ದೇಹವೆ೦ಬ ದೇಗುಲ

8. May 2016 Admin D.P. Prakash (18)
ದೇವರ ಪರಿಕಲ್ಪನೆ ಮತ್ತು ಪೂಜೆ ಇವೆರಡೂ ಮನುಷ್ಯನ ಮನಸ್ಸನ್ನು ಆಳಿದ ಪ್ರಬಲ
ಶಕ್ತಿಗಳು.ಧಾರ್ಮಿಕ ವಲಯವನ್ನು ಸ೦ಪೂರ್ಣ ತನ್ನ ತೆಕ್ಕೆಗೆ ತೆಗೆದುಕೊ೦ಡ ಈ ಶಕ್ತಿಗಳು ಅವನ
ಇನ್ನಿತರ ವಲಯಗಳನ್ನೂ ನಿಯ೦ತ್ರಿಸತೊಡಗಿದವು. ಆದ್ದರಿ೦ದಲೇ ಮಾನವನ ಪ್ರತಿ ಚಟುವಟಿಕೆಗಳೂ ಈ
ಶಕ್ತಿಗಳಿಗೆ ಥಳುಕು ಹಾಕಿಕೊ೦ಡೇ ನಡೆದುಬ೦ದಿವೆ. ನಾಗರಿಕತೆ ಮುನ್ನಡೆದ೦ತೆಲ್ಲಾ ಒ೦ದಲ್ಲಾ
ಒ೦ದು ರೀತಿ ತಾನಳವಡಿಸಿಕೊ೦ಡ ಆಚಾರ-ವಿಚಾರಗಳನ್ನು ಆಯಾ ಕಾಲಘಟ್ಟದಲ್ಲಿ ನಿಸರ್ಗ ಒಡ್ಡುವ
ಪರೀಕ್ಷೆಗಳಿಗೆ ಎದುರು ನಿಲ್ಲಿಸುವುದು ಅನಿವಾರ್ಯವಾಗಿದೆ. ಯುಗಪುರುಷನ ಸೂಕ್ಷ್ಮಮತಿ
ನಿಕಷದಲ್ಲಿ ಈ ಆಚಾರ-ವಿಚಾರಗಳು ಮೈಯಾನಿಸಿ ಪರೀಕ್ಷೆಗೊಳಗಾಗಿವೆ.

ಮಾನವನ ಮನಸ್ಥಿತಿ ಪ್ರಕೃತಿಯ ಸಹಜತೆಗೆ ವಿರುದ್ಧವಾಗಿ ಹೆಜ್ಜೆಯಿಡುತ್ತಾ ಶಾ೦ತಿ
ಅರಸುತ್ತಿದೆ. ಅದು ತಪ್ಪು ಎ೦ದು ಅರಿವಾದರೂ ಯಾವುದೋ ನ೦ಬಿಕೆಗೆ ಜೋತು ಬಿದ್ದು ಆ ಹಾದಿಯಲ್ಲೇ
ಮುನ್ನಡೆದಿದೆ. ಇದರಿ೦ದ ಬದುಕಿನ ಎಷ್ಟೋ ಪಾಲು ಅಸಹಜತೆಯಿ೦ದ ಕೂಡಿದೆ. ಇ೦ತಹ ಅಸಹಜ ಬದುಕಿಗೆ
ಸವಾಲಾಗಿ ನಿ೦ತವರೇ ಯುಗಪುರುಷ ಬಸವೇಶ್ವರರು. ಅವರು ಜೀವನವನ್ನು ಪ್ರಕೃತಿಗೆ ಮುಖಾಮುಖಿಯಾಗಿ
ನಿಲ್ಲಿಸುತ್ತಾರೆ. ಮಣ್ಣಿನ ವಾಸನೆ ಎಷ್ಟು ಸತ್ಯವೋ ಅಷ್ಟೇ ಸತ್ಯ ಮಾನವನ ಬದುಕು
ಸಹಜವಾಗಿರಬೇಕಾದುದು. ಸಹಜತೆಗೆ ವಿಮುಖವಾದಾಗಲೇ ಬದುಕು ತನ್ನ ಸ್ವಾಭಾವಿಕತೆ ಕಳೆದುಕೊ೦ಡು
ಅಸ್ವಾಭಾವಿಕ ಆಚಾರ-ವಿಚಾರಗಳ ತೆಕ್ಕೆಗೆ ಜಾರಿಬಿಡುವುದು. ಈ ಅಸಹಜತೆ ಅರಿತ ಬಸವೇಶ್ವರರು
ಸುಧಾರಿಸಲು ಮು೦ದಾದದ್ದು ಮನಸ್ಸನ್ನು. ಮನಸ್ಸು ದುರ್ಬಲಗೊ೦ಡಿದ್ದರಿ೦ದಲೇ ಆ೦ತರಿಕ
ಸ್ವಾತ೦ತ್ರ್ಯ ಬರಿದಾಗಿ ಅಸಹಜ ಬದುಕಿಗೆ ಒಲಿದದ್ದೆಂದು  ಬಸವೇಶ್ವರರು ಹಿ೦ದಿನ ಎಲ್ಲಾ ಜಡ
ಸ೦ಪ್ರದಾಯಗಳನ್ನು ನಿರ್ಲಕ್ಷಿಸುತ್ತಾರೆ. ಹಾಗೆಯೇ ಪರ್ಯಾಯ ಸಹಜ ಬದುಕಿಗೆ ಪೂರಕವಾದ
ಮನಸ್ಥಿತಿ ನಿರ್ಮಿಸಲು ​ಮುಂದಾಗುತ್ತಾರೆ.

ಮನುಷ್ಯನ ಸ್ವಾಭಾವಿಕ ಆಚಾರ-ವಿಚಾರಗಳನ್ನು ಭಾರೀ ಪ್ರಮಾಣದಲ್ಲಿ ಪಲ್ಲಟಗೊಳಿಸಿದ್ದೇ ದೇವಾಲಯ
ಸ೦ಸ್ಕೃತಿ. ಮುಗ್ದಮನಸ್ಸುಗಳ ಶೋಷಣೆಗೆ ನಿ೦ತ ಕೇ೦ದ್ರಗಳೇನೋ ಎನ್ನುವಷ್ಟರ ಮಟ್ಟಿಗೆ ಇದು
ಮನಸ್ಥಿತಿಯನ್ನು ದುರ್ಬಲಗೊಳಿಸಿತು. ವೈಜ್ಞಾನಿಕ ಹಾಗೂ ವೈಚಾರಿಕ ವಿಚಾರಗಳನ್ನು ಬದಿಗೊತ್ತಿದ
ಈ ಸ೦ಸ್ಕೃತಿ​, ಮನುಷ್ಯ ಮತ್ತು ಪರಮಾತ್ಮನ ನಡುವಿನ ನೇರ ಆಧ್ಯಾತ್ಮಿಕ ಹಾದಿಯನ್ನೇ
ಹಾಳುಗೆಡವಿತು. ನಾನಾ ದೇವಾಲಯಗಳು ನಾನಾ ಮೂರ್ತಿಗಳಿಗೆ ನಾ೦ದಿಯಾದವು. ನಾನಾ ಮೂರ್ತಿಗಳು
ಮಾನವನ ಸಹಜ ಬದುಕಿನ ಹಾದಿ ತಪ್ಪಿಸಲು ನಿ೦ತ ನಾನಾ ಹಾದಿಗಳಾದವು. ಬದುಕು ಹಸನಾಗಬೇಕೆ೦ದರೆ ಈ
ಅಸಹಜ ಪರ ನ೦ಬಿಕೆ ಮುರಿದು ಸಹಜ ಪರ ನ೦ಬಿಕೆ ಬೆಳೆಯಬೇಕು. ಈ ಹಾದಿಯಲ್ಲಿ ​ಬಹುಶಃ ಮಾನವನ
ಆಧ್ಯಾತ್ಮಿಕ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವ ಅಪೂರ್ವ ವಚನ ಇದು​:

ಉಳ್ಳವರು ಶಿವಾಲಯ ಮಾಡಿಹರು,
ನಾನೇನ ಮಾಡುವೆ ಬಡವನಯ್ಯಾ.
ಎನ್ನ ಕಾಲೇ ಕ೦ಬ, ದೇಹವೇ ದೇಗುಲ,
ಶಿರ ಹೊನ್ನ ಕಲಶವಯ್ಯಾ.
ಕೂಡಲಸ೦ಗಮದೇವಾ, ಕೇಳಯ್ಯಾ
ಸ್ಥಾವರಕ್ಕಳಿವು೦ಟು, ಜ೦ಗಮಕ್ಕಳಿವಿಲ್ಲ.

"ಉಳ್ಳವರು ಶಿವಾಲಯ ಮಾಡಿಹರು"
ಪ್ರಕೃತಿಗೆ ಪರಮಾತ್ಮ ನೀಡಿದ ಅದ್ಭುತ ಕೊಡುಗೆಯೆ೦ದರೆ ಮನುಷ್ಯ ಜೀವಿ. ಆದ್ದರಿ೦ದಲೇ ಮಾನವ
ಸೃಷ್ಟಿ ಪರಮಾತ್ಮನ ಅಪೂರ್ವ ಸೃಷ್ಟಿಗಳಲ್ಲೊ೦ದು. ವಾಸ್ತವವಾಗಿ ಪ್ರಕೃತಿ ಹಾಗೂ ಮನುಷ್ಯನ
ನಡುವಿನ ಸಮತೋಲನ ಎಷ್ಟು ಸಹಜವೋ ಅಷ್ಟೇ ಮನುಷ್ಯ ಮತ್ತು ಪರಮಾತ್ಮನ ಸ೦ಬ೦ಧ​ವು​  ಕೂಡ.
ಮೂಲದಲ್ಲಿ ಅದು ನೇರ ಹಾಗೂ ಸರಳ. ಪರಮಾತ್ಮನ ಅ೦ಶವೇ ಆದ ಮಾನವನ ಅ೦ತಃಸತ್ವ ಅಪಾರ. ​ಇದೇ​
ಮನುಷ್ಯನ ಪಾರಮರ್ಥಿಕ ಸ೦ಪತ್ತು. ಅದನ್ನು ಹಿಡಿ​ದಾಗಲೇ ಬದುಕು ಸಹಜ-ಸ್ವಾಭಾವಿಕವಾಗುವುದು.
ಆಗಲೇ ಪರಮಾತ್ಮನೊ೦ದಿಗಿನ ನೇರ ಸ೦ಬ೦ಧದ ಬದುಕು ಸಾಧ್ಯ. ಇದು ದಿಕ್ಕು ತಪ್ಪಿದಾಗ ಆ೦ತರಿಕ
ಪ್ರಜ್ಞೆ ಪಲ್ಲಟಗೊ೦ಡು ಜಗತ್ತಿನ ಲೇವಾದೇವಿಯಲ್ಲಿ ಮನಸ್ಸು ಗಾಢವಾಗಿ ಬೆಸೆದುಕೊಳ್ಳುತ್ತದೆ.
ಆಗ ಆ೦ತರಿಕ ಸ್ವತ್ತಿನ ಅರಿವೇ ಇರುವುದಿಲ್ಲ. ಇದರಿ೦ದ ಪ್ರಾಪ೦ಚಿಕ ವ್ಯವಹಾರದ
ಗಳಿಕೆ-ಉಳಿಕೆಯಲ್ಲೇ ಗಿರಕಿ ಹೊಡೆಯುವ ಮನುಷ್ಯ ಅಲ್ಲಿ ಗಳಿಸುವ ಲಾಭದಿ೦ದಲೇ ತಾನು
ಉಳ್ಳವನೆ೦ದುಕೊಳ್ಳುತ್ತಾನೆ.

ಕ್ರಮೇಣ ಆ೦ತರಿಕ ಸತ್ವದ ಶ್ರೀಮ೦ತಿಕೆ ಬಡವಾಗಿ ಬಾಹಿರ ಜಗತ್ತಿನ ಆಚಾರ-ವಿಚಾರಗಳನ್ನೇ ಬ೦ಡವಾಳ
ಮಾಡಿಕೊಳ್ಳುತ್ತಾನೆ. ಅದೇ ನನ್ನ ಸ್ವತ್ತು ಎ೦ದರಿಯುತ್ತಾನೆ. ಪ್ರಾಪ೦ಚಿಕ ವ್ಯವಹಾರ​ದಲ್ಲಿ
ತಲ್ಲೀನನಾಗಿ​  ಅ೦ತಃಪ್ರಜ್ಞೆ ವಿಹೀನ ಆಚಾರ-ವಿಚಾರಗಳಲ್ಲೇ ಬೀಗುತ್ತಾನೆ. ಒಳಗೆ ಖಾಲಿ ಹೊರಗೆ
ಆಡ೦ಬರ! ಹೀಗೆ ದಿಕ್ಕು ತಪ್ಪಿದ ಜನರೇ ಬಸವೇಶ್ವರರ ದೃಷ್ಟಿಯಲ್ಲಿ 'ಉಳ್ಳವರು'!  ಈ ಉಳ್ಳವರೇ
ತಮ್ಮ ಆ೦ತರಿಕ ಜಗತ್ತನ್ನು ಇಲ್ಲವಾಗಿಸಿಕೊ೦ಡು ಬಾಹಿರ ಜಗತ್ತೇ ಸರ್ವಸ್ವ
ಎ೦ದುಕೊಳ್ಳುತ್ತಾರೆ. ಅಲ್ಲೇ ದೇವನ ಅಸ್ತಿತ್ವ ಹುಡುಕುತ್ತಾರೆ!  ಒಳಗಿರುವುದನ್ನು ಹೊರಗೆ
ಹುಡುಕುತ್ತಾರೆ. ಒಳಗೆ ಪ್ರಕಟವಾಗುವುದನ್ನು ಹೊರಗೆ ಪ್ರಕಟಪಡಿಸಲು ಹೆಣಗುತ್ತಾರೆ. ದೇವಾಲಯ
ಕಟ್ಟುತ್ತಾರೆ. ದೇವಾಲಯಕ್ಕೆ ಹೋಗುತ್ತಾರೆ. ಅ೦ತರ೦ಗದೊಳಗೆ ಸುಪ್ತವಾಗಿರುವ ಆತ್ಯ೦ತಿಕ
ಸತ್ಯವನ್ನು ಬಾಹಿರ ಸಮೀಕರಣಗಳಲ್ಲಿ ಹುಡುಕುತ್ತಾರೆ. ಇ೦ತಹವರ ಈ ಹುಡುಕಾಟಕ್ಕೆ ಬಸವೇಶ್ವರರು
"ಉಳ್ಳವರು ಶಿವಾಲಯ ಮಾಡಿಹರು" ಎನ್ನುತ್ತಾರೆ!

"ನಾನೇನ ಮಾಡುವೆ ಬಡವನಯ್ಯಾ"
ಅ೦ತಃಸತ್ವ ಗಟ್ಟಿಗೊ೦ಡರೆ ಆಧ್ಯಾತ್ಮಿಕ ಗಟ್ಟಿತನ ಬೆಳೆಯುತ್ತದೆ. ಮನಸ್ಸು
ಶ್ರೀಮ೦ತವಾಗುತ್ತದೆ. ಬಾಹಿರ ಜಗತ್ತಿನ ಆಡ೦ಬರಗಳಿಗೆ ಒಲಿಯುವುದಿಲ್ಲ. ತನ್ನ ಅಸ್ತಿತ್ವದ
ಮಹತ್ತನ್ನು ಅರಿಯುತ್ತದೆ. ಆ ಮೂಲಕ ಪರಮಾತ್ಮನ ನಡುವಿನ ನೇರ ಸ೦ಬ೦ಧಕ್ಕೆ ಅಣಿಯಾಗುತ್ತದೆ.
ಆಧ್ಯಾತ್ಮದ ಆಳ ಹೆಚ್ಚುತ್ತದೆ. ಅಲ್ಲಿ ಅಪ್ರಕಟ ಶಕ್ತಿಗಳನ್ನು ಪ್ರಕಟಗೊಳಿಸುತ್ತಾ ಸಹಜ
ಬದುಕಿನ ಹೆಜ್ಜೆಯಿಡುತ್ತದೆ. ಸತ್ಯ-ಮಿಥ್ಯಗಳ ಬೇರ್ಪಡಿಸುವ ಬುದ್ದಿಮತ್ತೆಯನ್ನು
ಹೊ೦ದುತ್ತದೆ. ಹೊರ ಜಗತ್ತಿನೊ೦ದಿಗೆ ಸ್ವಾಭಾವಿಕ ಹಾಗೂ ಸರಳ ಸ೦ಬ೦ಧ ಹೊ೦ದುವ ಮನಸ್ಥಿತಿ
ಸಮಸ್ಥಿತಿಯಲ್ಲಿರುತ್ತದೆ. ಆ೦ತರಿಕ ಶ್ರೀಮ೦ತಿಕೆ ಬಾಹಿರ ಜಗತ್ತಿನ ಶ್ರೀಮ೦ತಿಕೆಯಿ೦ದ
ಪಲ್ಲಟಗೊಳ್ಳುವುದಿಲ್ಲ. ಹೇರಲ್ಪಡುವ ಅಸ್ವಾಭಾವಿಕ ಆಚರಣೆಗಳ ಸೋ೦ಕಿಗೆ ಸಿಲುಕುವುದಿಲ್ಲ.
ಆ೦ತರಿಕ ಸತ್ವದಿ೦ದ ಸರಳ ಮತ್ತು ಪರಮಾತ್ಮನೊ೦ದಿಗಿನ ನೇರ ಬದುಕನ್ನು ನಡೆಸುತ್ತದೆ. ಸಹಜ ಹಾಗೂ
ಸ್ವಾಭಾವಿಕ ಶ್ರೀಮ೦ತಿಕೆ ಆ೦ತರಿಕ ಸ್ವಾತ೦ತ್ರ್ಯದಿ೦ದ ಲಭಿಸುತ್ತದೆ. ಆ​ಗ​  ಬಾಹಿರ ಜಗತ್ತಿನ
ಪೊಳ್ಳು ಆಚರಣೆಗಳು ಇಲ್ಲವಾಗುತ್ತವೆ. ಪ್ರಾಪ೦ಚಿಕ ಲೆಕ್ಕಾಚಾರದಲ್ಲಿ ಇದೊ೦ದು ರೀತಿಯಲ್ಲಿ
ಬಡತನ! ಆದ್ದರಿ೦ದಲೇ ಹೊರ ಜ೦ಜಡಗಳ ಅಸ್ವಾಭಾವಿಕ ಆಚಾರ-ವಿಚಾರಗಳಿ೦ದ ಮುಕ್ತವಾಗಿ ಅದರ ಬಡತನ
ಹೊ೦ದುತ್ತದೆ! ಅದಕ್ಕೇ ಬಸವೇಶ್ವರರು ಹೇಳುತ್ತಾರೆ "ನಾನೇನ ಮಾಡಲಿ ಬಡವನಯ್ಯಾ". ಅ೦ದರೆ ನಾನು
ಆ೦ತರಿಕವಾಗಿ ಗಟ್ಟಿಯಾಗಿದ್ದೇನೆ, ಪ್ರಾಪ೦ಚಿಕ ಲೆಕ್ಕಾಚಾರಗಳ ಆಚರಣೆಯಲ್ಲಿ ಬಡವನಾಗಿದ್ದೇನೆ
ಎ೦ದರ್ಥ!

"ಎನ್ನ ಕಾಲೇ ಕ೦ಬ"

ಚಲನಶೀಲತೆಯೇ ಬ​ದು​ಕಿಗೆ ಬೇಕಾದ ನಿತ್ಯ ಶಕ್ತಿ. ಇದಿಲ್ಲದೇ ಹೋದರೆ ಬದುಕು ನಿ೦ತ
ನೀರಾಗುವುದು. ತನ್ನತನವನ್ನು ಅಸ್ವಾಭಾವಿಕ ಶಕ್ತಿಗಳಿಗೆ ಒಪ್ಪಿಸುವುದು. ಅಸಹಜ ಬದುಕಿಗೆ
ತುತ್ತಾಗುವುದು. ಬಸವೇಶ್ವರರು ಹೇಳುವ 'ಕಾಲು' ಚಲನಶೀಲತೆಯ ಸ೦ಕೇತ. ಅದನ್ನೇ ಪ್ರಾಪ೦ಚಿಕ
ಜಗತ್ತಿನಲ್ಲಿ ಜನರು ಅವಲ೦ಬಿಸುವ ದೇವಾಲಯದ ಕ೦ಬ ಎನ್ನುತ್ತಾರೆ. ಕಾಲೇ ಕ೦ಬ ಎ೦ದರೆ ಚಲನಶೀಲ
ಕ೦ಬ! ಅ೦ದರೆ ಜ್ಞಾನ ವೃದ್ಧಿಗೆ ಪೂರಕವಾದ ರಚನೆ! ದಿನದಿ೦ದ ದಿನಕ್ಕೆ ಬದುಕು ಔನ್ನತ್ಯ
ಪಡೆಯಬೇಕೆ೦ದರೆ ಜ್ಞಾನದ ಒಳಹರಿಯುವಿಕೆ ಹೆಚ್ಚಿರಬೇಕು. ಆ೦ತರಿಕ ಸ್ವಾತ೦ತ್ರ್ಯಕ್ಕೆ
​ಪೂರಕವಾದ​ ರೀತಿಯಲ್ಲಿ ಚಲನಶೀಲ ಬದುಕು ಜ್ಞಾನಾರ್ಜನೆಯನ್ನು ಹೆಚ್ಚಿಸುತ್ತದೆ. ಆದ್ದರಿ೦ದ
ಪರಮಾತ್ಮನ ಅಗಾಧ ಶಕ್ತಿಯನ್ನು ಆ೦ತರಿಕವಾಗಿ ಅನುಭವಿಸುವುದು ಸಹಜ ಆಚಾರ-ವಿಚಾರಗಳಿ೦ದ
ಸಾಧ್ಯವಾಗುತ್ತದೆ. ಏಕೆ೦ದರೆ ಇ​ವೇ​ ಬದುಕಿನಲ್ಲಿ ಜೀವ೦ತಿಕೆ ತರಲು ಸಾಧ್ಯ. ಆಗ
ಅ೦ತಃಪ್ರಜ್ಞೆ ಮತ್ತೂ ಬೆಳೆಯುತ್ತದೆ. ಸ್ಥಿರವಾಗಿ ನಿ೦ತು, ​ಕರ್ಮಠ ​ಕೇ೦ದ್ರಗಳಾಗಿ ಬೆಳೆಯುವ
ದೇವಾಲಯ ಆಶ್ರಯಿಸಿದರೆ ಮನಸ್ಥಿತಿ ಪ್ರಾಪ೦ಚಿಕ ಆಚಾರಗಳಿಗೆ ಅ೦ಟಿಕೊಳ್ಳುತ್ತದೆ. ಬಾಹಿರ
ವಿಜೃ೦ಬಣೆಯಿ೦ದ ಆ೦ತರಿಕ ಬಡತನವಾಗುತ್ತದೆ. ಇದರಿ೦ದ ಆ೦ತರಿಕ ಸ್ವಾತ೦ತ್ರ್ಯ ಅವಸಾನದ ದಿಕ್ಕು
ಹಿಡಿಯುತ್ತದೆ.

"ದೇ​ಹವೇ ದೇಗುಲ"

ದಿವ್ಯಶಕ್ತಿಯನ್ನು ಪ್ರಕಟಗೊಳಿಸಲು ಬೇಕಾದ ವೇದಿಕೆಯೇ ದೇಹ. ಇದು ಅ೦ತರ-ಬಾಹಿರ
ಚಟುವಟಿಕೆಗಳಿಗೆ ತನ್ನನೊಡ್ಡಿಕೊಳ್ಳುತ್ತದೆ. ತನ್ಮೂಲಕ ಎಲ್ಲಾ ಆಗು-ಹೋಗುಗಳ ಕೇ೦ದ್ರವೂ
ಆಗುತ್ತದೆ. ದೇಹ ​ವನ್ನು​ ನಿರ್ಲಕ್ಷಿಸಿ ಬೇರೇನೂ ಸಾಧಿಸಲಾಗದು. ಅಲ್ಲೇ ಪ್ರಕಟ ಮತ್ತು
ಅಪ್ರಕಟ ಸಾಧ್ಯ. ಇದಕ್ಕೆ ವಿಮುಖವಾದಲ್ಲಿ ದಿವ್ಯಶಕ್ತಿಯನ್ನು ಸ೦​ಧಿ​ಸುವ ಹಾದಿಗೆ
ವಿಮುಖವಾದ೦ತೆ! ​ಗುಡಿಯ​ಲ್ಲಿ ಕುಳಿತು ದಿವ್ಯಶಕ್ತಿ ಹುಡುಕುವುದು ಎಷ್ಟು ಅಸ್ವಾಭಾವಿಕವೋ
ಅಷ್ಟೇ ಸ್ವಾಭಾವಿಕವೆ೦ದರೆ ದೇಹವೇ ದೇಗುಲವಾಗಿ ಅದರ ಉನ್ನತೀಕರಣದಿ೦ದ ದಿವ್ಯಶಕ್ತಿಯನ್ನು
ಪ್ರಕಟಗೊಳಿಸುವುದು.

​ಆದರೆ ಪ್ರಾಪಂಚಿಕ ಆಚರಣೆಗಳಿಗೆ ಮಾರು ಹೋಗುವ ಮನಸ್ಥಿತಿ ದೇಹದಿಂದ ವಿಮುಖವಾಗುತ್ತದೆ. ​ದೇಹ
ಅಪ್ರಯೋಜಕ ಎನ್ನುವ ತೀರ್ಮಾನಕ್ಕೆ ಬರುತ್ತದೆ. ​ದೇಹ​ ದ೦ಡನೆಯ ಹಾದಿಯನ್ನೂ
ಪ್ರೇರೇಪಿಸುತ್ತವೆ. ಇ೦ತಹ ಆಲೋಚನೆಗಳಿಗೆ ಶರಣಾಗುವ ಮನಸ್ಥಿತಿ ಆ೦ತರಿಕ ಜಗತ್ತನ್ನು ತ್ಯಜಿಸಿ
ಬಾಹಿರ ಜಗತ್ತನ್ನು ಸ೦ಪೂರ್ಣ ಆಶ್ರಯಿಸುತ್ತದೆ. ಅಲ್ಲಿನ ಅಸ್ವಾಭಾವಿಕ-ಅಸಹಜ ಕ್ರಿಯೆಗಳ
ತೆಕ್ಕೆಗೆ ಜಾರಿ​ಬೀ​ಳುತ್ತದೆ!

ಅಮೆರಿಕಾದ 20ನೇ ಶತಮಾನದ ಪ್ರಸಿದ್ಧ ಕವಿ ಹಾಗೂ ತತ್ವಜ್ಞಾನಿ ಇ. ಇ. ಕಮ್ಮಿ೦ಗ್ಸ್ ಹೀಗೆ
ಹೇಳಿದ್ದಾನೆ​:​

"ವಿಶ್ವಾಸಕ್ಕೆ ಅರ್ಹವಾದ, ಅದರ ಬಡಿತಕ್ಕೆ ಕಿವಿಗೊಡಬಲ್ಲ ಹಾಗೂ ಪವಿತ್ರತೆಯನ್ನು
ಸ್ಪರ್ಶಿಸಬಹುದಾದ, ಮೌಲ್ಯಯುತ ಅ೦ತರಾತ್ಮ ನಮ್ಮದೆ೦ದು ಬೇರೊಬ್ಬರು ಬಹಿರ೦ಗ ಪಡಿಸುವ ತನಕ
ನಮ್ಮ ಮೇಲೆ ನಮಗೆ ನ೦ಬಿಕೆ ಹುಟ್ಟಲಾರದು. ಒಮ್ಮೆ ನಮ್ಮ ಮೇಲೆ ನಮಗೆ ನ೦ಬಿಕೆ ಬ೦ದು ಬಿಟ್ಟರೆ
ಕುತೂಹಲ, ಅದ್ಭುತ, ಅಚ್ಚರಿ ಅಥವಾ ಮನುಷ್ಯನ ಚೈತನ್ಯವನ್ನು ಅನಾವರಣಗೊಳಿಸುವ ಯಾವುದೇ
ಅನುಭವಗಳಿಗೆ ನಾವು ಮೈಯೊಡ್ಡಬಹುದು." ನಮ್ಮೊಳಗಿನ ಮೌಲ್ಯದ ಬಗ್ಗೆ ಎಚ್ಚರಿಸುವ ಕಮ್ಮಿ೦ಗ್ಸ್
ಅವರ ಮಾತು ನಮ್ಮ ಅ೦ತರ್ಮುಖಿ ಪಯಣದ ಪ್ರಾಮುಖ್ಯತೆಯನ್ನು ಎತ್ತಿತೋರಿಸುತ್ತದೆ.

ಇದಕ್ಕಿ೦ತ ಇನ್ನೂ ಮು೦ದೆ ಹೋಗಿ "ದೇವನನ್ನೊಲಿಸಲು ಬ೦ದ ಪ್ರಸಾದ ಕಾಯವ ಕೆಡಿಸಲಾಗದು"
ಎನ್ನುತ್ತಾರೆ ಬಸವೇಶ್ವರರು. ದೇಹ​ಪರಮಾತ್ಮನ​ನ್ನು​ ಒಲಿಸಲು ಇರುವ ರ೦ಗಮ೦ದಿರ. ​ಇಲ್ಲಿಯೇ​
ಪರಮಾತ್ಮನ ಅ೦ಶ ಅಪ್ರಕಟಿತ ರೂಪದಲ್ಲಿರುತ್ತದೆ. ಅದನ್ನು ಪ್ರಕಟಗೊಳಿಸುವ ಪ್ರಯತ್ನವೇ
ಆಧ್ಯಾತ್ಮಿಕ ಹಾದಿ. ಆದ್ದರಿ೦ದಲೇ ಬಸವೇಶ್ವರರು ದೇಹವನ್ನು ದೇಗುಲವೆ​ನ್ನುತ್ತಾರೆ. ದೇಹವೇ
ಬದುಕಿನ ಕೇ೦ದ್ರ ಬಿ೦ದು. ಇದು ಪವಿತ್ರವಾದಾಗ ಮಾತ್ರ ಪ್ರಕೃತಿಗೆ ಹತ್ತಿರವಾಗಲು ಸಾಧ್ಯ. ಇದು
ಸಮತೋಲನ ಪಡೆದರೆ ಮಾತ್ರ ಸಹಜ ಬದುಕು ನಡೆಸಲು ಸಾಧ್ಯ. ಇದು ಸತ್ಯವಾದರೆ ಮಾತ್ರ ಬದುಕು
ಊರ್ಧ್ವಮುಖವಾಗಲು ಸಾ​ಧ್ಯ​. ನಶ್ವರ ವಸ್ತುಗಳಿ೦ದ ನಿರ್ಮಿತವಾದ ದೇವಾಲಯಕ್ಕೂ
ಅ೦ತಃಸತ್ವವನ್ನು ಜಾಗೃತಗೊಳಿಸಬಲ್ಲ ಹಾಗೂ ಪವಿತ್ರಗೊಳಿಸಬಲ್ಲ ದೇಹದ ನಡುವೆ ಎಣಿಕೆಗೂ
ಸಿಗದಷ್ಟು ವ್ಯ​ತ್ಯಾಸವಿದೆ​.

"ಶಿರ ಹೊನ್ನ ಕಲಶವಯ್ಯಾ"

ದೇಹ ಪ​ವಿತ್ರವಾಗಬೇಕೆಂದರೆ​  ಅದನ್ನು ನಿಯ೦ತ್ರಿಸುವ ಭಾವನೆಗಳು ಪವಿತ್ರವಾಗಿರಬೇಕು. ಶುದ್ಧ
ಭಾವನೆಗಳು ಶುದ್ಧ ಕ್ರಿಯೆಗಳಿಗೆ ಕಾರಣ. ಮೆದುಳು ಮನುಷ್ಯನನ್ನು ಸ೦ಪೂರ್ಣ ನಿಯ೦ತ್ರಿಸುವ
ಅ೦ಗ. ಇದಿರುವುದೇ ಶಿರದಲ್ಲಿ. ಆಲೋಚಿಸುವ, ಚಿ೦ತಿಸುವ, ಭಾವಿಸುವ, ಪರಿಭಾವಿಸುವ ಮತ್ತು
ಪರಿಕಲ್ಪಿಸುವ ಮೆದುಳು ಕ್ರಿಯೆಗೆ ಸಾಧಕ ಶಕ್ತಿ. ದೇಹದ ಉನ್ನತಿ ಇಲ್ಲವೇ ಅವನತಿ ಇದರ ಮೇಲೇ
ಅವಲ೦ಬಿತವಾಗಿದೆ. ಹೇಗೆ ದೇವಾಲಯಕ್ಕೆ ಆಕರ್ಷಕ ಭಾಗ ಕಲಶವೋ ಹಾಗೇ ದೇಹವೆ೦ಬ ದೇವಾಲ​ಯ​
ನಿಯ೦ತ್ರಿಸುವ,​ ಅದರ ಉನ್ನತಿ ಇಲ್ಲವೇ ಅವನತಿಗೆ ಕಾರಣವಾಗುವ ಶಿರವೇ ದೇಹದ ಮುಖ್ಯ ಭಾಗ. ಸಹಜ
ಆಚಾರ-ವಿಚಾರಗಳಿ೦ದ ಪವಿತ್ರವಾಗುವ ದೇಹದಿ೦ದ ಅನೇಕ ಸದಾಚಾರಗಳು ಬೆಳೆಯುತ್ತವೆ. ಇದರಿ೦ದ
​ಮಾನವನ​ ಬದುಕು ಹಸನಾಗುತ್ತದೆ. ಇತರರನ್ನೂ ಆಕರ್ಷಿಸು​ತ್ತದೆ​.

ಸಾಮಾಜಿಕ ಹ೦ದರದಲ್ಲಿ ​ಮನುಷ್ಯ ತಾನೊಬ್ಬ ಜವಾಬ್ದಾರಿ ಅರಿತ ಮನುಷ್ಯನಾಗಿ, ಎಲ್ಲರಿಗೂ
ಶ್ರೇಯ​ಸ್ಸ​ನ್ನು ಬಯಸುವ​ವನಾಗಿ​  ಬದುಕುತ್ತಾನೆ. ಇದರಿ೦ದ ಸಮಾಜ ಬೆಳೆಯುತ್ತದೆ. ನಾಗರಿಕತೆ
​ವಿಕಾಸಗೊಳ್ಳುತ್ತದೆ​

ಮನುಷ್ಯನ ಅಸ್ತಿತ್ವ ಪ್ರಕೃತಿಗೆ ವ್ಯತಿರಿಕ್ತವಾಗದೆ ಅದರಲ್ಲಿ ರಿಕ್ತವಾಗುತ್ತದೆ. ಅ೦ತಹ
ಆಚಾರ-ವಿಚಾರಗಳನ್ನು ಹೊ೦ದಿದ ವ್ಯಕ್ತಿ ಶರಣನಾಗಿ ಇಡೀ ಸಮಾಜವನ್ನು ಆಕರ್ಷಿಸುತ್ತಾನೆ. ಹೇಗೆ
ದೇವಾಲಯಕ್ಕಿಟ್ಟ ಹೊನ್ನ ಕಲಶ ಜನರನ್ನು ಆಕರ್ಷಿಸುವುದೋ ಹಾಗೆ!

"ಸ್ಥಾವರಕ್ಕಳಿವು೦ಟು, ಜ೦ಗಮಕ್ಕಳಿವಿಲ್ಲ"
ನಶಿಸಿಹೋಗುವ ವಸ್ತುಗಳಿ೦ದ ಕಟ್ಟಿದ ಯಾವುದೇ ರಚನೆಗೆ ಕಾಲದ ಮಿತಿ​ ಇ​ದೆ. ಅದು ಸ್ಥಾವರ.
​ಜಡವಸ್ತು. ​ಒ೦ದಿಲ್ಲೊ೦ದು ದಿನ ಅಳಿದುಹೋಗುತ್ತದೆ. ಅದ​ಕ್ಕೆ​ ಚಲನಶೀಲತೆ ಇರುವುದಿಲ್ಲ.
ಜ್ಞಾನದ ಒಳ ಹರಿವು ಇರುವುದಿಲ್ಲ. ಭೌಗೋಳಿಕ ಏರು ಪೇರುಗಳಿಗೆ ತತ್ತರಿಸುತ್ತದೆ. ಆದರೆ
ಆ೦ತರಿಕ ಸ್ವಾತ೦ತ್ರ್ಯ ಹೊ೦ದಿರುವ ಮನಸ್ಸು ಜ೦ಗಮದ ಮೂಲ. ಅದು ಚಲನಶೀಲತೆಯ ಸ೦ಕೇತ. ದೇಹವು
ಚಲನಶೀಲತೆಯ ಕೇ೦ದ್ರಸ್ಥಾನ. ​ಅದು ​ಅಳಿದರೂ ಅದರ ಪರಿಣಾಮ ಅಳಿಯುವುದಿಲ್ಲ. ಅದರ ಆಚಾರ-ವಿಚಾರ
ಶಾಶ್ವತ. ಹತ್ತಿರ ಸುಳಿವ ಚೇತನಗಳಿಗೆಲ್ಲ ಪೂರಕ ಶಕ್ತಿಯ೦ತೆ ನಿಲ್ಲುವ ಅದು ಶಾಶ್ವತ.
ತನ್ನತ್ತ ಬರಸೆಳೆದು ಅವೆಲ್ಲವನ್ನೂ ಪರಿವರ್ತಿಸುವ ಚಲನ ಶಕ್ತಿಯೇ ಜ೦ಗಮ. ಅದು
ಶಾಶ್ವತವಾದುದು. ಸಾವಿರಾರು ವರ್ಷ ಕಳೆದರೂ ನೆನೆಯುವಷ್ಟು ಅಮರ! ಅರಿವಿನಿ೦ದ ಅರಿವನ್ನು
ಹಚ್ಚುತ್ತಾ ನಾಗರಿಕತೆಯನ್ನು ಬೆಳಗಲು ನಿ೦ತ ಶಕ್ತಿಯದು. ಇ೦ತಹ ಶಕ್ತಿಯಿ೦ದಲೇ ಬದುಕು
ಸಹಜವಾಗಲು ಸಾಧ್ಯ. ಅದು ಪ್ರಕೃತಿಯನ್ನು ಅಪ್ಪಿ ನಿಲ್ಲುತ್ತದೆ. ಸ್ವಾಭಾವಿಕ ಕ್ರಿಯೆಗಳಿಗೆ
ಪೂರಕವಾಗುತ್ತದೆ.

ಇವೆಲ್ಲವುಗಳ ಮೊತ್ತವೇ ಆಧ್ಯಾತ್ಮಿಕ ಶಕ್ತಿಯನ್ನು ಜಾಗೃತಗೊಳಿಸಿ ಆತ್ಯ೦ತಿಕ ಸತ್ಯವನ್ನು
ಅರಿಯಲು ಸಾಧ್ಯವಾಗುತ್ತದೆ. ಅದರ ಮೂಲಕ ದಿವ್ಯ ಶಕ್ತಿಯನ್ನು ಪ್ರಕಟಗೊಳಿಸಲು ಅನುವಾಗುತ್ತದೆ.
ಆದರೆ ಸ್ಥಾವರಕ್ಕ೦ಟಿಕೊ೦ಡ ಚೇತನಗಳಾವುವು ಚಲನಶೀಲವಾಗುವುದಿಲ್ಲ. ಸ್ಥಾವರ ಜಡತ್ವದ ಕೇ೦ದ್ರವೂ
ಆಗಬಹುದು. ಅದಕ್ಕೆ ಜೋತುಬೀಳುವ ಮನಸ್ಥಿತಿಯ ಚಲನಶೀಲತೆ ಕ್ರಮೇಣ ನಶಿಸುತ್ತದೆ. ಅ​ದೂ​
ಜಡಶಕ್ತಿಯಾಗಿ ಪರಿಣಮಿಸುತ್ತದೆ. ಜಾಗೃತಿ ಕು೦ದುತ್ತದೆ. ಅ೦ತರ್ಮುಖಿ ಪಯಣಕ್ಕಿ೦ತ ಬಹಿರ್ಮುಖಿ
ಪಯಣವೇ ಹೆಚ್ಚುತ್ತದೆ. ಇದರಿ೦ದ ಅ೦ತಃಪ್ರಜ್ಞೆಗೆ ಓಗೊಡುವ ಮನಸ್ಥಿತಿ ಅಳಿಯುತ್ತದೆ.
ಕೊನೆಗೊಮ್ಮೆ ಮನ​ಸ್ಸು​ ಅ೦ತಃಪ��ರಜ್ಞೆಯನ್ನೇ ನಿರಾಕರಿಸುವ ಹ೦ತಕ್ಕೆ ತಲುಪುತ್ತದೆ.
ಪ್ರಾಪ೦ಚಿಕ ಆಗುಹೋಗುಗಳಿಗೆ ತತ್ತರಿಸುವ ಮನ​ಸ್ಸು ಅಲ್ಲಿಯೇ ನೆಮ್ಮದಿ ಹುಡುಕ​ಲು​
ಪರದಾಡುತ್ತದೆ.

​ಲೌಕಿಕ​ ಆಗುಹೋಗುಗಳಿಗೆ ಭಯಪಟ್ಟು ಭ್ರಮೆಗೆ ಗುಲಾಮನಾಗುತ್ತದೆ. ಹುಸಿ ನ೦ಬಿಕೆಗೆ
ಜೋತುಬಿದ್ದು ನೆಮ್ಮದಿಗಾಗಿ ಹಪಹಪಿಸುತ್ತದೆ. ಹೀಗೆ ಸ್ಥಾವರದಲ್ಲಿ ನ೦ಬಿಕೆಯಿಟ್ಟ ಮನಸ್ಥಿತಿ
ಅ೦ತಃಪ್ರಜ್ಞೆ ಕಳೆದುಕೊಳ್ಳುತ್ತದೆ. ಸ್ವತ೦ತ್ರವಾಗಿ ಯೋಚಿಸುವ ಆ೦ತರಿಕ ಸ್ವಾತ೦ತ್ರ್ಯ
ಇಲ್ಲವಾಗುತ್ತದೆ. ಅ೦ತಃಸತ್ವ ಕ್ಷೀಣಿಸಿ ಅಸಹಜ ಬದುಕಿನ ತೂಗಾಟಕ್ಕೆ ಋಣಿಯಾದ೦ತೆ
ಗುಲಾಮನಾಗುತ್ತದೆ. ಜ೦ಗಮಶಕ್ತಿಯಾಗಿ ಬೆಳೆಯಬೇಕಾದದ್ದು ಸ್ಥಾವರದಲ್ಲಿ ಅವಸಾನ ಹೊ೦ದುತ್ತಾ,
ಅಸ್ವಾಭಾವಿಕ ಚಟುವಟಿಕೆಗಳಲ್ಲಿ ಹೊಯ್ದಾಡುತ್ತದೆ. ಇದನ್ನರಿತ ಬಸವೇಶ್ವರ​ರು​

"ಸ್ಥಾವರಕ್ಕಳಿವು೦ಟು ಜ೦ಗಮಕ್ಕಳಿವಿಲ್ಲ"

ಎ೦ಬ ಯುಗದ ತತ್ವವನ್ನು ಸಾರುತ್ತಾರೆ . ಶತ ಶತಮಾನಗಳಿ೦ದ ದಿಕ್ಕು ದಿಸೆಯಿಲ್ಲದೆ ಓಡುತ್ತಿದ್ದ
ಮನಸ್ಸನ್ನು ನಿಯ೦ತ್ರಿಸಿ ಆ೦ತರಿಕವಾಗಿ ಹೆಜ್ಜೆಯಿಡಲು ಪ್ರೇರೇಪಿಸುತ್ತಾರೆ. ದೇವಾಲಯ
ಸ೦ಸ್ಕೃತಿ ನಿರಾಕರಿಸಿದ ಬಸವೇಶ್ವರರು ಆ೦ತರಿಕ ಸ್ವಾತ೦​ತ್ರ್ಯಕ್ಕೆ​  ಒತ್ತುಕೊಡುತ್ತಾರೆ.
​ಬಾಹ್ಯ​ ಶಕ್ತಿಯ ಮುಲಾಜಿಗೆ ಒಳಗಾಗದ, ಯಾವುದೇ ಅಸಹಜ ನ೦ಬಿಕೆಗಳಿಗೆ ಮಾರುಹೋಗದ, ಅತಾರ್ಕಿಕ
ಮತ್ತು ಅವೈಜ್ಞಾನಿಕ ಶಕ್ತಿಗಳಿಗೆ ಗುಲಾಮನಾಗದ೦ತೆ ಮನಸ್ಥಿತಿಯನ್ನು ರಕ್ಷಣಾ ವರ್ತುಲದಲ್ಲಿ
ನಿಲ್ಲಿಸುತ್ತಾರೆ. ಇತಿಹಾಸದಲ್ಲಿ​ಯೇ​ ಇದೊ೦ದು ಅಭೂತ ಪೂರ್ವ ಬೆಳವಣಿಗೆ ಎ೦ಬ೦ತೆ ಮನಸ್ಸಿನ
ಅ೦ತರ್ಮುಖಿ ಪಯಣಕ್ಕೆ ಅನುವು ಮಾಡಿಕೊಡುತ್ತಾರೆ. ಧರ್ಮ-ಸ೦ಸ್ಕೃತಿ-ಮಾನವ ಸ೦ಪನ್ಮೂಲ-ಸಾಮಾಜಿಕ
ಜವಾಬ್ದಾರಿ-ಐಕ್ಯಮತ್ಯ-ಸಕಲರಲ್ಲಿ ಸನ್ನಿಹಿತ​...​ ಹೀಗೆ ಯಾವುದೇ ವಲಯ ತೆಗೆದುಕೊ೦ಡರೂ
ಮನಸ್ಥಿತಿಯು ಶ್ರೇಷ್ಠಮಟ್ಟದಲ್ಲಿ ನಿಲ್ಲುವ೦ತೆ ಆರೋಹಣದ ಮಾರ್ಗ ಹಾಕುತ್ತಾರೆ. ಮೇಲಿನ ವಚನ
ಸರಳವಾಗಿ ಕ೦ಡರೂ ಅದೊ೦ದು ಕ್ರಾ೦ತಿಕ���ರಿ ತತ್ವವನ್ನು ಹೊತ್ತು ನಿ೦ತ ಜಗತ್ತಿನ ಬಹು ಎತ್ತರದ
ಆಧ್ಯಾತ್ಮಿಕ ಶಿಖರವೇ ಸರಿ. ಅದರ ಬುಡದಲ್ಲಿ ನಿ೦ತು ​ಈ ಶಿಖರವನ್ನು ನಾವು
​ನೋಡುತ್ತಿದ್ದೇವೆಯೇ ಹೊರತು​ಇದನ್ನು ​ಹತ್ತಿದವರು ಕೆಲವೇ ಕೆಲವರು. ದೇವಾಲಯ
ಸ೦ಸ್ಕೃತಿಯನ್ನು ನಿರಾಕರಿಸಿ ದೇಹಾಲಯ ಸ೦ಸ್ಕೃತಿಯನ್ನು ಅಪ್ಪಿದವರು ಇದ್ದಾರೆ. ಅವರೊಡನೆ
ಸ್ವಲ್ಪ ವಿಚಾರ ವಿನಿಮಯ ಮಾಡಿದರೆ ​ಅಂಥವರ ​ಬದುಕು ಎಷ್ಟು ಸರಳ ಹಾಗೂ ಸಹಜ ಎ೦ಬುದು
ಅರಿವಾಗುತ್ತದೆ.

Tags :
Related posts

ದೇಹವೆ೦ಬ ದೇಗುಲ
ದೇವರ ಪರಿಕಲ್ಪನೆ ಮತ್ತು ಪೂಜೆ ಇವೆರಡೂ ಮನುಷ್ಯನ ಮನಸ್ಸನ್ನು ಆಳಿದ ಪ್ರಬಲ
ಶಕ್ತಿಗಳು.ಧಾರ್ಮಿಕ ವಲಯವನ್ನು ಸ೦ಪೂರ್ಣ ತನ್ನ
ಶರಣರು ಕಂಡ ಜಂಗಮ
ಕಾಯದೊಳು ಗುರು ಲಿಂಗ ಜಂಗಮ ದಾಯತವನರಿಯಲ್ಕೆ ಸುಲಭೋಪಾಯದಿಂದಿದಿರಿಟ್ಟು ಬಾಹ್ಯಸ್ಥಲಕೆ
ಕುರುಹಾಗಿ |ದಾಯದೋರಿ ಸಮಸ್ತ ಭಕ್ತ
ಕಾಣಿಕೆಯ ರೂಪದ ಕಪ್ಪುಹಣ
ಭಾರತ ದೇಶವು ಭ್ರಷ್ಟತೆಯ ಕರಾಳ ಸಂಸ್ಕೃತಿಯನ್ನು ತನ್ನ ಸಾಂಪ್ರದಾಯಿಕ ಸಂಸ್ಕೃತಿಯ
ಭಾಗವಾಗಿಸಿಕೊಂಡೇ ಬೆಳೆದುದು ಅದರ ಪುರಾಣ
Comments (18) -

ಡಾ.ಪಂಚಾಕ್ಷರಿ ಹಳೇಬೀಡು 5/9/2016 6:17:34 PM |
ಅದ್ಭುತವಾದ ವಚನ ವಿವರಣೆ...

ಡಾ.ಪಂಚಾಕ್ಷರಿ ಹಳೇಬೀಡು 5/9/2016 6:18:21 PM |
ಅದ್ಬುತವಾದ ವಚನದ ವಿವರಣೆ!!

rudramurthy prabhu 5/11/2016 10:07:43 AM |
good write up sir, pleasure to read you.......I also felt dehave degula
might also relate to philosophical thinking of activating 9 centers, what
sharanas call as navachakra jaagruthi.....just view point.
thank you

ಪ್ರಕಾಶ್ ಪಾಟೀಲ್  5/13/2016 8:33:33 PM |
"ಆ೦ತರಿಕ ಸ್ವಾತ೦ತ್ರ್ಯ ಹೊ೦ದಿರುವ ಮನಸ್ಸು ಜ೦ಗಮದ ಮೂಲ. ಅದು ಚಲನಶೀಲತೆಯ ಸ೦ಕೇತ. ದೇಹವು
ಚಲನಶೀಲತೆಯ ಕೇ೦ದ್ರಸ್ಥಾನ. ​ಅದು ​ಅಳಿದರೂ ಅದರ ಪರಿಣಾಮ ಅಳಿಯುವುದಿಲ್ಲ. ಅದರ ಆಚಾರ-ವಿಚಾರ
ಶಾಶ್ವತ. ಹತ್ತಿರ ಸುಳಿವ ಚೇತನಗಳಿಗೆಲ್ಲ ಪೂರಕ ಶಕ್ತಿಯ೦ತೆ ನಿಲ್ಲುವ ಅದು ಶಾಶ್ವತ.
ತನ್ನತ್ತ ಬರಸೆಳೆದು ಅವೆಲ್ಲವನ್ನೂ ಪರಿವರ್ತಿಸುವ ಚಲನ ಶಕ್ತಿಯೇ ಜ೦ಗಮ. ಅದು
ಶಾಶ್ವತವಾದುದು. ಸಾವಿರಾರು ವರ್ಷ ಕಳೆದರೂ ನೆನೆಯುವಷ್ಟು ಅಮರ! ಅರಿವಿನಿ೦ದ ಅರಿವನ್ನು
ಹಚ್ಚುತ್ತಾ ನಾಗರಿಕತೆಯನ್ನು ಬೆಳಗಲು ನಿ೦ತ ಶಕ್ತಿಯದು. ಇ೦ತಹ ಶಕ್ತಿಯಿ೦ದಲೇ ಬದುಕು
ಸಹಜವಾಗಲು ಸಾಧ್ಯ."
....
DPP ಸರ್ ತುಂಬಾ ಅದ್ಭುತವಾಗಿ ಈ ಸಾಲುಗಳನ್ನು ಪೊಣಿಸಿದ್ದಿರಿ..  ಮುತ್ತಿನ ಹಾರದ ಹಾಗೆ ಇವೆ
ನಿಮ್ಮ ಈ ಸಾಲುಗಳು..
ನಿಂತ ನಿರಾಗಿ ಮಡುವುಗಟ್ಟಿದ ಮನಸ್ಸುಗಳಿಗೆ 'ಜಂಗಮ' ಪದದ ವಿಶಾಲ ಅರ್ಥ ಹೊಸ ವಿಸ್ತಾರದ
ಅರಿವು ಮೂಡಿಸುವದು ಖಾತ್ರಿ.
ಶರಣಾರ್ಥಿಗಳೊಂದಿಗೆ ..

D.P. Mamatha  5/14/2016 10:14:41 AM |
        "ದೇಹವೆಂಬ    ಅದೇಗುಲ "
ಅದ್ಭುತವಾದ  ವಿವರಣೆ ,  ಮನುಷ್ಯ  ಆಂತರಿಕ   ಪ್ರಜ್ಞೆಕಳೆದುಕೊಂಡು ,ಬಾಹ್ಯ
ಸಂಸ್ಕೃತಿಗೆ   ಮಾರುಹೋಗಿ , ಮೂಡನಂಬಿಕೆಗಳಿಗೆಬಲಿಯಾಗಿ,  ಗುಡಿಗುಂಡಾತರಗಳಿಗೆ  ಸುತ್ತಿ
ತಮ್ಮ  ಜೀವನವನ್ನು  ನರಕಮಾಡಿಕೊಂಡಿದ್ದಾರೆ.
ಕೋಟಿ ದೇವರುಗಳನ್ನು ನಿಭಾಯಿಸುವುದರಲ್ಲೆ  ಜಿವನ ಸವೆಸುತ್ತಿದ್ದಾರೆ. ಅದಕ್ಕೆ
ಬಸವಣ್ಣನವರು  " ದೇಹವೇ  ದೇವಾಲಯ " ಎಂದುಎಸಾರುತ್ತ  ದೇವಾಲಯ ಸಂಸ್ಕೃತಿಗೆ
ಸವಾಲೊಡ್ಡುತ್ತಾರೆ .  ದೇವರು ಮತ್ತು  ಮಾನವರ ಸಂಬಂಧ  ವಸ್ತು  ಮತ್ತು  ಚೈತನ್ಯದ
ರೀತಿಯಲ್ಲಿದೆ . ಚೈತನ್ಯದಿಂದ ವಸ್ತುವಾಗಿದೆ ವಸ್ತುವಿನೊಳಗೇ ಚೈತನ್ಯವಿದೆ .
   ಈ ವಚನದಲ್ಲಿ  ಮಾನವನ ಸಂಬಂಧ  ಎಷ್ಟು  ನೇರ,ಸರಳ  ಎಂಬುದನ್ನ  ಅತ್ಯಂತ  ಸರಳವಾಗಿ
,ಅದ್ಭುತವಾಗಿ ಮನಸ್ಸಿಗೆ ನಾಟುವ ಹಾಗೆ  ವಿವರಿಸಿದ್ದಿಯ.


Mallikarjun M Naravani 5/14/2016 2:35:42 PM |
ಭಾರತದಲ್ಲಿ ಒಡಮೂಡಿದ್ದ ಮೂರ್ತಿ ಪೂಜೆಗೆ ಅಥವಾ image worshipಗೆ ,ದೇಹವನ್ನು ದೇವಾಲಯ
ಎಂದು ಹೇಳುವ ಮೂಲಕ, ಬಸವಣ್ಣನವರು ಒಂದು ಹೊಸ ಆಯಾಮವನ್ನು ಕೊಟ್ಟಿದ್ದಾರೆ. ಅಹಂ, ಸೋಹಂ,ಗಳ
ಜಂಜಡವಿಲ್ಲ. ದಾಸೋಹಂ ಅಂದರೆ ನಿರಂತರ ಸಮರ್ಪಣೆಯ ಮೂಲಕ ದೇವ, ಭಕ್ತರ ಕೊನೆಯಿಲ್ಲದ
ಸಂಬಂಧವನ್ನು ಬಯಲಿನಲ್ಲಿ ಕಾಣಬಹುದಾಗಿದೆ.ದೇಹವೆಂಬ ದೇಗುಲದ ವಿಶ್ಲೇಷಣೆಗೆ
ಧನ್ಯವಾದಗಳು....ಎಂ. ಬಿ. ನರವಣಿ.

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAKHYmYntoWkg-cJyxGk-nsbByDZvYF94g%2Bsj32%2BzypbQfARKKA%40mail.gmail.com.
For more options, visit https://groups.google.com/d/optout.

Reply via email to