ಭೂಮಿ ಭಾಯ್ಬಿಟ್ಟಾಗ (3 May) ಭೂಕಂಪಗಳಿಗೂ ಆಲ್ಪ್ರೆಡ್ ವೆಗ್ನರ್ನಿಗೂ ಬಿಡಿಸಲಾರದ ನಂಟು. ಹೇಗೆ ಎನ್ನುತ್ತೀರ? ಅವು ಹೇಗೆ ಸಂಭವಿಸುತ್ತವೆ ಎನ್ನುವುದಕ್ಕೆ ಸರಿಯಾದ ವೈಜ್ಞಾನಿಕ ವಿವರಣೆ ಕೊಡಲು ಸಾಧ್ಯವಾಗಿದ್ದೇ ವೆಗ್ನರ್ನ ಸಂಶೋಧನೆಗಳಿಂದ. ಭೂವಿಜ್ಞಾನದ ಡಾರ್ವಿನ್ ಎಂದೇ ಗುರುತಿಸಬಹುದಾದ ವೆಗ್ನರ್ ತನ್ನ ಪ್ರಸಿದ್ಧ 'ಖಂಡ ಮತ್ತು ಸಾಗರಗಳ ಉಗಮ' ಕೃತಿಯನ್ನು ಬರೆದು ಇಂದಿಗೆ ನೂರು ವರ್ಷ.
1930ರ ಒಂದು ಶೀತಲ ಸಂಜೆ. ನಾನು ಸಹೋದ್ಯೋಗಿ ಲೂವಿಯ ಜೊತೆ ಗ್ರೀನ್ಲ್ಯಾಂಡ್ನ ಹಿಮ ಮುಸುಕಿದ ದಾರಿಯಲ್ಲಿ ಸಿಕ್ಕಿಬಿದ್ದಿದ್ದೆ. ಮೂರು ದಿನಗಳಿಂದ ಇಬ್ಬರೂ ತುತ್ತು ಬ್ರೆಡ್ಡೂ ತಿಂದಿರಲಿಲ್ಲ. ನೀರು ಕುಡಿದು ದಾಹ ಇಂಗಿಸಿಕೊಳ್ಳೋಣವೆಂದರೆ ಅದಕ್ಕಾಗಿ ಅಮೂಲ್ಯವಾದ ಬೆಂಕಿಯನ್ನು ಗಂಟೆಗಟ್ಟಲೆ ಖರ್ಚು ಮಾಡಬೇಕು. ಆಕಾಶದಿಂದ ಇಳಿದಿಳಿದು ಬಂದು ತುಂಬಿಕೊಳ್ಳುತ್ತಿದೆಯೇನೋ ಎನ್ನಿಸುವ ಗವ್ವನೆ ಹಿಮರಾಶಿ ಎಲ್ಲೆಲ್ಲೂ. ನನ್ನ ದೇಹದೊಳಗೆ ರಕ್ತ ಹರಿಯುವುದು ನಿಂತುಹೋಗಿ ನಾಳಗಳೆಲ್ಲ ಹೆಪ್ಪುಗಟ್ಟಿದಂತೆ ಭಾಸವಾಗುತ್ತಿತ್ತು. ಲೂವಿ ಕಿರುಚಲಿಕ್ಕೂ ದನಿ ಸಾಲದೆ ಒದ್ದಾಡುತ್ತಿದ್ದ. ಅವನ ಕಾಲಿನಲ್ಲಿ ರಕ್ತಪರಿಚಲನೆ ನಿಂತು ನರಗಳು ಸತ್ತು ನೀಲಿಗಟ್ಟಿದ್ದವು. ಅವುಗಳನ್ನು ಕತ್ತರಿಸಿ ತೆಗೆಯದೆ ಬೇರೆ ದಾರಿಯೇ ಇರಲಿಲ್ಲ. ಒಂದು ಮರದ ಕೊರಡನ್ನು ಅವನ ಹಲ್ಲುಗಳ ನಡುವೆ ತುರುಕಿ, ಕಚ್ಚಿಕೊಂಡಿರಲು ಹೇಳಿ, ನನ್ನ ಚಾಕು ತೆಗೆದು ಅವನ ಕಾಲನ್ನು ಗರಗಸದಂತೆ ಕುಯ್ಯತೊಡಗಿದೆ. ಸುಮಾರು ಎರಡು ಗಂಟೆ ಒದ್ದಾಡಿದ ಮೇಲೆ, ಎರಡೂ ಕಾಲುಗಳನ್ನು ಮೊಣಗಂಟಿನ ಬಳಿ ಕತ್ತರಿಸಿ ತೆಗೆಯಲು ಸಾಧ್ಯವಾಯಿತು. ಓಹ್ ಕ್ಷಮಿಸಿ, ಪರಿಚಯಿಸಿಕೊಳ್ಳುವುದೇ ಮರೆತೆ ನೋಡಿ! ನನ್ನ ಹೆಸರು ಆಲ್ಪ್ರೆಡ್ ವೆಗ್ನರ್. ನಾನೊಬ್ಬ ಭೂವಿಜ್ಞಾನಿ. ನೀವಂದುಕೊಂಡ ಹಾಗೆ ನರಭಕ್ಷಕ ಅಥವಾ ರಾಕ್ಷಸ ಏನೂ ಅಲ್ಲ! ಹಿಮಪ್ರದೇಶದ ದುರ್ಭರ ಸ್ಥಿತಿ ವಿವರಿಸುತ್ತ ಈ ಲೂವಿಯ ಕಾಲು ಕತ್ತರಿಸಿದ ಮಾತು ಬಂತು ಅಷ್ಟೆ. ಉಷ್ಣಾಂಶ ಮೈನಸ್ ಅರವತ್ತಕ್ಕೆ ಹೋದಾಗ ಬದುಕು ಹೇಗಿರುತ್ತದೆ ಎನ್ನುವುದನ್ನು ನಿಮಗೆಂದಾದರೂ ಕಲ್ಪಿಸಿಕೊಳ್ಳಲಿಕ್ಕಾದರೂ ಸಾಧ್ಯವಾಗುತ್ತದೋ ಇಲ್ಲವೊ ನನಗೆ ಗೊತ್ತಿಲ್ಲ! ಆ ಚಳಿಯಲ್ಲಿ ನೀವು ಮೈಮೇಲೆ ಭೂತ ಬಂದಂತೆ ನಡುಗುತ್ತಿರುತ್ತೀರಿ. ಅಥವಾ ನರವ್ಯೂಹ ಸತ್ತು ನಡುಗದೆ ಹೆಣದಂತೆ ನಿಶ್ಚೇಷ್ಟಿತರಾಗಿರುತ್ತೀರಿ. ಕೈಕಾಲುಗಳನ್ನೆಲ್ಲ ಹಿಮ ಕೊರೆದುಹಾಕಿರುತ್ತದೆ. ಎಷ್ಟು ಹುಡುಕಿದರೂ ಒಂದು ಸಣ್ಣ ಎಲೆ ಕೂಡ ಕಾಣದ ಆ ಬಿಳಿ ಮರುಭೂಮಿಯಲ್ಲಿ ಕೊನೆಗೆ ನಿಮ್ಮೊಡನೆ ಗಾಡಿ ಎಳೆಯುತ್ತ ಬಂದ ಹಿಮನಾಯಿಗಳನ್ನೇ ಒಂದೊಂದಾಗಿ ಕೊಂದು ತಿಂದು ಜೀವ ಹಿಡಿದುಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಅದೃಷ್ಟವಿದ್ದರೆ ಬದುಕಿಬರುತ್ತೀರಿ. ಇಲ್ಲವೆ, ಸತ್ತು ಹಿಮದ ಮೇಲೆ ನೂರಾರು ವರ್ಷ ಕೆಡದೆ ಮಮ್ಮಿಯಾಗಿ ಮಲಗಿರುತ್ತೀರಿ. ಇಂಥದೊಂದು ವಿಚಿತ್ರ ಸಾಹಸಕ್ಕೆ ನನ್ನನ್ನು ನಾನು ಪ್ರತಿವರ್ಷ ಒಡ್ಡಿಕೊಳ್ಳಬೇಕಾಗಿತ್ತು. ಯಾಕೆಂದರೆ ನನ್ನ ವಿಶೇಷ ಅಧ್ಯಯನದ ವಿಷಯ ಧ್ರುವಪ್ರದೇಶದ ಹವಾಮಾನ ವೈಪರೀತ್ಯ. ವರ್ಷದ ವಿವಿಧ ಕಾಲಗಳಲ್ಲಿ ಧ್ರುವಗಳ ಹಿಮಟೋಪಿಗಳ ದಪ್ಪ ಹೇಗೆ ಹೆಚ್ಚುಕಡಿಮೆಯಾಗುತ್ತದೆ ಎನ್ನುವುದನ್ನು ನಾನು ಅಭ್ಯಾಸ ಮಾಡಿ ಸರ್ಕಾರಕ್ಕೆ ವರದಿ ಒಪ್ಪಿಸಬೇಕಾಗಿತ್ತು. ಅದಕ್ಕಾಗಿ ನನ್ನ ದೇಶ ಜರ್ಮನಿ, ಭರಪೂರವಾದ ದುಡ್ಡು ಸುರಿಯುತ್ತಿತ್ತು. ಸೈಬೀರಿಯದ ಓಪನ್ ಜೈಲುಗಳಿಗಿಂತಲೂ ಭೀಕರವಾದ ಗ್ರೀನ್ಲ್ಯಾಂಡ್ನ ಹಿಮಭೂಮಿಯಲ್ಲಿ ಹವಾಮಾನ ಪ್ರಯೋಗಾಲಯಗಳನ್ನು ತೆರೆಯುವ ಕೆಲಸ ನನ್ನ ಪಾಲಿಗೆ ಬಂದಿದ್ದರಿಂದ, ಅವಕ್ಕಾಗಿ ಈ ಓಡಾಟಗಳು ಅಗತ್ಯವಾಗಿದ್ದವು. ನಾನು ಹುಟ್ಟಿದ್ದು 1880ರ ನವೆಂಬರ್ 1ರಂದು, ಜರ್ಮನಿಯ ಬರ್ಲಿನ್ನಲ್ಲಿ. ಅಪ್ಪ ಜಿಮ್ನಾಸಿಯಂ (ನಿಮ್ಮ ಹೈಸ್ಕೂಲಿಗೆ ಸಮ) ಒಂದರಲ್ಲಿ ಲ್ಯಾಟಿನ್, ಗ್ರೀಕ್ ಮೊದಲಾದ ಅಭಿಜಾತ ಭಾಷೆಗಳನ್ನು ಹೇಳಿಕೊಡುವ ಶಿಕ್ಷಕ. ನಾನು ಓದಿನಲ್ಲಿ ಮುಂದಿದ್ದೆ. ತರಗತಿಗೆ ಮೊದಲ ಸ್ಥಾನವನ್ನೇ ಪಡೆಯುತ್ತಿದ್ದೆ. ಪದವಿ ಪಡೆಯಲು ಕಾಲೇಜು ಸೇರಿದಾಗ ಅಧ್ಯಯನದ ವಿಷಯವಾಗಿ ಭೌತಶಾಸ್ತ್ರ, ಪವನವಿಜ್ಞಾನ (Mಛಿಠಿಛಿಟ್ಟಟ್ಝಟಜಢ) ಮತ್ತು ಖಗೋಳಶಾಸ್ತ್ರಗಳನ್ನು ಆರಿಸಿಕೊಂಡೆ. ಪದವಿ ಮುಗಿಯಿತು. ಹತ್ತಿರದ ಖಗೋಳ ವೀಕ್ಷಣಾಲಯದಲ್ಲಿ ಪುಟ್ಟದೊಂದು ಕೆಲಸ ಸಿಕ್ಕಿತು. ಅಲ್ಲಿರುತ್ತ, ನನ್ನ ಇಪ್ಪತೆôದನೇ ವರ್ಷಕ್ಕೆಲ್ಲ ಆಸ್ಟ್ರಾನಮಿಯಲ್ಲಿ ಪಿಎಚ್ಡಿಯನ್ನೂ ಪೂರ್ತಿಗೊಳಿಸಿದೆ. ಆಗಲೇ ನನಗೆ ಭೂಮಿಯ ಹವಾಮಾನ ಬದಲಾವಣೆಗಳ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಬೇಕೆಂಬ ಆಸೆ ಹುಟ್ಟಿದ್ದು. ಅಣ್ಣ ಕರ್ಟ್ ಜೊತೆಗಿದ್ದ. ಅವನಿಗೂ ಇಂಥ ಹುಚ್ಚಾಟಗಳಲ್ಲಿ ಅಮಿತ ಆಸಕ್ತಿ. ಇಬ್ಬರೂ ಸೇರಿ, ಆಕಾಶಕ್ಕೆ ದೊಡ್ಡದೊಡ್ಡ ಬಲೂನುಗಳನ್ನು ಹಾರಿಸಿ, ಅವು ಹಾರಿಕೊಂಡುಹೋಗುವ ದಿಕ್ಕು, ವೇಗ ಇತ್ಯಾದಿ ನೋಡಿ, ಭೂಮಿಯ ಸುತ್ತಲೂ ಒಂದು ಬಗೆಯ ವಾಯುಪ್ರವಾಹಗಳು ಸದಾ ಗಿರಕಿ ಹೊಡೆಯುತ್ತಿವೆ ಎನ್ನುವ ತೀರ್ವನಕ್ಕೆ ಬಂದೆವು. ಇವುಗಳ ಉಷ್ಣತೆಯಲ್ಲಿ ಏರುಪೇರಾಗುತ್ತಿರುತ್ತದೆ. ಅಂಥ ತಾಪವೈಪರೀತ್ಯವೇ ಜಗತ್ತಿನಲ್ಲಿ ನಡೆಯುವ ಹಲವು ನೈಸರ್ಗಿಕ ವಿದ್ಯಮಾನಗಳಿಗೆ ಕಾರಣ ಎನ್ನುವುದು ನಮ್ಮ ತರ್ಕವಾಗಿತ್ತು. ನಂಬಿದರೆ ನಂಬಿ, ಆಗಿನ್ನೂ ಭೂಮಂಡಲದ ಸುತ್ತ ಉಷ್ಣ ಮತ್ತು ಶೀತಪ್ರವಾಹಗಳಿರುತ್ತವೆ ಎನ್ನುವ ಕಲ್ಪನೆಯೇ ಜನಕ್ಕೆ ಇರಲಿಲ್ಲ! ನನ್ನ ಸಂಶೋಧನೆಗಳನ್ನು ಮುಂದುವರಿಸಲು ಗ್ರೀನ್ಲ್ಯಾಂಡ್ನಂಥ ಸ್ತಬ್ಧ ಪರಿಸರ ಸೂಕ್ತ ಅನ್ನಿಸಿತು. 1906ರಲ್ಲಿ ನನ್ನ ಸವಾರಿ ಅಲ್ಲಿಗೆ ಹೋಯಿತು. ಅಲ್ಲಿನ ಶೀತದ ಕತೆಯನ್ನು ಕೇಳಿ (ಕೇಳಿಯೇ!) ನಡುಗಿದ್ದೆನೇ ಹೊರತು ಕಣ್ಣಾರೆ ನೋಡಿ ಅನುಭವಿಸಿರಲಿಲ್ಲ. ಆ ವರ್ಷದ ಯಾತ್ರೆಯಲ್ಲಿ ನನ್ನ ಕಣ್ಣೆದುರಲ್ಲೇ ಇಬ್ಬರು ಹಿರಿಯ ಸಹೋದ್ಯೋಗಿಗಳು ಥಂಡಿಯೇರಿ ಸಾಯುವುದನ್ನು ನೋಡಬೇಕಾಯಿತು. ಅಲ್ಲಿಂದ 1908ರಲ್ಲಿ ವಾಪಸು ಬಂದ ಮೇಲೆ, ಮತ್ತೆ ಹೋಗಲು ಧೈರ್ಯ ಸಾಲಲಿಲ್ಲ. ಮೂರ್ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಪವನವಿಜ್ಞಾನ, ಕಾಸ್ಮಿಕ್ ಫಿಸಿಕ್ಸ್, ಆಸ್ಟ್ರಾನಮಿ ಇತ್ಯಾದಿ ಬೋಧಿಸಿದೆ. ಸ್ವಯಂಸಂಶೋಧನೆಗಳ ಕತೆಗಳನ್ನೂ ಗ್ರೀನ್ಲ್ಯಾಂಡ್ನಲ್ಲಿ ಅಧ್ಯಯನಕ್ಕಾಗಿ ಮಾಡಿದ ಹುಚ್ಚಾಟದ ವಿವರಗಳನ್ನೂ ಸೇರಿಸಿ ಒಗ್ಗರಣೆ ಹಾಕಿ ಪಾಠ ಮಾಡುತ್ತಿದ್ದುದರಿಂದ ಭಲೇ ಜನಪ್ರಿಯ ಪ್ರಾಧ್ಯಾಪಕನಾದೆ. ಸಹೋದ್ಯೋಗಿಗಳು ಕೂಡ, ಈತ ಪುಸ್ತಕದ ಬದನೆಕಾಯಲ್ಲ - ಹೊರಗಿನ ಜಗತ್ತಿನ ವಿವರಗಳನ್ನೂ ರಸವತ್ತಾಗಿ ಹೇಳುತ್ತಾನೆ ಎಂದು ಮೆಚ್ಚಿಕೊಂಡರು. ಮೊದಲ ಮಹಾಯುದ್ಧ ಶುರುವಾದಾಗ, ದೇಶದ ಆಣತಿಯಂತೆ ನಾನು ಅನಿವಾರ್ಯವಾಗಿ ಯುದ್ಧಭೂಮಿಯಲ್ಲಿ ಬಂದೂಕು ಹಿಡಿದು ಹೋರಾಡಬೇಕಾಯಿತು. ಅದರಲ್ಲಿ ಅಷ್ಟೊಂದು ಅನುಭವವಿಲ್ಲದ ಮಡೆಯನಾದ್ದರಿಂದ ಎರಡು ಸಲ ತೀವ್ರವಾದ ಗಾಯಗಳಾಗಿ ಆಸ್ಪತ್ರೆ ಸೇರಬೇಕಾಯಿತು. ಆದರೆ, ಯುದ್ಧದ ಸಂದರ್ಭದಲ್ಲಿ ನನಗೆ ಯುರೋಪ್ನಲ್ಲಿ ವ್ಯಾಪಕವಾಗಿ ಸುತ್ತಾಡುವ ಸುವರ್ಣ ಅವಕಾಶ ಸಿಕ್ಕಿತು! ಹಾಗೆ ಹೊಸಜಾಗಕ್ಕೆ ಗುಳೆ ಹೊರಟಾಗೆಲ್ಲ ನನ್ನೊಳಗಿನ ವಿಜ್ಞಾನಿ ಜಾಗೃತನಾಗುತ್ತಿದ್ದ. ಅಲ್ಲಿ ಸಿಗುವ ಕಲ್ಲುಮಣ್ಣುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದೆ. ಆಗ ನನಗೆ ಅಚ್ಚರಿ ಹುಟ್ಟಿಸುವ ಫಲಿತಾಂಶವೊಂದು ಸಿಕ್ಕಿತು. ಅದೇನೆಂದರೆ, ಉತ್ತರ ಅಮೆರಿಕದ ಪೂರ್ವ ಕರಾವಳಿ ಮತ್ತು ಯುರೋಪ್ನ ಪಶ್ಚಿಮದ ಭಾಗಗಳಲ್ಲಿ ಕಂಡುಬರುವ ಕಲ್ಲುಮಣ್ಣುಗಳಲ್ಲಿ ಮೈ ಮುಳ್ಳೆಬ್ಬಿಸುವಷ್ಟು ಸಾಮ್ಯತೆ ಇದ್ದವು. ಹಾಗೆಯೇ ದಕ್ಷಿಣ ಅಮೆರಿಕ ಮತ್ತು ಆಫ್ರಿಕದ ಭಾಗಗಳಲ್ಲಿ ದೊರಕಿದ ಫಾಸಿಲ್ಗಳಲ್ಲೂ ಅಪ್ರತಿಮ ಹೋಲಿಕೆಗಳಿದ್ದವು. ಇದು ಹೇಗೆ ಸಾಧ್ಯ ಎಂದು ತಲೆಕೆಡಿಸಿಕೊಳ್ಳುವಂತಾಯಿತು. ನಡುವೆ ಅಷ್ಟೊಂದು ದೊಡ್ಡ ಅಟ್ಲಾಂಟಿಕ್ ಸಾಗರ ಹಬ್ಬಿದ್ದರೂ ಈ ಭೂಸಾಮ್ಯ ಹೇಗೆ? ಸಂಶಯದ ಕೀಟ ಮಿದುಳನ್ನು ಕೊರೆಕೊರೆದು ಹಾಕತೊಡಗಿತು. ಸೈನಿಕನ ವೇಷದಲ್ಲಿದ್ದ ಈ ವಿಜ್ಞಾನಿಯ ರಹಸ್ಯಸಂಶೋಧನೆ ಶುರುವಾಯಿತು. ಭೂಮಿಯ ಮ್ಯಾಪು ಬಳಿಯಲ್ಲಿಟ್ಟುಕೊಂಡು ಹಗಲುರಾತ್ರಿ ಎವೆಯಿಕ್ಕದೆ ನೋಡಿದೆ. ಅದುವರೆಗಿನ ಎಲ್ಲ ಸಂಶೋಧನೆಗಳ ಸಾರಸರ್ವಸ್ವವನ್ನೂ ಮೈಮೇಲೆ ಬಸಿದುಕೊಂಡೆ. ಭೂವಿಜ್ಞಾನದ ಗೂಢಗಳನ್ನು ಅರಿಯಲು ಸ್ವತಃ ನಾನೇ ಅದರೊಳಗೆ ಡುಮ್ಕಿ ಹೊಡೆದೆ. ಕೊನೆಗೆ 1912ರ ಹೊತ್ತಿಗೆ ನನಗೊಂದು ವಿಷಯ ಸ್ಪಷ್ಟವಾಗತೊಡಗಿತು. ಅದೇನೆಂದರೆ, ಈ ಭೂಮಿ ಈಗ ನಾವು ನೋಡುವಂತೆ ಇರಲಿಲ್ಲ. ಅದು ಕಳೆದ ಹಲವು ಕೋಟ್ಯಂತರ ವರ್ಷಗಳಲ್ಲಿ ಬದಲಾಗುತ್ತ ಬಂದಿದೆ. ಕೆಲವು ಲಕ್ಷ ವರ್ಷಗಳ ಹಿಂದೆ, ಈ ಖಂಡಗಳು ಪರಸ್ಪರ ಹತ್ತಿರ ಇದ್ದವು. ಹತ್ತಿರ ಏನು? ಅಂಟಿಕೊಂಡೇ ಇದ್ದವು! ಅಮೆರಿಕ ಯುರೋಪ್ ಮತ್ತು ಆಫ್ರಿಕಗಳಿಗೆ; ಅವು ಏಷ್ಯಕ್ಕೆ; ಏಷ್ಯ ಆಸ್ಟ್ರೇಲಿಯಕ್ಕೆ - ಹೀಗೆ ಇದು ಒಂದಕ್ಕೊಂದು ಪೋಣಿಸಿದ ಸರಮಾಲೆಯಾಗಿತ್ತು! ಕಾಲಕ್ರಮೇಣ ಎಣ್ಣೆಯಲ್ಲಿ ಬಿದ್ದ ಬೂಂದಿಯ ಹನಿಗಳಂತೆ ಇವು ದೂರದೂರಕ್ಕೆ ಸರಿಯತೊಡಗಿದವು. ಈ ಚಲನೆ ಈಗಲೂ ಜಾರಿಯಲ್ಲಿದೆ; ಭೂಖಂಡಗಳು ಪ್ರತಿವರ್ಷವೂ ಇಷ್ಟಿಷ್ಟೇ ಇಂಚು ಎನ್ನುತ್ತ ಪರಸ್ಪರ ದೂರ ಹೋಗುತ್ತಿವೆ ಎಂಬ ವಾದ ತಲೆಯಲ್ಲಿ ಹುಟ್ಟಿತು. 1914ರಲ್ಲಿ ನಾನು ಯುದ್ಧದ ಗಾಯಾಳುವಾಗಿ ಹಲವು ವಾರ ಆಸ್ಪತ್ರೆಯಲ್ಲಿ ಮಲಗಬೇಕಾಗಿ ಬಂದದ್ದು ಒಳ್ಳೆಯದೇ ಆಯ್ತೆನ್ನಿ! ಆಗ, ಈ 'ಭೂಖಂಡಗಳ ಚಲನೆ' ಎಂಬ ನನ್ನ ಹೊಸಸಿದ್ಧಾಂತವನ್ನು ವಿವರಿಸಿ ವಿವರವಾದ ಪುಸ್ತಕವೊಂದನ್ನು ಬರೆಯಲು ಅನುಕೂಲವಾಯಿತು. ಅದಕ್ಕೆ ಪೂರಕವಾಗಿ ಒಂದೆರಡು ಲೇಖನಗಳನ್ನು ಬರೆದು ವಿಜ್ಞಾನ ಜರ್ನಲ್ಗಳಿಗೆ ಕಳಿಸಿದೆ. ಕೆಲವು ಪ್ರಕಟವಾದವು. ಅವುಗಳನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಕೆಲವರು ಉಡಾಫೆ ಮಾಡಿ, ನನಗೊಂದಿಷ್ಟು ಬಯ್ದು ನಾಲಗೆಯ ತೀಟೆ ತೀರಿಸಿಕೊಂಡರು. ಈ ಪ್ರತಿಕ್ರಿಯೆಗಳನ್ನು ನೋಡಿ, ನನ್ನ ಪುಸ್ತಕದಲ್ಲಿ ಬೇಕಾದ ಪರಿಷ್ಕಾರಗಳನ್ನು ಮಾಡಿ, ಅಗತ್ಯ ಭಾಗಗಳನ್ನು ಹಿಗ್ಗಿಸಿ, ಇನ್ನಷ್ಟು ವಿವರಣೆ ಸೇರಿಸಿ, ಅಂತೂ ಅದನ್ನು ಪ್ರಕಟಣೆಗೆ ಸಿದ್ಧಗೊಳಿಸಿದೆ. ಭೂಮಿಯ ಮೇಲಿರುವ ಖಂಡಗಳೆಲ್ಲವೂ ಆಳದಲ್ಲಿ ಒಂದಷ್ಟು ಶಿಲಾಫಲಕಗಳ ಮೇಲೆ ನಿಂತಿರುವ ರಚನೆಗಳು; ಈ ಫಲಕಗಳು ಕಾರಣಾಂತರಗಳಿಂದ ಅತ್ತಿತ್ತ ಸರಿದಾಗ ಖಂಡಗಳೂ ಚಲಿಸುತ್ತವೆ ಎನ್ನುವ ಹೊಸ 'ಶಿಲಾಫಲಕಗಳ ಚಲನೆಯ ಸಿದ್ಧಾಂತ'ವನ್ನೂ ಆ ಪುಸ್ತಕದಲ್ಲಿ ಸೇರಿಸಿದೆ. 1915ರಲ್ಲಿ 'ಖಂಡ ಮತ್ತು ಸಾಗರಗಳ ಉಗಮ' ಎಂಬ ಆ ಉದಂಥ ಪ್ರಕಟಣೆಯ ಭಾಗ್ಯ ಕಂಡಿತು. ತಮಾಷೆಯೆಂದರೆ, ಅಲ್ಲಿಯವರೆಗೂ ಈ ಖಂಡಗಳ ಚಲನೆಯ ವಿಷಯದಲ್ಲಿ ಯಾರೂ ಸಂಶೋಧನೆ ಮಾಡುವುದು ಬಿಡಿ, ಯೋಚಿಸಿಯೂ ಇರಲಿಲ್ಲ! ಎಲ್ಲ ಖಂಡಗಳ ನಡುವೆಯೂ ನೆಲದ ಸೇತುವೆ ಇದ್ದವು; ಕಾಲಾಂತರದಲ್ಲಿ ಅವು ಸಾಗರದಲ್ಲಿ ಬಿದ್ದುಹೋದವು - ಎಂಬ ಮಾತನ್ನೇ ಎಲ್ಲರೂ ದೇವರ ಸಂದೇಶ ಎಂಬಂತೆ ಭಯಭಕ್ತಿಯಿಂದ ನಂಬಿ ಕೂತಿದ್ದರು! ಇಡೀ ವಿಶ್ವದಲ್ಲೇ ಅತ್ಯಂತ ಸ್ಥಿರವಾದ ರಚನೆ ಎಂದರೆ ಭೂಮಿ, ಅದಕ್ಕೆ ಚಲನೆ ಇಲ್ಲ ಎಂದು ವಿಜ್ಞಾನಿಗಳು ಕೂಡ ನಂಬಿದ್ದರು. ದುರದೃಷ್ಟವೆಂದರೆ, ನಾನು ಕೂಡ; ಖಂಡಗಳು ಒಟ್ಟಾಗಿದ್ದವು, ಈಗ ದೂರ ಸರಿಯುತ್ತಿವೆ ಎಂದೆನೇ ಹೊರತು ಅವಕ್ಕೆ ಕಾರಣವೇನು ಎನ್ನುವುದನ್ನು ತಿಳಿದಿರಲಿಲ್ಲ. ಭೂಮಿ ಎಡೆಬಿಡದೆ ತನ್ನ ಅಕ್ಷದಲ್ಲಿ ಭ್ರಮಿಸುತ್ತಿರುವುದರಿಂದ, ಅದರಿಂದ ಉಂಟಾದ ಕೇಂದ್ರಾಪಗಾಮಿ ಶಕ್ತಿಯೇ ಈ ಖಂಡಗಳನ್ನು ದೂರ ತಳ್ಳುತ್ತಿದೆ ಎಂದು ನಂಬಿದ್ದೆ. ನನ್ನ ವಾದಕ್ಕೆ ಎಲ್ಲೂ ಪುಷ್ಟಿ ಸಿಗಲಿಲ್ಲ. ನ್ಯೂಯಾರ್ಕ್ನಲ್ಲಿ ಈ ಪುಸ್ತಕವನ್ನು ಹೀಯಾಳಿಸುವುದಕ್ಕಾಗಿಯೇ ಅಂತಾರಾಷ್ಟ್ರೀಯ ಸಮ್ಮೇಳನವೊಂದು ಆಯೋಜನೆಯಾಯಿತು ಎಂದರೆ ನೀವು ನಂಬಲೇಬೇಕು! ಜರ್ಮನಿಯ ಖ್ಯಾತ ಭೂವಿಜ್ಞಾನಿಯಾಗಿದ್ದ ನನ್ನ ಮಾವನವರು, 'ಈ ಮೊದ್ದುಮಣಿಯ ಅಧಿಕಪ್ರಸಂಗವನ್ನು ವಿದ್ವನ್ಮಣಿಗಳು ಗಂಭೀರವಾಗಿ ಪರಿಗಣಿಸಬಾರದು' ಎಂದುಬಿಟ್ಟರು! ನನ್ನ ವಿರುದ್ಧ ನೂರಾರು ಲೇಖನಗಳು ಬರೆಯಲ್ಪಟ್ಟವು. ಕೈಯಲ್ಲಿದ್ದ ಕೆಲಸ ಕೂಡ ಹೋಯಿತು. ಮಾನಸಿಕವಾಗಿ ತೀರಾ ಇಳಿದುಹೋದೆ. ಅದಾಗಿ ಹಲವು ವರ್ಷ ನಾನು ಖಂಡಾಂತರ ಚಲನೆಯ ಸಂಶೋಧನೆಯಿಂದಲೇ ದೂರ ಹೋದೆ. ಅಥವಾ ಹಾಗಾಗುವಂತೆ ಜಗತ್ತಿನ ಪಂಡಿತವಲಯ ನೋಡಿಕೊಂಡಿತು! ನನ್ನ ಅಧ್ಯಯನವನ್ನು ಭೂಮಿಯ ಮೇಲೆ ನಡೆಯುವ ಉಷ್ಣ-ಶೀತ ಪ್ರವಾಹಗಳ ಮೇಲೆ ಕೇಂದ್ರೀಕರಿಸಿದೆ. ಧ್ರುವಪ್ರದೇಶಗಳ ವಾತಾವರಣದ ಬಗ್ಗೆ ಎಡೆಬಿಡದೆ ಸಂಶೋಧನೆ ಮಾಡಿದೆ. ವರ್ಷಕ್ಕೊಂದಾವರ್ತಿ ಗ್ರೀನ್ಲ್ಯಾಂಡ್ಗೆ ಹೋಗುವುದಂತೂ ಇದ್ದೇ ಇತ್ತು. ಅಲ್ಲಿನ ಹಿಮನೆಲದಲ್ಲಿ ಅಲೆಮಾರಿಯಾಗಿ ರಣಪೀಡೆಯಂತೆ ಸುತ್ತುವಾಗ, ಮನುಷ್ಯಪ್ರಪಂಚಕ್ಕಿಂತ ಈ ಪ್ರಕೃತಿಯೇ ಹೆಚ್ಚು ಸಹ್ಯವಾಗಿದೆ ಅನ್ನಿಸುತ್ತಿತ್ತು. ಆದರೂ ಖಂಡಾಂತರ ಚಲನೆಯ ವಾದದಿಂದ ಹಿಂದೆ ಸರಿಯಲಿಲ್ಲ. ಆ ಪುಸ್ತಕವನ್ನು ಮತ್ತೆ ಮತ್ತೆ ತಿದ್ದಿ ಬರೆಯುತ್ತ, ಪರಿಷ್ಕರಿಸುತ್ತ, ಹೊಸ ವಿಚಾರಗಳನ್ನು ಸೇರಿಸುತ್ತ, ತಪ್ಪುಗಳನ್ನು ಕೈಬಿಡುತ್ತ ಐದಾರು ಸಲ ಪ್ರಕಟಿಸಿದೆ. ಆದರೆ, ನನ್ನ ಹಣೆಬರಹವೋ ಅಥವಾ ವಿಜ್ಞಾನದ ದುರವಸ್ಥೆಯೋ - ಅಂತೂ ಅದನ್ನು ಇದ್ದರೂ ಇರಬಹುದೆಂದು ಒಪ್ಪುವ ಒಬ್ಬನೇ ಒಬ್ಬ ವಿಜ್ಞಾನಪ್ರೇಮಿಯೂ ಹುಟ್ಟಿಬರಲಿಲ್ಲ! ಭೂಮಿಯಲ್ಲಿ ಕಂದಕಗಳು, ನದಿಸರೋವರಗಳು ಹುಟ್ಟಲು ಶಿಲಾಫಲಕಗಳ ಅಲುಗಾಟವೇ ಕಾರಣ; ಅವು ಪರಸ್ಪರ ಹತ್ತಿರ ಬಂದಾಗ ಪರ್ವತಗಳು ಎದ್ದು ನಿಲ್ಲುತ್ತವೆ ಎಂದು ನಾನು ಹೇಳಿದಾಗ ಜನ ಪಕಪಕನೆ ನಕ್ಕರು. ಬಿಸಿಯುಂಡೆಯಾಗಿದ್ದ ಭೂಮಿ ತಣಿಯುತ್ತಿದ್ದಾಗ ಉಂಟಾದ ಮಡಿಕೆಗಳೇ ಪರ್ವತಗಳು ಎಂಬ ವಾದವೇ ಸದ್ದುಮಾಡುತ್ತಿತ್ತು. ಅದರ ಆರ್ಭಟದೆದುರು ನನ್ನ ದನಿ ಉಡುಗಿಹೋಯಿತು. 1930ರಲ್ಲಿ ಗ್ರೀನ್ಲ್ಯಾಂಡ್ನ ನೆಲದಲ್ಲಿದ್ದೆ. ಅಲ್ಲಿ ಮೂರ್ನಾಲ್ಕು ಹವಾಮಾನ ಕೇಂದ್ರಗಳನ್ನು ತೆರೆಯುವ ಗುರುತರ ಜವಾಬ್ದಾರಿ ನನ್ನ ಹೆಗಲಿಗೆ ಬಂದಿತ್ತು. ಅವತ್ತೊಂದು ದಿನ - ಚಳಿಗಾಲ ತನ್ನ ಉಗ್ರಪ್ರತಾಪ ತೋರುತ್ತಿದ್ದ ದಿನ - ಒಂದು ಸ್ಟೇಶನ್ನಿಂದ ಇನ್ನೊಂದಕ್ಕೆ ಆಹಾರ ಸರಬರಾಜು ಮಾಡುವ ಕೆಲಸ ವಹಿಸಿಕೊಂಡು ಹೊರಬಿದ್ದಿದ್ದೆ. ಕಾಲಡಿಯ ಹಿಮನೆಲ ಎಷ್ಟು ಹೊತ್ತಿಗಾದರೂ ನನ್ನ ಬಲಿ ತೆಗೆದುಕೊಳ್ಳುವೆನೆಂಬಂತೆ ಮೈಯನ್ನು ನೆಕ್ಕಿಹಾಕುತ್ತಿತ್ತು. ಮಂಜು ಮುಸುಕಿದ ವಾತಾವರಣದಲ್ಲಿ ನನಗೆ ದಾರಿ ತಪ್ಪಿತು. ಹಿಂದೊಮ್ಮೆ ಬಂದಿದ್ದಾಗ ನೆಟ್ಟ ಗುರುತುಗಳೆಲ್ಲ ಮೂರ್ನಾಲ್ಕು ಅಡಿ ಆಳದಲ್ಲಿ ಹುಗಿದುಹೋಗಿದ್ದವೊ ಏನೋ. ಎಷ್ಟು ಅಲೆದರೂ ಹಿಂದಿರುಗುವ ಮಾರ್ಗ ಕಾಣಲಿಲ್ಲ. ಕತ್ತಲಾಯಿತು. ಸಣ್ಣಗೆ ಹಿಮಪಾತವೂ ಶುರುವಾಯಿತು. ಯಾವುದೋ ಕ್ಷಣದಲ್ಲಿ ನಾನು ಬಲಹೀನ ಬಳ್ಳಿಯಂತೆ ಕೆಳಗೆ ಬಿದ್ದೆ. ಇಳಿಯುತ್ತಿದ್ದ ನಸುಗತ್ತಲು ಗಾಢವಾಗಿ ಹರಡಿಕೊಂಡು ನನ್ನ ದೇಹವನ್ನು ಹೊದಿಕೆಯಂತೆ ಅಪ್ಪಿಕೊಂಡಿತು. ಅದಾಗಿ, ಏಳು ತಿಂಗಳ ನಂತರ, 1931ರ ಮೇನಲ್ಲಿ ವೆಗ್ನರ್ನ ದೇಹ ಪತ್ತೆಯಾಯಿತು. ಅವನ ಜೊತೆ ಆ ಚಳಿಗಾಲದಲ್ಲಿ ಗ್ರೀನ್ಲ್ಯಾಂಡ್ನಲ್ಲಿ ಕೆಲಸ ಮಾಡುತ್ತಿದ್ದ ಒಂದು ಡಜನ್ ಸಹೋದ್ಯೋಗಿಗಳು ಕಣ್ಣೀರು ಮಿಡಿದರು. ವೆಗ್ನರ್ನ ದೇಹವನ್ನು ಅಲ್ಲೇ ಸಮಾಧಿ ಮಾಡಲಾಯಿತು. ಜೀವನಪರ್ಯಂತ ಅವನಿಗೆ ಸೇರಬೇಕಾಗಿದ್ದ ಮಾನ-ಸಮ್ಮಾನಗಳು ಬರಲೇ ಇಲ್ಲ. 1964ರವರೆಗೂ ವಿಜ್ಞಾನಿಗಳು, ಸಂಶೋಧಕರು ಯಾರೂ ಅವನ ಸಿದ್ಧಾಂತವನ್ನು ಒಪ್ಪಲಿಲ್ಲ! ಕೊನೆಗೆ ಆ ವರ್ಷ ಅಮೆರಿಕದ ಅಲಾಸ್ಕದಲ್ಲಿ ನಡೆದ ಭೀಕರ ಭೂಕಂಪವೊಂದು ವಿಜ್ಞಾನಿಗಳಿಗೆ ಸವಾಲಾಗಿ ಪರಿಣಮಿಸಿತು. ಭೂಕಂಪಕ್ಕೆ ನಿಜವಾದ ಕಾರಣ ಏನು ಎಂದು ಹುಡುಕಹೊರಟವರಿಗೆ ಭೂಮಿಯಾಳದಲ್ಲಿ ಶಿಲಾಫಲಕಗಳು ಅತ್ತಿತ್ತ ಜರುಗುವ ವಿದ್ಯಮಾನದ ಬಗ್ಗೆ ತಿಳಿಯಿತು. ಐವತ್ತು ವರ್ಷಗಳ ಹಿಂದೆಯೇ ವೆಗ್ನರ್ ಈ ಕಾರಣವನ್ನು ಹೇಳಿಬಿಟ್ಟಿದ್ದ ಎನ್ನುವುದೂ ತಿಳಿಯಿತು! ಕುತೂಹಲದಿಂದ ಅವನ ಸಂಶೋಧನಾ ಲೇಖನಗಳನ್ನೂ, ಪುಸ್ತಕಗಳನ್ನೂ ಮತ್ತೆ ಓದತೊಡಗಿದ ವಿಜ್ಞಾನಿಗಳು, ಅಲ್ಲಿ ಬರೆದಿರುವ ಒಂದೊಂದು ವಾಕ್ಯವೂ ಸತ್ಯ ಎಂದು ಒಪ್ಪಿಕೊಂಡರು! ಭೂಮಿಯ ನೆಲ ಒಂದಾನೊಂದು ಕಾಲದಲ್ಲಿ ಅಖಂಡವಾಗಿತ್ತು, ಬಳಿಕ ಸರಿಯುತ್ತ ದೂರಹೋಯಿತು ಎನ್ನುವುದಾಗಲಿ, ಎರಡು ಶಿಲಾಪದರಗಳು ಪರಸ್ಪರ ಒಂದರ ಅಡಿಗೆ ಒಂದು ಸೇರಿಕೊಂಡು ಹಿಮಾಲಯದಂಥ ಎತ್ತರದ ಬೆಟ್ಟಗಳನ್ನು ಹುಟ್ಟಿಸುತ್ತವೆ ಎನ್ನುವುದಾಗಲಿ ನೂರಕ್ಕೆ ನೂರು ನಿಜವಾದ ಮಾತು ಎಂದು ತಪ್ಪೊಪ್ಪಿಕೊಂಡರು. ಅವರ ಇಷ್ಟು ವರ್ಷಗಳ ನಂಬಿಕೆಯನ್ನು ವೆಗ್ನರ್ ಭೂಕಂಪದಂತೆಯೇ ಬುಡಮೇಲು ಮಾಡಿಬಿಟ್ಟಿದ್ದ! ವೆಗ್ನರ್ನನ್ನು ಈ ಜಗತ್ತಿನಲ್ಲಿ ಆಗಿಹೋಗಿರುವ ಅತ್ಯಂತ ಧೀಮಂತ ವಿಜ್ಞಾನಿಗಳಲ್ಲಿ ಒಬ್ಬನೆಂದರು ಹಲವರು. 20ನೇ ಶತಮಾನದ ವಿಜ್ಞಾನದ ದಿಕ್ಕು ಬದಲಿಸಿದ ಶಕಪುರುಷರಲ್ಲಿ ವೆಗ್ನರ್ ಒಬ್ಬ ಎಂಬ ಮಾತನ್ನು ಈಗ ಯಾವ ಭೂ ಅಥವಾ ಪವನವಿಜ್ಞಾನಿಯೂ ಅಲ್ಲಗಳೆಯುವುದಿಲ್ಲ. ವೆಗ್ನರ್ ಹೋದ ದಾರಿಯಲ್ಲಿ ನಡೆಯದೆ ಇರುತ್ತಿದ್ದರೆ, ಈಗಲೂ ನಮಗೆ ಭೂಕಂಪಗಳು ಪ್ರಕೃತಿವೈಚಿತ್ರ್ಯಳಾಗಿಯೇ ಉಳಿಯುತ್ತಿದ್ದವು. ನೇಪಾಳದ ಭೂಕಂಪವನ್ನು ತಿಂಗಳಷ್ಟು ಮುಂಚಿತವಾಗಿ ಊಹಿಸಲು ವಿಜ್ಞಾನಿಗಳಿಗೆ ಸಾಧ್ಯವೇ ಆಗುತ್ತಿರಲಿಲ್ಲ. ಕಾಲ ಮತ್ತು ಭೂಮಿ ಎರಡೂ ನಿರ್ದಯಿಗಳು. ಯಾವ ಕರುಣೆ ಇಲ್ಲದೆ ಅವು ಎಲ್ಲವನ್ನೂ ಅಗಸ್ಱರಂತೆ ಹೊಟ್ಟೆಯೊಳಗೆ ಹಾಕಿಕೊಳ್ಳುತ್ತವೆ. ಹರಪ್ಪಾ-ಮೊಹೆಂಜೋದಾರೋಗಳಂತೆ ಅಥವಾ ವೆಗ್ನರ್ನಂತೆ ಹೂತುಹೋದ ಆ ಗೂಢಸತ್ಯಗಳನ್ನು ಮತ್ತೆಷ್ಟೋ ವರ್ಷಗಳ ನಂತರ ಹೊರಕ್ಕೆ ತೆಗೆದು ಮನುಷ್ಯ ಆಶ್ಚರ್ಯದಿಂದ ಬಾಯಿಕಳೆದು ನಿಲ್ಲುತ್ತಾನೆ! *** ಬದುಕಿದ್ದಾಗ ಕಾಯಂ ಕೆಲಸ ಹಿಡಿಯಲು ಒದ್ದಾಡಬೇಕಿದ್ದ ವೆಗ್ನರ್ ಸತ್ತು ಐವತ್ತು ವರ್ಷಗಳಾದ ಮೇಲೆ, ಅವನ ಸಂಶೋಧನೆಯ ಪ್ರಾಮುಖ್ಯ ಉಳಿದವರಿಗೆ ಗೊತ್ತಾಯಿತು! 1980ರಲ್ಲಿ 'ಆಲ್ಪ್ರೆಡ್ ವೆಗ್ನರ್ ಧ್ರುವ ಮತ್ತು ಸಾಗರ ಅಧ್ಯಯನ ಸಂಸ್ಥೆ' ಎಂಬ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಯನ್ನು ಜರ್ಮನಿಯಲ್ಲಿ ಸ್ಥಾಪಿಸಲಾಯಿತು. ಉತ್ತರ ಮತ್ತು ದಕ್ಷಿಣಧ್ರುವಗಳೆರಡರ ಮೇಲೂ ನಿರಂತರ ಸಂಶೋಧನೆ ನಡೆಸುವ ಪ್ರಪಂಚದ ಏಕಮಾತ್ರ ಸಂಸ್ಥೆ ಇದು. ಚಂದ್ರ ಮತ್ತು ಮಂಗಳಗ್ರಹಗಳ ಮೇಲಿನ ಎರಡು ಕುಳಿಗಳಿಗೆ ವೆಗ್ನರ್ನ ಹೆಸರಿಡಲಾಗಿದೆ. ಭೂಖಂಡಗಳ ಸಂಶೋಧನೆ ಮಾತ್ರವಲ್ಲದೆ, ಭೂಮಿಯ ವಾಯುಮಂಡಲದಲ್ಲಿ ಶೀತೋಷ್ಣ ಪ್ರವಾಹಗಳು ನಿರಂತರ ಹರಿಯುತ್ತಿವೆ ಎಂದು ತಿಳಿಸಿದ ಮೊದಲಿಗ ವೆಗ್ನರ್. ಆಧುನಿಕ ಹವಾಮಾನ ವಿಜ್ಞಾನ ಇಲ್ಲಿಂದ ಪ್ರಾರಂಭವಾಯಿತು. ಧ್ರುವಪ್ರದೇಶಗಳ ಹಿಮಪದರಗಳ ದಪ್ಪದಲ್ಲಿ ಆಗುವ ವ್ಯತ್ಯಾಸಗಳ ಬಗ್ಗೆ ಸಂಶೋಧನೆ ನಡೆಸಿದ ಮೊದಲಿಗನೂ ವೆಗ್ನರನೇ. ಅವನು ಬರೆದ 'ಥಮೋಡೈನಾಮಿಕ್ಸ್ ಆಫ್ ದ ಅಟ್ಮಾಸ್ಪಿಯರ್' ಕೃತಿಯನ್ನು ಈಗ ಪವನವಿಜ್ಞಾನದ ಮೊದಲ ಪಠ್ಯಪುಸ್ತಕ ಎಂದು ಪರಿಗಣಿಸಲಾಗುತ್ತದೆ. ವೆಗ್ನರ್ ಪ್ರಕಾರ ಸುಮಾರು 20 ಕೋಟಿ ವರ್ಷಗಳ ಹಿಂದೆ ಜಗತ್ತಿನ ಏಳು ಭೂಖಂಡಗಳೂ ಸೇರಿ ಅಖಂಡವಾದ ಒಂದೇ ಭೂಭಾಗವಾಗಿತ್ತು. (ಆಗ ಆಸ್ಟ್ರೇಲಿಯ ನಮ್ಮ ಕೋಲಾರಕ್ಕೆ ಅಂಟಿಕೊಂಡಿತ್ತು!) ಅವು ವರ್ಷಕ್ಕೆ ಒಂದೆರಡು ಇಂಚಿನಷ್ಟೇ ದೂರ ಸರಿಯಲು ಶುರುವಾದ ಮೇಲೆ ಆರೂವರೆ ಕೋಟಿ ವರ್ಷಗಳ ಹಿಂದೆ ಈಗಿರುವಂಥ ರೂಪ ಭೂಮಿಗೆ ಸಿಕ್ಕಿತು. ಅಖಂಡವಾಗಿದ್ದ ಭೂಭಾಗವನ್ನು ವೆಗ್ನರ್ 'ಖ್ಟಿkಟ್ಞಠಿಜ್ಞಿಛ್ಞಿಠಿ' ಎಂದು ಕರೆದಿದ್ದಾನೆ. (ಇದಕ್ಕೆ ಮುಂದೆ ಪ್ಯಾಂಜಿಯಾ ಎಂಬ ಹೆಸರು ಬಂತು) ಈ ಭೂಭಾಗಗಳನ್ನು ಹೊತ್ತಿರುವ ಶಿಲಾಫಲಕಗಳ ಅಲುಗಾಟ ಇನ್ನೂ ನಿಂತಿಲ್ಲ. ಇವುಗಳ ನಡುವೆ ನೂರಿನ್ನೂರು ಕಿಲೋಮೀಟರ್ ಆಳದಲ್ಲಾಗುವ ಉಜ್ಜಾಟವೇ ಭೂಕಂಪಕ್ಕೆ ಕಾರಣ. [email protected] ಸಿದ್ದರಾಮಪ್ಪ. ಎಸ್.ಎಂ ಸಶಿ ಕಲಾ ಸರ್ಕಾರಿ ಪ್ರೌಢ ಶಾಲೆ ಗಂಜಿಗೆರೆ. ಕೆ ಆರ್ ಪೇಟೆ ತಾ|| ಮಂಡ್ಯ ಜಿಲ್ಲೆ -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAJCvfyUFgbhOf3Ng2UBb7ZwSKvkyKVJMkT6ejWu5gH5WcbbZAQ%40mail.gmail.com. For more options, visit https://groups.google.com/d/optout.
