ದು ಪರಿಣಾಮಕಾರಿಯಾಗಿ ಹೂಡಿಕೆ ಆಗದಿದ್ದರೆ ಆದಾಯದ ಗಳಿಕೆ ಇರುವುದಿಲ್ಲ. ಬರುವ
ಆದಾಯ ಮತ್ತು ಮಾಡುವ ಸಾಲಗಳು ಹಿಂದಿನ ಸಾಲಗಳ ಬಡ್ಡಿ ಕಟ್ಟುವುದಕ್ಕೆ ವಿನಿಯೋಗವಾಗುತ್ತವೆ. ಈ
ಪರಿಸ್ಥಿತಿಗೆ ನಿಜವಾದ ಕಾರಣ ಅಭಿವೃದ್ಧಿಯ ಪ್ರಕ್ರಿಯೆಗೆ ಸ್ಪಷ್ಟ ವೈಚಾರಿಕ ನೆಲೆಗಟ್ಟು
ಇಲ್ಲದಿರುವುದು.

ಆದ್ದರಿಂದ ಲೈಂಗಿಕ ಶಿಕ್ಷಣ ಬೇಡ ಎನ್ನುವಾಗ, ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಲೈಂಗಿಕ
ದೌರ್ಜನ್ಯವನ್ನು ಹೇಗೆ ನಿಯಂತ್ರಿಸಬೇಕೆಂದು ಯೋಚಿಸುವುದೇ ಇಲ್ಲ. 1950ರಲ್ಲಿ 1000ಕ್ಕೆ
96.11ರಷ್ಟು ಹೆರಿಗೆ ಸಾವು ಇದ್ದ ಶ್ರೀಲಂಕಾದಲ್ಲಿ 2010ಕ್ಕೆ ಅದನ್ನು 33.4ಕ್ಕೆ ಇಳಿಸುವ
ಪ್ರಕ್ರಿಯೆಯಲ್ಲಿ ಸರ್ಕಾರ ಪ್ರತಿ ವರ್ಷವೂ ಅದಕ್ಕಾಗಿ ವಿನಿಯೋಗಿಸುವ ಹಣ ಕಡಿಮೆ ಮಾಡುತ್ತಾ
ಹೋಯಿತು. ಆರೋಗ್ಯದ ಅರಿವನ್ನು ಹೆಚ್ಚಿಸುತ್ತಾ ಹೋಯಿತು.

ಅಭಿವೃದ್ಧಿಗೆ ಹಣ ಖರ್ಚು ಮಾಡುವುದೇ ಪ್ರಧಾನವಲ್ಲ. ಸರಿಯಾದ ವಿಚಾರದ ಅರಿವನ್ನು ಬೆಳೆಸುವುದು
ಹೆಚ್ಚು ಮುಖ್ಯ. ರೈತರ ಸಾಲಬಾಧೆ ನಿವಾರಿಸಲು ಟಿಪ್ಪು ಸುಲ್ತಾನ್‌, ಖಾಸಗಿ
ಲೇವಾದೇವಿದಾರರಿಂದ ರೈತರು ಸಾಲ ಪಡೆಯುವುದನ್ನು ನಿಲ್ಲಿಸಿದ.  ರೈತರಿಗೆ ಬಡ್ಡಿರಹಿತ ಸಾಲ
ಕೊಡುವ ವ್ಯವಸ್ಥೆ ಮಾಡಿದ್ದ. ಅದು ಸರಿಯಾದ ಪರಿಣಾಮವನ್ನೇ ಬೀರಿತ್ತು.

ಪ್ರಸ್ತುತ ಅಭಿವೃದ್ಧಿಗೆ ಸರಿಯಾದ ವೈಚಾರಿಕತೆ ಅಗತ್ಯವಿದೆ. ಕೃಷಿ ರಂಗದಿಂದ ಯುವಜನರು
ನಗರಕ್ಕೆ ವಲಸೆ ಹೋಗುವುದನ್ನು ಸಮಸ್ಯೆ ಎಂದುಕೊಳ್ಳಲಾಗಿದೆ. ಆದರೆ ಅದು ಸಮಸ್ಯೆ ಅಲ್ಲ.
ಯುವಜನರು ವಲಸೆ ಹೋಗದೆ ಇದ್ದರೆ, ಇರುವ ಕೃಷಿ ಭೂಮಿಯು ಸಹೋದರರ ನಡುವೆ ಹಂಚಿಕೆಯಾಗಿ
ಛಿದ್ರವಾಗುತ್ತಿತ್ತು. ಸಮಸ್ಯೆ ಇರುವುದು ಪ್ರತಿಭಾವಂತ ಯುವಜನರು ಸಾಮೂಹಿಕವಾಗಿ ನಗರಕ್ಕೆ
ವಲಸೆ ಹೋಗುತ್ತಿರುವುದರಲ್ಲಿ. ಕೃಷಿ ರಂಗಕ್ಕೆ ಪ್ರತಿಭಾವಂತ ಯುವಕರು ಏಕೆ
ಹಂಚಿಕೆಯಾಗುತ್ತಿಲ್ಲವೆಂದರೆ ಪ್ರತಿಭಾವಂತರು ಗ್ರಾಮಗಳಲ್ಲಿ ಉಳಿದರೆ ಅವರಿಗೆ ಸಾಮಾಜಿಕ ಗೌರವ
ಸಿಗುವುದಿಲ್ಲ.

ಈ ಸಮಸ್ಯೆಯನ್ನು ಪರಿಹರಿಸಬೇಕಾದರೆ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಬೇಕು. ವಸಾಹತುಶಾಹಿ
ಆಡಳಿತದಲ್ಲಿ ಇಂಗ್ಲೆಂಡ್‌ನ ಸಿದ್ಧ ವಸ್ತುಗಳನ್ನು ಭಾರತದಲ್ಲಿ ಮಾರುವುದಕ್ಕೂ, ಕೃಷಿ ರಂಗದ
ಕಚ್ಚಾ ವಸ್ತುಗಳನ್ನು ಇಂಗ್ಲೆಂಡ್‌ಗೆ ಸಾಗಿಸುವುದಕ್ಕೂ ಅನುಕೂಲವಾಗುವಂತೆ ಕೃಷಿಗೆ ಹೊರತಾದ
ಗ್ರಾಮೀಣ ಉದ್ದಿಮೆಗಳನ್ನೆಲ್ಲ ಕೊಲ್ಲಲಾಯಿತು. ಆಗ ಪರಾವಲಂಬಿಯಾದ ಕೃಷಿ ರಂಗ ಇಂದಿಗೂ
ಪರಾವಲಂಬಿಯೇ ಆಗಿ ಉಳಿದಿದೆ.

ಇಂದು ಗ್ರಾಮಗಳಲ್ಲಿ ಒಂದು ಸೈಬರ್‌ ಸೆಂಟರ್‌ ಬೇಕು. ವೈದ್ಯರು ಇರುವ ಆಸ್ಪತ್ರೆ ಬೇಕು. ಆಯಾ
ಪ್ರದೇಶದ ಮುಖ್ಯ ಬೆಳೆಯನ್ನು ಆಧರಿಸಿದ ಕೈಗಾರಿಕೆ ಬೇಕು. ಒಂದು ಬ್ಯಾಂಕ್‌ ಬೇಕು. ಇವೆಲ್ಲ
ಆದಾಗ ಸಣ್ಣ ಸಣ್ಣ ಗ್ರಾಮೀಣ ಉದ್ದಿಮೆಗಳು ಬೆಳೆಯುತ್ತವೆ. ಅಲ್ಲಿನ ಉತ್ಪನ್ನಗಳನ್ನು ಸ್ಥಳೀಯ
ಮಾರುಕಟ್ಟೆಯಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯವರೆಗೂ ಒಯ್ಯುವ ಪ್ರಕ್ರಿಯೆಯಲ್ಲಿ ಗ್ರಾಮದ
ಪ್ರತಿಭಾವಂತ ಯುವಜನರಿಗೂ ಅಲ್ಲೇ ಉದ್ಯೋಗ ಸೃಷ್ಟಿಯಾಗುತ್ತದೆ. ಬ್ರಿಟಿಷರು ಭಾರತಕ್ಕೆ
ಬಂದದ್ದೇ ಅಂದಿನ ಗ್ರಾಮೀಣ ಉದ್ದಿಮೆಯ ಉತ್ಪನ್ನಗಳನ್ನು ಕೊಂಡೊಯ್ದು ಮಾರುವುದಕ್ಕಾಗಿ. ಭಾರತದ
ಗ್ರಾಮೀಣ ಉದ್ದಿಮೆಗಳ ಜ್ಞಾನ ಮತ್ತು ಕೌಶಲಗಳು ಇಂದಿನ ಅಗತ್ಯಕ್ಕೆ ಬೇಕಾದಂತೆ
ಉತ್ಪಾದನೆಯಲ್ಲಿ ತೊಡಗಿದರೆ ಇಂದಿಗೂ ಮಾರುಕಟ್ಟೆ ಇರುತ್ತದೆ. ಗ್ರಾಮೀಣ ಉದ್ದಿಮೆಗಳು
ಬಲಗೊಂಡಾಗ ಕೃಷಿ ಏಕಾಂಗಿಯಾಗಿ ಉಳಿಯುವುದಿಲ್ಲ. ಅದೂ ಸ್ವಾವಲಂಬಿಯಾಗುತ್ತದೆ.

ಕೃಷಿಯೂ ಸೇರಿದಂತೆ ಗ್ರಾಮಗಳಿಗೆ ನೀರಿನ ಅಗತ್ಯ ಹೆಚ್ಚಾಗಿದೆ ಎಂಬ ಚರ್ಚೆ ಎಲ್ಲೆಡೆಯೂ ಇದೆ.
ಸಮಗ್ರ ಭಾರತದ ಎಲ್ಲ ನದಿಗಳ ಜೋಡಣೆಯನ್ನು ಮಾಡಿದಾಗಲೂ ದೊರೆಯುವ ನೀರು 69 ಸಾವಿರ ಕೋಟಿ
ಕ್ಯೂಬಿಕ್‌ ಮೀಟರ್‌  ಮಾತ್ರ. ಬದಲಿಗೆ ಕೆರೆಗಳನ್ನು ಮುಚ್ಚಿಸುವುದನ್ನು ನಿಲ್ಲಿಸಿ ಸಣ್ಣ
ಸಣ್ಣ ಜಲಾಶಯಗಳನ್ನು ನಿರ್ಮಿಸುವುದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜಲಾಶಯಗಳನ್ನು
ನಿರ್ಮಿಸಿ, ಉಕ್ಕಿ ಹರಿಯುವ ನೀರನ್ನು ಸಂಗ್ರಹಿಸಿ ಬರಪೀಡಿತ ಪ್ರದೇಶಕ್ಕೆ ಸಾಗಿಸುವುದು,
ನೀರನ್ನು ಸಮರ್ಪಕವಾಗಿ ಬಳಸುವ ವೈಚಾರಿಕತೆಯನ್ನು ಬೆಳೆಸುವುದು, ನೀರಿನ ಸಮಸ್ಯೆ ಇರುವ
ಪ್ರದೇಶದಲ್ಲಿ ಕೃಷಿ ಬೆಳೆ ಮತ್ತು ಪದ್ಧತಿಯನ್ನು ಬದಲಾಯಿಸುವುದು; ಕಟ್ಟ ಕಡೆಗೆ ಅನಿವಾರ್ಯ
ಪ್ರದೇಶಗಳಿಗೆ ಸಮುದ್ರದ ನೀರನ್ನು ಶುದ್ಧೀಕರಿಸಿ ಇರಾನ್‌ ಮಾದರಿಯಲ್ಲಿ ಬಳಸುವುದು ಹೆಚ್ಚು
ಸೂಕ್ತವಾಗುತ್ತದೆ. ಹೊಯ್ಸಳರು 329 ವರ್ಷಗಳ ಆಳ್ವಿಕೆಯಲ್ಲಿ 60 ಸಾವಿರ ಕೆರೆಗಳನ್ನು
ಕಟ್ಟಿಸಿದ್ದರು. ಆದರೆ ಕೆರೆ ಕಟ್ಟಿಸುವುದಲ್ಲ; ಕೆರೆಗಳನ್ನು ಉಳಿಸುವ ಅಗತ್ಯದ ಅರಿವೇ ನಮಗೆ
ಆಗಿಲ್ಲ.

ಅಭಿವೃದ್ಧಿ ಆಗಬೇಕಾದರೆ ಮೊದಲು ಜನರ ಆಲೋಚನೆಗಳು ಸುಧಾರಣೆ ಆಗಬೇಕು. ಅದರ ಪರಿಣಾಮವಾಗಿ
ಬದುಕನ್ನು ಅರ್ಥ ಮಾಡಿಕೊಳ್ಳುವ ದೃಷ್ಟಿಕೋನ ಮತ್ತು ವರ್ತನೆಗಳಲ್ಲಿ ಬದಲಾವಣೆಯಾಗಿ ಸಾಮಾಜಿಕ
ಶಿಸ್ತು ಬರುತ್ತದೆ (ಆಗ ನದಿಗಳು ಉಕ್ಕುವ ಪ್ರದೇಶದಲ್ಲೆ ಮನೆ ಕಟ್ಟಿಕೊಂಡು ನೆರೆ ಹಾವಳಿ
ಉಂಟಾಯಿತೆಂದು ಸಮಸ್ಯೆಯನ್ನು ಎಳೆದು ಹಾಕಿಕೊಳ್ಳುವ ಪರಿಸ್ಥಿತಿ ಇರುವುದಿಲ್ಲ).

ಸಾಮಾಜಿಕ ಶಿಸ್ತು ಇದ್ದಾಗ ವ್ಯಕ್ತಿಗಳಿಗೆ ತಾವು ತಮ್ಮ ಅಭಿವೃದ್ಧಿಗಾಗಿ ಏನು ಮಾಡಬೇಕು
ಎಂಬುದು ಹೊಳೆಯುತ್ತದೆ. ಈ ಅಭಿವೃದ್ಧಿ ಕಾರ್ಯಕ್ಕೆ ಹಣ ಪೂರೈಕೆ  ಮಾಡಬೇಕಾಗುತ್ತದೆ. ಆದರೆ
ಅದಕ್ಕೆ ಮೊದಲು ಜನರನ್ನು ಅಭಿವೃದ್ಧಿಗೆ ವೈಚಾರಿಕವಾಗಿ ಸನ್ನದ್ಧಗೊಳಿಸುವ ಕಾರ್ಯಯೋಜನೆ
ರೂಪಿಸಬೇಕಾಗುತ್ತದೆ. ಅದಿಲ್ಲದೆ, ಹಣದ ಹೂಡಿಕೆಯ ಪ್ರಮಾಣದ ಆಧಾರದಲ್ಲಷ್ಟೇ ಅಭಿವೃದ್ಧಿ
ಯೋಜನೆ ರೂಪಿಸಿದರೆ ಹಣ ಪೋಲಾದೀತಷ್ಟೆ.


( ಶಿಕ್ಷಣದಲ್ಲಿನ ನಮ್ಮ ದುರಂತವೂ ಇದೆ ಅಲ್ಲವೇ)

[email protected]
ಸಿದ್ದರಾಮಪ್ಪ. ಎಸ್.ಎಂ
ಸಶಿ ಕಲಾ
ಸರ್ಕಾರಿ ಪ್ರೌಢ ಶಾಲೆ
ಗಂಜಿಗೆರೆ. ಕೆ ಆರ್ ಪೇಟೆ ತಾ||
ಮಂಡ್ಯ ಜಿಲ್ಲೆ

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAJCvfyXknWMq5QqaEsr3ZL8yPrT9J1qNAY2f5_itfD7z8N1-6A%40mail.gmail.com.
For more options, visit https://groups.google.com/d/optout.

Reply via email to