ಮೊಂಡುತನ ಮಾಡುತ್ತಿದ್ದ ಮರಿಯನ್ನು ಕಂಡು, ತಾಯಿ ಪಕ್ಷಿ ಹೇಳಿತು- "ಮಗೂ, ಮೊಂಡುತನ ಒಳ್ಳೆಯದಲ್ಲ. ಹಿರಿಯರ ಮಾತನ್ನು ಕೇಳದೇ ಒದ್ದಾಡಿದ ಒಂದು ಮರಿ ಪಕ್ಷಿಯ ಕಥೆಯನ್ನು ಹೇಳುತ್ತೇನೆ ಕೇಳು." ಕಥೆ ಎಂದೊಡನೆ ಮೈ ಎಲ್ಲಾ ಕಣ್ಣಾಗಿ, ತನ್ನ ಪುಕ್ಕಗಳನ್ನೆಲ್ಲಾ ಹರಡಿಕೊಂಡು, ಅಮ್ಮನ ಕಣ್ಣುಗಳನ್ನೇ ದಿಟ್ಟಿಸುತ್ತ, "ಹೇಳಮ್ಮ" ಎಂದಿತು ಮರಿ. ಅಮ್ಮನ ಕಥೆ ಸಾಗಿತು.
"ಉತ್ತರ ಧ್ರುವದಲ್ಲಿ ತುಂಬಾ ಚಳಿ ಗೊತ್ತಾ? ಅಲ್ಲಿರುವ ಪಕ್ಷಿಗಳಿಗೆಲ್ಲ, ಯವಾಗ ಚಳಿ ಹೆಚ್ಚಾಗುತ್ತದೆ ಎಂಬುದು ಗೊತ್ತು. ಅದಕ್ಕೆ ಅವುಗಳೆಲ್ಲ, ಚಳಿ ಪ್ರಾರಂಭವಾಗುವುದಕ್ಕೆ ಮೊದಲೇ ದಕ್ಷಿಣದ ನೆಲದ ಕಡೆಗೆ ಹಾರಲು ಯೋಜನೆ ಹಾಕುತ್ತವೆ. ಎಲ್ಲವೂ ಜೊತೆಗೂಡಿ ಒಂದೇ ದಿನ ಹಾರುವುದಕ್ಕೆ ಶುರು ಮಾಡುತ್ತವೆ. ಬಹುದೂರದ ಪ್ರಯಾಣ, ಸಮುದ್ರದ ಮೇಲೆ ಹಾರಾಟ. ಪ್ರತಿ ವರ್ಷ ಈ ಪ್ರವಾಸವಿರುವುದರಿಂದ ಹಿರಿಯ ಹಕ್ಕಿಗಳಿಗೆ ಯಾವ ಸಮಯದಲ್ಲಿ ಎಲ್ಲಿ ತಂಗಬೇಕು, ಎಲ್ಲಿ ಆಹಾರವಿದೆ ಎಂಬುದರ ಪರಿಚಯವಿರುತ್ತದೆ. ಅವು ಆರಾಮವಾಗಿ ತಮ್ಮ ಚಳಿಗಾಲದ ಮನೆಗಳನ್ನು ತಲುಪಿ ಸುಖವಾಗಿರುತ್ತವೆ. ಹೀಗೊಂದು ಬಾರಿ ಎಲ್ಲ ಪಕ್ಷಿಗಳೂ ಹಾರುವುದಕ್ಕೆ ಸಿದ್ದವಾದಾಗ, ಒಂದು ಮರಿ ಪಕ್ಷಿ ಬಂಡೆದ್ದಿತು. " ನಾನೇಕೆ ಹಾರಬೇಕು? ನಮ್ಮ ಮನೆ ಬಿಟ್ಟು ಹೋಗುವುದೇಕೆ? ನಾನು ಗಟ್ಟಿಯಾಗಿದ್ದೇನೆ. ಎಂಥ ಚಳಿಯನ್ನಾದರೂ ತಡೆದುಕೊಂಡೇನು" ಎಂದೆಲ್ಲಾ ವಾದ ಮಾಡಿ ಮೊಂಡು ಹಿಡಿಯಿತು. ಎಷ್ಟೆಲ್ಲ ತಿಳಿ ಹೇಳಿದರೂ ಕೇಳದಿದ್ದಾಗ, ಉಳಿದೆಲ್ಲ ಪಕ್ಷಿಗಳೂ ಅದನ್ನು ಅಲ್ಲಿಯೇ ಬಿಟ್ಟು ಹಾರಿ ಹೋದವು. ಕೆಲ ದಿನಗಳ ಕಾಲ ಮರಿ ಪಕ್ಷಿ ಹೆಮ್ಮೆಯಿಂದ ಹಾರಾಡಿಕೊಂಡಿತ್ತು. ನಂತರ ಚಳಿ ತೀವ್ರವಾಗತೊಡಗಿದಾಗ ಗಾಬರಿಯಾಯಿತು. ಇನ್ನು ಬದುಕಲು ಸಾಧ್ಯವಿಲ್ಲ ಎನಿಸಿದಾಗ, ದಕ್ಷಿಣದ ಕಡೆಗೆ ಸಮುದ್ರದ ಮೇಲೆ ಹಾರ ತೊಡಗಿತು. ಪಾಪ! ಅದಕ್ಕೆ ಸರಿಯಾದ ದಾರಿ ಗೊತ್ತಿಲ್ಲ, ಅಲ್ಲಲ್ಲಿ ನಿಲ್ಲುವ ತಾಣಗಳೂ ಗೊತ್ತಿಲ್ಲ. ಅದಕ್ಕೆ ತುಂಬಾ ಸುಸ್ತಾಗ ತೊಡಗಿತು. ರೆಕ್ಕೆಗಳ ಮೇಲೆ ಹಿಮ ಗಟ್ಟಿಯಾಗ ತೊಡಗಿ, ರೆಕ್ಕೆ ಬೀಸುವುದೂ ಅಸಾಧ್ಯವಾಗಿ ಕಂಡಿತು. ಬದುಕಿ ಉಳಿಯುವ ಆಸೆ ದೂರಾಗ ತೊಡಗಿತು. ಇನ್ನೊಂದು ಹತ್ತು ನಿಮಿಷದಲ್ಲಿ ನೆಲ ಕಾಣದಿದ್ದರೆ ಸಮುದ್ರದಲ್ಲಿ ಬಿದ್ದು ಸಾಯುವುದು ಖಂಡಿತ ಎನಿಸಿತು. ತನ್ನ ದೇಹದಲ್ಲಿದ್ದ ಸಕಲ ಶಕ್ತಿಯನ್ನೂ ಹಾಕಿ, ಮರಿ ಪಕ್ಷಿ ರೆಕ್ಕೆ ಬಡಿಯುತ್ತಾ, ದಿಕ್ಕು ದಿಕ್ಕುಗಳನ್ನೂ ನೋಡುತ್ತಿತ್ತು. ಆಹ್! ಭಗವಂತ ದೊಡ್ಡವನು, ಸ್ವಲ್ಪ ದೂರದಲ್ಲಿಯೇ ನೆಲ ಗೋಚರಿಸುತ್ತಿದೆ. ಮರಿ ಪಕ್ಷಿ ಚಿಗುರಿದ ಉತ್ಸಾಹದಿಂದ ಆ ಕಡೆಗೆ ತಿರುಗಿ ಹಾರಿತು. ಅಂತೂ ಇಂತೂ ಸರ್ವ ಶಕ್ತಿ ಬಳಸಿಕೊಂಡು ನೆಲದವರೆಗೂ ಹಾರಿ ನೆಲ ಕಂಡೊಡನೇ ದೊಪ್ಪನೇ ಬಿದ್ದು ಬಿಟ್ಟಿತು. ಹೇಗೋ ಬದುಕಿದೆ ಎಂದಿತು. ಅದು ಬಿದ್ದುದ್ದು, ಒಬ್ಬ ರೈತನ ಮನೆಯ ಹಿಂಭಾಗದಲ್ಲಿ, ಆಗ ಬೆಳಗಿನ ಜಾವ. ಇನ್ನೂ ಸೂರ್ಯೋದಯವಾಗಿರಲಿಲ್ಲ. ರೈತನ ಹೆಂಡತಿ ಎದ್ದು ಮನೆ ಗುಡಿಸಿ, ದನದ ಕೊಟ್ಟಿಗೆಯನ್ನು ಶುದ್ದ ಮಾಡಿ, ಸಗಣಿಯನ್ನು ಬುಟ್ಟಿಯಲ್ಲಿ ತುಂಬಿಕೊಂಡು ಹಿತ್ತಲಿಗೆ ಬಂದಳು. ಅವಳಿಗೆ ಅಲ್ಲಿ ಬಿದ್ದಿದ್ದ ಮರಿ ಕಂಡಿರಲಿಲ್ಲ. ತಂದ ಸಗಣಿಯನ್ನು ಮರಿಯ ಮೇಲೆ ಸುರಿದು ಮರಳಿ ಹೋದಳು. ಮರಿ ಪಕ್ಷಿಗೆ ಉಸಿರು ಕಟ್ಟಿ ಹೋಯಿತು. "ಅಯ್ಯೋ ಸಮುದ್ರ ದಾಟಿ ಬಂದು ಬದುಕಿದೆ ಎಂದುಕೊಂಡರೆ ಈ ಸಗಣಿಯ ಅಡಿ ಬಿದ್ದು ಸಾಯುವಂತಾಯಿತೇ?" ಎಂದುಕೊಂಡಿತು. ತನ್ನ ಮೂತಿಯನ್ನು ಚಾಚಿ ಸಗಣಿಯಲ್ಲೊಂದು ತೂತು ಮಾಡಿತು. ಕೊಳಕು ವಾಸನೆ ಬಂದರೂ, ಹೊಸ ಗಾಳಿ ಬಂದು ಬದುಕಿದಂತಾಯಿತು. ಆಶ್ಚರ್ಯ! ಆ ಸಗಣಿಯ ಕವಚದಿಂದಾಗಿ, ಮರಿ ಪಕ್ಷಿಗೆ ಚಳಿಯಾಗುತ್ತಿಲ್ಲ, ಸಾಕಷ್ಟು ಬೆಚ್ಚಗಿದೆ! ಸ್ವಲ್ಪ ವಾಸನೆ ತಡೆದುಕೊಂಡರೆ ಸಾಕು, ತುಂಬಾ ಚೆನ್ನಾಗಿದೆ. ಯಾರಿಗೂ ಕಾಣುವುದಿಲ್ಲ, ಭದ್ರತೆ ಇದೆ, ಸ್ವಲ್ಪ ಹೊತ್ತಿನ ನಂತರ ವಾಸನೆ ಅಭ್ಯಾಸವಾಗಿ ಬಿಡುತ್ತದೆ. ಸಂತೋಷವಾಗಿದ್ದ ಮರಿ ಪಕ್ಷಿ ಹಾಡುವುದಕ್ಕೆ ಪ್ರಾರಂಭ ಮಾಡಿತು. ಹಿತ್ತಲಿನಲ್ಲಿ ಸುತ್ತಾಡುತ್ತಿದ್ದ ರೈತನ ಮನೆಯ ಬೆಕ್ಕು ಈ ಹಾಡನ್ನು ಕೇಳಿ ಹುಡುಕಲು ಪ್ರಾರಂಭ ಮಾಡಿತು. ಸಗಣಿಯಲ್ಲಿ ಕೈ ಹಾಕಿ, ಒಳಗಿದ್ದ ಮರಿ ಪಕ್ಷಿಯನ್ನು ಹೊರಗೆಳೆದು, ಹೊಡೆದು ಕೊಂದು ಹಾಕಿ ತಿಂದು ಬಿಟ್ಟಿತು. ಕಥೆಯನ್ನು ಕೇಳುತ್ತಿದ್ದ ಮರಿಗೆ ದುಃಖ ಉಮ್ಮಳಿಸಿ ಬಂತು. "ಯಾಕಮ್ಮಾ ಕಥೆ ಹೀಗೆ? ಪಾಪ! ತುಂಬಾ ಕಷ್ಟಪಟ್ಟ ಮರಿ ಬದುಕಬೇಕಿತ್ತು" ಎಂದಿತು. ಆಗ ತಾಯಿ ಪಕ್ಷಿ ಹೇಳಿತು, "ಅದು ಕಥೆ ಮಗೂ, ಏನಾದರೂ ಆದೀತು. ಆದರೆ ಈ ಕಥೆಯಲ್ಲಿ ನಾಲ್ಕು ನೀತಿ ಮಾತುಗಳಿವೆ, ಅವುಗಳನ್ನು ತಿಳಿದುಕೋ. ನಿನಗೆ ತೊಂದರೆ ಬರುವುದಿಲ್ಲ- 1)ಹಿರಿಯರ ಮಾತನ್ನು ಕೇಳು. ಅವರ ಅನುಭವದ ಸಾರ ನಿನ್ನ ಜೀವನಕ್ಕೆ ಊರುಗೋಲಾಗುತ್ತದೆ. 2)ನಿನ್ನ ಮೇಲೆ ಸಗಣಿ ಹಾಕುವವರೆಲ್ಲ ನಿನ್ನ ವೈರಿಗಳಲ್ಲ. ಅಕಸ್ಮಾತ್ ನಿನಗೇನಾದರೂ ತೊಂದರೆಯಾದಲ್ಲಿ ಅದಕ್ಕೆ ಕಾರಣರಾದವರನ್ನು ವೈರಿಗಳೆಂದು ಭಾವಿಸಬೇಡ. 3)ನಿನ್ನನ್ನು ಸಗಣಿಯಿಂದ ಹೊರಗೆ ತೆಗೆದವರು ನಿನ್ನ ಸ್ನೇಹಿತರೇ ಆಗಬೇಕಿಲ್ಲ. ಎಷ್ಟೋ ಬಾರಿ ನಿನಗೆ ಸಹಾಯರು ಎನ್ನಿಸಿದವರು ನಿಜವಾಗಿಯೂ ಸಹಾಯಕರಾಗಿರುವುದಿಲ್ಲ. ಎಚ್ಚರವಿರಲಿ. 4)ನೀನು ಸಗಣಿಯ ರಾಶಿಯಲ್ಲಿ ಸುಖವಾಗಿದ್ದೇನೆ ಎಂದು ಭಾವಿಸಿಕೊಂಡಿದ್ದರೆ ಬಾಯಿ ಮುಚ್ಚಿಕೊಂಡು ಸುಮ್ಮನಿರು. ಸದ್ದು ಮಾಡಬೇಡ. ಜಗತ್ತಿನಲ್ಲಿ ಬಹಳಷ್ಟು ಜನ ಸಗಣಿಯ ರಾಶಿಯಲ್ಲೇ ಸುಖವಾಗಿದ್ದೇವೆ ಎಂದು ಭಾವಿಸಿದ್ದಾರೆ. ಸಾಧ್ಯವಾದರೆ ಅದರಿಂದ ಹೊರಬಂದು ಸ್ವಚ್ಛ ಜೀವನ ಸಾಗಿಸು. ಇಲ್ಲದೇ ಹೋದರೆ ಸದ್ದು ಮಾಡದೇ ಸುಮ್ಮನಿರು. ಕೊಳಕಿನಲ್ಲೇ ಇದ್ದು ಸದ್ದು ಮಾಡಿದರೆ, ನಿನಗೆ ಆಗದವರು ಯಾರೋ ಹೊರಗೆ ಎಳೆದು ತೊಂದರೆ ಮಾಡಿಯಾರು. ಮನಸ್ಸನ್ನು ಸ್ವಚ್ಛವಾಗಿಟ್ಟುಕೊಂಡು, ಭಗವಂತನನ್ನು ನೆನಪಿಸಿಕೊಂಡು ಬದುಕು, ಆಗ ಬದುಕು ಸ್ವಚ್ಛ, ಸುಂದರ ಹಾಗೂ ಹಗುರಾಗುತ್ತದೆ." ಮರಿ ಪಕ್ಷಿ ಕಣ್ಣೊರೆಸಿಕೊಂಡು, "ಅಮ್ಮಾ, ನೀನು ಹೇಳಿದ ಹಾಗೆಯೇ ಕೇಳುತ್ತೇನೆ" ಎಂದು ಅಮ್ಮನ ತೊಡೆಯ ಮೇಲೆ ತಲೆ ಇಟ್ಟು ನಿದ್ರೆ ಹೋಯಿತು. -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CALWUL%3D6FS9cU96cmo5mU4CptNLK%3DMtEwqJeRhtiegzvszgFJpQ%40mail.gmail.com. For more options, visit https://groups.google.com/d/optout.
