13-Jan-2015
ಪ್ರಸಂಗ ೩: ನಿಯಮ ಉಲ್ಲಂಘನೆ
ನರಹಳ್ಳಿ ಬಾಲಸುಬ್ರಹ್ಮಣ್ಯ

ನಾನು ಅಧ್ಯಾಪಕನಾಗಿ ಕಾಲೇಜು ಸೇರಿದಾಗ ನಮಗೆ ಪ್ರಾಂಶುಪಾಲರಾಗಿದ್ದವರು ಹಿರಿಯರು,
ಅನುಭವಿಗಳು, ಅತ್ಯುತ್ತಮ ಅಧ್ಯಾಪಕರೆಂದು ಹೆಸರಾಗಿದ್ದವರು. ಶ್ರದ್ಧೆ ಅವರ ವ್ಯಕ್ತಿತ್ವದ
ಒಂದು ಭಾಗವಾಗಿತ್ತು. ಎಂದೂ ನಿಯಮ ಮೀರಿದವರಲ್ಲ. ನನ್ನ ವೃತ್ತಿ ಬದುಕಿನ ಆರಂಭದಲ್ಲಿಯೇ
ಅಂಥವರ ಒಡನಾಟ ಮಾರ್ಗದರ್ಶನ ಸಿಕ್ಕಿದ್ದು ಮುಂದಿನ ನನ್ನ ಹಾದಿಯನ್ನು ಸರಿಯಾಗಿ
ರೂಪಿಸಿಕೊಳ್ಳಲು ನೆರವಾಯಿತು. ಐವತ್ತು ದಾಟಿದ್ದ ಅವರನ್ನು ಎಲ್ಲರೂ ರಾಯರು ಎಂದೇ
ಕರೆಯುತ್ತಿದ್ದೆವು. ಅದೇನೂ ಅವರ ಹೆಸರಿನ ಭಾಗವಾಗಿರಲಿಲ್ಲ. ಯಾರೋ ಹಾಗೆ ಕರೆದದ್ದು ರೂಢಿಗೆ
ಬಂದಿತ್ತು.
ರಾಯರದು ನೀಳ ದೇಹ. ಕೂದಲನ್ನು ಎತ್ತಿ ಹಿಂದಕ್ಕೆ ಬಾಚುತ್ತಿದ್ದುದರಿಂದ ಮೊದಲೇ ಅಗಲವಾಗಿದ್ದ
ಹಣೆ ಮತ್ತಷ್ಟು ವಿಶಾಲವಾಗಿ ಕಾಣುತ್ತಿತ್ತು. ಮುಖ ತೊಳೆಯಲು ಹೆಚ್ಚು ನೀರು, ಸೋಪು
ಖರ್ಚಾಗುತ್ತದೆಂಬುದು ಸ್ವಾಮಿಯ ಅಂಬೋಣ. ಚೂಪಾದ ಮೂಗು, ಅದರ ಮೇಲೆ ಕನ್ನಡಕ. ಅವರು ನೋಡುವಾಗ
ಕೊಂಚ ತಲೆ ತಗ್ಗಿಸಿ ಕನ್ನಡಕದ ಮೇಲ್ತುದಿಯ ಮೂಲಕ ನೋಡುತ್ತಿದ್ದುದರಿಂದ ಅವರ ನೋಟ
ಅಗತ್ಯಕ್ಕಿಂತ ಹೆಚ್ಚು ತೀಕ್ಷ್ಣವಾಗಿರುತ್ತಿತ್ತು. ಸದಾ ಒಂದಲ್ಲ ಒಂದು ರೀತಿ ಉಪದೇಶ
ಮಾಡುವುದು ಅವರ ಸ್ವಭಾವ.
ಹಿಂದಿನ ಜನ್ಮದಲ್ಲಿ ಯಾವುದೋ ಮಠದ ಸ್ವಾಮಿಗಳಾಗಿದ್ದಿರಬೇಕೆಂಬುದು ನನ್ನ ಅನುಮಾನ. ಆದರೆ
ಸ್ವಾಮೀಜಿಗಳ ರೀತಿ ಮಠ ಕಟ್ಟಿ, ತಮ್ಮದೇ ಸಾಮ್ರಾಜ್ಯ ಸ್ಥಾಪಿಸುವ ಸ್ಥಾವರ ಸ್ವಭಾವ
ಅವರದಾಗಿರಲಿಲ್ಲ. ಎಲ್ಲದರಲ್ಲೂ ಅಚ್ಚುಕಟ್ಟುತನ, ಶಿಸ್ತಿನ ವ್ಯಕ್ತಿತ್ವ. ಜೊತೆಗೆ ನಾವೆಲ್ಲ
ಅವರಿಗಿಂತ ಬಹಳ ಕಿರಿಯರಾದುದರಿಂದ, ನಾವು ಅವರ ನೇರ ವಿದ್ಯಾರ್ಥಿಗಳಲ್ಲದಿದ್ದರೂ ಒಂದು ರೀತಿ
ವಿದ್ಯಾರ್ಥಿಗಳಿಗೆ ಹೇಳಿದಂತೆಯೇ ಬುದ್ಧಿ ಹೇಳುತ್ತಿದ್ದರು. ಒಂದು ಕಥೆಯಂತೂ ಅವರ ಬಾಯಿಂದ
ಮತ್ತೆ ಮತ್ತೆ ಪುನರಾವರ್ತನೆಗೊಳ್ಳುತ್ತಿತ್ತು.
ಅವರ ಪ್ರಾಂಶುಪಾಲರಾಗಿದ್ದ ಸುಬ್ಬರಾಯರು ಬಹಳ ಶಿಸ್ತಿನ ಮನುಷ್ಯರಂತೆ. ಅವರ ಬಗ್ಗೆ ಇವರಿಗೆ
ಆರಾಧ್ಯ ಭಾವ. ರಾಯರು ಒಮ್ಮೆ ಮೌಲ್ಯಮಾಪನ ಕೆಲಸಕ್ಕೆ ಹೋಗಿದ್ದಾಗ ಅವರ ಸೀನಿಯರ್ ಒಬ್ಬರು
ಒಬ್ಬ ವಿದ್ಯಾರ್ಥಿಯ ರಿಜಿಸ್ಟರ್ ನಂಬರ್ ಹಿಡಿದುಕೊಂಡು ಬಂದು ಆ ವಿದ್ಯಾರ್ಥಿಗೆ ಹೆಚ್ಚಿನ
ಅಂಕ ನೀಡಲು ಸೂಚಿಸಿದರಂತೆ. ಆಗಿನ್ನೂ ಕೋಡಿಂಗ್ ವ್ಯವಸ್ಥೆ ಇರಲಿಲ್ಲ. ರಾಯರು ಸುಬ್ಬರಾಯರ
ನೇರ ಶಿಷ್ಯರು, ಅವರ ಪ್ರಭಾವಕ್ಕೆ ಒಳಗಾದವರು. ಹೀಗಾಗಿ ಅದು ಸಾಧ್ಯವಿಲ್ಲವೆಂದು
ಖಡಾಖಂಡಿತವಾಗಿ ಹೇಳಿ ಹಿರಿಯ ಅಧ್ಯಾಪಕರ ಕೆಂಗಣ್ಣಿಗೆ ಗುರಿಯಾದರು. ಆದರೂ ತಾವು ತಪ್ಪು
ಮಾಡಲಿಲ್ಲವಲ್ಲ , ಒತ್ತಡಕ್ಕೆ ಒಳಗಾಗಿ ನ್ಯಾಯಮಾರ್ಗ ಬಿಡಲಿಲ್ಲವಲ್ಲ ಎಂದು ತಮ್ಮ ಬಗ್ಗೆ
ಹೆಮ್ಮೆಯೂ ಆಯಿತು.
ಈ ಸಂಗತಿಯನ್ನು ಅವರು ಒಮ್ಮೆ ತಮ್ಮ ಪ್ರಾಂಶುಪಾಲರಾದ ಸುಬ್ಬರಾಯರ ಬಳಿ ಹಂಚಿಕೊಂಡು ಅವರ
ಮೆಚ್ಚುಗೆಯ ಮಾತುಗಳನ್ನು ನಿರೀಕ್ಷಿಸಿದ್ದರು. ಸುಬ್ಬರಾಯರು ಘಟನೆಯ ವಿವರಗಳನ್ನೆಲ್ಲ ಕೇಳಿ,
ಕೊಂಚ ಹೊತ್ತು ಸುಮ್ಮನಿದ್ದು , ಅಸಮಾಧಾನದ ದನಿಯಲ್ಲಿ ‘ನೀನು ಇನ್ನೂ ಸುಧಾರಿಸಬೇಕು’
ಅಂದರಂತೆ. ಇವರಿಗೆ ಆಶ್ಚರ್ಯ! ತಾನು ತಪ್ಪು ಮಾಡಿಲ್ಲ, ಅಲ್ಲದೆ ತಮ್ಮ ಬಳಿ ಬಂದವರು ಹಿರಿಯ
ಅಧ್ಯಾಪಕರಾದರೂ ಲೆಕ್ಕಿಸದೆ ನ್ಯಾಯಯುತವಾಗಿ ನಡೆದುಕೊಂಡಿದ್ದೇನೆ. ಮತ್ತೇನು ಸುಧಾರಿಸುವುದು?
ಸುಬ್ಬರಾಯರ ಪ್ರತಿಕ್ರಿಯೆಯಿಂದ ಇವರಿಗೂ ಅಸಮಾಧಾನವಾಯಿತು.
ಅದನ್ನು ತಮ್ಮ ದನಿಯಲ್ಲಿ ಸೂಚಿಸುತ್ತ ‘ನಾನೇನು ಅವರು ಹೇಳಿದಂತೆ ಹೆಚ್ಚು ಅಂಕ ಹಾಕಲಿಲ್ಲ’
ಎಂದರಂತೆ. ಆಗ ಸುಬ್ಬರಾಯರು ಇವರನ್ನೇ ದಿಟ್ಟಿಸಿ ನೋಡಿ, ಮಂದಹಾಸ ಬೀರುತ್ತಾ ನಿಧಾನ
ಗತಿಯಲ್ಲಿ ‘ನೀನು ಅಂಕ ಹಾಕಲಿಲ್ಲ, ನಿಜ. ಆದರೆ ಅಂಕ ಹಾಕು ಅಂತ ನಿನ್ನನ್ನು ಕೇಳಬಹುದು ಎಂದು
ಆ ನೀಚನಿಗೆ ಅನ್ನಿಸಿತಲ್ಲ! ನಿನ್ನ ಹತ್ತಿರ ಅಂಥವರು ಸುಳಿಯಲೇಬಾರದು, ಹಾಗಿರಬೇಕು ನಿನ್ನ
ವ್ಯಕ್ತಿತ್ವ. ನಿಜ ಹೇಳುತ್ತೇನೆ ಇದುವರೆಗೆ ಯಾರೂ ನನ್ನನ್ನು ಹಾಗೆ ಕೇಳಿಲ್ಲ’ ಎಂದರಂತೆ.
ಸುಬ್ಬರಾಯರ ಆಲೋಚನಾರೀತಿಗೆ ರಾಯರು ಸ್ತಂಭೀಭೂತರಾಗಿ ಅಂದಿನಿಂದ ತಮ್ಮ ವ್ಯಕ್ತಿತ್ವವನ್ನು ಆ
ನಿಟ್ಟಿನಲ್ಲಿ ರೂಢಿಸಿಕೊಳ್ಳಲು ಪ್ರಯತ್ನಿಸಿದರಂತೆ. ರಾಯರೂ ಈಗ ನನಗೆ ಮತ್ತೊಬ್ಬ
ಸುಬ್ಬರಾಯರಂತೆಯೇ ಕಾಣಿಸುತ್ತಾರೆ.
ನನ್ನ ಬಗ್ಗೆ ರಾಯರಿಗೆ ವಿಶ್ವಾಸ. ಅದಕ್ಕೆ ಪ್ರಮುಖವಾಗಿ ಎರಡು ಕಾರಣಗಳು. ಮೊದಲನೆಯದು ಅವರ
ಕೊರೆತಕ್ಕೆ ನಾನು ಸದಾ ಕಿವಿಯಾಗಿರುತ್ತೇನೆ. ಬಹಳಷ್ಟು ಜನ ಅವರ ಕೊರೆತ ತಾಳಲಾರದೆ ದೂರ
ಸರಿಯುತ್ತಿದ್ದರು. ನಾನೂ ಪೂರ್ತಿ ಕೇಳಿಸಿಕೊಳ್ಳುತ್ತೇನೆ ಎಂದು ಹೇಳಲಾರೆ. ಕೆಲವೊಮ್ಮೆ
ಕೇಳಿದ ಹಾಗೆ ನಟಿಸುತ್ತಿದ್ದುದುಂಟು. ಆದರೆ ಅವರ ಜೊತೆ ಇರುತ್ತಿದ್ದೆ. ದೂರ
ಸರಿಯುತ್ತಿರಲಿಲ್ಲ. ಮತ್ತೊಂದು ಅವರ ಅನೇಕ ಯೋಜನೆಗಳು ನನಗೆ ಪ್ರಿಯ. ಅವುಗಳನ್ನೆಲ್ಲ
ಕಾಲೇಜಿನಲ್ಲಿ ಕಾರ್ಯರೂಪಕ್ಕೆ ತರಲು ಅವರ ಜೊತೆ ಸಹಕರಿಸುತ್ತೇನೆ. ಗಂಟೆಗಟ್ಟಲೆ ಅಲ್ಲ
ದಿನಗಟ್ಟಲೆ ಅವರ ಜೊತೆಯಲ್ಲಿ ಉತ್ಸಾಹದಿಂದ ಕೆಲಸ ಮಾಡಿದ್ದುಂಟು. ನನ್ನ ಈ ಉತ್ಸಾಹ
ಕ್ರಿಯಾಶೀಲತೆಯ ಬಗ್ಗೆ ಅವರಿಗೆ ಮೆಚ್ಚುಗೆ. ಹೀಗಾಗಿ ಅವರ ಎಲ್ಲ ಕೆಲಸಗಳಲ್ಲೂ ನಾನು
ಜೊತೆಗಿರಬೇಕೆಂದು ಬಯಸುತ್ತಿದ್ದರು.
ನಮ್ಮ ಕಾಲೇಜಿನಲ್ಲಿ ರಜಾ ದಿನಗಳಂದು ಸಾಮಾನ್ಯವಾಗಿ ಸ್ಪರ್ಧಾತ್ಮಕ
ಪರೀಕ್ಷೆಗಳಿರುತ್ತಿದ್ದವು. ನಮ್ಮ ಪ್ರಾಂಶುಪಾಲರು ಅವುಗಳನ್ನು ಅಚ್ಚುಕಟ್ಟಾಗಿ
ನಡೆಸುತ್ತಿದ್ದುದರಿಂದ ಎಲ್ಲ ಸಂಸ್ಥೆಗಳೂ ನಮ್ಮ ಕಾಲೇಜಿನಲ್ಲೇ ಪರೀಕ್ಷೆಗಳನ್ನು ನಡೆಸಲು
ಅಪೇಕ್ಷಿಸುತ್ತಿದ್ದರು. ರಾಯರಿಗೆ ಜವಾಬ್ದಾರಿ ವಹಿಸಿದರೆ ಸಂಸ್ಥೆಯವರು ನಿರಾತಂಕವಾಗಿ
ಇರಬಹುದಿತ್ತು. ಈ ಪರೀಕ್ಷೆಗಳನ್ನು ನಡೆಸಲು ಸಾಕಷ್ಟು ಸಿದ್ಧತೆ ಬೇಕಾಗುತ್ತಿತ್ತು. ಇಂಥ
ಆಹ್ವಾನ ಬಂದಾಗಲೆಲ್ಲ ರಾಯರು ಅವರ ಸಹಾಯಕನನ್ನಾಗಿ ನನ್ನನ್ನು ನೇಮಿಸಿಕೊಂಡು ಬಹುಪಾಲು
ಜವಾಬ್ದಾರಿಯನ್ನು ನನಗೇ ವಹಿಸುತ್ತಿದ್ದರು. ಇದರಿಂದ ನನಗೆ ಇತರರಿಗಿಂತ ಹೆಚ್ಚುಹಣ
ಬರುತ್ತಿದ್ದುದರಿಂದ , ಹಣದ ಅಗತ್ಯ ನನಗೆ ಬಹಳವಿದ್ದುದರಿಂದ ನಾನು ಸಂತೋಷದಿಂದಲೇ ಈ
ಜವಾಬ್ದಾರಿಯನ್ನು
ಒಪ್ಪಿಕೊಳ್ಳುತ್ತಿದ್ದೆ. ಸ್ವಾಮಿಯಾಗಲೀ ಗೋಪಾಲನಾಗಲೀ ಎಂದೂ ಇಂತಹ ಕೆಲಸಗಳನ್ನು
ಒಪ್ಪಿಕೊಳ್ಳುತ್ತಿರಲಿಲ್ಲ. ಅವರಿಗೆ ನನ್ನಂತೆ ಹಣದ ಅಗತ್ಯವಿರಲಿಲ್ಲ.ರಾಯರ
ಮಾರ್ಗದರ್ಶನದಲ್ಲಿ ಎಲ್ಲ ಕರ್ತವ್ಯಗಳನ್ನೂ ನಾನು ಸಮರ್ಥವಾಗಿ ನಿಭಾಯಿಸುತ್ತಿದ್ದೆ.ಹಲವೊಮ್ಮೆ
ಇದು ಇತರ ಕೆಲವು ಸಹೋದ್ಯೋಗಿಗಳ ಅಸಮಾಧಾನಕ್ಕೂ ಕಾರಣವಾಗುತ್ತಿತ್ತು.
ನನಗಿಂತ ಹಿರಿಯ ಅಧ್ಯಾಪಕರಿದ್ದರೂ ನನ್ನನ್ನೇ ತಮ್ಮ ಡೆಪ್ಯುಟಿಯನ್ನಾಗಿ ರಾಯರು
ತೆಗೆದುಕೊಳ್ಳುತ್ತಿದ್ದುದರಿಂದ ಕಾಲೇಜಿನಲ್ಲಿ ನನಗೆ ಒಂದು ರೀತಿಯ ಪ್ರಾಮುಖ್ಯತೆಯಿತ್ತು ,
ಜೊತೆಗೆ ಹೆಚ್ಚಿನ ಹಣವೂ ದೊರಕುತ್ತಿತ್ತು. ಹಣದ ವಿಚಾರ ಹಾಗಿರಲಿ , ಸಿಗುತ್ತಿದ್ದ
ಪ್ರಾಮುಖ್ಯತೆಯನ್ನು ಹೇಗೆ ಸಹಿಸಿಕೊಳ್ಳುವುದು? ಆದರೆ ರಾಯರು ಇದಕ್ಕೆಲ್ಲ ತಲೆ
ಕೆಡಿಸಿಕೊಳ್ಳುತ್ತಿರಲಿಲ್ಲ. ಅವರಿಗೆ ಕೆಲಸ ಆಗಬೇಕಿತ್ತಷ್ಟೆ. ಆದರೆ ನನಗೆ ಕೆಲವೊಮ್ಮೆ
ಇದರಿಂದ ಇರಿಸುಮುರಿಸುಂಟಾಗುತ್ತಿತ್ತು.
ಆ ಒಂದು ಭಾನುವಾರವೂ ಸ್ಪರ್ಧಾತ್ಮಕ ಪರೀಕ್ಷೆಯಿತ್ತು. ಎಲ್ಲ ಸಿದ್ಧತೆ ಮಾಡಿಕೊಂಡು ನಾವು
ಸನ್ನದ್ಧರಾಗಿದ್ದೆವು. ಪರೀಕ್ಷೆ ಪ್ರಾರಂಭವಾಗುವ ಸೂಚನೆಯಾಗಿ ಲಾಂಗ್ ಬೆಲ್ ಆಯಿತು. ತಡವಾಗಿ
ಬರುವ ವಿದ್ಯಾರ್ಥಿಗಳನ್ನು ಒಳಸೇರಿಸದಂತೆ ಎಲ್ಲ ಗೇಟ್ ಗಳನ್ನು ಮುಚ್ಚಿಸಿ ರಾಯರು ಮುಖ್ಯ
ದ್ವಾರದ ಬಳಿಯೇ ಠಳಾಯಿಸುತ್ತಿದ್ದರು. ಅವರು ಹಾಗೆ ಠಳಾಯಿಸುವಾಗ ಹಿಂದಕ್ಕೆ ಕೈ ಕಟ್ಟಿ
ಎಲ್ಲವನ್ನೂ ಹದ್ದಿನ ಕಣ್ಣಿನಿಂದ ಸೂಕ್ಷ್ಮವಾಗಿ ಪರಿಶೀಲಿಸುತ್ತ ಶಿಸ್ತಿನ
ಸೈನ್ಯಾಧಿಕಾರಿಯಂತೆ ಕಾಣಿಸುತ್ತಾರೆ. ಅಷ್ಟರಲ್ಲಿ ಒಬ್ಬ ವಿದ್ಯಾರ್ಥಿ ಓಡೋಡಿ ಬರುವುದಕ್ಕೂ
ಗೇಟ್ ಮುಚ್ಚುವುದಕ್ಕೂ ಸರಿಯಾಯಿತು. ಆತ ಗೇಟಿನ ಆಚೆ ಉಳಿದ. ಅಟೆಂಡರ್
ಗೇಟ್ ತೆಗೆದು ಆತನನ್ನು ಒಳಬಿಡಬೇಕೆನ್ನುವಷ್ಟರಲ್ಲಿ ರಾಯರು ಆಕ್ರಮಣಶೀಲರಾಗಿ ಅತ್ತ ಧಾವಿಸಿ
ಗೇಟ್ ತೆಗೆಯದಂತೆ ಸೂಚಿಸಿದರು.
ಆತ ಗೇಟಿನಾಚೆ ನಿಂತು ಆರ್ತನಾಗಿ ಪ್ರಾರ್ಥಿಸುತ್ತಿದ್ದ. ರಾಯರು ತಮ್ಮ ತೋರು ಬೆರಳನ್ನು
ಮುಂದೆ ಚಾಚಿ ಆತನನ್ನು ಕಾಲೇಜಿನಿಂದ ಹೊರ ಹೋಗಲು ಹೇಳುತ್ತಿದ್ದರು. ಆತ ಅಳುತ್ತಾ
ಬೇಡಿಕೊಳ್ಳುತ್ತಿದ್ದ. ಅಲ್ಲೇ ಅನತಿ ದೂರದಲ್ಲಿದ್ದ ನಾನು ಈ ವಿದ್ಯಮಾನಗಳನ್ನೆಲ್ಲಾ
ಗಮನಿಸುತ್ತಿದ್ದೆ. ತಕ್ಷಣ ನಾನು ಅಲ್ಲಿಗೆ ಧಾವಿಸಿ ಬಂದು, ಅಲ್ಲಿದ್ದ ರಾಯರನ್ನು
ಲೆಕ್ಕಿಸದೆ, ಗೇಟ್ ತೆಗೆಸಿ, ಆ ವಿದ್ಯಾರ್ಥಿ ಪರೀಕ್ಷಾಕೊಠಡಿಗೆ ಹೋಗಲು ಅವಕಾಶ ಮಾಡಿಕೊಟ್ಟೆ.
ರಾಯರು ಯಥಾಪ್ರಕಾರ ತಲೆ ಕೆಳಗೆಮಾಡಿ ಕನ್ನಡಕದ ಮೇಲ್ತುದಿಯಿಂದ ನನ್ನನ್ನು ಇರಿಯುವಂತೆ ನೋಡಿ
ಏನನ್ನೂ ಹೇಳದೆ ಅಲ್ಲಿಂದ ದಢದಢ ಹೆಜ್ಜೆ ಹಾಕುತ್ತಾ ತಮ್ಮ ಕೊಠಡಿಯತ್ತ ಹೊರಟು ಹೋದರು.
ಇದನ್ನು ಗಮನಿಸುತ್ತಿದ್ದ ಅಟೆಂಡರ್ ಹಾಗೂ ಕ್ಲರ್ಕ್‌ ಯಾವ ರೀತಿ ಪ್ರತಿಕ್ರಿಯಿಸಬೇಕೋ
ತಿಳಿಯದೆ ದಿಗ್ಬ್ರಾಂತರಾಗಿ ನಿಂತಿದ್ದರು. ನಾನೂ ಒಂದೆರಡು ಕ್ಷಣ ಗೊಂದಲಕ್ಕೆ ಒಳಗಾದರೂ
ತಕ್ಷಣ ಸಾವರಿಸಿಕೊಂಡು ಅಟೆಂಡರ್ ನತ್ತ ನೋಡಿ ನಕ್ಕು , ಎಲ್ಲ ಕೊಠಡಿಗಳ ಪರಿಶೀಲನೆಗೆ ಹೊರಟೆ.
ರಾಯರ ದೊಡ್ಡ ಗುಣವೆಂದರೆ ಅವರಿಗೆ ಯಾರ ಬಗ್ಗೆ ಎಷ್ಟೇ ಅಸಮಾಧಾನವಿದ್ದರೂ ಎಲ್ಲರೆದುರಿನಲ್ಲಿ
ಅದನ್ನು ವ್ಯಕ್ತಪಡಿಸುತ್ತಿರಲಿಲ್ಲ. ಸಮಯ ನೋಡಿ ವೈಯಕ್ತಿಕವಾಗಿ ಪ್ರಸ್ತಾಪಿಸಿ ತಮ್ಮ ಸಂಶಯ
ಪರಿಹರಿಸಿಕೊಳ್ಳುತ್ತಿದ್ದರು. ಅಗತ್ಯ ಬಿದ್ದರೆ ಎಚ್ಚರಿಕೆ ನೀಡುತ್ತಿದ್ದರು. ಕೆಲವೊಮ್ಮೆ
ಬುದ್ಧಿ ಹೇಳಿ ಮಾರ್ಗದರ್ಶನ ಮಾಡುತ್ತಿದ್ದರು. ಆ ದಿನ ನಂತರದ ಪರೀಕ್ಷೆಯ ಸಂದರ್ಭದಲ್ಲಿ
ರಾಯರು ಏನೂ ಆಗದವರಂತೆ ಸಹಜವಾಗಿಯೇ ನನ್ನೊಡನೆ ವರ್ತಿಸಿದರು. ನಾನೂ ಹಾಗೆಯೇ ಇದ್ದೆ. ಆದರೆ
ಅಷ್ಟರಲ್ಲಾಗಲೇ ಈ ಘಟನೆ ಸಹೋದ್ಯೋಗಿಗಳಲ್ಲಿ ಪಿಸುಮಾತಿಗೆ ಆಹಾರವಾಗಿತ್ತು. ನನಗೇನೋ ಕಾದಿದೆ
ಎಂಬಂತೆ ಕೆಲವರು ನನ್ನನ್ನು ಸಮಾಧಾನ ಪಡಿಸಲು ಅನಗತ್ಯ ಪ್ರಯತ್ನಿಸುತ್ತಿದ್ದರು. ಮತ್ತೆ
ಕೆಲವರಿಗೆ ಇದರಿಂದ ನಾನು ರಾಯರಿಂದ ದೂರವಾಗಬಹುದೆಂಬ ದೂರದ ಆಸೆ.
ಪರೀಕ್ಷೆಯ ಕೆಲಸಗಳೆಲ್ಲ ಮುಗಿದ ಮೇಲೆ ರಾಯರು ನನ್ನ ವಿಚಾರಣೆ ನಡೆಸುತ್ತಾರೆಂಬ ಖಚಿತ
ನಿರೀಕ್ಷೆಯಲ್ಲಿ ಕೆಲವರು ಅಲ್ಲೇ ಠಳಾಯಿಸುತ್ತಿದ್ದರು. ಆದರೆ ರಾಯರು ಅದನ್ನು ಮರೆತವರಂತೆ
ಎಂದಿನ ಹಾಗೆ ನನ್ನ ಜೊತೆಯೇ ಮನೆಯ ಕಡೆ ಹೊರಟರು. ದಾರಿಯಲ್ಲೂ ನನ್ನೊಡನೆ ಆ ಬಗ್ಗೆ
ಪ್ರಸ್ತಾಪಿಸಲಿಲ್ಲ. ಬೇರೇನೊ ಮಾತನಾಡುತ್ತಿದ್ದರು.ನಾನೂ ಸುಮ್ಮನಿದ್ದೆ. ಮಾರನೆಯ ದಿನವೂ
ಮಹಾಜನತೆಯ ಕುತೂಹಲ ಗರಿಗೆದರಿತ್ತು. ಅಂದೂ ಏನೂ ನಡೆಯದಿದ್ದಾಗ ಕ್ರಮೇಣ ಸಹೋದ್ಯೋಗಿಗಳ ಆ
ಘಟನೆಯ ಬಗೆಗಿನ ಆಸಕ್ತಿ ಕಡಿಮೆಯಾಯಿತು. ನಿರಾಸೆಯಿಂದ ಸುಮ್ಮನಾದರು. ಒಂದೆರಡು ದಿನಗಳು ಹಾಗೇ
ಕಳೆದವು. ನನಗೂ ರಾಯರು ಆ ಬಗ್ಗೆ ಪ್ರಸ್ತಾಪಿಸದಿರುವುದು ಆಶ್ಚರ್ಯವೆನ್ನಿಸಿತು.
ಒಂದು ವಾರ ಕಳೆದ ನಂತರ ಒಂದು ದಿನ ನನ್ನನ್ನು ಕರೆದು ತರಗತಿಗಳು ಮುಗಿದಾದ ಮೇಲೆ ಬಂದು
ನನ್ನನ್ನು ನೋಡಿ ಎಂದರು. ನನಗೀಗ ಖಚಿತವಾಯಿತು. ಅವರ ಆಕ್ರಮಣಕ್ಕೆ ನಾನೂ ಮಾನಸಿಕವಾಗಿ
ಸಿದ್ಧವಾಗತೊಡಗಿದೆ. ನನ್ನ ನಿಲುವಿನ ಬಗ್ಗೆ ನನ್ನೊಳಗೇ ಮತ್ತೊಮ್ಮೆ ಪರಿಶೀಲಿಸಿಕೊಂಡೆ.
ರಾಯರನ್ನು ಭೇಟಿಯಾದಾಗ ಅವರು ಸಹಜವೆಂಬಂತೆ ಲೋಕಾಬಿsರಾಮವಾಗಿ ಮಾತನಾಡುತ್ತ ಒಂದು ಕ್ಷಣ
ಮೌನವಾಗಿದ್ದು ನಂತರ ಆ ದಿನದ ಘಟನೆಯನ್ನು ಪ್ರಸ್ತಾಪಿಸಿದರು.
‘ಆ ಹುಡುಗ ನಿಮಗೆ ಗೊತ್ತಾ’ ಎಂದರು. ನಾನು ಅವರನ್ನೇ ದಿಟ್ಟಿಸಿ ನೋಡಿ  ಇಲ್ಲ ಎಂದೆ. ಅವರೂ
ತಮ್ಮ ಎಂದಿನ ರೀತಿಯಲ್ಲಿ ತಲೆ ಕೆಳಗೆ ಮಾಡಿ ಕನ್ನಡಕದ ಮೇಲ್ತುದಿಯಿಂದ ಇರಿಯುವಂತೆ
ನೋಡುತ್ತಾ  ‘ನಿಮ್ಮ ಆ ದಿನದ ನಡವಳಿಕೆ ಉದ್ಧಟತನದ್ದು ಅನ್ನಿಸುವುದಿಲ್ಲವೇ? ನನ್ನನ್ನು
ನಿರ್ಲಕ್ಷಿಸಿ ನೀವು ಹಾಗೆ ಮಾಡಿದ್ದು ಅವಿನಯ ಮಾತ್ರವಲ್ಲ ಅಶಿಸ್ತೂ ಹೌದು ಬದುಕಿನಲ್ಲಿ
ಶಿಸ್ತು ಮುಖ್ಯ’ ...... ಅವರ ಮಾತಿನ
ಪ್ರವಾಹ ಹರಿಯುತ್ತಲೇ ಇತ್ತು.
ನಾನು ಆ ಪ್ರವಾಹವನ್ನು ಅರ್ಧದಲ್ಲೇ ತಡೆದು ತಣ್ಣಗಿನ ದನಿಯಲ್ಲಿ ‘ಅದು ನೀವೇ ಕಲಿಸಿದ ಪಾಠ’
ಎಂದೆ. ನನ್ನ ಮುಖದಲ್ಲಿ ನನಗೇ ತಿಳಿಯದಂತೆ ಒಂದು ಮಂದಹಾಸವಿತ್ತು. ರಾಯರು ಒಂದು ಕ್ಷಣ
ಗೊಂದಲಕ್ಕೊಳಗಾದರು. ಅವರ ಆಕ್ರಮಣಕ್ಕೆ ನಾನು ಅಧೀರನಾಗಿ ಕ್ಷಮೆ ಯಾಚಿಸುತ್ತೇನೆಂಬುದು ಅವರ
ನಿರೀಕ್ಷೆಯಾಗಿತ್ತು. ಒಂದು ಸಣ್ಣ ಉಪದೇಶ ನೀಡಿ ಕ್ಷಮೆ ನೀಡಲೂ ಸಿದ್ಧರಿದ್ದರು. ಆದರೆ ನನ್ನ
ಪ್ರತಿಕ್ರಿಯೆ ಅವರಿಗೆ ಅನಿರೀಕ್ಷಿತವಾಗಿತ್ತು. ಯಥಾಪ್ರಕಾರ ಕನ್ನಡಕದ ಮೇಲ್ತುದಿಯಿಂದ
ತೀಕ್ಷ್ಣವಾಗಿ ನೋಡುತ್ತಾ ಮೌನವಾಗಿಯೇ ಪ್ರಶ್ನಾರ್ಥಕ ನೋಟ ಬೀರಿದರು.
ನಾನು ಹಿಂದಿನ ಪ್ರಸಂಗವೊಂದನ್ನು ನೆನಪಿಸಿದೆ. ಒಮ್ಮೆ ಒಬ್ಬ ವಿದ್ಯಾರ್ಥಿ ಅನುಚಿತವಾಗಿ
ವರ್ತಿಸಿದ್ದ. ಅವನೆಂದೂ ನಿಯಮಿತವಾಗಿ ತರಗತಿಗೆ ಬಂದವನಲ್ಲ. ಒಮ್ಮೊಮ್ಮೆ ಬಂದರೂ ಅವನದು
ಏನೆಲ್ಲ ತರಲೆ. ಕೆಲವು ಅಧ್ಯಾಪಕರಿಗೆ ಅವನಿಂದಾಗಿ ಪಾಠ ಮಾಡುವುದೂ ಕಷ್ಟವಾಗುತ್ತಿತ್ತು.
ಒಮ್ಮೆಯಂತೂ ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ. ನಾವೆಲ್ಲ
ಅಧ್ಯಾಪಕರು ಸೇರಿ ಆತನನ್ನು ಕಾಲೇಜಿನಿಂದ ಸಸ್ಪೆಂಡ್ ಮಾಡಬೇಕೆಂದು ರಾಯರನ್ನು
ಒತ್ತಾಯಿಸಿದ್ದೆವು. ರಾಯರದು ಕೆಲವೊಮ್ಮೆ ನಿಧಾನ ಪ್ರವೃತ್ತಿ. ನಮ್ಮ ಅಹವಾಲಿಗೆ ಅವರು
ಮೌನವಾಗಿದ್ದರು. ಆಗ ನಾವೆಲ್ಲ ಆತನ ಮೇಲೆ ಕ್ರಮ ಕೈಗೊಳ್ಳದಿದ್ದರೆ ಯಾರೂ ತರಗತಿಗಳನ್ನು
ತೆಗೆದುಕೊಳ್ಳುವುದಿಲ್ಲವೆಂದು ಪ್ರತಿಭಟನೆಯ ದನಿಯಲ್ಲಿ ಸೂಚಿಸಿದೆವು.
ಆದರೆ ಆ ವೇಳೆಗಾಗಲೇ ರಾಯರು ಅವನನ್ನು ಕರೆದು ಮಾತನಾಡಿದ್ದರು. ಅವನಿಗೆ ಬುದ್ಧಿ ಹೇಳಿ ಇನ್ನು
ಮುಂದೆ ಸರಿಯಾಗಿ ನಡೆದುಕೊಳ್ಳುವಂತೆ ಸೂಚಿಸಿದ್ದರು. ನಮ್ಮನ್ನೆಲ್ಲ ಕರೆದು ಆತ ಬದಲಾಗಲು
ಅವಕಾಶ ನೀಡಬೇಕೆಂದು ತಿಳಿಯ ಹೇಳಿದರು. ನಾವು ಪಟ್ಟು ಬಿಡದಿದ್ದಾಗ ‘ನಿಮ್ಮ ತಮ್ಮನೋ, ತಂಗಿಯೋ
ತಪ್ಪು ಮಾಡಿದರೆ ಮನೆಯಿಂದ ಓಡಿಸಿ ಬಿಡುತ್ತೀರಾ’ ಎಂದು ಕೇಳಿ ನಮ್ಮ ಬಾಯಿ ಮುಚ್ಚಿಸಿದ್ದರು.
ಶಿಕ್ಷೆಯೇ ಎಲ್ಲಕ್ಕೂ ಪರಿಹಾರವಲ್ಲ ಎಂದು ವಾದಿಸಿದ್ದರು.
ನಾನು ಆ ಪ್ರಸಂಗವನ್ನು ಪ್ರಸ್ತಾಪಿಸಿ ‘ಈ ವಿದ್ಯಾರ್ಥಿ ಒಂದೆರಡು ನಿಮಿಷ ತಡವಾಗಿ ಬಂದದ್ದು
ನಿಜ. ಅವಧಿ ಮೀರಿ ಬಂದ ವಿದ್ಯಾರ್ಥಿಗಳನ್ನು ನಾವು ಒಳಬಿಡಬಾರದೆಂಬುದೂ ನನಗೆ ಗೊತ್ತು. ಹಾಗೆ
ಬಿಡುತ್ತಾ ಹೋದರೆ ಪರೀಕ್ಷೆಯನ್ನೇ ನಡೆಸಲಾಗುವುದಿಲ್ಲವೆಂಬುದನ್ನೂ ನಾನು ಬಲ್ಲೆ. ಒಂದು
ವ್ಯವಸ್ಥೆಯೆಂದ ಮೇಲೆ ನಿಯಮಗಳು ಇರಲೇಬೇಕು. ಅವುಗಳನ್ನು ನಾವು ಪರಿಪಾಲಿಸಲೇಬೇಕು. ಆದರೆ ಈ
ಪ್ರಸಂಗ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂಥದಲ್ಲ. ಮಾನವೀಯತೆಯ ಪ್ರಶ್ನೆಯಷ್ಟೆ’ ಎಂದು
ಅವರನ್ನೇ ದಿಟ್ಟಿಸಿ ನೋಡಿದೆ.
ಈಗವರ ಹುಬ್ಬು ಸಡಿಲಾಗಿತ್ತು. ನೋಟ ತನ್ನ ತೀಕ್ಷ್ಣತೆಯನ್ನು ಕಳೆದುಕೊಂಡಿತ್ತು. ನಿಧಾನ
ಎದ್ದು ಬಂದು ನನ್ನ ಹೆಗಲ ಮೇಲೆ ಕೈ ಹಾಕಿ ಪ್ರೀತಿಯಿಂದ ಮೆಲ್ಲಗೆ ಅದುಮಿ ‘ನಿಮ್ಮ ಈ ನಿಲವು
ಸದಾ ಹೀಗೆಯೇ ಇರಲಿ’ ಎಂದು ಹಾರೈಸಿ ಹೊರನಡೆದರು.

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAJCvfyXdsL1ZYP3YMv1768XOoB6Tz%2BaFV8-Pui0Q9L9Uj7AV7A%40mail.gmail.com.
For more options, visit https://groups.google.com/d/optout.

Reply via email to