🙏 *ಡಿ.ವಿ.ಜಿ ಬೆಳಗು:-* 🙏

*ಸತತ ಮಾರ್ಗಣೆ, ಸಿದ್ಧಿಯಂತಿರಲಿ, ಮಾರ್ಗಣೆಯೆ|*
*ಗತಿ ಮನುಜ ಲೋಕಕ್ಕೆ; ಜಗದ ಜೀವವದು|*
*ಕೃತಕಾಮರೆಲ್ಲರಾದೊಡೆ ಕೃತ್ಯವುಳಿಯದೊಡೆ||*
*ಕಥೆ ಮುಗಿವುದಲ ಜಗಕೆ?-ಮಂಕುತಿಮ್ಮ||857||*

*ನಲ್ವೆಳಗು-ಕವಿತಾ ಅಡೂರು*

ಮನುಷ್ಯ ಲೋಕದಲ್ಲಿ  ನಿರಂತರವಾದ ಹುಡುಕಾಟವಷ್ಟೇ ಇದೆ. ಗುರಿ ತಲುಪುವುದು  ಹಾಗಿರಲಿ,
ಹುಡುಕುವುದೇ ಸತತವಾಗುಳಿದಿದೆ. ಇದುವೇ ಜಗತ್ತಿನ ಜೀವಾಳವೂ ಹೌದು. ಎಲ್ಲರೂ ಮಾಡ
ಬೇಕಾದುದನ್ನು ಮಾಡಿ ಮುಗಿಸಿದವರೇ ಆದರೆ, ಇನ್ನು ಮಾಡಲು ಯಾವ ಕೆಲಸವೂ ಇಲ್ಲವೆಂದಾದರೆ
ಜಗತ್ತು ಮುನ್ನಡೆಯುವುದಕ್ಕುಂಟೆ? ಜಗದ ಕಥೆಯೇ ಮುಗಿದ ಹಾಗೆ ಅಲ್ಲವೇ?

ಜೀವನಕ್ಕೊಂದು ಗುರಿ ಇರಬೇಕು ಎನ್ನುವ ಮಾತನ್ನು ನಾವೆಲ್ಲರೂ ಕೇಳಿಸಿಕೊಂಡವರೇ.. ಗುರಿ
ತಲುಪಲು ಪ್ರಯತ್ನಿಸಿದವರೇ. ಆದರೆ ಯಾರಾದರೂ ತಾವು ಯೋಜಿಸಿದಂತೆ, ಯೋಚಿಸಿದಂತೆಯೇ ಬದುಕನ್ನು
ಪಡೆದವರುಂಟೇ? ಗುರಿ ತಲುಪಿದವರುಂಟೇ? ಎಲ್ಲೋ ಸಣ್ಣ ಅತೃಪ್ತಿ ನಮ್ಮಲ್ಲಿ ಉಳಿದೇ
ಉಳಿಯುತ್ತದೆ. ಇರುವುದರೆಡೆಯಿಂದ ಇರದುದರೆಡೆಗೆ ತುಡಿಯುತ್ತಲೇ ಇರುತ್ತೇವೆ. ಮತ್ತು ಅದುವೇ
ಜೀವಿಸುವುದಕ್ಕೆ ಕಾರಣವೂ ಆಗುತ್ತದೆ; ಛಲ ಹುಟ್ಟಿಸುತ್ತದೆ.

ಗುರುವೊಬ್ಬರ ಬಳಿ ಹಲವಾರು ಮಂದಿ ಶಿಷ್ಯರು ಜ್ಞಾನಾರ್ಜನೆ ಮಾಡುತ್ತಿದ್ದರು. ಆ ಶಿಷ್ಯರಲ್ಲಿ
ಒಬ್ಬನಿಗೆ ಸಾರ್ಥಕ ಬದುಕನ್ನು ಹೊಂದುವ ಬಗೆ ಹೇಗೆ ಎಂಬ ಬಗ್ಗೆ ಜಿಜ್ಞಾಸೆ ಉಂಟಾಯಿತು.
ಗುರುವಿನಲ್ಲೇ ಈ ಬಗ್ಗೆ ವಿಚಾರಿಸಿದ. ಶಿಷ್ಯನನ್ನೇ ದಿಟ್ಟಿಸಿ ನೋಡಿದ ಗುರು , ಮೌನ ಮುರಿದು
ಮಾತನಾಡಿದರು. ಆಶ್ರಮದಿಂದ ಪೂರ್ವಾಭಿಮುಖವಾಗಿ ಒಂದಷ್ಟು ದೂರ ನಡೆದಾಗ ಒಂದು ಎತ್ತರವಾದ
ನಿಬಿಡಾರಣ್ಯದಿಂದ ಕೂಡಿದ ಬೆಟ್ಟ ಸಿಗುತ್ತದೆ. ಅದರ ತುತ್ತ ತುದಿಯನ್ನು ತಲುಪಿದರೆ ಅಲ್ಲಿ
ಕೆಲವು ಗುಹೆಗಳಿವೆ. ಅದರೊಳಗೆ ಒಂದು ಗುಹೆಯಲ್ಲಿ ಮಹಾಗುರುವೊಬ್ಬರು ಧ್ಯಾನಸ್ಥರಾಗಿದ್ದಾರೆ.
ಅವರು ಬದುಕಿನ ಸಾರ್ಥಕತೆಯ ಬಗ್ಗೆ ತಿಳಿಸ ಬಹುದು. ತಿಳಿಯಲೇ ಬೇಕೆಂದಾದಲ್ಲಿ ಮರುಮುಂಜಾವ
ಪೂರ್ವಾಭಿಮುಖನಾಗಿ ಹೊರಡು ಎನ್ನುತ್ತಾರೆ. ಗುರುವಿನ ಮಾತಿನಂತೆಯೇ ಶಿಷ್ಯ ಬೆಳಗ್ಗೆ ಎದ್ದವನೇ
ಗುರುವಿಗೆ ವಂದಿಸಿ ಪೂರ್ವದಿಕ್ಕಿನತ್ತ ಪಯಣಿಸಿದ. ಒಂದಷ್ಟು ದೂರ ಹೋಗುತ್ತಿದ್ದಂತೆಯೇ
ಎತ್ತರದ ಬೆಟ್ಟ ಕಾಣಿಸಿತು. ಅದನ್ನೇ ಗುರಿಯಾಗಿ ಇರಿಸಿಕೊಂಡು ನಡೆದ. ನಡೆದಷ್ಟು ಮುಗಿಯದ
ದಾರಿ. ಬೆಟ್ಟ ದೂರವೇ ಉಳಿಯಿತು. ನಡೆವ  ದಾರಿಯಲ್ಲಿ ಅವನಿಗೆ ಹಲವಾರು ಊರುಗಳು ಸಿಕ್ಕಿದವು.
ಆ ಊರಿನಲ್ಲಿ ಕೆಲವು ದಿನ ಉಳಿದುಕೊಳ್ಳಲೇ ಬೇಕಾಯಿತು. ಜನರೊಡನೆ ಬೆರೆಯಲೇ ಬೇಕಾಯಿತು. ಆ
ಸಡಗರದಲ್ಲಿ ಕಳೆದೇ ಹೋದನೆಂಬ ಹೊತ್ತಲ್ಲಿ ಮತ್ತೆ ಎಚ್ಚೆತ್ತುಕೊಂಡ. ಬೆಟ್ಟವನ್ನು
ದೃಷ್ಟಿಸಿದ. ಅದರತ್ತ ನಡೆಯ ತೊಡಗಿದ. ಹೀಗೆ ವಿರಮಿಸುತ್ತಾ, ವಿರಮಿಸುತ್ತಾ ಮುಂದುವರಿದ ಆ
ಶಿಷ್ಯನಿಗೆ ತುಂಬಿ ಹರಿವ ನದಿ, ಜಲಪಾತ, ಬಯಲ ಬೆಡಗು ಕಾಣ ಸಿಕ್ಕಿದವು. ಆ ಚೆಲುವಿಕೆಯಲ್ಲಿ
ತನ್ನನ್ನು ತಾನು ಮರೆತು ಆನಂದದಲ್ಲಿ ಮೈಮರೆತ. ಮತ್ತೆ ತನ್ನ ಗುರಿಯನ್ನು ನೆನಪಿಸಿಕೊಂಡು
ಮುಂದುವರಿದ. ಹೀಗೆ ನಡೆಯುತ್ತಾ ,ನಡೆಯುತ್ತಾ ಬೆಟ್ಟದ ತಪ್ಪಲನ್ನು ಸೇರಿದ. ಆಮೇಲೆ ಏರುವ
ಕೆಲಸ. ದಟ್ಟ ಅರಣ್ಯ. ದಾರಿ ಮಾಡಿಕೊಂಡು ಹೋಗ ಬೇಕಿತ್ತು ಆತ. ಕಾಡಿನ ಮೃಗಗಳು, ನಿರ್ಜನತೆ
ಆತನನ್ನು ಕಂಗೆಡಿಸಿದರೂ, ಹಿಂತಿರುಗುವಂತೆ ಹೆದರಿಸಿದರೂ ಛಲ ಬಿಡದೆ ಮುಂದುವರಿದ.
ಕೊನೆಗೊಮ್ಮೆ ಬೆಟ್ಟದ ಶಿಖರಾಗ್ರವನ್ನು ತಲುಪಿದ. ಅಲ್ಲಿರ ಬಹುದಾದ ಗುಹೆಯನ್ನು ಹುಡುಕಿ,
ಮಹಾಗುರುವಿನಿಂದ ಬದುಕಿನ ಸಾರ್ಥಕತೆಯ ಬಗ್ಗೆ ತಿಳಿದುಕೊಳ್ಳ ಬೇಕಿತ್ತು ಆತ. ಅಷ್ಟರಲ್ಲಾಗಲೇ
ಹಲವು ಕಾಲ ಕಳೆದು ಹೋಗಿತ್ತು. ನಡೆದು ಬಂದ ದಾರಿಯಲ್ಲಿ , ಆ ಶಿಷ್ಯ ಹಲವು ಅನುಭವಗಳನ್ನು
ಪಡೆದಿದ್ದ. ಪ್ರಕೃತಿಯೊಂದಿಗಿನ ಒಡನಾಟದಲ್ಲಿ ಅರಿವನ್ನು ವಿಸ್ತರಿಸಿಕೊಂಡಿದ್ದ. ಎತ್ತರದಲ್ಲಿ
ನಿಂತು ನೋಡಿದಾಗ ಬದುಕಿನ ಧನ್ಯತೆಯ ಅನುಭವವನ್ನು ಪಡೆದ. ಯಾರೂ ಹೇಳದೆಯೇ ಸ್ವತಃ ಆತನೇ
ಬದುಕಿನ ಸಾರ್ಥಕತೆಯನ್ನು ಹುಡುಕಿಕೊಂಡಿದ್ದ.

ನಾವೆಲ್ಲರೂ ಅವನಂತೆಯೇ ಜೀವನ ಯಾತ್ರೆ ಹೊರಟವರೇ ಅಲ್ಲವೇ? ನಮ್ಮ ಬದುಕಿಗೂ ಒಂದಷ್ಟು
ಧ್ಯೇಯಗಳಿವೆ, ಹೀಗೆಯೇ ಬಾಳಬೇಕೆಂಬ ಕಲ್ಪನೆಗಳಿವೆ, ಹೀಗಾಗಬೇಕೆಂಬ ಗುರಿ ಇದೆ. ಆದರೆ ನಾವು
ಎಷ್ಟರ ಮಟ್ಟಿಗೆ ನಮ್ಮ ಸಂಕಲ್ಪ, ಗುರಿ, ಧ್ಯೇಯಗಳನ್ನು ಸಾಧಿಸುವಲ್ಲಿ ಸ್ಥಿರವಾಗಿದ್ದೇವೆ?
ಇದಲ್ಲ ಅದು, ಅದಲ್ಲ ಇದು ಎಂಬ ಸುಖದ ಹುಡುಕಾಟವನ್ನೇ ಮಾಡುತ್ತಿದ್ದೇವೆ. ಗುರಿಯೆಡೆಗೆ
ಯಾವುದೋ ದಾರಿಯನ್ನು ಅರಸಿ ನಡೆಯುತ್ತೇವೆ. ಸ್ವಲ್ಪ ದೂರ ಗಮಿಸಿದಾಗ ಆ ದಾರಿ
ಪ್ರಯಾಸಕರವಾದದ್ದು ಎಂದು ಮತ್ತೆ ಮೊದಲಿನಿಂದ ನಡೆಯ ತೊಡಗುತ್ತೇವೆ. ಹೀಗೆ ಸದಾ ಕ್ಷೇಮವನ್ನು
ಹುಡುಕುವುದೇ, ಹೊಂದುವುದೇ ಉದ್ದೇಶವಾಗಿದೆ. ವಿಪರ್ಯಾಸವೆಂದರೆ ಕ್ಷೇಮದ ಸ್ವರೂಪ
ಹೇಗಿರುತ್ತದೆ ಎಂಬ ಬಗ್ಗೆ ಸ್ಪಷ್ಟತೆಯೇ ಇಲ್ಲ ನಮ್ಮಲ್ಲಿ. ಮನುಷ್ಯನ ಈ ಸಹಜ ತಲ್ಲಣದ,
ಅಸಂತೃಪ್ತ ಗುಣವೇ ಬದುಕಿನ ಸಾಗುವಿಕೆಗೆ ಉಪಾದಿಯಾಗಿದೆ. ಜೀವನವೆಂದರೆ ಹೋರಾಟ, ಅದಕ್ಕೊಂದು
ಉದ್ದೇಶ ಬೇಕು. ಅದಿಲ್ಲದೇ ಹೋದರೆ, ಸಾಧಿಸುವ ಛಲ, ಆಸೆ-ಆಕಾಂಕ್ಷೆಗಳು ಬತ್ತಿ ಹೋದರೆ ಬದುಕು
ಭಾರವೆನಿಸುತ್ತದೆ, ಬೇಡವೆನಿಸುತ್ತದೆ.

ಮನುಷ್ಯ ಜೀವಿತಕ್ಕೆ ಬಂದ ಮೇಲೆ ನಮಗೆ ನಮ್ಮದೇ ಆದ ಕರ್ತವ್ಯಗಳಿವೆ ಅದನ್ನು ನಾವು ನಿಭಾಯಿಸಲೇ
ಬೇಕು. ಅದನ್ನು ಪರಿತ್ಯಜಿಸಿ , ಕರ್ತವ್ಯಗಳಿಂದ ವಿಮುಖನಾದರೆ ಜೀವನೋತ್ಸಾಹವೇ ಕಳೆದು
ಹೋಗುತ್ತದೆ. ಭಗವಂತ ಯಾವುದೋ ಗುರಿಯಿರಿಸಿ ಜೀವಾತ್ಮರುಗಳಾದ ನಮ್ಮನ್ನು ಬಾಣದಂತೆ
ಪ್ರಯೋಗಿಸಿದ್ದಾನೆ. ಆತ ಸಂಕಲ್ಪಿಸಿದ ಗುರಿ ಎಲ್ಲಿದೆಯೋ ತಿಳಿಯದ,  ದೇವರು ಹೊಡೆದ ಬಾಣಗಳಾದ
ನಾವು ಚಲಿಸುತ್ತಲೇ ಇದ್ದೇವೆ, ಹಾಗೆಯೇ ಇರಬೇಕು. ಆ ಚಲನೆಯಲ್ಲೇ ಬದುಕಿನ ಸಾರ್ಥಕತೆ ಇದೆ.
ಹಾದಿಯ ನಡುವೆ ಹಿಂತೆಗೆಯುವುದು ಸರಿಯಲ್ಲ. ತಡೆದು ನಿಂತರೆ ಆಳ ಪ್ರಪಾತಕ್ಕೆ ಉರುಳ
ಬೇಕಾಗುತ್ತದೆ.
ಆದ್ದರಿಂದ ಜಗತ್ತು ಸಹಜವಾಗಿ ಮುಂದುವರಿಯಲು, ಜೀವನೋತ್ಸಾಹ ಕಳೆದು ಹೋಗದಿರಲು ಅನ್ವೇಷಣೆಯ
ಬದುಕು ಸ್ಪೂರ್ತಿಯಾಗುತ್ತದೆ. ಸಿಗದೇ ಇರುವುದನ್ನು ಪಡೆಯುವ ಧಾವಂತದಲ್ಲಿ ಲಭ್ಯವಾಗುವ ಅನುಭವ
ನಮ್ಮನ್ನು ಔನ್ನತ್ಯಕ್ಕೆ ಏರಿಸುತ್ತದೆ. ಆತ್ಮಜ್ಞಾನವನ್ನು ಹೊಂದಲು ರಹದಾರಿಯಾಗುತ್ತದೆ.
ಎಲ್ಲಾ ಸ್ನೇಹ-ಸಂಬಂಧಗಳಲ್ಲಿರುತ್ತಾ ದೂರವುಳಿಯುವ, ನಮ್ಮನ್ನು ನಾವು ತಿಳಿಯುವ ಅರಿವು
ನಮ್ಮೆಲ್ಲರಲ್ಲಿ ಮೂಡಲಿ, ಧನ್ಯ ಬಾಳುವೆ ನಮ್ಮದಾಗಲಿ.

ಸಮೀರ ( ಕನ್ನಡ ಭಾಷಾ ಶಿಕ್ಷಕಿ

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to