ತುಂಬಾ ಉತ್ತಮವಾದ ಮಾಹಿತಿ.ಅಭಿನಂದನೆಗಳು ತಮಗೆ.
On Jun 6, 2017 7:11 PM, "Sameera samee" <[email protected]> wrote:

> ಮಾಸ್ತಿ ವೆಂಕಟೇಶ ಅಯ್ಯಂಗಾರ್
>
> ಕನ್ನಡ ಸಾಹಿತ್ಯ ಪರಂಪರೆಯ ಶ್ರೇಷ್ಠ ನಿರ್ಮಾಪಕರುಗಳಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್
> ಪ್ರಮುಖರು.  ಅವರು ಜೂನ್ 6, 1891ರಲ್ಲಿ ಕೋಲಾರ ಜಿಲ್ಲೆಯ ಮಾಸ್ತಿ ಎಂಬ ಗ್ರಾಮದಲ್ಲಿ
> ಜನಿಸಿದರು.  ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಸ್ವಂತ ಪ್ರತಿಭೆಯಿಂದ 1907ರಲ್ಲಿ
> ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ; 1909ರಲ್ಲಿ ಎಫ್. ಎ ಪರೀಕ್ಷೆಯಲ್ಲಿ ಪ್ರಥಮ
> ಶ್ರೇಣಿಯಲ್ಲಿ ತೇರ್ಗಡೆಯಾದರು.  ಎಲ್ಲ ತರಗತಿಗಳಲ್ಲೂ ಉತ್ತಮ ವಿದ್ಯಾರ್ಥಿಯಾಗಿದ್ದ ಅವರಿಗೆ
> ಪ್ರಥಮ ಸ್ಥಾನದ ಗಳಿಕೆ ನೀರು ಕುಡಿದಷ್ಟು ಸಲೀಸು.  1913ರಲ್ಲಿ ಮೈಸೂರು ಸಿವಿಲ್
> ಪರೀಕ್ಷೆಯಲ್ಲಿ ಉತ್ತೀರ್ಣರಾದರು.  ಅದೇ ವರ್ಷ ಅಸಿಸ್ಟೆಂಟ್ ಕಮೀಷನರ್ ಆಗಿ ನೇಮಕಗೊಂಡರು.
>  1930ರಲ್ಲಿ ಅವರಿಗೆ ಡೆಪ್ಯೂಟಿ ಕಮೀಷನರ್ ಹುದ್ದೆಗೆ ಭಡ್ತಿ ದೊರೆಯಿತು.  ಸರಕಾರದ ಹಲವು
> ಉನ್ನತ ಹುದ್ದೆಗಳಲ್ಲಿ, ರಾಜ್ಯದ ನಾನಾ ಭಾಗಗಳಲ್ಲಿ ಸೇವೆ ಸಲ್ಲಿಸಿದರು.  1943ರಲ್ಲಿ
> ಸರಕಾರದ ಸೇವೆಯಿಂದ, ಸ್ವಾಪೇಕ್ಷಿತ ನಿವೃತ್ತಿ ಪಡೆದರು.  ಅವರ ಸರಕಾರೀ ಸೇವೆಯ ಅವಧಿ
> ಸಾಕಷ್ಟು ದೀರ್ಘವಾದುದು; ವೈವಿಧ್ಯಮಯವಾದುದು.  ದೊರಕಿದ ಹುದ್ದೆಗೆ ಅಪಚಾರವಾಗದಂತೆ ದುಡಿದು
> ದಕ್ಷ ಆಡಳಿತಗಾರರೆಂಬ ಮನ್ನಣೆಗೆ ಪಾತ್ರರಾದರು.  ಮಾಸ್ತಿಯವರ ರಾಜನಿಷ್ಠೆ
> ಹೆಸರುವಾಸಿಯಾದುದು.  1942ರಲ್ಲಿ ಮೈಸೂರು ಮಹಾರಾಜರು ‘ರಾಜಸೇವಾ ಪ್ರಸಕ್ತ’ ಬಿರುದು ನೀಡಿ
> ಮಾಸ್ತಿಯವರನ್ನು ಗೌರವಿಸಿದರು.  ಸರಕಾರಿ ನೌಕರಿಯ ಅನುಭವ ಅವರ ಸಾಹಿತ್ಯಕೃಷಿಗೆ ಬಹಳ
> ಸ್ಫೂರ್ತಿ ನೀಡಿದೆ.
>
> ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯ ರಚನೆಗೆ
> ಪ್ರಾರಂಭಿಸಿದರು.  1910-11ರ ಸುಮಾರಿನಲ್ಲಿ ‘ರಂಗನ ಮದುವೆ’ ಎಂಬ ಮೊದಲ ಸಣ್ಣ ಕಥೆಯನ್ನು
> ಬರೆದರು.  ‘ಶ್ರೀನಿವಾಸ’ ಎಂಬುದು ಅವರ ಕಾವ್ಯನಾಮ.  ಅವರ ಹೆಸರಿನ ಜೊತೆ ಇರುವ ಅವರ
>  ಹುಟ್ಟೂರಿನ ಹೆಸರು  ‘ಮಾಸ್ತಿ’ ಅವರ   ಕಾವ್ಯನಾಮದಂತೆಯೇ ಪ್ರಸಿದ್ಧಿ ಪಡೆದಿದೆ.
>  1920ರಲ್ಲಿ ‘ಕೆಲವು ಸಣ್ಣಕಥೆಗಳು’ ಎಂಬ ಪ್ರಥಮ ಪುಸ್ತಕ ಪ್ರಕಟವಾಯಿತು.  ಇದು ಮಾಸ್ತಿಯವರ
> ಮೊದಲ ಪುಸ್ತಕವಷ್ಟೇ ಅಲ್ಲ, ಆಧುನಿಕ ಕನ್ನಡ ಸಾಹಿತ್ಯದ ವಿಶಿಷ್ಟವಾದ ಮೊದಲ ಪುಸ್ತಕವೂ ಹೌದು.
>  ಮಾಸ್ತಿಯವರ ಸುಮಾರು 90 ಕಥೆಗಳು ಹಿಂದೆ  14 ಸಂಪುಟಗಳಲ್ಲಿ ಪ್ರಕಟಗೊಂಡಿದ್ದವು. ಇತ್ತೀಚಿನ
>  ವರ್ಷಗಳಲ್ಲಿ  ಇವು   5 ಸಂಪುಟಗಳಲ್ಲಿ  ಪ್ರಕಟಗೊಂಡಿವೆ.    ಅವರು ಕನ್ನಡದ ಮೊದಲ
> ಕಥೆಗಾರರಲ್ಲ, ಆದರೆ ಅವರಷ್ಟು ಉತ್ತಮ ಕಥೆಗಳನ್ನು ಕನ್ನಡದಲ್ಲಿ ಬರೆದವರು ವಿರಳ.  ಕಥೆಗಳಿಗೂ
> ಮಾಸ್ತಿಯವರಿಗೂ ಅವಿನಾ ಸಂಬಂಧ.  ಕನ್ನಡ ಕಥಾಬ್ರಹ್ಮ, ಸಣ್ಣಕಥೆಗಳ ಪಿತಾಮಹ, ಕಥೆಗಾರರ ಅಣ್ಣ
> ಎಂಬ ಹೇಳಿಕೆಗಳು ಇದಕ್ಕೆ ಸಾಕ್ಷಿ.  ಅವರ ಕಥೆಗಳಲ್ಲಿ ಕಥಾಸಾಹಿತ್ಯದ ಅತ್ಯುತ್ತಮ ಅಂಶಗಳಿವೆ.
>  ನಿಜಗಲ್ಲಿನ ರಾಣಿ, ಒಂದು ಹಳೆಯ ಕಥೆ, ಕಾಮನ ಹಬ್ಬದ ಒಂದು ಕಥೆ, ಮೊಸರಿನ ಮಂಗಮ್ಮ, ಜೋಗ್ಯೋರ
> ಅಂಜಪ್ಪನ ಕೋಳಿ ಕಥೆ, ವೆಂಕಟಶಾಮಿಯ ಪ್ರಣಯ, ಕಲ್ಮಾಡಿಯ ಕೋಣ ಮೊದಲಾದವು ಶ್ರೇಷ್ಠ
> ಕಥೆಗಳಾಗಿವೆ.  ಮಾಸ್ತಿಯವರ ಸಣ್ಣಕಥೆಗಳ ಭಾಷೆ, ನಿರೂಪಣೆ, ಶೈಲಿ ಸರಳ.  ಜೀವನದ ಅನುಭವ
> ನಿಚ್ಚಳ.  ಕಥೆಯ ನಿರೂಪಣೆಗೆ ಅವರದ್ದೇ ಆದ ವಿಧಾನವಿದೆ.  ಸಂಗೀತಗಾರನೊಬ್ಬನ ಜೀವನವನ್ನು
> ಆಧರಿಸಿರುವ ‘ಸುಬ್ಬಣ್ಣ’ ಎಂಬ ನೀಳ್ಗತೆ ಪ್ರಪಂಚದ ಅತ್ಯುತ್ತಮ ಕಥೆಗಳ ಸಾಲಿಗೆ ಸೇರುವಂಥದು.
>  ಇದು ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ, ಮರಾಠಿ, ಜರ್ಮನ್ ಭಾಷೆಗಳಿಗೂ ಅನುವಾದವಾಗಿವೆ.
>  ಕುರುಡರಿಗಾಗಿ ಬ್ರೈಲ್ ಆವೃತ್ತಿಯೂ ಬಿಡುಗಡೆಯಾಗಿದೆ; ಹಲವು ಪುನರ್ ಮುದ್ರಣಕಂಡಿರುವ
> ಜನಪ್ರಿಯ ಗ್ರಂಥವಾಗಿದೆ.
>
> ಮಾಸ್ತಿಯವರ ಕಥೆಗಳ ವಸ್ತು, ಪಾತ್ರ, ಘಟನೆ, ಅನುಭವ, ವಿನ್ಯಾಸಗಳ ಕ್ಷೇತ್ರ ವಿಶಾಲವಾಗಿದೆ;
> ವಿವಿಧ ಮುಖಗಳಿಂದ ಕೂಡಿದೆ.  ಅವರ ಕಥಾ ನಿರೂಪಣೆ ಅನುಕರಣೀಯವಾದುದು.  ಅವರಿಗೆ ಕಥಾ ನಿರೂಪಣೆ
> ಮುಖ್ಯ, ಘಟನೆಯಲ್ಲ.  ಮನುಷ್ಯ ಸ್ವಭಾವ ಮುಖ್ಯ ತಂತ್ರವಲ್ಲ.  1968ರಲ್ಲಿ ಮಾಸ್ತಿಯವರ
> ‘ಸಣ್ಣಕಥೆ’ಗಳು (ಸಣ್ಣಕಥೆಗಳು 12-13ರ ಸಂಯುಕ್ತ ಸಂಪುಟ) ಗ್ರಂಥಕ್ಕೆ ಕೇಂದ್ರ ಸಾಹಿತ್ಯ
> ಅಕಾಡೆಮಿಯ ಬಹುಮಾನ ದೊರೆಯಿತು.  ಆ ಸಂದರ್ಭದಲ್ಲಿ ಮೈಸೂರಿನಲ್ಲಿ ಸಾರ್ವಜನಿಕರು ಅವರನ್ನು
> ಸನ್ಮಾನಿಸಿದರು.  ‘ಸಣ್ಣಕಥೆಗಳು’ ಎರಡನೇ ಸಂಪುಟ ‘ಗುರುದಕ್ಷಿಣೆ’ ಎಂಬ ಹೆಸರಿನಲ್ಲಿ ತಮಿಳು
> ಭಾಷೆಗೆ ಭಾಷಾಂತರವಾಗಿದೆ.
>
> ಮಾಸ್ತಿಯವರ ಕಥಾಸಾಹಿತ್ಯದಲ್ಲಿ ಚೆನ್ನಬಸವನಾಯಕ ಮತ್ತು ಚಿಕ್ಕವೀರರಾಜೇಂದ್ರ ಕಾದಂಬರಿಗಳು
> ಶಿಖರಪ್ರಾಯವಾಗಿವೆ.  ಇವು ಕ್ರಮವಾಗಿ 1949 ಮಾತು 1956ರಲ್ಲಿ ಪ್ರಕಟವಾಗಿವೆ.  ಇವೆರಡೂ
> ಐತಿಹಾಸಿಕ ಕಾದಂಬರಿಗಳು.  ಕಾದಂಬರಿಯ ಶಿಲ್ಪ, ಆರಂಭ, ಬೆಳವಣಿಗೆ, ಮುಕ್ತಾಯ, ಪರಿಣಾಮಗಳಲ್ಲಿ
> ಎರಡು ಕಾದಂಬರಿಗಳಿಗೂ ಸಾಮ್ಯವಿದೆ.  ಇವು ದುರಂತ ಕಾದಂಬರಿಗಳು.  ಬಿದನೂರಿನ ನಾಯಕ ಮನೆತನದ
> ಕಥೆ ಚೆನ್ನಬಸವನಾಯಕ ಕಾದಂಬರಿಯ ವಸ್ತು.  ಮನೆತನದ ಅವ್ಯವಸ್ಥೆ, ರಾಣಿಯ ಕೆಟ್ಟ ನಡತೆ, ತಾಯಿ
> ಮಕ್ಕಳ ಮೈಮನಸ್ಸು, ಅಕ್ರಮ ಸಂಬಂಧ, ಇತಿಹಾಸದ ಘಟನಾವಳಿಗಳು ಕಾದಂಬರಿಯಲ್ಲಿ ಮುಖ್ಯವಾಗಿವೆ.
>  ಬಿದನೂರಿನ ಇತಿಹಾಸ ನಮ್ಮ ಜನಾಂಗದ ಭಾಗವಾಗಿ ವರ್ಣನೆಯಾಗಿದೆ.  ಭೂತಕಾಲದ ಕತೆಯನ್ನು
> ವರ್ತಮಾನದೊಡನೆ ಬೆಸುಗೆ ಹಾಕಿ ಜೀವಂತಗೊಳಿಸುವ ಪ್ರಯತ್ನ ಕಾದಂಬರಿಯಲ್ಲಿ ನಡೆದಿದೆ.
>  ಚೆನ್ನಬಸವನಾಯಕ ಕಾದಂಬರಿ ಇಂಗ್ಲಿಷ್, ಹಿಂದಿ, ತಮಿಳು ಭಾಷೆಗಳಿಗೂ ಅನುವಾದವಾಗಿವೆ.
>
> ಕೊಡಗಿನ ರಾಜಕೀಯದ ದುರವಸ್ಥೆ, ಕೊನೆಯ ರಾಜನ ದುರಂತ ಚಿಕ್ಕವೀರರಾಜೇಂದ್ರ ಕಾದಂಬರಿಯ ವಸ್ತು.
>  ರಾಜನ ಲಂಪಟತನ, ದುಷ್ಟ ಸ್ನೇಹ, ಅಧಿಕಾರ ಲಾಲಸೆ, ಕಾಮುಕತನ, ಪ್ರಜಾಹಿತ ನಿರ್ಲಕ್ಷ್ಯ,
> ಸ್ವಾರ್ಥ, ಸ್ವೇಚ್ಛಾ ಪ್ರವೃತ್ತಿ, ಅದರಿಂದಾಗುವ ಅವನತಿ ಕಾದಂಬರಿಯಲ್ಲಿ ಪ್ರಧಾನವಾಗಿದೆ.
>  ವೈಯಕ್ತಿಕ ಅಧಃಪತನ, ಐತಿಹಾಸಿಕ ಮುನ್ನಡೆಯ ಅನಿವಾರ್ಯತೆ ಏಕಕಾಲದಲ್ಲಿ ಚಿತ್ರಿತವಾಗಿದೆ.
>  ಕಾದಂಬರಿಯಲ್ಲಿ ಸಾರ್ವಕಾಲಿಕವಾದ, ಶಾಶ್ವತವಾದ ಆಲೋಚನೆಯಿದೆ.  ಅಂದಿನ ಕತೆಗೆ ಇಂದಿನ ಅರ್ಥ
> ತುಂಬಲು ಅವಕಾಶವಿದೆ.  ಕೊಡಗಿನ ಅಂದಿನ ಆಡಳಿತದ ಕತೆ ಸಮಕಾಲೀನ  ಆಡಳಿತಕ್ಕೆ
> ಅನ್ವಯಿಸುವಂತಿದೆ.  ಕೊಡಗಿನ ಕೊನೆಯ ಅರಸ, ಚಿಕ್ಕವೀರರಾಜನ ದುರಂತ ಕಥೆ ಕಣ್ಣಿಗೆ
> ಕಟ್ಟುವಂತೆ,  ಮನಕರಗುವಂತೆ ವರ್ಣನೆಯಾಗಿದೆ.
>
> ಚಿಕ್ಕವೀರರಾಜೇಂದ್ರ ಕಾದಂಬರಿಗೆ 1983ರಲ್ಲಿ ಜ್ಞಾನಪೀಠ ಪ್ರಶಸ್ತಿ ಸಂದಿತು.
>  ಸ್ವಾತಂತ್ರ್ಯೋತ್ತರ ಭಾರತದ ಪ್ರಮುಖ ಸಾಹಿತ್ಯ ಗ್ರಂಥವೆಂಬುದು ಪ್ರಶಸ್ತಿ ಆಯ್ಕೆಯ ಕಾರಣ.
>  ಮಾಸ್ತಿಯವರ ಸಾಹಿತ್ಯ ರಚನೆಯ ಹಿನ್ನೆಲೆಯಲ್ಲಿ ಜ್ಞಾನಪೀಠ ದೊಡ್ಡದೇನಲ್ಲ.  ಮಾಸ್ತಿಯವರಿಗೆ
> ಬಂದ ಪ್ರಶಸ್ತಿ ಕನ್ನಡಕ್ಕೆ, ಕನ್ನಡಿಗರಿಗೆ, ಕನ್ನಡ ನಾಡಿಗೆ ಬಂದ ಪ್ರಶಸ್ತಿಯಾಗಿದೆ.
>  ನ್ಯಾಷನಲ್ ಬುಕ್ ಟ್ರಸ್ಟ್ ಚಿಕ್ಕವೀರ ರಾಜೇಂದ್ರ ಕಾದಂಬರಿಯನ್ನು ಭಾರತದ ಎಲ್ಲ ಭಾಷೆಗಳಿಗೂ
> ಅನುವಾದಿಸಲು ಕಾರ್ಯ ಕೈಗೊಂಡಿತು.
>
> ಮಾಸ್ತಿ ವೆಂಕಟೇಶ ಅಯ್ಯಂಗಾರ್  ಸಾಕಷ್ಟು ಕಾವ್ಯಗಳನ್ನು ಬರೆದಿದ್ದಾರೆ.  ಅವರ
> ಕಾವ್ಯಗಳಲ್ಲಿ ‘ಶ್ರೀನಿವಾಸ’ ದರ್ಶನ ಪ್ರಮುಖವಾಗಿದೆ.  ದೇವರ ಲೀಲೆ, ಆತ್ಮ ನಿವೇದನೆ,
> ಪ್ರಕೃತಿ ಸೌಂದರ್ಯ, ಕನ್ನಡ ಪ್ರೇಮ, ಸಮಾಜದ ಅಂಕುಡೊಂಕು, ನಾಡುನುಡಿ ವ್ಯಕ್ತಿಗಳಿಗೆ
> ಸಂಬಂಧಿಸಿದ ರಚನೆಗಳು ಭಾವಗೀತೆಗಳಲ್ಲಿ ಎದ್ದು ಕಾಣುತ್ತವೆ.  ಶ್ರೀನಿವಾಸರ  ಕಾವ್ಯ
> ಸರಳವಾದುದುದು.  ಸುಂದರವಾದುದು.  ಅವರ ಪದ್ಯ ಸಾಹಿತ್ಯದಲ್ಲಿ ಚೆಲುವು, ಹಾಸ್ಯ ಹೆಚ್ಚಾಗಿದೆ.
>  ಗದ್ಯ ಪದ್ಯಗಳ ನಡುವಿನ ಮಡಿ ಮೈಲಿಗೆಯ ನಿರ್ಬಂಧವನ್ನು ತೆಗೆದುಹಾಕಿ ಕಾವ್ಯ ಬರೆದಿರುವುದು
> ಅವರ ವೈಶಿಷ್ಟ್ಯ.  ಶ್ರೀನಿವಾಸರ ಮೊದಲ ಭಾವಗೀತೆಗಳ ಸಂಗ್ರಹ ‘ಬಿನ್ನಹ’ 1922ರಲ್ಲಿ
> ಪ್ರಕಟವಾಯಿತು.  ಹೂವುಗಳು, ಕನ್ನೈದಿಲೆ, ನಾಲ್ವತ್ತರ ನಲುಗು, ಕೊಂಬು, ಕೋಗಿಲೆ ಮೊದಲಾದ
> ಭಾವಗೀತೆಗಳು ವಿಶಿಷ್ಟವಾಗಿವೆ.  ಕನ್ನಡ ನವೋದಯ ಕಾವ್ಯದಲ್ಲಿ ಶ್ರೀನಿವಾಸರ ಕಾವ್ಯಕ್ಕೆ
> ಚಾರಿತ್ರಿಕ ಮಹತ್ವವಿದೆ.  ಬಿನ್ನಹ, ಅರುಣ, ತಾವರೆ, ಮಲಾರ, ಸಂಕ್ರಾಂತಿ ಮುಂತಾದ ಕವನ
> ಸಂಗ್ರಹಗಳಲ್ಲಿ ಭಾವಗೀತೆಗಳ ವೈವಿಧ್ಯವನ್ನು ಕಾಣಬಹುದು.
>
> ಕಥನ ಗೀತೆಗಳಲ್ಲಿ ಶ್ರೀನಿವಾಸರ ಸಾಧನೆ, ಸಿದ್ಧಿ ಗಮನಾರ್ಹ.  ಗದ್ಯದಲ್ಲಾಗಲೀ,
> ಪದ್ಯದಲ್ಲಾಗಲೀ ಕಥೆ ಹೇಳುವುದರಲ್ಲಿ ಒಂದೇ ರೀತಿಯ ಪರಿಣತಿ ಕಂಡುಬರುತ್ತದೆ.  ಸರಳರಗಳೆಯನ್ನು
> ಸಾರ್ಥಕವಾಗಿ ಬಳಸಿದ್ದಾರೆ.  1940ರಲ್ಲಿ ಪ್ರಕಟವಾದ ಗೌಡರ ಮಲ್ಲಿ, ಅನಂತರ ಬೆಳಕುಕಂಡ
> ನವರಾತ್ರಿ, ಮೂಕನ ಮಕ್ಕಳು, ರಾಮನವಮಿ ಸಂಗ್ರಹಗಳಲ್ಲಿ ಶ್ರೀನಿವಾಸರ ಕಥನಗೀತೆಗಳು
> ಅಡಕವಾಗಿವೆ.  ಕನ್ನಡ ನವೋದಯದ ಕಾಲದಲ್ಲಿ ರಚನೆಯಾದ ಅವರ ಕಥನಗೀತೆಗಳಲ್ಲಿ ಚಾರಿತ್ರಿಕವಾದ,
> ಸಾಹಿತ್ಯಕವಾದ, ಸುಸಂಸ್ಕೃತವಾದ ಮೌಲಿಕ ಗುಣಗಳಿವೆ.  ಮದಲಿಂಗನ ಕಣಿವೆ, ಗೌಡರ ಮಲ್ಲಿ,
> ಸೋಜಿಗದ ಹೊಳಲು, ದೇಶಾಚಾರ, ಗುಂಡುಸೂಜಿ ಮುಂತಾದ ಕಥನಗೀತೆಗಳು ಉತ್ತಮವಾಗಿವೆ.
>
> ಶ್ರೀನಿವಾಸರ ಕಾವ್ಯ ಪ್ರಕಾರದ ಆಚಾರ್ಯ ಕೃತಿ ‘ಶ್ರೀರಾಮಪಟ್ಟಾಭಿಷೇಕ’.  ಸರಳ ರಗಳೆಯನ್ನು
> ಸಹಜವಾಗಿ ದುಡಿಸಿಕೊಂಡಿರುವ ಗ್ರಂಥ.  ಶ್ರೀರಾಮನ ಪಟ್ಟಾಭಿಷೇಕವನ್ನು ಕೇಂದ್ರವಾಗಿರಿಸಿ
> ಸಂಪೂರ್ಣ ರಾಮಾಯಣದ ಕತೆಯನ್ನು ರೂಪಿಸಿರುವ ಬೃಹತ್ ಕೃತಿ.  ಇದು ಶ್ರೀನಿವಾಸರ
> ಮಹತ್ವಾಕಾಂಕ್ಷೆಯ ಕಾವ್ಯವೂ ಹೌದು. ಒಂಬತ್ತು ಸಾವಿರ ಸಾಲುಗಳಿಗೆ ಮಿಕ್ಕಿರುವ ಈ ದೀರ್ಘ
> ಕಾವ್ಯದಲ್ಲಿ ಸಂಪ್ರದಾಯಬದ್ಧವಾದ ಹಾಗೂ ಹೊಸ ಆಯಾಮದ  ಅಂಶಗಳನ್ನೊಳಗೊಂಡ ರಾಮಾಯಣದ ಕಥೆಯನ್ನು
> ಕಾಣಬಹುದು.  ‘ಶ್ರೀರಾಮಪಟ್ಟಾಭಿಷೇಕ’ ಕಾವ್ಯ 1972ರಲ್ಲಿ ಪ್ರಕಟವಾಯಿತು.
>
> ಮಾಸ್ತಿಯವರು ಹಲವು ನಾಟಕಗಳನ್ನು ಬರೆದಿದ್ದಾರೆ.  1923ರಲ್ಲಿ ಪ್ರಕಟವಾದ ‘ಶಾಂತಾ’ ಅವರ
> ಮೊದಲ ನಾಟಕ.  ‘ಮಂಜುಳಾ’ ಎಂಬುದು ಸಾಮಾಜಿಕ ನಾಟಕ.  ಉಳಿದವು ಪುರಾಣ ಹಾಗೂ ಇತಿಹಾಸದಿಂದ
> ಪ್ರೇರಣೆ ಪಡೆದಿವೆ.  ಕಾಡುಕುರುಬರಿಗೆ ಸಂಬಂಧಿಸಿದ, ಐತಿಹಾಸಿಕ ಅಂಶಗಳನ್ನೊಳಗೊಂಡ
> ‘ಕಾಕನಕೋಟೆ’ ಮಾಸ್ತಿಯವರ ಉತ್ತಮ ನಾಟಕ.  ಗೌತಮ ಬುದ್ಧನ ಹೆಂಡತಿ ಯಶೋಧರೆಯ ಮಾನಸಿಕ
> ತುಮುಲವನ್ನು ಪ್ರಧಾನವಾಗಿ ಚಿತ್ರಿಸಿರುವ ‘ಯಶೋಧರಾ’ ಅತ್ಯುತ್ತಮ ನಾಟಕ.  ಮಹಾಕವಿ ಕಾಳಿದಾಸನ
> ಬಗೆಗೆ ಇರುವ ಕಟ್ಟುಕತೆ, ಇತಿಹಾಸವನ್ನು ಬಳಸಿಕೊಂಡು ರಚಿಸಿರುವ ಏಳು ಅಂಕಗಳ ನಾಟಕ
> ‘ಕಾಳಿದಾಸ’.  ಇದಕ್ಕೆ 1983ರಲ್ಲಿ ‘ವರ್ಧಮಾನ ಪ್ರಶಸ್ತಿ’ ಸಂದಿತು.  ಮಾಸ್ತಿಯವರ
> ಸುಸಂಸ್ಕೃತ ಮನೋಧರ್ಮ ಅವರ ನಾಟಕ ರಚನೆಯಲ್ಲಿ ನಿಚ್ಚಳವಾಗಿ ಕಾಣುತ್ತದೆ.  ಕನ್ನಡ ನಾಟಕ
> ಕ್ಷೇತ್ರಕ್ಕೆ ಮಾಸ್ತಿಯವರ ನಾಟಕ ಕೃಷಿ ಸಾಕಷ್ಟು ಕಸುವು ತುಂಬಿದೆ.  ಷೇಕ್ಸ್ ಪಿಯರ್
> ಮಹಾಕವಿಯ ಕೆಲವು ನಾಟಕಗಳನ್ನು ಚಂಡಮಾರುತ, ದ್ವಾದಶ ರಾತ್ರಿ, ಲಿಯರ್ ಮಹಾರಾಜ ಮೊದಲಾದ
> ಹೆಸರುಗಳಲ್ಲಿ ಕನ್ನಡಕ್ಕೆ ಭಾಷಾಂತರಿಸಿದ್ಧಾರೆ.  ಮಾಸ್ತಿಯವರ ಭಾಷಾಂತರ ನಾಟಕಗಳಿಂದ ಕನ್ನಡ
> ನಾಟಕಸಾಹಿತ್ಯ ಗರಿಗಟ್ಟಿಕೊಳ್ಳಲು ಸಹಾಯಕವಾಗಿದೆ.
>
> ಮಾಸ್ತಿಯವರ ಆತ್ಮಕಥೆ ‘ಭಾವ’ ಮೂರು ಸಂಪುಟಗಳಲ್ಲಿ ಪ್ರಕಟವಾಗಿದೆ.  ‘ಭಾವ’ದಲ್ಲಿ ಅವರ
> ಬದುಕಿನ ಮೂಲಧಾತುಗಳ ದಾಖಲೆಗಳಿವೆ.  ನವರತ್ನ ರಾಮರಾವ್, ರವೀಂದ್ರನಾಥ ಠಾಗೂರರು,
> ಶ್ರೀರಾಮಕೃಷ್ಣ ಎಂಬ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ.  ವೇದಗಳ ಕಾಲದಿಂದ ಬೆಳೆದುಬಂದ
> ಧರ್ಮ, ಸಂಸ್ಕೃತಿ, ಪರಂಪರೆಗಳ ಅವಲೋಕನವಾದ ‘ಅಂತರಗಂಗೆ’; ವಾಲ್ಮೀಕಿ ರಾಮಾಯಣವನ್ನು ಕುರಿತ
> ವಿಮರ್ಶಾತ್ಮಕ ಅಧ್ಯಯನವಾದ ‘ಆದಿಕವಿ ವಾಲ್ಮೀಕಿ’;  ಅಧುನಿಕ ಕನ್ನಡ ಸಾಹಿತ್ಯದ ಪ್ರಾರಂಭದ
>  ಮುಖ್ಯ ಘಟ್ಟಗಳನ್ನು ವಿವೇಚಿಸುವ ‘ನಮ್ಮ ಹೊಸ ಸಾಹಿತ್ಯದ ಆರಂಭ’; ಹಿಂದೂ ಧರ್ಮದ
> ಹಿನ್ನೆಲೆಯಲ್ಲಿ ಮೂಡಿರುವ ‘ಧರ್ಮಸಂರಕ್ಷಣೆ’;  ಮಹಾಭಾರತ ಕಾವ್ಯಸಂಗ್ರಹವಾದ ‘ಭಾರತ ತೀರ್ಥ’
> ಗ್ರಂಥಗಳು ಮಾಸ್ತಿಯವರ ಪರಿಪಕ್ವ ಬದುಕಿನ, ಉದಾತ್ತ ಚಿಂತನೆಯ ವೈಚಾರಿಕ ಗ್ರಂಥಗಳಾಗಿವೆ.
>  ಭಾರತ ಮತ್ತು ಪಾಶ್ಚಾತ್ಯ ಕೃತಿಗಳು ವಿವೇಚನೆಯನ್ನೊಳಗೊಂಡ ‘ವಿಮರ್ಶೆ’ಗಳು, ನೂರಾರು
> ‘ಪ್ರಸಂಗ’ಗಳು, ವಿಚಾರಸೂಕ್ತಿಗಳು, ಕನ್ನಡದ ಕೆಚ್ಚನ್ನು ಉತ್ತೇಜಿಸುವ ಲೇಖನಗಳು ಅವರಿಂದ
> ಸೃಷ್ಟಿಯಾಗಿವೆ.  ಕರ್ಣಾಟ ಭಾರತ ಕಥಾಮಂಜರಿ, ರವೀಂದ್ರ ಪ್ರಶಸ್ತಿ, ಸಂಭಾವನೆ, ಸರ್ ಎಂ.
> ವಿಶ್ವೇಶ್ವರಯ್ಯ ಮೊದಲಾದ ಗ್ರಂಥಗಳನ್ನು ಅವರು ಸಂಪಾದಿಸಿದ್ದಾರೆ.
>
> ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಇಂಗ್ಲಿಷ್ ಭಾಷೆಯಲ್ಲೂ ಗ್ರಂಥಗಳನ್ನು ರಚಿಸಿದ್ದಾರೆ.
>  ತಮ್ಮ ಕೆಲವು ಕನ್ನಡ ಕೃತಿಗಳನ್ನು ಸ್ವತಃ ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ.  ಅವರ
> ಇಂಗ್ಲಿಷ್ ಭಾಷೆಯ ಬರಹ ಕೂಡಾ ಕನ್ನಡದಷ್ಟೇ ಆಕರ್ಷಕವಾಗಿದೆ.
>
> ಮಾಸ್ತಿಯವರ ಕೃತಿಗಳು ಸಂಖ್ಯೆಯಲ್ಲಿ, ಸತ್ವದಲ್ಲಿ, ಗುಣದಲ್ಲಿ, ಗಾತ್ರದಲ್ಲಿ,
> ವೈವಿಧ್ಯದಲ್ಲಿ ದೊಡ್ಡವು. ಕತೆ, ಕಾದಂಬರಿ, ಕಾವ್ಯ, ನಾಟಕ, ವಿಮರ್ಶೆ, ಆತ್ಮಕತೆ, ಜೀವನ
> ಚರಿತ್ರೆ, ಪ್ರಬಂಧ, ಜನಪದ, ಪತ್ರಿಕೋದ್ಯಮ, ವಿಚಾರ ಸಾಹಿತ್ಯ ಮೊದಲಾದ ಪ್ರಕಾರಗಳಲ್ಲಿ 120
> ಗ್ರಂಥಗಳನ್ನು ಬರೆದಿದ್ದಾರೆ.  ಇದರ ಜೊತೆಗೆ ಇಂಗ್ಲಿಷ್ ಭಾಷೆಯಲ್ಲಿಯೂ 17 ಗ್ರಂಥಗಳನ್ನು
> ರಚಿಸಿದ್ದಾರೆ.  ಸುಮಾರು ಎಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲ ಸಾಹಿತ್ಯ ಸೃಷ್ಟಿಸಿದ್ದಾರೆ.
>  ಅವರು ತಾವು ಸಾಹಿತಿಯಾದುದಲ್ಲದೆ ಹಲವರು ಮಹಾನೀಯರನ್ನು  ಸಾಹಿತಿಗಳಾಗಲು ಸ್ಫೂರ್ತಿ
> ನೀಡಿದ್ದಾರೆ.  ಪ್ರತಿಭಾವಂತ ಸಾಹಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸಿದ್ದಾರೆ.  ಹಲವರ
> ಗ್ರಂಥಗಳನ್ನು ಪ್ರಕಟಿಸಿ, ಹಲವರಿಗೆ ನಾನಾ ರೀತಿಯಲ್ಲಿ ನೆರವು ನೀಡಿ ಬೆಂಬಲಿಸಿದ್ದಾರೆ.
>  ಕನ್ನಡದಲ್ಲಿ ಸಾಹಿತಿಗಳ ಪಡೆ ಸೃಷ್ಟಿಯಾಗಲು ಸಹಕರಿಸಿದ್ದಾರೆ.  ಅವರ ಬದುಕು ಬರಹ ಹಲವು
> ಕೃತಿಗಳಿಗೆ, ಕೃತಿಗಾರರಿಗೆ ಪ್ರೇರಣೆ ನೀಡಿದೆ.  ಮಾಸ್ತಿಯವರನ್ನು ಕುರಿತು ಇತರರಿಂದ ಮೌಲಿಕ
> ಗ್ರಂಥಗಳು ಬೆಳಕು ಕಂಡಿವೆ.
>
> ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಮನೆಮಾತು ತಮಿಳು, ಕಾಲೇಜಿನಲ್ಲಿ ಓದಿದ್ದು ಇಂಗ್ಲಿಷ್.
>  ಬದುಕಿದ್ದು, ಬರೆದದ್ದು ಕನ್ನಡ.  ಅವರು ಮೊದಲಿನಿಂದಲೂ ಕನ್ನಡದ ಪರವಾಗಿ ದನಿಗೂಡಿಸಿದವರು.
>  1910ರ ಸುಮಾರಿನಲ್ಲಿ ಕನ್ನಡದಲ್ಲಿ ಮಾತಾಡುವುದಕ್ಕೆ, ಬರೆಯುವುದಕ್ಕೆ ವಿದ್ಯಾವಂತರು
> ಹಿಂದುಮುಂದು ನೋಡುತ್ತಿದ್ದರು.  ಅಂಥ ದಿನಗಳಲ್ಲಿ ಮಾಸ್ತಿಯವರು ಕನ್ನಡದಲ್ಲಿ ಬರೆದರು.
>  ಕನ್ನಡದ ಏಳಿಗೆಗೆ ಹೋರಾಡಿದರು.  ಇದರಿಂದ ಕನ್ನಡ ಭಾಷೆ, ಸಾಹಿತ್ಯ ಬೆಳೆಯಲು ಸಹಾಯವಾಯಿತು.
>  ಮಾಸ್ತಿಯವರ ಮಾರ್ಗ ಹಲವರಿಗೆ ದಾರಿದೀಪವಾಯಿತು.  ಕರ್ನಾಟಕ ಏಕೀಕರಣಕ್ಕೆ ಅವರು ನಿಷ್ಠೆಯಿಂದ
> ದುಡಿದರು.  ತಮ್ಮ ಉಪನ್ಯಾಸಗಳಿಂದ, ವೈಚಾರಿಕ ಬರಹಗಳಿಂದ ಜನರನ್ನು ಎಚ್ಚರಿಸಿದರು.  ಅವರಿಂದ
> ಕನ್ನಡ ಸಾಹಿತ್ಯ ಕ್ಷೇತ್ರ ವಿಸ್ತಾರವಾಯಿತು.
>
> ಮಾಸ್ತಿಯವರು ಪತ್ರಿಕೊದ್ಯಮಿಯೂ ಹೌದು.  1944ರಿಂದ 1965ರವರೆಗೆ ‘ಜೀವನ’
> ಮಾಸಪತ್ರಿಕೆಯನ್ನು ಯಶಸ್ವಿಯಾಗಿ ನಡೆಸಿದರು.  ‘ಜೀವನ’ ಪತ್ರಿಕೆಯ ಮೂಲಕ ಅನೇಕ ಸಾಹಿತಿಗಳ
> ಕೃತಿಗಳು ಬೆಳಕು ಕಂಡಿವೆ.  ‘ಜೀವನ’ ಪತ್ರಿಕೆಯ ಸಂಪಾದಕೀಯದಲ್ಲಿ ಮೂಡಿದ ಸಾಹಿತ್ಯ,
> ಸಂಸ್ಕೃತಿ, ಕಲೆ, ರಾಜಕೀಯ, ಧರ್ಮ, ದೇವರು, ಸಾಮಾಜಿಕ, ಆರ್ಥಿಕ ವಿಚಾರ ಮೊದಲಾದ ಹಲವು ಹತ್ತು
> ವಿಷಯಗಳ ಬಗೆಗಿನ ಲೇಖನಗಳಲ್ಲಿ ಮಾಸ್ತಿಯವರ ಭಾವ ಮಿಂಚಿದೆ.  ಈ ಬರಹಗಳು ‘ಜೀವನ ಸಂಪಾದಕೀಯ’
> ಎಂಬ ಹೆಸರಿನ ಗ್ರಂಥದಲ್ಲಿ ಲಭ್ಯವಿದೆ.  ಕನ್ನಡ ಪತ್ರಿಕೋದ್ಯಮದಲ್ಲಿ ಮಾಸ್ತಿಯವರ ‘ಜೀವನ’
> ಮರೆಯಲಾಗದ ನೆನಪು.
>
> ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸರಕಾರದ ಉನ್ನತ ಹುದ್ದೆಗಳಲ್ಲಿ, ವಿವಿಧ ಸ್ಥಳಗಳಲ್ಲಿ ಅನುಭವ
> ಗಳಿಸಿದವರು.  ಜನಸಾಮಾನ್ಯರ ಜನಜೀವನವನ್ನು ಹತ್ತಿರದಿಂದ ಗಮನಿಸಿದವರು.  ನಮ್ಮ ಜನರ ಆಚಾರ
> ವಿಚಾರ, ಸಂಸ್ಕೃತಿ, ಪರಂಪರೆ, ಬದುಕಿನ ರೀತಿ ನೀತಿ ಮೊದಲಾದವುಗಳ ಬಗೆಗೆ ಆಸಕ್ತಿ ತಳೆದವರು.
>  ಶುಚಿಯಾದ, ಆದರ್ಶವಾದ ಸಂಪ್ರದಾಯಕ್ಕೆ ನಿಷ್ಠೆ ತೋರಿದವರು.  ರಾಜಮಹಾರಾಜರ ಗೌರವಕ್ಕೆ
> ಪಾತ್ರರಾದವರು.  ಬ್ರಿಟಿಷರ ಆಡಳಿತವನ್ನು, ಬ್ರಿಟಿಷ್ ಆಡಳಿತಗಾರರನ್ನು ಕಣ್ಣಾರೆ ಕಂಡವರು.
>  ಸಂಪ್ರದಾಯಬದ್ಧವಾದ ಮನೆತನದಲ್ಲಿ ಹುಟ್ಟಿ ಬೆಳೆದವರು.  ದೊಡ್ಡವರನ್ನು, ದೊಡ್ಡ ಬದುಕನ್ನು
> ನೋಡಿದವರು; ಅನುಸರಿಸಿದವರು.  ತಮ್ಮಂತೆ ಇತರರೂ ಅನುಸರಿಸಲು ಆಶಿಸಿದವರು.  ಜನರ ಬದುಕು
> ದೊಡ್ಡದಾಗಲು ಹಾರೈಸಿದವರು.  ಈ ಅಂಶಗಳಿಗೆ ಒತ್ತುಕೊಡುವ ವಸ್ತು, ಪಾತ್ರ, ಸನ್ನಿವೇಶ
> ನಿರೂಪಣೆಗಳು ಮಾಸ್ತಿಯವರ ಕೃತಿಗಳಲ್ಲಿ ಯಥೇಚ್ಛವಾಗಿ ಕಂಡುಬರುತ್ತವೆ.  ಭಾರತ ದೇಶದಲ್ಲಿ
> ಕಾಣಬಹುದಾದ, ಕಾಣಬೇಕಾದ ಪಾತ್ರಗಳು ಅವರವು.  ಮಾಸ್ತಿಯವರಲ್ಲಿ ಆದರ್ಶ ಪಾತ್ರಗಳು ಅಧಿಕ.
>  ದುಷ್ಟರು, ಕ್ರೂರಿಗಳು, ಅಯೋಗ್ಯರು  ಎನ್ನಬಹುದಾದ ಪಾತ್ರಗಳು ಕಡಿಮೆ.  ಇದ್ದರೂ ಅವುಗಳ
> ಬಗೆಗೆ ಇನ್ನಿಲ್ಲದ ಅನುಕಂಪ.  ದುಷ್ಟತನವೂ ದೌರ್ಬಲ್ಯ ಎನ್ನುವುದು ಅವರ ಮನೋಧರ್ಮ.  ಆದರ್ಶ
> ಸ್ತ್ರೀ ಪಾತ್ರಗಳ ಬಗೆಗೆ ಮಾಸ್ತಿಯವರಿಗೆ ಅಪಾರ ಒಲವು.
>
> ಮಾಸ್ತಿಯವರ ಎಲ್ಲ ಕೃತಿಗಳಲ್ಲಿ ಸರಳತೆಗೆ ಮೊದಲ ಪಟ್ಟ.  ಸಾಧಾರಣ ಮಾತುಗಳಿಂದ ಅಸಾಧಾರಣ
> ಚಿತ್ರ ನಿರ್ಮಿಸುವ ಕಲೆ ಅವರದು.  ಮಾಸ್ತಿಯವರಿಗೆ ಸಂದ ಗೌರವಗಳು ಅನೇಕ.  ಇಂಥಹ ಹಿರಿಯರಿಗೆ
> ಗೌರವ ಸಲ್ಲಿಸುವುದು ಆ ಗೌರವಕ್ಕೇ ಹಿರಿತನವಲ್ಲವೇ!
>
> ಮಾಸ್ತಿಯವರ ಸಾಹಿತ್ಯದಂತೆ ಅವರ ಬದುಕೂ ದೊಡ್ಡದು.  ಅವರ ಬದುಕು ಒಂದು ಮಹಾಕೃತಿ.  ಅವರ
> ಬದುಕಿಗೂ, ಬರಹಕ್ಕೂ ಅಂತರ ಕಡಿಮೆ.  ಬದುಕಿದಂತೆ ಬರೆಯಬೇಕು, ಬರೆದಂತೆ ಬದುಕಬೇಕು
> ಎನ್ನುವುದಕ್ಕೆ ಅವರು ಉತ್ತಮ ಉದಾಹರಣೆ.  ಕನ್ನಡಕ್ಕೆ ಅಖಿಲ ಭಾರತ ಖ್ಯಾತಿ ದೊರಕಿಸಿಕೊಟ್ಟ
> ಕೀರ್ತಿ ಅವರದ್ದು.  1986ರಲ್ಲಿ ಅವರು ನಿಧನರಾದಾಗ ಅವರಿಗೆ 95 ವರ್ಷ ತುಂಬಿತ್ತು.
>
> ಗಾಂಧೀಬಜಾರಿನಲ್ಲಿ ಚಾಕೊಲೇಟು, ಪೆಪ್ಪರಮೆಂಟುಗಳನ್ನು ಮಕ್ಕಳಿಗಾಗಿ ಕೋಟಿನ ಜೇಬಿನಲ್ಲಿ
> ತುಂಬಿಕೊಂಡು, ಬದುಕಿನ ಕಲೆಯನ್ನು, ನಯ ವಿನಯ, ಸೌಜನ್ಯ, ಸಂಸ್ಕೃತಿ, ಹಸನ್ಮುಖ ಪ್ರೀತಿ
> ಸೊಬಗುಗಳನ್ನು ಸರ್ವಲೋಕಗಳಿಗೂ ಸಾಲುವಷ್ಟು ತಮ್ಮನ್ನೇ ಮಾದರಿಯಾಗಿರಿಸಿಕೊಂಡು
>  ನಡೆದಾಡುತ್ತಿದ್ದ ಈ ಹಿರಿಯ ಜೀವನವನ್ನು ಕಂಡ ಸೌಭಾಗ್ಯವನ್ನು ನೆನೆದಾಗ, ಅವರ ಬಳಿಯಲ್ಲಿ
> ಸುಳಿದ ನಮ್ಮ ಸುಕೃತವನ್ನು ನೆನೆಸಿಕೊಂಡು ಹೃದಯ ಉಕ್ಕಿ ಬರುತ್ತದೆ.  ಮಾಸ್ತಿಯಂತಹ ಇಂಥಹ
> ಶ್ರೇಷ್ಠ ಆಸ್ತಿಗಳು ನಮ್ಮ ಉಳಿದ ಜೀವನದಲ್ಲೂ, ಮುಂದಿನ ಯುಗ ಯುಗಗಳ ಜೀವನದಲ್ಲೂ ಮರಳೀತೆ
> ಎಂದು ಮಾಸ್ತಿಯವರನ್ನು ಇಲ್ಲಿಗೆ ಕಳುಹಿಸಿಕೊಟ್ಟ ಆ ವಿಧಾತನ ಬಳಿ ಮೊರೆಯಿಡುವಂತಾಗುತ್ತಿದೆ.
>
>
> ಪ್ರಕಾಶ ಗಾಯಕವಾಡ
>
> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to