Articles by Nagesh hegade are science temperamental and being regular reader is a good idea.
eswarachari_mv, am_ghs_benakanakonda ranebennur #9880123026 -----Original Message----- From: "HAREESHKUMAR K Agasanapura" <[email protected]> Sent: 2/26/2016 1:08 AM To: "mathssciencestf" <[email protected]> Subject: [ms-stf '54470'] ಮನುಕುಲದ ಕಿವಿ ತೆರೆಸಿದ ಗುರುತ್ವ ಕಂಪನ http://m.prajavani.net/article/2016_02_25/389899 ಮನುಕುಲದ ಕಿವಿ ತೆರೆಸಿದ ಗುರುತ್ವ ಕಂಪನ 25 Feb, 2016 ನಾಗೇಶ್ ಹೆಗಡೆ ಕಳೆದ ಗುರುವಾರ ಈ ಭೂಮಿಯ ಮೇಲಿನ ಎಲ್ಲಭೌತ ವಿಜ್ಞಾನಿಗಳಿಗೆ ವಿಶೇಷ ಗುರುಬಲ ಬಂತು. ನಾನಾ ದೇಶಗಳ ಸಾವಿರಾರು ವಿಜ್ಞಾನಿಗಳು ಏಕಕಾಲಕ್ಕೆ ’ಉಊಊಊಂವ್’ ಎಂದು ಗುರುತ್ವ ಅಲೆಗಳ ನಾದವನ್ನು ಅನುಕರಿಸಿ ಹರ್ಷೋದ್ಗಾರ ಹೊಮ್ಮಿಸಿದರು. ಅವರ ಸಂತಸಕ್ಕೆ ಕಾರಣವೇನೆಂದರೆ, ಈ ವಿಶ್ವದಲ್ಲಿ ಗುರುತ್ವ ತರಂಗಗಳಿವೆ ಎಂಬುದು ಇದೇ ಮೊದಲ ಬಾರಿಗೆ ಸಾಬೀತಾಯಿತು. ಇಂಥ ತರಂಗಗಳು ಇರಲೇಬೇಕೆಂದು ಆಲ್ಬರ್ಟ್ ಐನ್‌ಸ್ಟೀನ್ ಸರಿಯಾಗಿ ನೂರು ವರ್ಷಗಳ ಹಿಂದೆ ಗಣಿತ ಸೂತ್ರಗಳ ಆಧಾರದಲ್ಲಿ ಪ್ರತಿಪಾದಿಸಿದ್ದು ಕೊನೆಗೂ ಸತ್ಯವಾಯಿತೆಂಬ ಸಂತಸದ ಅಲೆ ಅದಾಗಿತ್ತು. ಅಲೆ ಒಂದೆರಡಲ್ಲ; ನೊಬೆಲ್ ಪ್ರಶಸ್ತಿಗೆ ನೇರಾನೇರ ಅರ್ಹವಾಗಬಲ್ಲ ಸಂಶೋಧನೆ ಸಾಧ್ಯವಾಯಿತೆಂದು ಕೆಲವರಲ್ಲಿ ಸಂಭ್ರಮದ ಅಲೆ ಹೊಮ್ಮಿದರೆ, ಇನ್ನು ಕೆಲವರಲ್ಲಿ ವಿಶ್ವದ ವಿಸ್ಮಯಗಳನ್ನು ಅರ್ಥ ಮಾಡಿಕೊಳ್ಳಲು ಹೊಸದೊಂದು ಅಸ್ತ್ರ ಲಭಿಸಿತೆಂಬ ಆನಂದದ ಅಲೆಯನ್ನೂ ಅದು ಹೊಮ್ಮಿಸಿತು. ಭೌತವಿಜ್ಞಾನದ ಘನ ಪಂಡಿತರಿಗೆ, ಉಪನ್ಯಾಸಕರಿಗೆ, ಚರ್ಚಾಪಟುಗಳಿಗೆ, ಗ್ರಂಥಕರ್ತರಿಗೆ, ಪ್ರಕಾಶಕರಿಗೆ, ಹೊಸ ಅವಕಾಶಗಳ ಬಾಗಿಲು ತೆರೆದುಕೊಂಡಿತೆಂದು ಸಂತಸದ ಅಲೆ ಹೊಮ್ಮಿತು. ಪಕ್ಕದ ಪಾಕಿಸ್ತಾನದಲ್ಲೂ ಸಂತಸದ ಅಲೆ ಎದ್ದಿತು; ಏಕೆಂದರೆ ಗುರುತ್ವ ತರಂಗವನ್ನು ಪತ್ತೆ ಹಚ್ಚಿದ ತಂಡದಲ್ಲಿ ಪಾಕಿಸ್ತಾನಿ ಮೂಲದ ನೆರ್ಗಿಸ್ ಮಾವೆಲ್‌ವಾಲಾ ಎಂಬ ಸುಂದರ ಪಾರ್ಸಿ ಯುವತಿಯೂ ಇದ್ದಳೆಂಬುದೇ ಅಲ್ಲಿನ ಪ್ರಜೆಗಳಿಗೆ ಉದ್ವೇಗದ ಸಂಗತಿಯಾಗಿತ್ತು. ನಿಜ ಹೇಳಬೇಕೆಂದರೆ, ಈ ಗುರುತ್ವ ತರಂಗ ಅಂದರೆ ಏನು, ಅದರಿಂದ ಏನೇನಾಗುತ್ತದೆ, ಅದರ ಪ್ರಯೋಜನ ಏನು ಎನ್ನುವುದು ಯಾವ ಸಾಮಾನ್ಯ ಪಾಮರರಿಗೂ ಅರ್ಥವಾಗುವ ವಿಷಯ ಅಲ್ಲವೇ ಅಲ್ಲ. ಮೂರು ವರ್ಷಗಳ ಹಿಂದೆ ಹಿಗ್ಸ್ ಬೋಸಾನ್ ಕಣಗಳು ಪತ್ತೆಯಾದಾಗ ‘ದೇವಕಣ’ಗಳೇ ಪ್ರತ್ಯಕ್ಷವಾದವು ಎಂದು ಮಾಧ್ಯಮಗಳಲ್ಲಿ ಎಷ್ಟೊಂದು ಸಂಭ್ರಮ ಪ್ರಕಟವಾಗಿತ್ತಲ್ಲ? ವಿಜ್ಞಾನದ ಚಮತ್ಕಾರವೇ ಅಂಥದ್ದು. ಗಹನ ನಿಗೂಢಗಳು ಅರ್ಥವಾಗದಿದ್ದರೇನು, ಅದರಿಂದ ಹೊಮ್ಮುವ ಸಂಭ್ರಮ ಏನಿದೆ, ಅದು ದೇಶ ಕಾಲಗಳನ್ನು ಮೀರಿ ಗುರುತ್ವದ ಅಲೆಯ ಹಾಗೆ ಎಲ್ಲರನ್ನೂ ತಟ್ಟುತ್ತದೆ. ಸಾಮಾನ್ಯ ಅರ್ಥದಲ್ಲಿ ಗುರುತ್ವ ಎಂದರೆ ಏನೆಂಬುದು ನಮಗೆಲ್ಲ ಗೊತ್ತೇ ಇದೆ. ಮೇಲಕ್ಕೆ ಎಸೆದ ಚಂಡು ಅಲ್ಲೇ ನಿಲ್ಲುವ ಬದಲು ಕೆಳಕ್ಕೆ ಏಕೆ ಬೀಳುತ್ತದೆ ಎಂದು ಕೇಳಿದರೆ, ‘ಭೂಮಿಗೆ ಗುರುತ್ವಾಕರ್ಷಣೆ ಇದೆ, ಅದು ಎಲ್ಲ ವಸ್ತುಗಳನ್ನೂ ತನ್ನತ್ತ ಸೆಳೆಯುತ್ತದೆ’ ಎಂದು ಹೈಸ್ಕೂಲ್ ವಿದ್ಯಾರ್ಥಿಗಳೂ ಹೇಳುತ್ತಾರೆ. ಏಕೆಂದರೆ, ಐಸ್ಯಾಕ್ ನ್ಯೂಟನ್‌ನ ತಲೆಯ ಮೇಲೆ ಸೇಬು ಬಿದ್ದಾಗ ಈ ಸಂಗತಿ ಆತನಿಗೆ ಹೊಳೆಯಿತೆಂದು ಹಿಂದಿನವರು ಹೇಳುತ್ತ ಬಂದಿದ್ದಾರೆ. ಸೇಬು ಆತನ ತಲೆಯ ಮೇಲೆಯೇ ಬಿತ್ತೊ, ದೂರದಲ್ಲೊ ಅಥವಾ ಅವನ ಕನಸಿನಲ್ಲಿ ಬಿತ್ತೊ ಆ ವಿಷಯ ಹೇಗೂ ಇರಲಿ, ಸಾಮಾನ್ಯರಿಗೆ ಹೊಳೆಯದ ಸಂಗತಿ ಅವನಿಗೆ ಹೊಳೆಯಿತು. ಅದೇ ಗುರುತ್ವ ಬಲದಿಂದಾಗಿಯೇ ಸೂರ್ಯನ ಸುತ್ತ ಗ್ರಹಗಳು ಸುತ್ತುತ್ತವೆ ಎಂದು ನ್ಯೂಟನ್ ಹೇಳಿದ್ದನ್ನು ಎಲ್ಲರೂ ಒಪ್ಪಿಕೊಂಡಿದ್ದರು. ಐನ್‌ಸ್ಟೀನ್ ಮಂಡಿಸಿದ ಸಾಪೇಕ್ಷ ಸಿದ್ಧಾಂತದಲ್ಲಿ ಗುರುತ್ವಕ್ಕೆ ಬೇರೆಯದೇ ಆಯಾಮ ಬಂತು. ಗುರುತ್ವ ಬಲ (ಗ್ರಾವಿಟಿ) ಎಂಬುದು ಜಾಳಿಗೆಯಂತೆ ಇಡೀ ವಿಶ್ವವನ್ನು ಆವರಿಸಿದೆ ಎಂದು ಆತ ಪ್ರತಿಪಾದಿಸಿದ. ಎಲ್ಲೋ ದೂರದಲ್ಲಿ, ನಮ್ಮ ಸೌರಮಂಡಲಕ್ಕೆ ಸಂಬಂಧವೇ ಇಲ್ಲದಂತೆ ದೂರದ ಗ್ಯಾಲಕ್ಸಿಯಲ್ಲಿ ಒಂದು ತಾರೆ ಸ್ಫೋಟಗೊಂಡರೂ ಆಗ ಏಳುವ ತುಮುಲಗಳು ಅಲೆಅಲೆಯಾಗಿ ವಿಶ್ವಕ್ಕೆಲ್ಲ ಹರಡುತ್ತವೆ ಎಂದ. ಅಷ್ಟೇ ಅಲ್ಲ, ಈ ತರಂಗ ಸ್ಪೇಸ್‌ಟೈಮ್ (ದೇಶಕಾಲ) ಎಂಬ ನಾಲ್ಕನೇ ಆಯಾಮದಲ್ಲಿದೆ ಎಂತಲೂ ಹೇಳಿದ. ಅದನ್ನು ಅರ್ಥ ಮಾಡಿಕೊಳ್ಳಲು ತಿಣುಕುವವರಿಗಾಗಿ ಒಂದು ರೂಪಕವೂ ಸಿದ್ಧವಾಯಿತು. ಸರ್ಕಸ್ ಡೇರೆಗಳಲ್ಲಿ ಎತ್ತರಕ್ಕೆ ಒಂದು ಬಲೆಯನ್ನು ಬಿಗಿಯಾಗಿ ಕಟ್ಟಿರುತ್ತಾರೆ ತಾನೆ? ಜೋಕಾಲಿ ಜೀಕುವವರು, ಜೋಕರ್‌ಗಳು ಅದರ ಮೇಲೆ ಕುಪ್ಪಳಿಸಿ ಲಾಗಾ ಹೊಡೆಯುತ್ತಿರುತ್ತಾರೆ. ಅಂಥ ಜಾಳಿಗೆಯ ಮೇಲೊಂದು ಭಾರವಾದ ಗುಂಡನ್ನು ಇಟ್ಟರೆ ಅಲ್ಲೊಂದು ಗುಳಿಯನ್ನು ಸೃಷ್ಟಿಸಿಕೊಂಡು ಅದರಲ್ಲಿ ಕೂರುತ್ತದೆ. ಗುಂಡಿನ ಭಾರ ಹೆಚ್ಚಿದ್ದಷ್ಟೂ ಗುಳಿಯ ಆಳ ಹೆಚ್ಚಿಗೆ ಇರುತ್ತದೆ. ಅದರತ್ತ ಇನ್ನೊಂದು ಚಿಕ್ಕ ಗುಂಡನ್ನು ಉರುಳಿಸಿದರೆ ಅದು ನೇರವಾಗಿ ಗುಳಿಯೊಳಕ್ಕೆ ಹೋಗುವ ಬದಲು ವೃತ್ತಾಕಾರವಾಗಿ ಚಲಿಸುತ್ತ ಕ್ರಮೇಣ ಗುಳಿಯಲ್ಲಿನ ದೊಡ್ಡ ಗುಂಡಿನ ಬಳಿ ಸೇರುತ್ತದೆ. ಹಾಗೇ ಭಾರೀ ನಕ್ಷತ್ರಗಳು ಅಥವಾ ಭಾರೀ ಗ್ಯಾಲಕ್ಸಿಗಳು ಇದ್ದಲ್ಲೆಲ್ಲ ಸ್ಪೇಸ್‌ಟೈಮ್ ಜಾಲದಲ್ಲಿ ಇಂಥ ಗುಳಿಗಳು ಏರ್ಪಡುತ್ತವೆಂದೂ ಗ್ರಹಗಳು ಅಲ್ಲೇ ಗಿರಕಿ ಹೊಡೆಯುತ್ತಿರುತ್ತವೆ ಎಂತಲೂ ಐನ್‌ಸ್ಟೀನ್ ಅನುಯಾಯಿಗಳು ತರ್ಕಿಸಿದರು. ಇಡೀ ವಿಶ್ವವನ್ನು ಸ್ಪೇಸ್‌ಟೈಮ್ ಜಾಳಿಗೆ ಆವರಿಸಿದೆ ಎಂಬುದಕ್ಕೆ ಪರೋಕ್ಷ ಉದಾಹರಣೆಗಳು ಒಂದರ ನಂತರ ಒಂದರಂತೆ ಲಭಿಸುತ್ತ ಹೋದವು (ಹಾಗೆ ಸಾಕ್ಷ್ಯವನ್ನು ಒದಗಿಸಿದವರಿಗೆ ಪಿಎಚ್‌ಡಿಗಳೂ ನೊಬೆಲ್‌ಗಳೂ ಲಭಿಸುತ್ತ ಬಂದವು). ಉದಾಹರಣೆಗೆ: ದೊಡ್ಡ ಗ್ಯಾಲಕ್ಸಿಯ ಹಿಂಭಾಗದಲ್ಲಿ ಪ್ರಖರ ತಾರೆಗಳ ಇನ್ನೊಂದು ಗುಂಪು ಇದೆಯೆಂದುಕೊಳ್ಳಿ. ಅವುಗಳಿಂದ ಹೊರಟ ಬೆಳಕು ನೇರವಾಗಿ ನಮ್ಮತ್ತ ಬರುವ ಬದಲು ತನ್ನೆದುರಿನ ಗ್ಯಾಲಕ್ಸಿಯ ಗುರುತ್ವ ಕುಳಿಯನ್ನು ಸುತ್ತುಹೊಡೆದು ಬರುತ್ತದೆ ಎಂಬುದು ಗೊತ್ತಾಯಿತು. ಅಂದರೆ, ಗ್ಯಾಲಕ್ಸಿಗಳು ನಿರ್ಮಿಸಿಕೊಂಡ ಕುಳಿಯೇ ಒಂಥರಾ ಮಸೂರದಂತೆ ಇರುತ್ತದೆ ಎಂಬುದು ಸಾಬೀತಾಯಿತು. ಅವುಗಳ ಹಿಂಭಾಗದಲ್ಲಿದ್ದ ತಾರೆಗಳ ದೂರವನ್ನು ನಿಖರವಾಗಿ ಅಳೆಯುವುದು ಸಾಧ್ಯವಾಯಿತು. ನಮ್ಮದೇ ಬುಧ ಗ್ರಹ ನ್ಯೂಟನ್ ನಿಯಮವನ್ನು ಅನುಸರಿಸುತ್ತ ಸೂರ್ಯನನ್ನು ಸುತ್ತುಹೊಡೆಯುವ ಬದಲು ತನ್ನ ಕಕ್ಷೆಯಲ್ಲಿ ಆಗಾಗ ಏಕೆ ತಳಕಾ ಬಳಕಾ ಆಗುತ್ತದೆ ಎಂಬುದು ಹಿಂದೆಲ್ಲ ದೊಡ್ಡ ಪ್ರಶ್ನೆಯಾಗಿತ್ತು. ಯಾವುದೋ ಅಗೋಚರ ಇನ್ನೊಂದು ಗ್ರಹ ಅಲ್ಲಿರಬೇಕು ಎಂದು ಅದನ್ನು ಶೋಧಿಸಲು ಏನೆಲ್ಲ ವಿಫಲ ಯತ್ನಗಳು ನಡೆದಿದ್ದವು. ಆದರೆ ಐನ್‌ಸ್ಟೀನ್‌ನ ಸ್ಪೇಸ್‌ಟೈಮ್ ಜಾಲದಲ್ಲಿ ಸೂರ್ಯನನ್ನು ಸಿಲುಕಿಸಿ ನೋಡಿದಾಗ ಬುಧಗ್ರಹದ ಎರ್ರಾಬಿರ್ರಿ ಚಾಲನೆಗೆ ಉತ್ತರ ಸಿಕ್ಕಿತ್ತು. ಈ ಸ್ಪೇಸ್‌ಟೈಮ್ ಜಾಳಿಗೆ ಎಲ್ಲೆಡೆ ಹರಡಿರುವುದರಿಂದ ಇಬ್ಬರು ಜಟ್ಟಿಗಳು ಗುದ್ದಾಡಿಕೊಂಡರೂ ಜಾಳಿಗೆ ಅದುರಿ ಗುರುತ್ವ ಅಲೆಗಳು ಏಳುತ್ತವೆ. ಗೊತ್ತೇ ಆಗುವುದಿಲ್ಲ. ಗುರುಗ್ರಹಕ್ಕೆ ಧೂಮಕೇತು ಅಪ್ಪಳಿಸಿದಾಗಲೂ ಏಳುತ್ತವೆ. ಆದರೆ ’ಅವು ಪತ್ತೆ ಹಚ್ಚಲು ಸಾಧ್ಯವಾಗದಷ್ಟು ಸೂಕ್ಷ್ಮವಾಗಿರುತ್ತವೆ’ ಎಂದು ಸ್ವತಃ ಐನ್‌ಸ್ಟೀನ್ 1916ರಲ್ಲೇ ಹೇಳಿದ್ದ. ಬೃಹತ್ ತಾರೆಯೊಂದು ತಾನಾಗಿ ಉಬ್ಬಿ ಉಬ್ಬಿ ಆಸ್ಫೋಟಿಸಿ ಕುಸಿದು ಕಪ್ಪುರಂಧ್ರವಾದಾಗ ಜಾಳಿಗೆ ಅಲ್ಲೋಲಕಲ್ಲೋಲವಾಗುತ್ತದೆ. ಗುರುತ್ವ ಕಂಪನ ಸುತ್ತೆಲ್ಲ ಹರಡುತ್ತದೆ. ಆಗ ಹೊಮ್ಮಿದ ಅಲೆಗಳು ಎಲ್ಲ ಗ್ರಹ, ತಾರೆ, ಗ್ಯಾಲಕ್ಸಿಗಳ ಮೂಲಕ ಹಾಯುತ್ತ, ನಮ್ಮ ಶರೀರದಲ್ಲೂ ಹೊಕ್ಕು ಹೊರಟು ಹೋಗುತ್ತಿರುತ್ತವೆ. ಭೂಮಿಯ ಮೂಲಕ ದೊಡ್ಡದ್ದೊಂದು ಅಲೆ ಹಾದು ಹೋಗುವಾಗ ಬೆಂಗಳೂರು ಮತ್ತು ಮಾಸ್ಕೊ ನಡುವಣ ಅಂತರ ಒಂದು ಕೂದಲೆಳೆಯಷ್ಟು ಕಡಿಮೆ ಆಗಬಹುದು. ಇಲ್ಲಿನ ಗಡಿಯಾರಕ್ಕೂ ಮತ್ತು ಮಾಸ್ಕೊ ಗಡಿಯಾರಕ್ಕೂ ಒಂದು ಮಿಲಿ ಸೆಕೆಂಡ್‌ನಷ್ಟು ವ್ಯತ್ಯಾಸ ಕಾಣಬಹುದು. ಅಂಥ ಸ್ಫೋಟ ತೀರಾ ತೀರಾ ದೂರದಲ್ಲಿ ಘಟಿಸುತ್ತದಾದ್ದರಿಂದ ನಮ್ಮಲ್ಲಿಗೆ ಬರುವಷ್ಟರಲ್ಲಿ ಅಲೆಗಳೂ ತೀರ ದುರ್ಬಲವಾಗುತ್ತವೆ. ಅದೂ ಒಳ್ಳೆಯದೇ. ಇಲ್ಲಾಂದರೆ ಆ ವಿಶಾಲ ವಿಶ್ವದಲ್ಲಿ ಒಂದಲ್ಲ ಒಂದು ಕಡೆ ಸ್ಫೋಟ, ಡಿಕ್ಕಿಗಳು ನಡೆಯುತ್ತಲೇ ಇರುವಾಗ ಅದರ ಕಂಪನದ ಅಲೆಗಳು ಇಲ್ಲಿಗೆ ಪದೇ ಪದೇ ಜೋರಾಗಿ ತಟ್ಟುತ್ತಿದ್ದರೆ ನಮ್ಮ ಗಡಿಯಾರಗಳೆಲ್ಲ ಅಸ್ತವ್ಯಸ್ತ ಆಗುತ್ತಿದ್ದವು. ಓಡುತ್ತಿರುವ ರೈಲು ಉದ್ದಗಿಡ್ಡ ಆಗಬಹುದಿತ್ತು. ಬಸ್ ಹತ್ತುವ ಮೊದಲೇ ಇಳಿಯುವ ತಾಣ ಬಂದಿರುತ್ತಿತ್ತು. ವಿಜ್ಞಾನಿಗಳು ಗುರುತ್ವ ತರಂಗಗಳನ್ನು ಗುರುತಿಸಲು ಯಾಕೆ ಹೆಣಗುತ್ತಿದ್ದಾರೆ ಎಂದರೆ, ಅಲೆ ಬಂದಿದ್ದು ಗೊತ್ತಾದರೆ, ಅದು ಎಲ್ಲಿಂದ ಬಂತು ಎಂದು ನೋಡಿ, ಅಲ್ಲಿ ಏನು ಘಟಿಸಿತು ಎಂಬುದರ ಚಿತ್ರಣ ಪಡೆಯಬಹುದು. ವಿಶ್ವದ ವೈಚಿತ್ರ್ಯಗಳನ್ನು ತೋರಿಸುವ ಈಗಿನ ಸಾಧನಗಳೆಲ್ಲ ಬೆಳಕು, ಎಕ್ಸ್‌ರೇ ಅಥವಾ ಇತರ ಇಲೆಕ್ಟ್ರೊಮೆಗ್ನೆಟಿಕ್ ತರಂಗಗಳನ್ನು ಆಧರಿಸಿವೆ. ಶ್ರವಣ ಸಾಧನಗಳು ಯಾವುವೂ ಇಲ್ಲ. ಒಂದರ್ಥದಲ್ಲಿ ನಾವು ಕಣ್ಣಿದ್ದ ಕಿವುಡರಾಗಿದ್ದೇವೆ. ಈಗ ಗುರುತ್ವ ಜಾಳಿಗೆಯ ಅಲುಗಾಟದಿಂದ ಹೊಮ್ಮುವ ಅಲೆಗಳು ಶ್ರವಣಮಾಧ್ಯಮದ ಮೂಲಕವೂ ಬ್ರಹ್ಮಾಂಡದ ಸುದ್ದಿಯನ್ನು ತರುವಂತಾದರೆ ಮನುಕುಲಕ್ಕೇ ಕಿವಿ ಬಂದಂತಾಗುತ್ತದೆ. ವಿರಾಟ್ ವಿಶ್ವದ ವಾದ್ಯಮೇಳ ನಮ್ಮ ಗ್ರಹಿಕೆಗೆ ಬಂದಂತಾಗುತ್ತದೆ. ಅದಕ್ಕೇ ಅಂಥ ಚಮತ್ಕಾರಿಕ ಅಲೆಗಳ ಪತ್ತೆಗೆಂದೇ ಭಾರೀ ಸಂಕೀರ್ಣ ಸಲಕರಣೆಗಳನ್ನು ಹೂಡಿಟ್ಟುಕೊಂಡು ಸಾವಿರಾರು ಸಂಶೋಧಕರು ಕಾಯುತ್ತಿದ್ದಾರೆ. ಗುರುತ್ವ ತರಂಗಗಳನ್ನು ಆಲಿಸಲೆಂದು ಅಮೆರಿಕದ ಎರಡು ಕಡೆ ‘ಲೈಗೊ’ ಹೆಸರಿನ ಶೋಧಯಂತ್ರಗಳನ್ನು ಹೂಡಲಾಗಿದೆ. ಲೈಗೊ ಎಂಬುದು ‘ಲೇಸರ್ ಇಂಟರ್ಫೆರೊಮೀಟರ್ ಗ್ರಾವಿಟೇಶನಲ್- ವೇವ್ ಒಬ್ಸರ್ವೇಟರಿ’ಯ ಸಂಕ್ಷಿಪ್ತ ಹೆಸರು. ಗಡಿಯಾರದಲ್ಲಿ ಸರಿಯಾಗಿ ಮೂರು ಗಂಟೆ (ಅಥವಾ 9 ಗಂಟೆ) ತೋರಿಸುವ ಎರಡು ಮುಳ್ಳುಗಳಂತೆ ಪರಸ್ಪರ ಲಂಬಕೋನದಲ್ಲಿ ನಾಲ್ಕು ನಾಲ್ಕು ಕಿಲೊಮೀಟರ್ ಉದ್ದದ ಎರಡು ನಿರ್ವಾತ ಕೊಳವೆಗಳನ್ನು ವಿಶಾಲ ಬಯಲಿನಲ್ಲಿ ಮಲಗಿಸಿದ್ದಾರೆ. ಈ ಕೊಳವೆಗಳ ಉದ್ದಳತೆಯಲ್ಲಿ ತುಸುವೇ ವ್ಯತ್ಯಾಸವಾದರೂ ಅಳೆಯಬಲ್ಲ ಅದ್ಭುತ ಲೇಸರ್ ಸಾಧನವನ್ನು ಅಲ್ಲಿ ಅಳವಡಿಸಲಾಗಿದೆ. ಲೇಸರ್ ಅದೆಷ್ಟು ಸೂಕ್ಷ್ಮವೆಂದರೆ 30 ಟ್ರಿಲಿಯನ್ ಕಿ.ಮೀ. ಆಚಿನ ನಕ್ಷತ್ರದ ದೂರವನ್ನು ಕೂಡ ಕೂದಲೆಳೆಯಷ್ಟೂ ವ್ಯತ್ಯಾಸ ಬಾರದಂತೆ ನಿಖರವಾಗಿ ಅಳೆಯುತ್ತದೆ. ಗುರುತ್ವದ ಅಲೆ ಲೈಗೊಕ್ಕೆ ಅಪ್ಪಳಿಸಿದ್ದೇ ಆದರೆ ಒಂದು ಕೊಳವೆ ತುಸು ಉದ್ದವಾಗುತ್ತದೆ, ಇನ್ನೊಂದು ತುಸು ಗಿಡ್ಡವಾಗುತ್ತದೆ. ಆಗಬೇಕು. ವೇಳೆಯೂ ಅದೇ ಪ್ರಮಾಣದಲ್ಲಿ ಒಂದರಲ್ಲಿ ತುಸು ಹಿಗ್ಗುತ್ತದೆ ಇನ್ನೊಂದರಲ್ಲಿ ತುಸು ಕುಗ್ಗುತ್ತದೆ. ಕುಗ್ಗಬೇಕು. ಈ ಪ್ರಯೋಗದ ವೀಕ್ಷಣೆಯಲ್ಲಿ ಭಾರತವೂ ಸೇರಿದಂತೆ 16 ದೇಶಗಳ ಒಂದು ಸಾವಿರ ವಿಜ್ಞಾನಿಗಳು ಪಾಲ್ಗೊಂಡಿದ್ದು, ಲೇಸರ್ ವರದಿಯ ವಿಶ್ಲೇಷಣೆಯಲ್ಲಿ ತೊಡಗಿಕೊಂಡಿದ್ದಾರೆ. ಕಳೆದ ಸೆಪ್ಟೆಂಬರ್ 14ರಂದು ಕೊಳವೆಯ ಉದ್ದ ತುಸು ಹೆಚ್ಚಿತೆಂಬ ಸಿಗ್ನಲ್ ಬಂತು. ತುಸು ಎಂದರೆ ಎಷ್ಟು ತುಸು? ಒಂದು ಪರಮಾಣುವಿನಲ್ಲಿರುವ ಒಂದು ಪ್ರೋಟಾನನ್ನು ಹತ್ತು ಸಾವಿರ ಭಾಗ ಮಾಡಿದಾಗ ಒಂದು ಭಾಗ ಎಷ್ಟು ಉದ್ದ ಇರುತ್ತದೊ ಅಷ್ಟು! ಆ ಇನ್ನೊಂದು ಕೊಳವೆ ಅಷ್ಟೇ ಪ್ರಮಾಣದಲ್ಲಿ ಸಂಕುಚಿತಗೊಂಡಿತು. ಗುರುತ್ವ ಅಲೆ ಅಪ್ಪಳಿಸಿದ್ದು ನಿಜವೆಂದು ನಂಬಬೇಕೆ? ಸಂಶಯಕ್ಕೆ ಆಸ್ಪದವಿದೆ. ಏಕೆಂದರೆ ಎಲ್ಲೋ ಸಮೀಪದಲ್ಲಿ ಎರಡು ಲಾರಿಗಳು ಡಿಕ್ಕಿ ಹೊಡೆದರೂ ಅಂಥ ವ್ಯತ್ಯಾಸ ಆಗಬಹುದು. ನೂರಾರು ಕಿ.ಮೀ. ಆಚೆ ಸಣ್ಣ ಭೂಕಂಪನ ಆಗಿದ್ದರೂ ಕೊಳವೆ ತುಸು ಕಂಪಿಸೀತು. ಅದಕ್ಕೇ ವಿಜ್ಞಾನಿಗಳು ತಕ್ಷಣ ಅಲ್ಲಿಂದ ಮೂರು ಸಾವಿರ ಕಿ.ಮೀ. ದೂರದ ವಾಷಿಂಗ್ಟನ್‌ನಲ್ಲಿ ಹೂಡಲಾಗಿದ್ದ ಇನ್ನೊಂದು ಅಂಥದ್ದೇ ಲೈಗೊ ಕೊಳವೆಗಳ ದಾಖಲೆ ನೋಡಿದರು. ಹೌದು, ಅಲ್ಲೂ ಅಷ್ಟೇ ಪ್ರಮಾಣದ ಗುರುತ್ವ ಅಲೆ ದಾಖಲಾಗಿತ್ತು. ಅಂದಮೇಲೆ ಅದು ಅಸಲೀ ಅಲೆಯೇ ಇರಬೇಕು. ಅಬ್ಬ! ಕೊನೆಗೂ ಸಾಕ್ಷ್ಯ ಸಿಕ್ಕಿತು. ಈ ಅಲೆ ಬಂದಿದ್ದು ಎಲ್ಲಿಂದ? 130 ಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ಭಾರೀ ಗಾತ್ರದ ಎರಡು ಕಪ್ಪುರಂಧ್ರಗಳು ಪರಸ್ಪರ ತೀರ ಸಮೀಪದಲ್ಲಿ ಘೋರಾಘೋರ ಆರ್ಭಟದೊಂದಿಗೆ ಘರ್ಷಿಸುತ್ತಿದ್ದವು. ಅವು ತಿಕ್ಕಾಡುತ್ತ ಹಠಾತ್ತಾಗಿ ಒಂದಾದಾಗ ಭಾರೀ ದೊಡ್ಡ ಗುರುತ್ವ ಅಲೆ ಹೊಮ್ಮಿತ್ತು. ನಮ್ಮ ಸೂರ್ಯನಿಗಿಂತ 65 ಪಟ್ಟು ಹೆಚ್ಚು ದ್ರವ್ಯಗಳಿದ್ದ ಆ ಜೋಡಿ ಕಾಯಗಳು ವಿಲೀನಗೊಂಡಾಗ ಮೂರು ಸೂರ್ಯರಷ್ಟು ಶಕ್ತಿ ಒಮ್ಮೆಗೇ ಬಿಡುಗಡೆಯಾಗಿ ಸುತ್ತೆಲ್ಲ ಗುರುತ್ವ ಅಲೆಗಳ ಸುನಾಮಿ ಎದ್ದಿತು. ಅದು ಬೆಳಕಲ್ಲ; ಕೊಳದಲ್ಲಿ ಡೈನಮೈಟ್ ಸಿಡಿದಾಗ ಹೊಮ್ಮುವಂತೆ ಗ್ರಾವಿಟಿ ಅಲೆಗಳು ವೃತ್ತಾಕಾರವಾಗಿ ಬೆಳಕಿನ ವೇಗದಲ್ಲಿ ವಿಸ್ತರಿಸುತ್ತ ದಾರಿಯುದ್ದಕ್ಕೂ ಕಾಲ ಮತ್ತು ಅವಕಾಶವನ್ನು ಹಿಗ್ಗಿಸಿ ಕುಗ್ಗಿಸುತ್ತ 130 ಕೋಟಿ ವರ್ಷಗಳ ನಂತರ ನಾವಿದ್ದ ಸೌರಮಂಡಲಕ್ಕೂ 14.9.2015ರಂದು ಅಪ್ಪಳಿಸಿ, ಲೈಗೊ ತೋಳುಗಳನ್ನೂ ಝೂಂಂ ಎಂದು ತಟ್ಟಿ ಹೊರಟುಹೋಯಿತು. ನಿಬ್ಬೆರಗಾದ ವಿಜ್ಞಾನಿಗಳು ಆ ಘಟನೆಯನ್ನು ಮತ್ತೆ ಮತ್ತೆ ಪರೀಕ್ಷಿಸಿ ನೋಡಿದರು. ಖಚಿತವೆಂದು ಅಪ್ಪಟ ಖಾತ್ರಿಯಾದಾಗ ಕುಣಿದು ಕುಪ್ಪಳಿಸಿ, ಮಾಧ್ಯಮಗಳೆದುರು ಕಳೆದ ವಾರ ಘೋಷಿಸಿದರು. ನಾಲ್ಕುನೂರು ವರ್ಷಗಳ ಹಿಂದೆ ಗೆಲಿಲಿಯೊ ಮೊದಲ ಬಾರಿ ದೂರದರ್ಶಕ ಕೊಳವೆಯನ್ನು ಆಕಾಶಕ್ಕೆ ಕಣ್ಣಿಟ್ಟ ನಂತರ ವಿಶ್ವದ ಚಿತ್ರಣವೇ ಬದಲಾದ ಹಾಗೆ, ಈಗ ಎರಡನೆಯ ಬಾರಿ ಬೇರೊಂದು ಜೋಡಿ ಕೊಳವೆಗಳು ಬ್ರಹ್ಮಾಂಡಕ್ಕೆ ಕಿವಿಗೊಟ್ಟಿವೆ. ಮನುಕುಲಕ್ಕೇ ಕಿವಿ ತೆರೆದಂತಾಗಿದೆ. Hareeshkumar K AM(PCM) GHS HUSKURU MALAVALLI TQ MANDYA DT 571475 mobile no 9880328224 email [email protected] -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout. -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
