🙏 *ಡಿ.ವಿ.ಜಿ ಬೆಳಗು:-*🙏

*ನೂರಾರು ಮತವಿಹುದು ಲೋಕದುಗ್ರಾಣದಲಿ|*
*ಆರಿಸಿಕೊ ನಿನ್ನ ರುಚಿಗೊಪ್ಪುವುದನದರೊಳ್||*
*ಸಾರದಡುಗೆಯನೊಳವಿಚಾರದೊಲೆಯಲಿ ಮಾಡು|*
*ಬೇರೆ ಮತಿ ಬೇರೆ ಮತ – ಮಂಕುತಿಮ್ಮ||934||*

*ನಲ್ವೆಳಗು-ಕವಿತಾ ಅಡೂರು*

ಲೋಕವೆಂಬ ಉಗ್ರಾಣದಲ್ಲಿ ನೂರಾರು ಮತವಿದೆ. ಅದರಲ್ಲಿ ನಿನ್ನ ಅಭಿರುಚಿಗೆ ಒಪ್ಪುವುದನ್ನು
ಆರಿಸಿಕೊ. ಅವುಗಳಲ್ಲಿ ನಿನಗೆ ದೊರಕಿರುವ ಸಾರವನ್ನು , ವಿಚಾರವೆಂಬ ಒಲೆಯಲ್ಲಿ ಅಡುಗೆ ಮಾಡು.
ಪ್ರತಿಯೊಬ್ಬರದ್ದೂ ಕೂಡಾ ಬೇರೆ ಬೇರೆ ಮತಿ, ಅದಕ್ಕನುಸಾರವಾಗಿಯೇ ಬೇರೆ ಬೇರೆ ಮತವೂ
ಇರುತ್ತದೆ.

ಜಗತ್ತು ದೈವಸೃಷ್ಟಿ ಎನ್ನುವುದನ್ನು ನಾವೆಲ್ಲರೂ ಬಲ್ಲೆವು. ಸೂಕ್ಷ್ಮವಾಗಿ ಅವಲೊಕಿಸಿದರೆ
ಅದೆಷ್ಟು ವೈವಿಧ್ಯತೆಯನ್ನು ನಾವಿಲ್ಲಿ ಕಾಣುತ್ತೇವೆ. ಹಾಗೆಯೇ ಜೀವನ ಕ್ರಮದಲ್ಲಿ,
ಆಚಾರವಿಚಾರಗಳಲ್ಲಿ, ಗುಣ-ಧರ್ಮದಲ್ಲಿ ವ್ಯತ್ಯಾಸವಿರುವುದೂ ಹೌದು. ಈ ವಿಭಿನ್ನತೆಯೊಳಗೆಯೇ
ನಾವು ಒಂದಾಗಿ ಬಾಳುತ್ತಿದ್ದೇವೆ. ಆದರೆ ಎಲ್ಲವನ್ನು ಸಹಿಸಿಕೊಂಡು, ಯಾವುದನ್ನೂ
ನಿರಾಕರಿಸದೆ, ದ್ವೇಷಿಸದೆ ,ತಿರಸ್ಕರಿಸದೆ ಬಾಳುತ್ತಿದ್ದೇವೆಯೇ? ಯೋಚಿಸ ಬೇಕಿದೆ.

ಗಗನವನ್ನು ಸೋಕುವಂತೆ ಕಾಣುವ ಪರ್ವತ ಶ್ರೇಣಿ. ಅದರಾಚೆಗೇನಿದೆ ಎಂದು ಕಾಣಲು ಸಾಧ್ಯವೇ
ಇಲ್ಲವೆಂಬಂತೆ , ಆ ಪರ್ವತಕ್ಕೆ ಹೊದೆದ ಹಸಿರ ಚಾದರ! . ಆ ಶಿಖರವನ್ನು ಏರಿದರೆ ಭಗವಂತನ
ದರ್ಶನವಾಗುತ್ತದೆ, ಬದುಕು ನೆಮ್ಮದಿಯನ್ನು ಕಾಣುತ್ತದೆ ಎಂಬ ಸತ್ಯವನ್ನು ತಿಳಿದ ಹಲವರು;  ಆ
ಪರ್ವತವನ್ನು ಹತ್ತಲು  ಪ್ರಯತ್ನಿಸುತ್ತಾರೆ. ಅದೇನು ಅಷ್ಟು ಸುಲಭದ ವಿಚಾರವಾಗಿರಲಿಲ್ಲ.
ಪರ್ವತವನ್ನು ಏರಲು ಹಲವು ಹಾದಿಗಳಿತ್ತು. ಯಾವ ಹಾದಿಯನ್ನು ಹಿಡಿದು ನಡೆಯುವುದು
ಎನ್ನುವುದನ್ನು ನಿರ್ಧರಿಸುವುದು ; ಚಾರಣಿಗರ ಜಾಣ್ಮೆಗೆ ಒಡ್ಡಿದ ಸವಾಲಾಗಿತ್ತು. ಪ್ರತಿ
ಹಾದಿಯೂ ಒಂದಕ್ಕಿಂತ ಒಂದು ಭಿನ್ನ. ದಟ್ಟ ಅರಣ್ಯದ ನಡುವಿನ ಇರುಳ ದಾರಿ ಸ್ಪಷ್ಟವಾಗಲು ,
 ಅಲ್ಲಲ್ಲಿ ಮಾರ್ಗದರ್ಶಕ ದೀಪಗಳಿದ್ದರೂ, ನಡೆವ ಹೆಜ್ಜೆಗಳಿಗೆ ಧೈರ್ಯ ಬೇಕೇ ಬೇಕು. ಹೀಗೆ
ಬೆಟ್ಟ ಏರುವವರು ಹಲವರಿದ್ದರೂ, ಶಿಖರಾಗ್ರವನ್ನು ತಲುಪಿದವರು ವಿರಳ. ಕಾರಣ;  ತಮ್ಮ
ಮನಸ್ಸಿಗೆ ಒಗ್ಗುವ ದಾರಿಯನ್ನು ಆಯ್ದು ಕೊಂಡು ನಡೆಯ ಹೊರಟ ಕೆಲವು ದಿನಗಳ ನಂತರ, ಆ ದಾರಿ
ಕಷ್ಟಕರವೆಂದೋ, ಸ್ವಾರಸ್ಯಕರವಲ್ಲವೆಂದೊ, ಅಪನಂಬಿಕೆಯಿಂದಲೋ ಇನ್ನೊಂದನ್ನು
ಆರಿಸಿಕೊಳ್ಳುತ್ತಿದ್ದರು. ಮತ್ತದೂ ಬೇಡವೆಂದು ಮಗದೊಂದನ್ನು... ಹೀಗೆ ಹಾದಿಗಳನ್ನು ಅರಸಿ,
ಆರಿಸಿ ,ಬದಲಿಸಿ ಕೊಳ್ಳುವುದರಲ್ಲೇ ಬದುಕು ಕಳೆದು ಹೋಗುತ್ತಿತ್ತೇ ಹೊರತು ಶಿಖರಾಗ್ರವನ್ನು
ತಲುಪುವುದು ಸಾಧ್ಯವಾಗುತ್ತಿರಲಿಲ್ಲ.  ನಾವೇನಾದರೂ ಹೀಗಿದ್ದೇವೆಯೇ?

ಸಮಾಜವನ್ನು, ಜನತೆಯನ್ನು ಉದ್ಧರಿಸಲೋಸುಗ, ಆಧ್ಯಾತ್ಮಿಕತೆಯನ್ನು ಪರಿಚಯಿಸಲೋಸುಗ ಹಲವು
ಮತ-ಧರ್ಮಗಳು, ಧರ್ಮಪ್ರಚಾರಕರು, ಗುರು ಪೀಠಗಳು ಹುಟ್ಟಿಕೊಂಡಿವೆ. ಪುರಾಣ ಗ್ರಂಥಗಳೂ
ಹಲವಿವೆ.  ಎಲ್ಲ ಮತ-ಧರ್ಮಗಳೂ  ಬೇರೆ ಬೇರೆ ರೀತಿಯಲ್ಲಿ ದೇವರ ಬಗ್ಗೆ , ದೇವರ ಮಹಿಮೆಯ
ಬಗ್ಗೆ ವಿವರಿಸುತ್ತದೆ. ಎಲ್ಲಾ ಅಭಿಪ್ರಾಯಗಳನ್ನು ಆಲಿಸುತ್ತಾ, ಎಲ್ಲವನ್ನು ಗೌರವಿಸುತ್ತಾ,
ನಮ್ಮ ಆಂತರ್ಯಕ್ಕೆ ಸರಿ ಎನಿಸುವ ಮತ- ಧರ್ಮವನ್ನು ಆಯ್ದುಕೊಂಡು ಅನುಸರಿಸ ಬೇಕು.
ಪ್ರತಿಯೊಂದು ಮತ-ಧರ್ಮಗಳು ಪ್ರತಿಪಾದಿಸುವ ತತ್ವಗಳನ್ನು , ಅದರ ಸಾರ ಸರ್ವಸ್ವವನ್ನು ಅಂತೆಯೇ
ಸ್ವೀಕರಿಸುವುದಲ್ಲ. ಯಾರದೋ ಅಭಿಪ್ರಾಯಕ್ಕೆ ತಕ್ಕಂತೆ ನಡೆಯುವುದೂ ಸರಿಯಲ್ಲ. ಅಂಧಾನುಕರಣೆ
ಸಲ್ಲದು. ಆ ತತ್ವವನ್ನು ನಮ್ಮ ವಿವೇಚನೆಯೊಳಗಿಟ್ಟು ಪರೀಕ್ಷಿಸ ಬೇಕು. ತನ್ಮೂಲಕ ನಮಗದು
ಒಪ್ಪಿತವಾಗ ಬೇಕು. ಮೂಢನಂಬಿಕೆಗಳನ್ನು, ಅಕಾರಣವಾದ ಆಚರಣೆಗಳನ್ನು ಮೀರಿದ ಉದಾತ್ತ
ನಿಲುವನ್ನಷ್ಟೇ ನಾವು ಗಮನಿಸ ಬೇಕು. ಹೀಗೆ ಸ್ವೀಕೃತವಾದ ಜೀವನ ತತ್ವಕ್ಕೆ ನಾವು ಸದಾ
ಬದ್ಧರಾಗಿಯೇ ಇರಬೇಕು ಮತ್ತು ಈ ರೀತಿ ಆರಿಸಿಕೊಂಡ ದಾರಿಯು, ನಿರ್ವಿಕಾರನೂ, ನಿರ್ಗುಣನೂ ಆದ
ಭಗವಂತನನ್ನು ಸೇರುತ್ತದೆ ಎಂಬ ಅಚಲ ನಂಬಿಕೆ ನಮ್ಮನ್ನು ಔನ್ನತ್ಯಕ್ಕೆ ಏರಿಸುತ್ತದೆ.

ಹಾಗಾಗಿ ಬದುಕಿಗೊಂದು ಕ್ರಮವನ್ನು, ಮನಸಿಗೊಂದು ನಂಬಿಕೆಯನ್ನು , ರಕ್ಷಣಾತ್ಮಕ ಭಾವವನ್ನು
ನೀಡುವ ಮತ-ಧರ್ಮಗಳನ್ನು ನಮ್ಮ ನಮ್ಮ ಅರಿವಿನ ಬೆಳಕಲ್ಲಿ, ಮನಸ್ಸಿಗೆ ಒಪ್ಪುವಂತೆ
ಅನುಸರಿಸೋಣ. ನಂಬಿಕೆಯ ನೆಲೆಯಲ್ಲಿ ಬದುಕನ್ನು ಬಂಧುರವಾಗಿಸೋಣ. ಎಲ್ಲಾ ತತ್ವಗಳ ಬೆಳಕನ್ನು
ಕಾಣುತ್ತಾ, ಒಳಿತನ್ನು ಸ್ವೀಕರಿಸುತ್ತಾ  ಜೊತೆಯಾಗಿ ಬಾಳೋಣ.
ಸಮೀರ ( ಕನ್ನಡ ಭಾಷಾ ಶಿಕ್ಷಕಿ

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to